Site icon Vistara News

KL Rahul : ಗಲಾಟೆ ಚಾಪ್ಟರ್ ಕ್ಲೋಸ್​​; ಕೆ. ಎಲ್​ ರಾಹುಲ್​ ಹಿಡಿದ ಕ್ಯಾಚ್​ಗೆ ಮೆಚ್ಚಿ ಚಪ್ಪಾಳೆ ತಟ್ಟಿದ ಗೋಯೆಂಕಾ

KL Rahul

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2024ರಲ್ಲಿ (IPL 2024) ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ನಾಯಕ ಕೆಎಲ್ ರಾಹುಲ್ (KL Rahul) ಮೈದಾನದಲ್ಲಿ ಭರ್ಜರಿ ಫೀಲ್ಡಿಂಗ್ ಮಾಡಿದರು. ಈ ವೇಳೆ ಲಕ್ನೊ ಸೂಪರ್ ಜೈಂಟ್ಸ್ ಮಾಲೀಕರಾದ ಸಂಜೀವವ ಗೋಯೆಂಕಾ ಅವರು ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಚಪ್ಪಾಳೆ ತಟ್ಟಿದರು. ಈ ಮೂಲಕ ಅವರಿಬ್ಬರ ನಡುವಿನ ಜಗಳ ಅಂತ್ಯಗೊಂಡಿತು.

ಪಂದ್ಯದಲ್ಲಿ ಡೆಲ್ಲಿ ತಂಡ ಜೇಕ್ ಫ್ರೇಸರ್-ಮೆಗ್​ಕುರ್ಕ್​ ಅವರನ್ನು ಬೇಗನೆ ಕಳೆದುಕೊಂಡರೂ ನಂತರದಲ್ಲಿ ಅಭಿಷೇಕ್ ಪೊರೆಲ್ ಮತ್ತು ಶಾಯ್ ಹೋಪ್ ಜೋಡಿ ಲಕ್ನೋ ಸೂಪರ್ ಜೈಂಟ್ಸ್ ಬೌಲರ್​ಗಳ ಮೇಳೆ ಅಬ್ಬರಿಸಿದರು. ವಿಶೇಷವಾಗಿ ಶಾಯ್ ಹೋಪ್ ದೃಢವಾಗಿ ಕಾಣುತ್ತಿದ್ದರು. ಅವರು ದೊಡ್ಡ ಇನ್ನಿಂಗ್ಸ್ ಗೆ ಸಜ್ಜಾಗುತ್ತಿದ್ದರು. ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆ.ಎಲ್.ರಾಹುಲ್ ಅವರು ಅವರ ವಿಕೆಟ್ ಪಡೆಯಲು ವಿಶೇಷ ಯೋಜನೆ ರೂಪಿಸಿದರು. ಅಲ್ಲದೇ ತಾವೇ ಉತ್ತಮ ಕ್ಯಾಚ್​ ಹಿಡಿಯುವ ಮೂಲಕ ಅವರನ್ನು ಪೆವಿಲಿಯನ್​ಗೆ ಅಟ್ಟಿದರು.

9ನೇ ಓವರ್ ನ 2ನೇ ಎಸೆತದಲ್ಲಿ ರವಿ ಬಿಷ್ಣೋಯ್ ಅವರು ಚೆಂಡನ್ನು ಎಸೆದರು. ಶಾಯ್ ಹೋಪ್ ಅದಕ್ಕೆ ಭರ್ಜರಿಯಾಗಿ ಹೊಡೆದರು. ಕವರ್ ಪ್ರದೇಶದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಕೆಎಲ್ ರಾಹುಲ್ ಚೆಂಡನ್ನು ಹಿಡಿಯಲು ಯತ್ನಿಸಿದರು. ಅದರೆ, ಅದರು ಕೈಯಿಂದ ಜಾರಿತು. ಬಳಿಕ ಅವರು ನೆಗೆದು ಆ ಚೆಂಡನ್ನು ಹಿಡಿದರು. ಅದ್ಭುತ ಡೈವ್ ಮಾಡಿದ ನಾಯಕನ ಪ್ರಯತ್ನಗಳನ್ನು ಶ್ಲಾಘಿಸಿದ ಸಂಜೀವ್ ಗೋಯೆಂಕಾ ಚಪ್ಪಾಳೆ ತಟ್ಟಿದರು.

ರಾಹುಲ್ ಆರ್​ಸಿಬಿಗೆ ಬರಲ್ಲ

ಲಕ್ನೋ: ಸನ್​ರೈಸರ್ಸ್​ ಹೈದರಾಬಾದ್(Sunrisers Hyderabad)​​ ವಿರುದ್ಧ ಲಕ್ನೋ ಸೂಪರ್​ ಜೈಂಟ್ಸ್(Lucknow Super Giants)​ 10 ವಿಕೆಟ್​ಗಳ ಹೀನಾಯ ಸೋಲು ಕಂಡ ಬೇಸರದಲ್ಲಿ ಸಿಟ್ಟಿಗೆದ್ದ ಫ್ರಾಂಚೈಸಿ ಮಾಲಿಕ ಸಂಜೀವ್ ಗೋಯೆಂಕಾ(Sanjiv Goenka) ಮೈದಾನದಲ್ಲೇ ನಾಯಕ ಕೆ.ಎಲ್​ ರಾಹುಲ್(KL Rahul)​ ಜತೆ ಜಗಳವಾಡಿದ್ದರು. ಈ ಘಟನೆ ಬಳಿಕ ಅನೇಕ ಮಾಜಿ ಆಟಗಾರರು ಗೋಯೆಂಕಾ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಘಟನೆಗೆ ಸಂಬಂಧಿಸಿ ರಾಹುಲ್​ ಲಕ್ನೋ ತಂಡ ತೊರೆಯಲಿದ್ದಾರೆ, ಆರ್​ಸಿಬಿ ಸೇರಲಿದ್ದಾರೆ, ತಂಡದ ಆಟಗಾರರೊಂದಿಗೆ ಪ್ರಯಾಣಿಸದೆ ಪ್ರತ್ಯೇಕವಾಗಿ ಪ್ರಯಾಣಿಸಿದ್ದಾರೆ ಹೀಗೆ ಹಲವು ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು. ಇದೀಗ ಈ ಎಲ್ಲ ಊಹಾಪೋಹಕ್ಕೆ ತೆರೆ ಬಿದ್ದಂತೆ ಕಾಣುತ್ತಿದೆ.

ಸಂಜೀವ್ ಗೋಯೆಂಕಾ ಅವರು ರಾಹುಲ್​ ಅವರನ್ನು ಮನೆಗೆ ಡಿನ್ನರ್​ಗೆ ಕರೆದು ತಬ್ಬಿಕೊಂಡಿರುವ ಫೋಟೊ ಒಂದು ವೈರಲ್​ ಆಗಿದೆ. ಈ ಮೂಲಕ ನಮ್ಮ ಮಧ್ಯೆ ಯಾವುದೇ ಮುನಿಸು ಇಲ್ಲ ಎನ್ನುವ ಸಂದೇಶ ನೀಡಿದಂತಿದೆ. ಸದ್ಯ ವೈರಲ್​ ಆಗುತ್ತಿರುವ ಫೋಟೊದಲ್ಲಿ ರಾಹುಲ್​ ಅವರನ್ನು ಗೋಯೆಂಕಾ ತಬ್ಬಿಕೊಂಡಿರಿವಂತೆ ಕಾಣುತ್ತಿದೆ. ರಾಹುಲ್​ ಕೂಡ ನಗುಮುಗದಿಂದಲೇ ಕಾಣಿಸಿಕೊಂಡಿದ್ದಾರೆ. ಆದರೆ, ಗೋಯೆಂಕಾ ಅವರ ಮುಖ ಮಾತ್ರ ಸ್ಪಷ್ಟವಾಗಿ ಗೋಚರಿಸಿಲ್ಲ. ರಾಹುಲ್​ ಪತ್ನಿ ಅಥಿಯಾ ಶೆಟ್ಟಿ ಕೂಡ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಸ್ಟೋರಿ ಹಾಕಿದ್ದು “ಚಂಡಮಾರುತದ ನಂತರ ಶಾಂತ” ಎಂದು ಬರೆದುಕೊಂಡಿದ್ದಾರೆ. ಹೀಗಾಗಿ ರಾಹುಲ್​ ಮತ್ತು ಗೋಯೆಂಕಾ ನಡುವಿನ ಮುನಿಸು ಶಮನವಾದಂತೆ ಕಾಣುತ್ತಿದೆ.

ಇದನ್ನೂ ಓದಿ: IPL 2024 : ನಾಯಕರಾಗಿ ನೀವೇನು ಮಾಡಿದ್ರಿ? ಪಾಂಡ್ಯನನ್ನು ಟೀಕಿಸಿದ್ದ ವಿಲಿಯರ್ಸ್​ಗೆ ತಿರುಗೇಟು ಕೊಟ್ಟ ಗಂಭೀರ್​

ಕಳೆದ ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್​ ಮಾತ್ರವಲ್ಲದೆ, ಬೌಲಿಂಗ್​ನಲ್ಲಿಯೂ ಲಕ್ನೋ ಅತ್ಯಂತ ಕಳಪೆ ಪ್ರದರ್ಶನ ತೋರಿತ್ತು. ಕನಿಷ್ಠ 1 ವಿಕೆಟ್​ ಕೂಡ ಕೀಳಲಾಗದ ಘೋರ ವೈಫಲ್ಯ ಕಂಡಿತ್ತು. ಈ ಹೀನಾಯ ಸೋಲಿನಿಂದ ಸಿಟ್ಟಿಗೆದ್ದ ಸಂಜೀವ್ ಗೋಯೆಂಕಾ ನಾಯಕ ರಾಹುಲ್ ಅವರೊಂದಿಗೆ ಕೋಪದಲ್ಲಿ ಮಾತನಾಡುತ್ತಿರುವಂತೆ ಕಂಡುಬಂದಿತ್ತು. ಇವರಿಬ್ಬರ ನಡುವಣ ಮಾತುಕತೆ ಏನು ಎಂಬುದು ಸ್ಪಷ್ಟವಾಗಿ ಕೇಳಿಸಿಲ್ಲವಾಗಿದ್ದರೂ, ಈ ದೃಶ್ಯ ನೋಡುವಾಗ ಇದು ಅಸಮಾಧಾನದ ನುಡಿ ಎಂದು ತಿಳಿದು ಬಂದಿತ್ತು.

ಗೋಯೆಂಕಾ ಮಾತಿಗೆ ರಾಹುಲ್ ಪ್ರತಿಕ್ರಿಯೆ ನೀಡಲು ಮುಂದಾದರೂ ಕೂಡ ಇದನ್ನು ಗೋಯೆಂಕಾ ಒಪ್ಪಿಕೊಳ್ಳದೆ ಏನೋ ಬೈಯುತ್ತಿರುವಂತೆ ದೃಶ್ಯದಲ್ಲಿ ಕಂಡುಬಂದಿತ್ತು. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುಗಿತ್ತು. ಈ ಘಟನೆಯಿಂದ ರಾಹುಲ್​ ನೊಂದಿದ್ದಾರೆ ಎನ್ನಲಾಗಿತ್ತು. ಪಂದ್ಯದಲ್ಲಿ ಟಾಸ್​ ಗೆದ್ದು ಆಮೆ ಗತಿಯ ಬ್ಯಾಟಿಂಗ್​ ನಡೆಸಿದ ಲಕ್ನೋ ಸೂಪರ್​ ಜೈಂಟ್ಸ್​ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ಗೆ 165 ರನ್​ ಬಾರಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಹೈದರಾಬಾದ್​ ಯಾವುದೇ ವಿಕೆಟ್​ ನಷ್ಟವಿಲ್ಲದೆ ಕೇವಲ 9.4 ಓವರ್​ಗಳಲ್ಲಿ 167 ರನ್​ ಬಾರಿಸಿ ಭರ್ಜರಿ 10 ವಿಕೆಟ್​ ಅಂತರದ ಗೆಲುವು ಸಾಧಿಸಿತು. ಲಕ್ನೋ ಬೌಲರ್​ಗಳನ್ನು ನಿರ್ದಾಕ್ಷಿಣ್ಯವಾಗಿ ಮನಬಂದಂತೆ ದಂಡಿಸಿದ ಹೆಡ್ ಮತ್ತು ಅಭಿಷೇಕ್​​ ಸ್ಟೇಡಿಯಂನ ಮೂಲೆ ಮೂಲೆಗೂ ಚೆಂಡನ್ನು ಬಾರಿಸಿದ್ದರು.

Exit mobile version