ನವ ದೆಹಲಿ : ವಿಶ್ವದ ಅತ್ಯಂತ ಪ್ರತಿಷ್ಠಿತ ಮೋಟಾರ್‌ಸೈಕಲ್ ರೇಸ್ ಎನಿಸಿಕೊಂಡಿರುವ ಮೋಟೊಜಿಪಿ (MotoGp) ೨೦೨೩ಕ್ಕೆ ಭಾರತಕ್ಕೆ ಪ್ರವೇಶ ಪಡೆಯುವ ಸಾಧ್ಯತೆಗಳಿವೆ. ಇದಕ್ಕೆ ಪೂರಕವಾಗಿರುವ ಬೆಳವಣಿಗೆಯೊಂದು ನಡೆಯುತ್ತಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಭಾರತದ ಮೋಟಾರ್‌ಬೈಕ್ ರೇಸ್ ಅಭಿಮಾನಿಗಳು, ವಿಶ್ವದ ಶ್ರೇಷ್ಠ ರೇಸರ್‌ಗಳು ಚಾಂಪಿಯನ್ ಪಟ್ಟಕ್ಕಾಗಿ ಭಾರತದ ರೇಸ್ ಟ್ರ್ಯಾಕ್‌ನಲ್ಲಿ ಸ್ಪರ್ಧೆ ನಡೆಸಲಿದ್ದಾರೆ.
ಮೋಟೊಜಿಪಿ ಆಯೋಜನೆಯ ವಾಣಿಜ್ಯ ಹಕ್ಕುಗಳನ್ನು ಹೊಂದಿರುವ ಡೊರ್ನಾ ಮತ್ತು ನೋಯ್ಡಾ ಮೂಲದ ರೇಸ್ ಪ್ರಾಯೋಜಕ ಸಂಸ್ಥೆಯಾಗಿರುವ ಫೇರ್‌ಸ್ಟ್ರೀಟ್ ಸ್ಪೋರ್ಟ್ಸ್ ಸಂಸ್ಥೆ ಭಾರತಕ್ಕೆ ರೇಸ್ ತರುವ ನಿಟ್ಟಿನಲ್ಲಿ ಒಪ್ಪಂದವೊಂದನ್ನು ಮಾಡಲು ಮುಂದಾಗಿದೆ. ಅದಕ್ಕಾಗಿ ಡೊರ್ನಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕಾರ್ಲೊಸ್ ಎಜ್‌ಪೆಲೆಟಾ ಮತ್ತು ಸಿಇಒ ಕಾರ್ಮೆಲೊ ಎಜ್‌ಪೆಲೆಟಾ ಅವರು ಮೋಟೊ ಜಿಪಿ ಪದಾರ್ಪಣೆ ಹಾಗೂ ಗ್ರ್ಯಾನ್‌ಪ್ರಿ ಆರಂಭದ ವಿಚಾರವಾಗಿ ಚರ್ಚೆ ನಡೆಸಲಿದ್ದಾರೆ.
ಒಂದು ಬಾರಿ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಟ್ರ್ಯಾಕ್‌ನ ಗುಣಮಟ್ಟವನ್ನು ಎಫ್‌ಐಎಮ್ ಪರಿಶೀಲನೆ ನಡೆಸಲಿದೆ. ಬಳಿಕ ಅಗತ್ಯ ಸುಧಾರಣೆಗಳು ನಡೆಯಲಿವೆ ಎಂದು ಮೂಲಗಳು ತಿಳಿಸಿವೆ.
ಫೇರ್‌ಸ್ಟ್ರೀಟ್ ಸ್ಪೋರ್ಟ್ಸ್‌ನ ಸಿಒಒ ಪುಷ್ಕರ್ ನಾಥ್ ಅವರು ಮಾತನಾಡಿ “ಮೊಟೊ ಜಿಪಿ ನಡೆಸಲು ಬೇಕಾಗುವ ಎಲ್ಲ ಕೆಲಸಗಳನ್ನು ಆರಂಭಿಸಿದ್ದೇವೆ. ಭಾರತವು ಜಗತ್ತಿನ ಅತ್ಯಂತ ದೊಡ್ಡ ದ್ವಿಚಕ್ರ ವಾಹನಗಳ ಮಾರುಕಟ್ಟೆಯಾಗಿದ್ದು, ಬೈಕ್‌ಗಳ ಜತೆ ಬಹುತೇಕ ಮಂದಿ ಸಂಬಂಧ ಹೊಂದಿದ್ದಾರೆ. ಅಂತೆಯೇ ಮೊಟೊ ಜಿಪಿ ಅತ್ಯಂತ ಹೆಚ್ಚು ವೀಕ್ಷಣೆ ಮಾಡುವ ಕ್ರೀಡೆಯಾಗಿದೆ,” ಎಂದು ಅವರು ಹೇಳಿದರು.
“ಡೊರ್ನಾ ಹಾಗೂ ಫೇರ್‌ಸ್ಟ್ರೀಟ್ ನಡುವೆ ಕೆಲವೇ ದಿನಗಳಲ್ಲಿ ಒಪ್ಪಂದ ಮಾಡಿಕೊಳ್ಳಲಿದೆ. ಬಳಿಕ ಟ್ರ್ಯಾಕ್‌ನ ಗುಣಮಟ್ಟ ಪರಿಕ್ಷೆ ನಡೆಲಾಗುವುದು,” ಎಂದು ಎಫ್‌ಎಮ್‌ಎಸ್‌ಸಿಐ ಅಧ್ಯಕ್ಷ ಅಕ್ಬರ್ ಇಬ್ರಾಹಿಮ್ ಹೇಳಿದ್ದಾರೆ.