ಬೆಂಗಳೂರು: ಭೀಕರ ಕಾರು ಅಪಘಾತದ ನಂತರ ಹಲವು ಸರ್ಜರಿಗಳು ಹಾಗೂ ಚಿಕಿತ್ಸೆಗೆ ಒಳಗಾಗಿದ್ದ ಭಾರತ ತಂಡದ ವಿಕೆಟ್ಕೀಪರ್ ಬ್ಯಾಟರ್ ರಿಷಭ್ ಪಂತ್ (Rishabh Pant) ಚೇತರಿಕೆಯ ಹಾದಿಯಲ್ಲಿದ್ದಾರೆ. ಪಂತ್ ಈಗ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್ಸಿಎ) ಅದ್ಭುತವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಈ ಪ್ರತಿಭಾವಂತ ಆಟಗಾರ ಈಗ ತರಬೇತಿ ಅವಧಿಯಲ್ಲಿ 140 ಕಿ.ಮೀ.ಗಿಂತ ಹೆಚ್ಚು ವೇಗದ ಬೌಲರ್ಗಳನ್ನ ಎದುರಿಸುತ್ತಿದ್ದಾರೆ. ಈ ಅವಧಿಯಲ್ಲಿ ಅವರು ಯಾವಉದೇ ತೊಂದರೆ ಎದುರಿಸಲಿಲ್ಲ. ವಿಕೆಟ್ ಕೀಪರ್ ಬ್ಯಾಟರ್ ಕಳೆದ ತಿಂಗಳು ಥ್ರೋಡೌನ್ಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರು. ಎರಡು ವಾರಗಳಲ್ಲಿ, ಎಸೆತದ ವೇಗವು ಕ್ರಮೇಣ ಹೆಚ್ಚುತ್ತಿದೆ.
ಡೆಲ್ಲಿ ಕ್ಯಾಪಿಟಲ್ಸ್ ನಾಯಕ ವೇಗದ ಎಸೆತಗಳನ್ನು ತೆಗೆದುಕೊಳ್ಳುವಲ್ಲಿ ಯಾವುದೇ ಸಮಸ್ಯೆಗಳನ್ನು ಎದುರಿಸುತ್ತಿಲ್ಲ. ಸಣ್ಣ ಚಲನೆಗಳೊಂದಿಗೆ ಉತ್ತಮವಾಗಿದ್ದಾರೆ. ಬ್ಯಾಟಿಂಗ್ ಮಾತ್ರವಲ್ಲ ಪಂತ್ ಕಡಿಮೆ ತೀವ್ರತೆಯೊಂದಿಗೆ ವಿಕೆಟ್ ಕೀಪಿಂಗ್ ಅಭ್ಯಾಸಗಳನ್ನು ಪ್ರಾರಂಭಿಸಿದ್ದಾರೆ. ಪ್ರಸ್ತುತ, 25 ವರ್ಷದ ಆಟಗಾರ ಸಣ್ಣ ದೇಹದ ಚಲನೆಗಳತ್ತ ಮಾತ್ರ ಗಮನ ಹರಿಸುತ್ತಿದ್ದಾರೆ. ಏಕೆಂದರೆ ಕ್ಷಿಪ್ರಗತಿಯಲ್ಲಿ ಅಭ್ಯಾಸ ಮಾಡಿದರೆ ಗಾಯವನ್ನು ಉಲ್ಬಣವಾಗಬಹುದು. ಎನ್ಸಿಎಯ ವೈದ್ಯಕೀಯ ಸಿಬ್ಬಂದಿ ಮತ್ತು ತರಬೇತುದಾರರು ಒಂದೆರಡು ತಿಂಗಳ ಅವಧಿಯಲ್ಲಿ ಪಂತ್ ತ್ವರಿತಗತಿಯ ಚಲನೆಯನ್ನು ಪ್ರಾರಂಭಿಸಲಿದ್ದಾರೆ.
“ರಿಷಭ್ ಪಂತ್ ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅವರು 140 ಕಿ.ಮೀ ವೇಗದಲ್ಲಿ ಎಸೆತಗಳನ್ನು ಎದುರಿಸಲು ಪ್ರಾರಂಭಿಸಿದ್ದಾರೆ. ಅವರು ಚೇತರಿಸಿಕೊಳ್ಳುವ ಹಾದಿಯಲ್ಲಿ ತೆಗೆದುಕೊಳ್ಳುತ್ತಿರುವ ಉತ್ಸಾಹದಿಂದ ನಮಗೆಲ್ಲರಿಗೂ ಸಂತೋಷವಾಗಿದೆ. ಅವರು ಆರೋಗ್ಯವಾಗಿದ್ದಾರೆ. ಅವರ ಮುಂದಿನ ಗುರಿ ಕ್ಷಿಪ್ರಗತಿಯ ದೇಹದ ಚಲನೆಗಳತ್ತ ಗಮನ ಹರಿಸುವುದು, ಇದನ್ನು ಮುಂದಿನ ಎರಡು ತಿಂಗಳಲ್ಲಿ ಸಾಧಿಸುವ ಗುರಿ ಹೊಂದಿದ್ದೇವೆ ಎಂದು ಎನ್ಸಿಎ ಮೂಲಗಳು ತಿಳಿಸಿವೆ.
ಇದನ್ನೂ ಓದಿ : Rishabh Pant: ಕೀಪಿಂಗ್,ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ ರಿಷಭ್ ಪಂತ್; ವಿಶ್ವಕಪ್ಗೆ ಕಮ್ಬ್ಯಾಕ್ ಸಾಧ್ಯತೆ
ರಿಷಭ್ ಪಂತ್ ಚೇತರಿಸಿಕೊಳ್ಳಲು ಇನ್ನೂ ಎರಡು ತಿಂಗಳುಗಳು ಬಾಕಿ ಇದೆ. ಈಗಾಗಿ ವಿಶ್ವ ಕಪ್ಗೆ ಅವರ ಲಭ್ಯತೆ ಇಲ್ಲ. ಅದೇ ರೀತಿ ಅವರನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಸಜ್ಜುಗೊಳಿಸುವ ಗುರಿ ಹೊಂದಲಾಗಿದೆ. ಜಸ್ಪ್ರೀತ್ ಬುಮ್ರಾ ಪ್ರಕರಣದಲ್ಲಿ ಗಾಯದ ನಡುವೆ ಆಡಿದ ಕಾರಣ ಸಮಸ್ಯೆ ಉಲ್ಬಣಗೊಂಡಿತ್ತು. ಹೀಗಾಗಿ ಪಂತ್ ವಿಚಾರದಲ್ಲಿ ಯಾವುದೇ ಅಪಾಯಗಳನ್ನು ತೆಗೆದುಕೊಳ್ಳುವುದಕ್ಕೆ ಬಿಸಿಸಿಐ ಸಿದ್ಧವಿಲ್ಲ. ವಿಶ್ವಕಪ್ ಬಳಿಕ ಭಾರತವು ಆಸ್ಟ್ರೇಲಿಯಾ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಆಡಲಿದೆ. ಡಿಸೆಂಬರ್ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಹೋಗಲಿದೆ.
ಪಂತ್ ದಕ್ಷಿಣ ಆಫ್ರಿಕಾ ಸರಣಿಗೆ ಫಿಟ್ ಆಗದಿರಬಹುದು. ಆದರೆ 25 ವರ್ಷದ ಆಟಗಾರ ಜನವರಿಯಲ್ಲಿ ನಡೆಯಲಿರುವ ಇಂಗ್ಲೆಂಡ್ ಟೆಸ್ಟ್ ಸರಣಿಗೆ ಫಿಟ್ ಆಗಲಿದ್ದಾರೆ ಎಂದು ಬಿಸಿಸಿಐ ಆಶಾಭಾವ ಹೊಂದಿದೆ.