ಸಿಲ್‌ಹಟ್ (ಬಾಂಗ್ಲಾದೇಶ): ಮಹಿಳೆಯರ ಏಷ್ಯಾ ಕಪ್‌ನ ತನ್ನ ಮೊದಲ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡ ಶ್ರೀಲಂಕಾ ಬಳಗದ ವಿರುದ್ಧ ೪೧ ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಟಿ೨೦ ಮಾದರಿಯಲ್ಲಿ ನಡೆಯುತ್ತಿರುವ ಹಾಲಿ ಆವೃತ್ತಿಯ ಟೂರ್ನಿಯ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ೬ ವಿಕೆಟ್ ಕಳೆದುಕೊಂಡು ೧೫೦ ರನ್ ಬಾರಿಸಿದರೆ, ಬಳಿಕ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ ೧೮.೨ ಓವರ್‌ಗಳಲ್ಲಿ ೧೦೯ ರನ್‌ಗಳಿಗೆ ಔಟ್ ಆಯಿತು.
ಸಿಲ್‌ಹಟ್ ಇಂಟರ್‌ನ್ಯಾಷನ್ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಲಂಕಾ ತಂಡದ ನಾಯಕಿ ಚಾಮರಿ ಅಟ್ಟಪಟ್ಟು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅಂತೆಯ ಮೊದಲು ಬ್ಯಾಟ್ ಮಾಡಿದ ಭಾರತ ಬಳಗ ಉತ್ತಮ ಆರಂಭ ಪಡೆದುಕೊಳ್ಳದ ಹೊರತಾಗಿಯೂ ಜೆಮಿಮಾ ರೋಡ್ರಿಗಸ್ (೭೬) ಅರ್ಧ ಶತಕ ಹಾಗೂ ನಾಯಕಿ ಹರ್ಮನ್ ಪ್ರೀತ್ ಕೌರ್ ಅವರ ಉಪಯುಕ್ತ ೩೩ ರನ್‌ಗಳ ನೆರವಿನಿಂದ ೧೫೦ ರನ್ ಬಾರಿಸಿತು.
ಬೌಲರ್‌ಗಳ ಅಬ್ಬರ
ಸ್ಪರ್ಧಾತ್ಮಕ ಗುರಿ ಬೆನ್ನಟ್ಟಲು ಆರಂಭಿಸಿದ ಲಂಕಾ ತಂಡಕ್ಕೆ ಭಾರತ ಬೌಲರ್‌ಗಳಾದ ಡಿ. ಹೇಮಲತಾ (೧೫ ರನ್‌ಗಳಿಗೆ ೩ ವಿಕೆಟ್), ಪೂಜಾ ವಸ್ತ್ರಾಕರ್ (೧೨ ರನ್‌ಗಳಿಗೆ ೨ ವಿಕೆಟ್), ದೀಪ್ತಿ ಶರ್ಮ (೧೫ ರನ್‌ಗಳಿಗೆ ೨ ವಿಕೆಟ್) ಕಡಿವಾಣ ಹಾಕಿದರು. ಲಂಕಾದ ಆರಂಭಿಕ ಬ್ಯಾಟರ್ ಹರ್ಷಿತ್ ಸಮರವಿಕ್ರಮ (೨೬) ಹಾಗೂ ಮಧ್ಯಮ ಕ್ರಮಾಂಕದಲ್ಲಿ ಹಸಿನಿ ಪೆರೆರಾ (೩೦) ಲಂಕಾ ಪರ ಸ್ವಲ್ಪ ಚೈತನ್ಯದ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಏಷ್ಯ ಕಪ್‌ನಲ್ಲಿ ಭಾರತ ಅಕ್ಟೋಬರ್ ೩ರಂದು ಮಲೇಷ್ಯಾ, ಅಕ್ಟೋಬರ್ ೪ರಂದು ಯಎಇ, ಅಕ್ಟೋಬರ್ ೭ರಂದು ಪಾಕಿಸ್ತಾನ, ಅಕ್ಟೋಬರ್ ೮ರಂದು ಬಾಂಗ್ಲಾದೇಶ, ಅಕ್ಟೋಬರ್ ೧೦ರಂದು ಥಾಯ್ಲೆಂಡ್ ವಿರುದ್ಧ ಆಡಬೇಕಾಗಿದೆ.
ಇದನ್ನೂ ಓದಿ | Deepti Sharma | ದೀಪ್ತಿ ಶರ್ಮ ಬೆಂಬಲಕ್ಕೆ ನಿಂತ ಕ್ರಿಕೆಟ್ ನಿಯಮ ರೂಪಿಸುವ ಎಮ್‌ಸಿಸಿ ಕ್ಲಬ್