ಮುಂಬಯಿ: ಭಾರತ ಸರ್ಕಾರ ಸ್ವಾತಂತ್ರ್ಯ ದಿನದ ೭೫ನೇ ವರ್ಷಾಚರಣೆಗೆ (Independence Day) ನಾನಾ ಬಗೆಯ ಯೋಜನೆಗಳನ್ನು ರೂಪಿಸಿಕೊಂಡಿದೆ. ಏತನ್ಮಧ್ಯೆ, ಆಚರಣೆಯನ್ನು ಸ್ಮರಣೀಯವಾಗಿಸಲು ಮುಂದಾಗಿರುವ ಸರ್ಕಾರ ಭಾರತ ಹಾಗೂ ವಿಶ್ವ ಇಲೆವೆನ್ ನಡುವೆ ಕ್ರಿಕೆಟ್ ಪಂದ್ಯವೊಂದನ್ನು ಏರ್ಪಡಿಸುವಂತೆ ಬಿಸಿಸಿಐಗೆ ಮನವಿ ಮಾಡಿದೆ ಎಂಬುದಾಗಿ ವರದಿಯಾಗಿದೆ.
ಮೂಲಗಳ ಪ್ರಕಾರ ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದಿಂದ ಬಿಸಿಸಿಐಗೆ ಮನವಿ ಹೋಗಿದೆ. ಅದರಲ್ಲಿ ಭಾರತದ ತಂಡದ ಹಿರಿಯ ಆಟಗಾರರು ಹಾಗೂ ನಾನಾ ದೇಶಗಳ ಜನಪ್ರಿಯ ಕ್ರಿಕೆಟ್ ತಾರೆಗಳನ್ನು ಒಳಗೊಂಡ ತಂಡಗಳ ನಡುವೆ ಪಂದ್ಯ ಆಯೋಜಿಸುವಂತೆ ಕೋರಲಾಗಿದೆ. ಸದ್ಯದ ಮಾಹಿತಿ ಪ್ರಕಾರ ಆಗಸ್ಟ್ ೨೨ರಂದು ಈ ಹಣಾಹಣಿ ನಡೆಯಲಿದೆ.
೭೫ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ಸರ್ಕಾರ ನಾನಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಅವುಗಳ ಪಟ್ಟಿಗೆ ಆಕರ್ಷಕ ಕ್ರಿಕೆಟ್ ಪಂದ್ಯವನ್ನೂ ಸೇರಿಸುವುದು ಸರಕಾರದ ಉದ್ದೇಶ. ಆಜಾದಿ ಕ ಅಮೃತ್ ಮಹೋತ್ಸವ್ ಕಾರ್ಯಕ್ರಮದಲ್ಲಿ ಹೆಚ್ಚು ಜನರು ಪಾಲ್ಗೊಳ್ಳುವಂತೆ ಮಾಡುವುದು ಕ್ರಿಕೆಟ್ ಪಂದ್ಯ ಆಯೋಜನೆಯ ಮೊದಲ ಉದ್ದೇಶ. ಜತೆಗೆ ಕ್ರೀಡೆ ಯಾವ ರೀತಿ ಸ್ವಾತಂತ್ರ್ಯ ಹೋರಾಟದಲ್ಲಿ ಜನಗಳ ಸಂಘಟನೆಗೆ ನೆರವಾಯಿತು ಎಂಬುದನ್ನು ಯುವಜನರಿಗೆ ತಿಳಿಸುವುದು ಕೂಡ ಸರ್ಕಾರದ ಯೋಜನೆ.
ಆಟಗಾರರ ಲಭ್ಯತೆ ಚರ್ಚೆ
ಸರ್ಕಾರದ ಪ್ರಸ್ತಾಪದ ಬಗ್ಗೆ ಬಿಸಿಸಿಐಗೂ ಹೆಮ್ಮೆಯಿದೆ. ಆದರೆ, ಆಟಗಾರರ ಲಭ್ಯತೆ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಆಗಸ್ಟ್ ಅಂತ್ಯಕ್ಕೆ ಏಷ್ಯಾ ಕಪ್ ಕ್ರಿಕೆಟ್ ಅರಂಭವಾಗಲಿದೆ. ಅದಕ್ಕೆ ಮೊದಲು ಭಾರತೀಯ ಆಟಗಾರರು ಈ ಪಂದ್ಯಕ್ಕೆ ಲಭ್ಯವಾಗುವ ಹಾಗೆ ನೋಡಿಕೊಳ್ಳಬೇಕಾಗಿದೆ. ಅಂತೆಯೇ ಕೆರಿಬಿಯನ್ ಪ್ರೀಮಿಯರ್ ಲೀಗ್ ಸೇರಿದಂತೆ ಹಲವು ಕ್ರಿಕೆಟ್ ಲೀಗ್‌ಗಳು ಇದೇ ವೇಳೆ ನಡೆಯಲಿವೆ. ಹೀಗಾಗಿ ವಿದೇಶಿ ಆಟಗಾರರನ್ನು ಕರೆದುಕೊಂಡು ಬರುವ ಸವಾಲು ಕೂಡ ಬಿಸಿಸಿಐ ಮುಂದಿದೆ.
ಇದನ್ನೂ ಓದಿ: the 6ixty: ಹೊಸ ಮಾದರಿಯ ಕ್ರಿಕೆಟ್ ಲೀಗ್ ಜಾರಿಗೆ ತಂದ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ