Site icon Vistara News

ICC Chairman | ಐಸಿಸಿ ಅಧ್ಯಕ್ಷರಾಗಿ ಮರು ಆಯ್ಕೆಯಾದ ನ್ಯೂಜಿಲೆಂಡ್‌ನ ಗ್ರೆಗ್ ಬಾರ್ಕ್ಲೆ

Greg Barclay

ಮೆಲ್ಬೋರ್ನ್​: ನ್ಯೂಜಿಲೆಂಡ್‌ನ ಗ್ರೆಗ್ ಬಾರ್ಕ್ಲೆ (Greg Barclay) ಅವರು ಅಂತಾರಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) (ICC Chairman) ಅಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದಾರೆ. ಅದರಂತೆ ಮುಂದಿನ ಎರಡು ವರ್ಷಗಳ ಕಾಲ ಅವರು ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಜಿಂಬಾಬ್ವೆಯ ತವೆಂಗ್ವಾ ಮುಕುಲಾನಿ ಸ್ಪರ್ಧೆಯಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ಗ್ರೆಗ್ ಬಾರ್ಕ್ಲೆ ಅವಿರೋಧವಾಗಿ ಆಯ್ಕೆಯಾದರು.

ಶನಿವಾರ ಮೊಲ್ಬೋರ್ನ್​ನಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಅಧ್ಯಕ್ಷರಾದ ಬಳಿಕ ಮಾತನಾಡಿದ ಗ್ರೆಗ್ ಬಾರ್ಕ್ಲೆ ಅವರು “ಐಸಿಸಿ ಅಧ್ಯಕ್ಷರಾಗಿ ಮರು ಆಯ್ಕೆಯಾಗಿರುವುದು ತಮಗೆ ಸಂದ ಗೌರವವಾಗಿದ್ದು, ಇದಕ್ಕಾಗಿ ನಿರ್ದೇಶಕ ಮಂಡಳಿಯ ಸದಸ್ಯರಿಗೆ ಧನ್ಯವಾದ ಸಲ್ಲಿಸುತ್ತೇನೆ” ಎಂದು ಬಾರ್ಕ್ಲೆ ಪ್ರತಿಕ್ರಿಯಿಸಿದ್ದಾರೆ.

2ನೇ ಬಾರಿಗೆ ಆಯ್ಕೆ

ಬಾರ್ಕ್ಲೆ ಅವರು ಮೊದಲ ಬಾರಿಗೆ ನವೆಂಬರ್ 2020 ರಲ್ಲಿ ಐಸಿಸಿ ಅಧ್ಯಕ್ಷ ಕುರ್ಚಿ ಏರಿದ್ದರು. ನ್ಯೂಜಿಲೆಂಡ್ ಕ್ರಿಕೆಟ್‌ನ ಅಧ್ಯಕ್ಷರಾಗಿದ್ದ ಬಾರ್ಕ್ಲೆ ಆಗಿನ ಐಸಿಸಿ ಅಧ್ಯಕ್ಷರಾಗಿದ್ದ ಶಶಾಂಕ್ ಮನೋಹರ್ ಸ್ಥಾನಕ್ಕೆ ಎಂಟ್ರಿಕೊಟ್ಟಿದ್ದರು. ಅದಕ್ಕೂ ಮುನ್ನ 2015 ರಲ್ಲಿ ಬಾರ್ಕ್ಲೆ ಐಸಿಸಿ ಪುರುಷರ ಕ್ರಿಕೆಟ್ ವಿಶ್ವ ಕಪ್‌ನ ನಿರ್ದೇಶಕರಾಗಿದ್ದರು. ಬಾರ್ಕ್ಲೆ ಅವಿರೋಧವಾಗಿ ಆಯ್ಕೆಯಾಗುವುದರೊಂದಿಗೆ 17 ಸದಸ್ಯರ ಮಂಡಳಿಯಲ್ಲಿ ಬಿಸಿಸಿಐ ಕೂಡ ಅವರಿಗೆ ಸಂಪೂರ್ಣ ಬೆಂಬಲವನ್ನು ನೀಡಿದೆ.

ಗಂಗೂಲಿಯ ಹೆಸರು ಕೇಳಿಬಂದಿತ್ತು

ಬಿಸಿಸಿಐ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿದ ಬಳಿಕ ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸೌರವ್​ ಗಂಗೂಲಿ ಸ್ಪರ್ಧೆ ಮಾಡುತ್ತಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಮಾಧ್ಯಮ ವರದಿಗಳ ಪ್ರಕಾರ, ಗಂಗೂಲಿಗೆ ಐಪಿಎಲ್ ಅಧ್ಯಕ್ಷ ಸ್ಥಾನವನ್ನು ನೀಡಲು ಬಿಸಿಸಿಐ ಮುಂದಾಗಿತ್ತು. ಆದರೆ ಗಂಗೂಲಿಗೆ ಐಸಿಸಿ ಅಧ್ಯಕ್ಷ ಹುದ್ದೆ ಅಥವಾ ಬಿಸಿಸಿಐ ಅಧ್ಯಕ್ಷರಾಗಿ ಮುಂದುವರಿಯುವ ಬಯಕೆ ಇತ್ತು. ಆದರೆ ಗಂಗೂಲಿಗೆ ಬಿಸಿಸಿಐ ಬೆಂಬಲ ಸಿಗಲಿಲ್ಲ. ಇದರಿಂದ ಗಂಗೂಲಿ ಈ ರೇಸ್​ನಿಂದ ಹೊರಬಿದ್ದಿದ್ದರು.

ಇದನ್ನೂ ಓದಿ | Team India | ಯುವ ಆಟಗಾರರಿಗೆ ಆದ್ಯತೆ, ಹಿರಿಯರಿಗೆ ಕೊಕ್‌; ಬಿಸಿಸಿಐ ಯೋಜನೆ ರೆಡಿ

Exit mobile version