Site icon Vistara News

IPL 2024 : ಹೈದರಾಬಾದ್​ ವಿರುದ್ಧ ಗುಜರಾತ್ ತಂಡಕ್ಕೆ7 ವಿಕೆಟ್​ ಜಯ

Gujarat Titans- IPL 2024

ಅಹ್ಮದಾಬಾದ್​​: ಸಾಯಿ ಸುದರ್ಶನ್​ (45 ರನ್​), ಡೇವಿಡ್ ಮಿಲ್ಲರ್​​ (ಅಜೇಯ 44 ರನ್​) ಅವರ ಉತ್ತಮ ಬ್ಯಾಟಿಂಗ್ ಹಾಗೂ ಮೋಹಿತ್ ಶರ್ಮಾ (25 ರನ್​ಗಳಿಗೆ 3 ವಿಕೆಟ್​) ಅವರ ಅಮೋಘ ಬೌಲಿಂಗ್ ನೆರವಿನಿಂದ ಮಿಂಚಿದ ಗುಜರಾತ್ ಟೈಟಾನ್ಸ್ (Gujarat Titans) ತಂಡ ಐಪಿಎಲ್​ 17ನೇ ಆವೃತ್ತಿಯ (IPL 2024) 12ನೇ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ (Sunrisers Hyderabad) ತಂಡದ ವಿರುದ್ದ 7 ವಿಕೆಟ್​ಗಳ ಅಮೋಘ ವಿಜಯ ದಾಖಲಿಸಿದೆ. ಈ ಮೂಲಕ ಚೆನ್ನೈ ಸೂಪರ್​ ಕಿಂಗ್ಸ್ ತಂಡದ ವಿರುದ್ಧದ ಹಿಂದಿನ ಪಂದ್ಯದ ಸೋಲನ್ನು ಮರೆಯಿತು. ಗುಜರಾತ್ ತಂಡಕ್ಕೆ ಇದು ಹಾಲಿ ಆವೃತ್ತಿಯಲ್ಲಿ ಎರಡನೇ ಗೆಲುವಾಗಿದ್ದು ಮೊದಲ ಪಂದ್ಯದಲ್ಲಿ ಮುಂಬಯಿ ಇಂಡಿಯನ್ಸ್ ವಿರುದ್ಧ 6 ರನ್​ಗಳ ಗೆಲುವು ದಾಖಲಿಸಿತ್ತು. ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಬಡ್ತಿ ಪಡೆಯಿತು.

ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಸನ್​ರೈಸರ್ಸ್​ ಹೈದರಾಬಾದ್ ತಂಡ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡು 162 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಗುಜರಾತ್​ ಬಳಗ ಇನ್ನೂ 5 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್​ ನಷ್ಟಕ್ಕೆ 168 ರನ್ ಬಾರಿಸಿ ಗೆಲುವು ಸಾಧಿಸಿತು. ಪ್ಯಾಟ್​ಕಮಿನ್ಸ್ ನೇತೃತ್ವದ ಎಸ್​ಎಚ್​ಆರ್​ ತಂಡಕ್ಕೆ ಇದು ಹಾಲಿ ಆವೃತ್ತಿಯ ಎರಡನೇ ಪರಾಜಯವಾಗಿದೆ. ಮೊದಲ ಪಂದ್ಯದಲ್ಲಿ ಕೆಕೆಆರ್​ಗೆ 4 ರನ್​ಗಳಿಂದ ಮಣಿದಿದ್ದರೆ ಎರಡನೇ ಪಂದ್ಯದಲ್ಲಿ ಮುಂಬಯಿ ವಿರುದ್ದ ದಾಖಲೆಯ 31 ರನ್ ಗೆಲುವು ಸಾಧಿಸಿತ್ತು. ಇದೀಗ ಮತ್ತೆ ಸೋಲಿನ ಸುಳಿಗೆ ಸಿಲುಕಿದೆ.

ಮೊದಲು ಬ್ಯಾಟ್ ಮಾಡಿದ ಎಸ್​ಆರ್​ಎಚ್​ ಉತ್ತಮವಾಗಿ ಆಡಲಿಲ್ಲ. ಹಿಂದಿನ ಪಂದ್ಯದಲ್ಲಿ ದಾಖಲೆಯ 277 ರನ್​ ಬಾರಿಸಿದ್ದ ಎಸ್​ಆರ್​ಎಚ್ ಈ ಪಂದ್ಯದಲ್ಲಿ ಆರಂಭದಿಂದಲೇ ವಿಕೆಟ್​ಗಳನ್ನು ಕಳೆದುಕೊಂಡಿತು. ಮಯಾಂಕ್ ಅಗರ್ವಾಲ್​ 17 ರನ್​ಗೆ ಔಟಾದರೆ, ಟ್ರಾವಿಸ್​ ಹೆಡ್​ 19 ರನ್​ಗೆ ಬೌಲ್ಡ್ ಆದರು. ಅಭಿಷೇಕ್ ಶರ್ಮಾ 29 ರನ್ ಬಾರಿಸಿದರೆ ಏಡೆನ್​ ಮಾರ್ಕ್ರಮ್​ 17 ರನ್​ಗೆ ಸೀಮಿತಗೊಂಡರು. ಹೆನ್ರಿಚ್ ಕ್ಲಾಸೆನ್​ ಹೆನ್ರಿಚ್ ಕ್ಲಾಸೆನ್​ 24 ಹಾಗೂ ಶಹಾಜ್ ಅಹಮದ್​ 22 ರನ್ ಬಾರಿಸಿದರು. ಕೊನೆಯಲ್ಲಿ ಅಬ್ದುಲ್​ ಸಮದ್ 29 ರನ್ ಬಾರಿಸುವ ಮೂಲಕ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು.

ಇದನ್ನೂ ಓದಿ: Hardik Pandya : ಹಾರ್ದಿಕ್ ಪಾಂಡ್ಯಗೆ ವಿಶೇಷ ಭದ್ರತೆ ಮಾಹಿತಿ ಸುಳ್ಳು ಎಂದ ಎಂಸಿಎ

ಸುಲಭವಾಗಿ ಗುರಿ ಮುಟ್ಟಿದ ಗುಜರಾತ್​

ಸ್ಪರ್ಧಾತ್ಮಕ ಗುರಿಗೆ ಪ್ರತಿಯಾಗಿ ಆಡಲು ಶುರು ಮಾಡಿದ ಗುಜರಾತ್​ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್​ಗೆ 36 ರನ್ ಬಾರಿಸಿತು. ವೃದ್ಧಿಮಾನ್​ ಸಾಹ 25 ರನ್ ಬಾರಿಸಿದರೆ ನಾಯಕ ಶುಭ್​ಮನ್​ ಗಿಲ್​ 36 ರನ್​ ಕೊಡುಗೆ ಕೊಟ್ಟರು. ಮೂರನೇ ಕ್ರಮಾಂಕದಲ್ಲಿ ಆಡಿದ ಸಾಯಿ ಸುದರ್ಶನ್​ 45 ರನ್ ಬಾರಿಸಿದರೆ ಡೇವಿಡ್ ಮಿಲ್ಲರ್​ 44 ರನ್​ ಬಾರಿಸುವ ಮೂಲಕ ಗೆಲುವು ಸುಲಭಗೊಳಿಸಿದರು. ವಿಜಯ್ ಶಂಕರ್​ 14 ರನ್​ ಬಾರಿಸಿದರು.

Exit mobile version