ನವದೆಹಲಿ: ಮುಂಬರುವ ಮಹಿಳಾ ಪ್ರೀಮಿಯರ್ ಲೀಗ್ಗಾಗಿ ಗುಜರಾತ್ ಜೈಂಟ್ಸ್ ತಂಡ ಸೇರಿದ್ದ ಆಸ್ಟ್ರೇಲಿಯಾ ಆಟಗಾರ್ತಿ ಲಾರೆನ್ ಚೀಟೆಲ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. 30 ಲಕ್ಷ ರೂಪಾಯಿಗೆ ಅವರನ್ನು ಗುಜರಾತ್ ತಂಡ ಖರೀದಿ ಮಾಡಿತ್ತು. ಚರ್ಮದ ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯಬೇಕಾಗಿರುವ ಕಾರಣ ಅವರು ಡಬ್ಲ್ಯುಪಿಎಲ್ 2024 ರಿಂದ ತನ್ನ ಹೆಸರನ್ನು ಹಿಂತೆಗೆದುಕೊಂಡಿದ್ದಾರೆ. 25 ವರ್ಷದ ಆಸ್ಟ್ರೇಲಿಯಾದ ಆಟಗಾರ್ತಿ ಇತ್ತೀಚೆಗೆ ಕುತ್ತಿಗೆ ಬಳಿಯ ಚರ್ಮದ ಕ್ಯಾನ್ಸರ್ಗೆ ಚಿಕಿತ್ಸೆ ಪಡೆದಿದ್ದರು.
ಇತ್ತೀಚೆಗೆ ನಡೆದ ಭಾರತ ವಿರುದ್ಧದ ಏಕೈಕ ಟೆಸ್ಟ್ ವೇಳೆ ದೀರ್ಘ ಅವಧಿಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದ ಎಡಗೈ ವೇಗಿ 2021 ರಲ್ಲಿ ಕಾಲಿನಲ್ಲೂ ಉಂಟಾಗಿದ್ದ ಚರ್ಮದ ಕ್ಯಾನ್ಸರ್ಗೆ ಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಅವರಿಗೆ ಚಿಕಿತ್ಸೆ ಪುನರಾವರ್ತನೆಯಾಗಲಿದೆ. ಡಬ್ಲ್ಯುಪಿಎಲ್ ಹೊರತಾಗಿ ಲಾರೆನ್ ನ್ಯೂ ಸೌತ್ ವೇಲ್ಸ್ ಪರ ದೇಶೀಯ ಋತುವಿನ ಪಂದ್ಯಗಳಿಂದಲೂ ಹೊರಗುಳಿಯಲಿದ್ದಾರೆ.
ಚಿಕಿತ್ಸೆ ಹಾಗೂ ವಿರಾಮದ ಬಳಿಕ ತರಬೇತಿಗೆ ಮರಳುವ ಗುರಿಯನ್ನು ಚೀಟಲ್ ಹೊಂದಿದ್ದಾರೆ ಎಂದು ಕ್ರಿಕೆಟ್ ನ್ಯೂ ಸೌತ್ ವೇಲ್ಸ್ ಹೇಳಿಕೆಯಲ್ಲಿ ತಿಳಿಸಿದೆ.
2023-24ರಲ್ಲಿ ಮಹಿಳೆಯರ ಬಿಗ್ ಬ್ಯಾಶ್ ಲೀಗ್ನಲ್ಲಿ ಸಿಡ್ನಿ ಸಿಕ್ಸರ್ಸ್ ಪರ ಡಬ್ಲ್ಯುಪಿಎಲ್ನ 14 ಪಂದ್ಯಗಳಲ್ಲಿ 21 ವಿಕೆಟ್ಗಳನ್ನು ಪಡೆದುಕೊಂಡಿದ್ದ ಅವರು ಪ್ರಭಾವಶಾಲಿ ಪ್ರದರ್ಶನ ನೀಡಿದ್ದರು. ಅಲ್ಲಿಂದ ನಿರಂತರ ಭುಜದ ಸಮಸ್ಯೆಯಿಂದಾಗಿ ವೇಗದ ಬೌಲರ್ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿಲ್ಲ.
ನಾನು ಭುಜದ ಶಸ್ತ್ರಚಿಕಿತ್ಸೆಗಳು ಮತ್ತು ಕ್ಯಾನ್ಸರ್ ಭೀತಿ ಸೇರಿದಂತೆ ನನ್ನ ದೇಹದೊಂದಿಗೆ ಹಲವಾರು ಸವಾಲುಗಳನ್ನು ಎದುರಿಸಿದ್ದೇನೆ. ಕಷ್ಟಗಳ ಹೊರತಾಗಿಯೂ, ಭಾರತಕ್ಕೆ ಹೋಗುವ ಅವಕಾಶವನ್ನು ಸ್ವೀಕರಿಸಲು ನಾನು ರೋಮಾಂಚನಗೊಂಡಿದ್ದೇನೆ. ಭುಜದ ನಾಲ್ಕನೇ ಶಸ್ತ್ರಚಿಕಿತ್ಸೆ ವಿಶೇಷವಾಗಿ ಕಠಿಣವಾಗಿತ್ತು. ಕ್ಯಾನ್ಸರ್ ಭೀತಿ ಅನಿರೀಕ್ಷಿತ ಮತ್ತು ಭಯಾನಕವಾಗಿತ್ತು. ನನ್ನ ವೃತ್ತಿಜೀವನದ ಭಯಾನಕ ಅಧ್ಯಾಯವಾಗಿದೆ ಎಂದು ಚೀಟಲ್ ನವೆಂಬರ್ನಲ್ಲಿ ಹೇಳಿದ್ದರು.
ಇದನ್ನೂ ಓದಿ : Ind vs Eng : ಭಾರತ ವಿರುದ್ಧದ ಎರಡನೇ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಪ್ರಕಟ
ಅದಾನಿ ಗ್ರೂಪ್ ಬೆಂಬಲಿತ ತಂಡವು ಉದ್ಘಾಟನಾ ಋತುವಿನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು. ಲಾರೆನ್ ಮುಂಬರುವ ಋತುವಿನಿಂದ ಹೊರಗುಳಿದಿದ್ದರಿಂದ ಗುಜರಾತ್ ಜೈಂಟ್ಸ್ ತಂಡಕ್ಕೆ ಭಾರಿ ಹೊಡೆತ ಬಿದ್ದಿದೆ, ಗುಜರಾತ್ ಎಂಟು ಪಂದ್ಯಗಳಲ್ಲಿ ಕೇವಲ ಎರಡು ಗೆಲುವು ಪಡೆದಿತ್ತು.
ಲಾರೆನ್ ಬಗ್ಗೆ ಮಾತನಾಡುವುದಾದರೆ, 2016 ರಲ್ಲಿ ಆಸ್ಟ್ರೇಲಿಯಾದಲ್ಲಿ ಪಾದಾರ್ಪಣೆ ಮಾಡಿದ್ದರು. ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ 12 ಪಂದ್ಯಗಳನ್ನಾಡಿರುವ 25ರ ಹರೆಯದ ವೇಗಿ 7 ವಿಕೆಟ್ ಕಬಳಿಸಿದ್ದಾರೆ.
ಡಬ್ಲ್ಯುಪಿಎಲ್ 2024: ಹರಾಜಿನಲ್ಲಿ ಗುಜರಾತ್ ಜೈಂಟ್ಸ್
ನಿರಾಶಾದಾಯಕ ಉದ್ಘಾಟನಾ ಋತುವಿನ ನಂತರ ಡಬ್ಲ್ಯುಪಿಎಲ್ 2024 ರಲ್ಲಿ ಗುಜರಾತ್ ಹೆಚ್ಚು ಸಕ್ರಿಯವಾಗಿತ್ತು. ಅವರು 5.95 ಕೋಟಿ ರೂಪಾಯಿ ಮೊತ್ತದೊಂದಿಗೆ ಹರಾಜಿಗೆ ಪ್ರವೇಶಿಸಿದ್ದರು. ಗುಜರಾತ್ ಹರಾಜಿಗೆ ಮೊದಲು 11 ಆಟಗಾರರನ್ನು ಬಿಡುಗಡೆ ಮಾಡಿದ್ದು, 10 ಹೊಸ ಆಟಗಾರರನ್ನು ಖರೀದಿಸಿದೆ. ಡಬ್ಲ್ಯುಪಿಎಲ್ 2024 ಹರಾಜಿನಲ್ಲಿ ಗುಜರಾತ್ ಜೈಂಟ್ಸ್ ಖರೀದಿಸಿದ ಆಟಗಾರರ ಪಟ್ಟಿ ಇಲ್ಲಿದೆ.
ಫೋಬೆ ಲಿಚ್ಫೀಲ್ಡ್ (1 ಕೋಟಿ), ಮೇಘನಾ ಸಿಂಗ್ (30 ಲಕ್ಷ ), ತ್ರಿಶಾ ಪೂಜಿತಾ (10 ಲಕ್ಷ), ಕಾಶ್ವೀ ಗೌತಮ್ (2 ಕೋಟಿ), ಪ್ರಿಯಾ ಮಿಶ್ರಾ (20 ಲಕ್ಷ), ಲಾರೆನ್ ಚೀಟಲ್ (30 ಲಕ್ಷ), ಕ್ಯಾಥರಿನ್ ಬ್ರೈಸ್ (10 ಲಕ್ಷ), ಮನ್ನತ್ ಕಶ್ಯಪ್ (10 ಲಕ್ಷ ), ತರನ್ನುಮ್ ಪಠಾಣ್ (10 ಲಕ್ಷ), ವೇದಾ ಕೃಷ್ಣಮೂರ್ತಿ (30 ಲಕ್ಷ).
ಲಾರೆನ್ ಚೀಟಲ್ ಅವರ ಬದಲಿ ಆಟಗಾರ್ತಿಯನ್ನು ಗುಜರಾತ್ ಇನ್ನೂ ಘೋಷಿಸಿಲ್ಲ. ಏತನ್ಮಧ್ಯೆ, ಮುಂಬರುವ ಡಬ್ಲ್ಯುಪಿಎಲ್ ಆವೃತ್ತಿ ಫೆಬ್ರವರಿ 23 ರಂದು ಪ್ರಾರಂಭವಾಗಲಿದೆ. ದೆಹಲಿ ಮತ್ತು ಬೆಂಗಳೂರು ಇಡೀ ಸ್ಪರ್ಧೆಗೆ ಆತಿಥ್ಯ ವಹಿಸಲಿವೆ.