ಜೈಪುರ: ಐಪಿಎಲ್ 16ನೇ ಆವೃತ್ತಿಯಲ್ಲಿ (IPL 2023) ಮೇ 5ರಂದು ಜಿದ್ದಾಜಿದ್ದಿನ ಪಂದ್ಯ ನಡೆಯಲಿದೆ. ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಫೈಟ್ ಅದಾಗಿದೆ. ಸವಾಯಿ ಮಾನ್ಸಿಂಗ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಪಂದ್ಯ ನಡೆಯಲಿದೆ. ಮೊದಲ ಚರಣದಲ್ಲಿ ಅಹಮದಾಬಾದ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ತಂಡವನ್ನು ಆರ್ಆರ್ ಸೋಲಿಸಿತ್ತು. ಈ ಸೇಡನ್ನು ತೀರಿಸಿಕೊಳ್ಳುವುದಕ್ಕೆ ಪಾಂಡ್ಯ ಬಳಗ ಸಜ್ಜಾಗಿದೆ.
ಗುಜರಾತ್ ತಂಡ ಸದ್ಯ ಐಪಿಎಲ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಈ ಪಂದ್ಯವನ್ನು ಗೆಲ್ಲುವ ಮೂಲಕ ಪ್ಲೇಆಫ್ಗೆ ಹತ್ತಿರವಾಗುವ ಸೂಚನೆ ನೀಡಿದೆ. ಅತ್ತ ಅಂಕಪಟ್ಟಿಯಲ್ಲಿ 4ನೇ ಸ್ಥಾನ ಪಡೆದುಕೊಂಡಿರುವ ರಾಜಸ್ಥಾನ್ ತಂಡ ಈ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಬಡ್ತಿ ಪಡೆಯುವ ಯತ್ನ ನಡೆಸಲಿದೆ. ಗುಜರಾತ್ ತಂಡ ಆಡಿದ ಒಂಬತ್ತು ಪಂದ್ಯಗಳಲ್ಲಿ ಆರು ಗೆಲುವು, ಮೂರು ಸೋಲು ಕಂಡು 12 ಅಂಕ ಸಂಪಾದಿಸಿದೆ. ಆರ್ಆರ್ ಆಡಿರುವ 9 ಪಂದ್ಯಗಳಲ್ಲಿ ಐದು ಜಯ, ನಾಲ್ಕು ಪಂದ್ಯಗಳಲ್ಲಿ ಸೋಲುಂಡು 10 ಅಂಕದೊಂದಿಗೆ 4ನೇ ಸ್ಥಾನದಲ್ಲಿದೆ, ಈ ಪಂದ್ಯದಲ್ಲಿ ಗೆದ್ದರೆ ಮೊದಲ ಸ್ಥಾನ ಅಲಂಕರಿಸಲಿದೆ.
ಬಲಾಬಲ ಹೇಗಿದೆ?
ಅರ್ಆರ್ ತಂಡಕ್ಕೆ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಮತ್ತು ಜೋಸ್ ಬಟ್ಲರ್ ಆಧಾರ. ಭರ್ಜರಿ ಬ್ಯಾಟಿಂಗ್ ಮೂಲಕ ಅವರು ದೊಡ್ಡ ಮೊತ್ತ ಪೇರಿಸಲು ನೆರವಾಗುತ್ತಿದ್ದಾರೆ. ಅದರಲ್ಲೂ ಜೈಸ್ವಾಲ್ ಅದ್ಭುತ ಫಾರ್ಮ್ನಲ್ಲಿದ್ದಾರೆ. ಆದರೆ, ಮಧ್ಯಮ ಕ್ರಮಾಂಕ ಸ್ವಲ್ಪ ಹಿನ್ನಡೆ ಅನುಭವಿಸುತ್ತಿದೆ. ಸರಿಯಾದ ಕ್ರಮಾಂಕದಲ್ಲಿ ಬ್ಯಾಟಿಂಗ್ ಸಿಗದೆ ದೇವದತ್ ಪಡಿಕ್ಕಲ್ ರನ್ ಗಳಿಸಲು ಪೇಚಾಡುತ್ತಿದ್ದಾರೆ. ಧ್ರುವ್ ಜುರೆಲ್ ಮತ್ತು ಜೇಸನ್ ಹೋಲ್ಡರ್ ಕಡೆಯಿಂದ ಉತ್ತಮ ಪ್ರದರ್ಶನ ಮೂಡಿ ಬರುತ್ತಿಲ್ಲ. ಬೌಲಿಂಗ್ನಲ್ಲಿ ಸ್ಪಿನ್ನರ್ಗಳಾದ ಯಜ್ವೇಂದ್ರ ಚಹಲ್, ಅಶ್ವಿನ್ ಮತ್ತು ಆ್ಯಡಂ ಜಂಪಾ ಎದುರಾಳಿ ತಂಡಕ್ಕೆ ಆಘಾತ ನೀಡುತ್ತಿದ್ದಾರೆ. ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ, ಜೇಸನ್ ಹೋಲ್ಡನ್, ಕುಲ್ದೀಪ್ ಸೇನ್ ವೇಗದ ಬೌಲಿಂಗ್ ಹೊಣೆಗಾರಿಕೆ ಹೊತ್ತುಕೊಂಡಿದ್ದಾರೆ.
ಇದನ್ನೂ ಓದಿ : Virat Kohli : ವಿರಾಟ್ ಕೊಹ್ಲಿಗೆ 1.07 ಕೋಟಿ ರೂಪಾಯಿ ದಂಡ ಹಾಕಿದರೂ ಅವರಿಗೆ ನಷ್ಟವಿಲ್ಲ; ಯಾಕೆ ಗೊತ್ತೇ?
ಗುಜರಾತ್ ತಂಡದ ಪರ ಪ್ರತಿಯೊಬ್ಬ ಆಟಗಾರನೂ ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡುತ್ತಿದ್ದಾರೆ. ನಾಯಕ ಹಾರ್ದಿಕ್ ಪಾಂಡ್ಯ ಹಿಂದಿನ ಪಂದ್ಯದಲ್ಲಿ ಅರ್ಧ ಶತಕ ಬಾರಿಸುವ ಮೂಲಕ ಫಾರ್ಮ್ ಕಂಡುಕೊಂಡಿದ್ದಾರೆ. ವೃದ್ದಿಮಾನ್ ಸಾಹ ಹಾಗೂ ಶುಭ್ಮನ್ ಗಿಲ್ ಹಿಂದಿನ ಪಂದ್ಯದಲ್ಲಿ ಫೇಲ್. ಉಳಿದಂತೆ ಅವರು ತಂಡಕ್ಕೆ ಆಧಾರವಾಗಿದ್ದಾರೆ. ವಿಜಯ್ ಶಂಕರ್ ಹಾಗೂ ರಾಹುಲ್ ತೇವಾಟಿಯ ಮೇಲೆ ತಂಡದ ಮ್ಯಾನೇಜ್ಮೆಂಟ್ ವಿಶ್ವಾಸ ಇಟ್ಟಿದೆ. ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ, ಜೋಶುವಾ ಲಿಟಲ್ ರಶೀದ್ ಖಾನ್ ಹಾಗೂ ನೂರ್ ಅಹ್ಮದ್ ಬೌಲಿಂಗ್ನಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ.
ಸಂಭಾವ್ಯ ಆಡುವ ಬಳಗ
ರಾಜಸ್ಥಾನ್ ರಾಯಲ್ಸ್ : ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್ (ನಾಯಕ), ಶಿಮ್ರಾನ್ನ್ ಹೆಟ್ಮಾಯೆರ್, ಧ್ರುವ್ ಜುರೆಲ್, ರವಿಚಂದ್ರನ್ ಅಶ್ವಿನ್, ಜೇಸನ್ ಹೋಲ್ಡರ್, ಆಡಮ್ ಝಂಪಾ, ಸಂದೀಪ್ ಶರ್ಮಾ, ಯುಜ್ವೇಂದ್ರ ಚಾಹಲ್.
ಗುಜರಾತ್ ಟೈಟನ್ಸ್: ವೃದ್ಧಿಮಾನ್ ಸಹಾ, ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ (ನಾಯಕ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯ, ರಶೀದ್ ಖಾನ್, ನೂರ್ ಅಹ್ಮದ್, ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ, ಜೋಶುವಾ ಲಿಟಲ್