ನವ ದೆಹಲಿ: ಮೋಸಗಾರರ ಗುಂಪೊಂದು ರಷ್ಯಾದ ಜೂಜುಕೋರರಿಗೆ ನಕಲಿ ಐಪಿಎಲ್ ಸೃಷ್ಟಿಸಿ ಯಾಮಾರಿಸುತ್ತಿದ್ದ ಪ್ರಕರಣವೊಂದನ್ನು ಗುಜರಾತ್ ಪೊಲೀಸರು ಭೇದಿಸಿದ್ದಾರೆ. ನಿರುದ್ಯೋಗಿ ಯುವಕರನ್ನು ಹಾಗೂ ರೈತರನ್ನು ಬಳಸಿಕೊಂಡು ರಷ್ಯಾದ ಪಂಟರ್‌ಗಳಿಗೆ ಮೋಸ ಮಾಡುತ್ತಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮೆಹ್‌ಸಾನಾ ಜಿಲ್ಲೆಯ ಮೊಲಿಪುರ ಗ್ರಾಮದ ಗದ್ದೆಯೊಂದರಲ್ಲಿ ನಕಲಿ ಐಪಿಎಲ್ ನಡೆಯುತ್ತಿತ್ತು. ಅದನ್ನವರು ಟೆಲಿಗ್ರಾಮ್ ಹಾಗೂ ಯೂಟ್ಯೂಬ್ ಮೂಲಕ ಪ್ರಸಾರ ಮಾಡಿ ರಷ್ಯಾದ ನಗರಗಳಾದ ಟೆರ್, ವೊರೊನೆಜ್ ಹಾಗೂ ಮಾಸ್ಕೋದ ಪಂಟರ್‌ಗಳಿಗೆ ಮೋಸ ಮಾಡುತ್ತಿದ್ದರು ಎನ್ನಲಾಗಿದೆ. ಟೂರ್ನಿ ಕ್ವಾರ್ಟರ್ ಫೈನಲ್ ಹಂತಕ್ಕೆ ತಲುಪಿದ್ದ ವೇಳೆ ಪೊಲೀಸರು ದಾಳಿ ಮಾಡಿ ಜಾಲವನ್ನು ಭೇದಿಸಿದ್ದಾರೆ.
ಪ್ರಮುಖ ಆರೋಪಿ ಶೋಯೆಬ್ ದಾವ್ಡಾ, ರಷ್ಯಾದ ಪಬ್‌ನಲ್ಲಿ ಕೆಲಸ ಮಾಡಿದ್ದ. ಅಲ್ಲಿ ಕೆಲವು ಪಂಟರ್‌ಗಳನ್ನು ಪರಿಚಯ ಮಾಡಿಕೊಂಡಿದ್ದ. ಭಾರತಕ್ಕೆ ಬಂದವನೇ ನಕಲಿ ಐಪಿಎಲ್ ಸೃಷ್ಟಿಸಿ ದುಡ್ಡು ದೋಚುವ ಸ್ಕೆಚ್ ಹಾಕಿದ್ದಾನೆ.
ಭರ್ಜರಿ ತಯಾರಿ
ಊರಿಗೆ ಬಂದವನೇ ಒಂದಿಷ್ಟು ಜನರನ್ನು ತಯಾರಿ ಮಾಡಿಕೊಂಡಿದ್ದಾನೆ. ಮೊದಲಿಗೆ ೨೧ ಮಂದಿ ಕೃಷಿ ಕಾರ್ಮಿಕರಿಗೆ ಅಲ್ಪ ಸ್ವಲ್ಪ ಕ್ರಿಕೆಟ್ ಕಲಿಸಿದ್ದ. ಬಳಿಕ ಒಂದಿಷ್ಟು ಜನರನ್ನು ಸೇರಿಸಿಕೊಂಡು ಪಂದ್ಯದ ಸಿಬ್ಬಂದಿ ವರ್ಗವನ್ನು ಸಿದ್ಧಪಡಿಸಿಕೊಂಡಿದ್ದ. ಬಳಿಕ ಚೆನ್ನೈ ಸೂಪರ್ ಕಿಂಗ್ಸ್, ಮುಂಬಯಿ ಇಂಡಿಯನ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳ ಹೆಸರಿನಲ್ಲಿ ನಕಲಿ ಪಂದ್ಯಗಳನ್ನು ಆಯೋಜಿಸುತ್ತಿದ್ದ.
ಪಂದ್ಯದ ನೇರ ಪ್ರಸಾರಕ್ಕೆ ಐದು ಹೈ ಡೆಫಿನಿಷನ್ ಕ್ಯಾಮೆರಾಗಳನ್ನು ಬಳಸಿದ್ದ. ಅಲ್ಲದೆ, ಪ್ರೇಕ್ಷಕರ ಧ್ವನಿಯ ನಕಲಿ ಸೃಷ್ಟಿಸಿದ್ದರು. ಮೀರತ್ ಮೂಲದ ವ್ಯಕ್ತಿಯೊಬ್ಬರು ಕಾಮೆಂಟೇಟರ್ ಹರ್ಷ ಭೋಗ್ಲೆಯವರ ಧ್ವನಿ ಅನುಕರಿಸಿ ವೀಕ್ಷಕ ವಿವರಣೆ ನೀಡುತ್ತಿದ್ದ.
ಕಾರ್ಮಿಕರಿಗೆ ಪ್ರತಿ ಪಂದ್ಯಕ್ಕೆ ೪೦೦ ರೂಪಾಯಿ ನೀಡಲಾಗುತ್ತಿತ್ತು. ಜತೆಗೆ ಎಲ್ಲರಿಗೂ ಐಪಿಎಲ್ ತಂಡಗಳ ಜರ್ಸಿ ಫ್ರೀಯಾಗಿ ಕೊಟ್ಟಿದ್ದರು. ಗದ್ದೆಯೊಂದನ್ನು ಗೇಣಿಗೆ ಪಡೆದು ಅಲ್ಲಿ ಪಂದ್ಯ ನಡೆಸುತ್ತಿದ್ದ. ಹೈ ಮಾಸ್ಟ್ ದೀಪಗಳನ್ನು ಅಳವಡಿಸಿ ಕ್ರೀಡಾಂಗಣದ ರೂಪ ನೀಡಿದ್ದ ಎನ್ನಲಾಗಿದೆ. ಗದ್ದೆಯ ಬದಿಯಲ್ಲಿ ಕುಳಿತುಕೊಳ್ಳುತ್ತಿದ್ದ ಮೋಸಗಾರರು ಅಂಪೈರ್‌ಗೆ ವಾಕಿಟಾಕಿಯಲ್ಲಿ ಬ್ಯಾಟರ್‌ಗಳು ಫೋರ್ ಅಥವಾ ಸಿಕ್ಸರ್ ಹೊಡೆಯಬೇಕೆನ್ನುವ ಸೂಚನೆ ನೀಡಲಾಗುತ್ತಿತ್ತು. ಅದಕ್ಕೆ ತಕ್ಕ ಹಾಗೆ ಬೌಲರ್‌ಗಳು ನಿಧಾನವಾಗಿ ಬೌಲಿಂಗ್ ಮಾಡುತ್ತಿದ್ದರು.
ಇದನ್ನೂ ಓದಿ: INDvsENG t20 : ಟಿ20 ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಐದನೇ ಭಾರತೀಯ ಆಟಗಾರ ಸೂರ್ಯಕುಮಾರ್