ಅಹಮದಾಬಾದ್: ಕಳೆದ ಆವೃತ್ತಿಯ ಐಪಿಎಲ್ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡ ಫೈನಲ್ನಲ್ಲಿ ಸೋಲುವ ಮೂಲಕ ನಿರಾಸೆ ಎದುರಿಸಿದೆ. ಕೊನೇ ತನಕ ತನ್ನ ಹಿಡಿತದಲ್ಲಿದ್ದ ಪಂದ್ಯವನ್ನು ಸೋಲುವ ಮೂಲಕ ಗುಜರಾತ್ ತಂಡಕ್ಕೆ ಭರ್ಜರಿ ನಿರಾಸೆಯಾಗಿದೆ. ಟ್ರೋಫಿಯನ್ನು ತನ್ನಲ್ಲೇ ಇಟ್ಟುಕೊಳ್ಳುವುದಕ್ಕೆ ವಿಫಲವಾಗಿರುವ ಬೇಸರವೂ ಮೂಡಿದೆ. ಇಷ್ಟೆಲ್ಲ ಹತಾಶೆಯ ನಡುವೆ ಗುಜರಾತ್ ತಂಡ ಎದುರಾಳಿ ಸಿಎಸ್‌ಕೆ ತಂಡವನ್ನು ಪ್ರಶಂಸಿಸಲು ಮರೆಯಲಿಲ್ಲ. ತನ್ನ ಟ್ವೀಟರ್ ಖಾತೆಯ ಮೂಲಕ ಧೋನಿ ಹಾಗೂ ಅವರ ಬಳಗಕ್ಕೆ ಅಭಿನಂದನೆ ಸಲ್ಲಿಸಿದೆ.
Vhala Thala, 🫂
— Gujarat Titans (@gujarat_titans) May 29, 2023
We knew we'd have to battle against not just your genius, but the sea of #Yellove in this fairytale final. While we're disappointed tonight, this child within us is happy as ever, to witness you hold up that trophy. #CSKvGT | #PhariAavaDe | #TATAIPL | #Final |…
ಚೆನ್ನೈ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗಾಗಿ ವಿಶೇಷ ಟ್ವೀಟ್ ಮಾಡಿರುವ ಗುಜರಾತ್ ಫ್ರಾಂಚೈಸಿ, “ಈ ಫೈನಲ್ನಲ್ಲಿ ನಾವು ನಿಮ್ಮ ಪ್ರತಿಭೆಯ ವಿರುದ್ಧ ಮಾತ್ರವಲ್ಲ, ಹಳದಿ ಸಮುದ್ರದ ವಿರುದ್ಧವೂ ಹೋರಾಡಬೇಕಾಗುತ್ತದೆ ಎಂದು ನಮಗೆ ತಿಳಿದಿತ್ತು. ಈ ರಾತ್ರಿ ನಾವು ನಿರಾಶೆಗೊಂಡಿದ್ದರೂ ನಮ್ಮೊಳಗಿನ ಈ ಮಗು ಎಂದಿನಂತೆ ಸಂತೋಷವಾಗಿದೆ. ನೀವು ಆ ಟ್ರೋಫಿಯನ್ನು ಹಿಡಿದಿರುವುದನ್ನು ನೋಡಲು ಖುಷಿಯಾಗುತ್ತಿದೆ, ಎಂದು ಹೇಳಿದ್ದಾರೆ.
ಅಹ್ಮದಾಬಾದ್ನಲ್ಲಿ ನಡೆದ ಪಂದ್ಯದಲ್ಲಿ ಜಡೇಜಾ ಸಿಕ್ಸರ್ ಹಾಗೂ ಒಂದು ಬೌಂಡರಿ ಬಾರಿಸುವ ಮೂಲಕ ಚೆನ್ನೈಗೆ 5ನೇ ಐಪಿಎಲ್ ಟ್ರೋಫಿ ತಂದುಕೊಟ್ಟರು. ಎಂಎಸ್ ಧೋನಿ ಅವರಿಗೆ ಶುಭಾಶಯ ಹೇಳಿರುವ ಬಗ್ಗೆ ಕ್ರೀಡಾಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡವು ಪ್ರಶಸ್ತಿ ಉಳಿಸಿಕೊಳ್ಳಲು ವಿಫಲವಾಗಿರಬಹುದು ಆದರೆ ಈ ಫ್ರಾಂಚೈಸಿ ಮೈದಾನದ ಒಳಗೆ ಮತ್ತು ಹೊರಗೆ ಅವರು ತಮ್ಮ ನಡೆಗಳ ಮೂಲಕ ಅಭಿಮಾನಿಗಳ ಹೃದಯವನ್ನು ಗೆದ್ದಿದೆ ಎಂದು ಹೇಳಿದ್ದಾರೆ.
ಚೆನ್ನೈನ ಅಭಿಮಾನಿಯೊಬ್ಬರು ಜಿಟಿಯ ಸಂದೇಶಕ್ಕೆ ಪ್ರತಿಕ್ರಿಯೆ ಕೊಟ್ಟು “ಎರಡೂ ತಂಡಗಳ ಆಟಗಾರರಿಂದ ಉತ್ತಮ ಆಟ ಮತ್ತು ಉತ್ತಮ ಕ್ರೀಡಾ ಸ್ಫೂರ್ತಿಯನ್ನು ನೋಡಿದ ಖುಷಿಯಾಯಿತು ಎಂದು ಹೇಳಿದ್ದಾರೆ.
ಅಭಿಮಾನಿಯೊಬ್ಬರ ಪ್ರಕಾರ, ಈ “ಕ್ರೀಡಾಮನೋಭಾವದ ಕಾರಣಕ್ಕೆ ಗುಜರಾತ್ ತಂಡಕ್ಕೆ ಹೆಚ್ಚಿನ ಗೌರವ ಸಿಗಬೇಕಾಗಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು ಎರಡೂ ತಂಡಗಳು ಇಲ್ಲಿ ಚಾಂಪಿಯನ್ ತಂಡಗಳು ಎಂದು ಹೇಳಿದ್ದಾರೆ.
ಚೆನ್ನೈಗೆ ಅಭಿನಂದನಗಳ ಮಹಾಪೂರ
ಅಹಮದಾಬಾದ್: 5ನೇ ಬಾರಿ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವನ್ನೇ ಹರಿದುಬಂದಿದೆ. ಕ್ರಿಕೆಟ್ ದಿಗ್ಗಜರು, ರಾಜಕೀಯ ಧುರೀಣರು, ಸಿನೆಮಾ ನಟ-ನಟಿಯರು ಟ್ವೀಟ್ ಮೂಲಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಟೀಮ್ ಇಂಡಿಯಾದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಅವರು ಟ್ವೀಟ್ ಮಾಡಿ, “ಎಂತಹ ಅದ್ಭುತ ಪಂದ್ಯ, ಇದುವರೆಗಿನ ಐಪಿಎಲ್ ಆವೃತ್ತಿಯಲ್ಲಿ ಕಂಡ ಅತ್ಯಂತ ರೋಚಕ ಫೈನಲ್ ಇದಾಗಿದೆ. ಗೆದ್ದ ಚೆನ್ನೈ ತಂಡಕ್ಕೆ ಶುಭಾಶಯಗಳು” ಎಂದು ಸಚಿನ್ ಹೇಳಿದ್ದಾರೆ.
ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಅವರು ಇದೊಂದು ಐತಿಹಾಸಿಕ ಗೆಲುವು, ಅತ್ಯುತ್ತಮ ಕ್ರಿಕೆಟ್ ಪಂದ್ಯ. ಪ್ರತಿಕೂಲ ಪರಿಸ್ಥಿತಿಯಲ್ಲಿ ಹೋರಾಡಿದ ಜಡೇಜಾ ಅವರ ಬ್ಯಾಟಿಂಗ್ ಸಾಹಸವನ್ನು ಮೆಚ್ಚಲೇ ಬೇಕು. ತಂಡಕ್ಕೆ ಅಭಿನಂದನೆಗಳು” ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ : MS Dhoni : ಮೊದಲ ಪಂದ್ಯದ ವೇಳೆಯೇ ಕಣ್ಣೀರು ಹಾಕಿದ್ದ ಮಹೇಂದ್ರ ಸಿಂಗ್ ಧೋನಿ!
ರಣವೀರ್ ಸಿಂಗ್ ಅವರು ಸಿಎಸ್‌ಕೆ ಮತ್ತು ರವೀಂದ್ರ ಜಡೇಜಾ ಅವರನ್ನು ಶ್ಲಾಘಿಸಿ ಸರಣಿ ಟ್ವೀಟ್‌ಗಳನ್ನು ಮಾಡಿ ಹಾರೈಸಿದ್ದಾರೆ. ನಟಿ ತ್ರಿಶಾ ಅವರು ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ “ಸಿಎಸ್ಕೆಗೆ ನಾನು ಮೂಕವಿಸ್ಮಿತನಾಗಿದ್ದೇನೆ. ಎಂದು ಬರೆದಿದ್ದಾರೆ. ಮತೋರ್ವ ನಟಿ ಕೀರ್ತಿ ಸುರೇಶ್ ಅವರು ಪಂದ್ಯದ ಗೆಲುವಿನ ಹಲವು ಫೋಟೊಗಳನ್ನು ಹಂಚಿಕೊಳ್ಳುವುದರ ಮೂಲಕ ತಂಡವನ್ನು ಅಭಿನಂದಿಸಿದ್ದಾರೆ. “ಅದ್ಭುತ ಪಂದ್ಯ. ಜಡೇಜಾ ಅವರು ತಮ್ಮದೇ ಶೈಲಿಯೊಂದಿಗೆ ಕೊನೆಗೊಳಿಸಿದರು. ಇದು ಒಂದು ರೋಮಾಂಚಕಾರಿ ರಾತ್ರಿ” ಎಂದು ಟ್ವೀಟ್ ಮಾಡಿದ್ದಾರೆ.
ಇವರಲ್ಲದೆ ಐಶ್ವರ್ಯಾ ರಜನಿಕಾಂತ್, ವಿಘ್ನೇಶ್ ಶಿವನ್, ನಿರ್ದೇಶಕ ಅಜಯ್ ಜ್ಞಾನಮುತ್ತು ಮತ್ತು ಇತರ ಹಲವಾರು ಸೆಲೆಬ್ರಿಟಿಗಳು ಐಪಿಎಲ್‌ನ ಫೈನಲ್ ಪಂದ್ಯ ವೀಕ್ಷಣೆಗಾಗಿ ಅಹಮದಾಬಾದ್‌ಗೆ ತೆರಳಿದ್ದರು. ಪಂದ್ಯ ಬಳಿಕ ಟ್ವೀಟ್ ಮೂಲಕ ತಮ್ಮ ನೆಚ್ಚಿನ ತಂಡದ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಗೂಗಲ್ ಕಂಪನಿಯ ಭಾರತ ಮೂಲದ ಸಿಇಒ ಸುಂದರ್ ಪಿಚೈ ಅವರು ಕೂಡ ಚೆನ್ನೈ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.