ಅಹಮದಾಬಾದ್: ಐಪಿಎಲ್ 16ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿರುವ ಗುಜರಾತ್ ಟೈಟನ್ಸ್ ತಂಡ 214 ರ್ ಬಾರಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದೆ. ಫೈನಲ್ ಪಂದ್ಯದಲ್ಲಿ ಗರಿಷ್ಠ ರನ್ ಬಾರಿಸಿದ ತಂಡ ಖ್ಯಾತಿಗೆ ಪಾತ್ರವಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭರ್ಜರಿ ಬ್ಯಾಟಿಂಗ್ ನಡೆಸಿದ ಗುಜರಾತ್ ತಂಡದ ಬ್ಯಾಟರ್ಗಳು ಬೃಹತ್ ಮೊತ್ತವನ್ನು ಪೇರಿಸಲು ನೆರವಾದರು.
ಇದಕ್ಕಿಂತ ಮೊದಲು 2016ರ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 7 ವಿಕೆಟ್ ನಷ್ಟಕ್ಕೆ 208 ರನ್ ಬಾರಿಸಿತ್ತು. ಇದುವರೆಗೆ ಆ ಮೊತ್ತ ಫೈನಲ್ನಲ್ಲಿ ತಂಡವೊಂದು ಬಾರಿಸಿದ ಗರಿಷ್ಠ ಮೊತ್ತ ಎನಿಸಿಕೊಂಡಿತ್ತು. ಅದನ್ನು ಗುಜರಾತ್ ತಂಡ ಮುರಿದಿದೆ. ಸಾಯಿ ಸುದರ್ಶನ್ (96 ರನ್, 47 ಎಸೆತ, 8 ಫೋರ್, 6 ಸಿಕ್ಸರ್) ಹಾಗೂ ವೃದ್ಧಿಮಾನ್ ಸಾಹ (54), ಬಾರಿಸಿದ ಅರ್ಧ ಶತಕಗಳ ನೆರವಿನಿಂದ ಗುಜರಾತ್ ತಂಡ ಈ ಸಾಧನೆ ಮಾಡಿದೆ.
ಬ್ಯಾಟಿಂಗ್ ಆರಂಭಿಸಿದ ಗುಜರಾತ್ ತಂಡ ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್ ಆರಂಭಿಸಿತು. ಶುಭ್ಮನ್ ಗಿಲ್ (20 ಎಸೆತ 39 ರನ್) ಹಾಗೂ ವೃದ್ಧಿಮಾನ್ ಸಾಹ ಭರ್ಜರಿ ಬ್ಯಾಟಿಂಗ್ ನಡೆಸಿದರು. ಈ ಜೋಡಿ ಮೊದಲ ವಿಕೆಟ್ಗೆ 7 ಓವರ್ಗಳಿಗೆ 66 ರನ್ ಬಾರಿಸಿತು. ಏಳನೇ ಓವರ್ನ ಕೊನೇ ಎಸೆತಕ್ಕೆ ಧೋನಿ ಮಾಡಿದ ಕ್ಷಿಪ್ರ ಸ್ಟಂಪ್ ಮೂಲಕ ಗಿಲ್ ಔಟಾದರು. ಈ ಮೂಲಕ ಅವರ ಮತ್ತೊಂದು ಶತಕ ಬಾರಿಸುವ ನಿರೀಕ್ಷೆ ಸುಳ್ಳಾಯಿತು. ಹಾಲಿ ಆವೃತ್ತಿಯಲ್ಲಿ ಅವರ ಒಟ್ಟು ಸ್ಕೋರ್ 890 ರನ್ಗಳು. ಅಲ್ಲದೆ 2016ರಲ್ಲಿ ವಿರಾಟ್ ಕೊಹ್ಲಿ ಬಾರಿಸಿದ್ದ 973 ರನ್ಗಳ ದಾಖಲೆ ಹಾಗೆಯೇ ಉಳಿಯಿತು.
ಗಿಲ್ ವಿಕೆಟ್ ಪತನಗೊಂಡ ಬಳಿಕ ಆಡಲು ಬಂದ ಸಾಯಿ ಸುದರ್ಶನ್ ತಮ್ಮ ಎಂದಿನ ಶೈಲಿಯಲ್ಲೇ ರನ್ ಗಳಿಸಿದರು. ಏತನ್ಮಧ್ಯೆ, ವೃದ್ಧಿಮಾನ್ ಸಾಹ 36 ಎಸೆತಕ್ಕೆ ಅರ್ಧ ಶತಕ ಪೂರೈಸಿದರು. ಆದರೆ, 14ನೇ ಓವರ್ನ ಕೊನೇ ಎಸೆತದಲ್ಲಿ ದೊಡ್ಡ ಹೊಡೆತ ಬಾರಿಸಲು ಮುಂದಾದ ಸಾಹ ವಿಕೆಟ್ ಕೀಪರ್ ಧೋನಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಇದನ್ನೂ ಓದಿ :
ಸಾಹ ಔಟಾಗುತ್ತಿದ್ದಂತೆ ಸಾಯಿ ಸುದರ್ಶನ್ ರನ್ ಗಳಿಕೆ ವೇಗ ಹೆಚ್ಚಿಸಿದರು. ಅವರು ಸತತವಾಗಿ ಬೌಂಡರಿ ಸಿಕ್ಸರ್ಗಳ ಮೂಲಕ 34 ಎಸೆತದಲ್ಲಿ ತಮ್ಮ ಅರ್ಧ ಶತಕ ಪೂರೈಸಿದರು. ಆ ಬಳಿಕವೂ ಅವರು ಸತತವಾಗ ಬೌಂಡರಿ ಸಿಕ್ಸರ್ಗಳನ್ನು ಬಾರಿಸಿ ಚೆನ್ನೈ ಬೌಲರ್ಗಳನ್ನು ಬೆಂಡೆತ್ತಿದರು. ಆದರೆ, 19ನೇ ಓವರ್ ಮೂರನೇ ಎಸೆತಕ್ಕೆ ಎಲ್ಬಿಡಬ್ಲ್ಯು ಆಗುವ ಮೂಲಕ ಶತಕದಿಂದ ವಂಚಿತರಾದರು.
ನಾಯಕ ಹಾರ್ದಿಕ್ ಪಾಂಡ್ಯ 12 ಎಸೆತಕ್ಕೆ 21 ರನ್ ಬಾರಿಸಿದರು. ಚೆನ್ನೈ ಪರ ಬೌಲಿಂಗ್ನಲ್ಲಿ ಮಹೀಶ್ ಪತಿರಾಣಾ 44 ರನ್ ನೀಡಿ 2 ವಿಕೆಟ್ ಉರುಳಿಸಿದರು. ರವೀಂದ್ರ ಜಡೇಜಾ ಮತ್ತು ದೀಪಕ್ ಚಾಹರ್ ತಲಾ ಒಂದು ವಿಕೆಟ್ ಕಬಳಿಸಿದರು.