ಅಹಮದಾಬಾದ್: ಶುಭ್ಮನ್ ಗಿಲ್ (45ರನ್) ಹಾಗೂ ಡೇವಿಡ್ ಮಿಲ್ಲರ್ (46 ರನ್) ಅವರ ಉಪಯುಕ್ತ ಬ್ಯಾಟಿಂಗ್ ನೆರವು ಪಡೆದು ಗುಜರಾತ್ ಟೈಟನ್ಸ್ ತಂಡ ಐಪಿಎಲ್ 16ನೇ ಆವೃತ್ತಿಯ 23ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಮೊದಲು ಬ್ಯಾಟ್ ಮಾಡಿ 177 ರನ್ ಗಳಿಸಿದೆ. ಇದರೊಂದಿಗೆ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ಬಳಗಕ್ಕೆ 178 ರನ್ಗಳ ಗೆಲುವಿನ ಗುರಿ ಎದುರಾಗಿದೆ.
ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗದ್ದ ರಾಜಸ್ಥಾನ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆದ ಹಾಲಿ ಚಾಂಪಿಯನ್ ಗುಜರಾತ್ ತಂಡ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 177 ರನ್ ಬಾರಿಸಿತು.
ಇನಿಂಗ್ಸ್ ಆರಂಭಿಸಿದ ಗುಜರಾತ್ ತಂಡ ವೃದ್ಧಿಮಾನ್ ಸಾಹ (4ರನ್) ವಿಕೆಟ್ ಪತನದೊಂದಿಗೆ ಕೆಟ್ಟ ಆರಂಭ ಪಡೆಯಿತು. ಬಳಿಕ ಸಾಯಿ ಸುದರ್ಶನ್ (20 ರನ್) ಮತ್ತು ಮತ್ತು ಶುಭ್ಮನ್ ಗಿಲ್ (45ರನ್ ) ರನ್ ಪೇರಿಸಲು ಆರಂಭಿಸಿದರು. ಆದರೆ, ಬಟ್ಲರ್ ಅವರ ನಿಖ ಥ್ರೋ ಫಲವಾಗಿ ವಿಕೆಟ್ಕೀಪರ್ ಸಂಜು ಸ್ಯಾಮ್ಸನ್ ಸಾಯಿ ಸುದರ್ಶನ್ ಅವರನ್ನು ರನ್ಔಟ್ ಮಾಡಿದರು. ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದ ನಾಯಕ ಹಾರ್ದಿಕ್ ಪಾಂಡ್ಯ ರನ್ ಗಳಿಕೆಗೆ ವೇಗ ಕೊಟ್ಟರು. ಅವರು 19 ಎಸೆತಗಳಲ್ಲಿ 28 ರನ್ ಬಾರಿಸಿದರು. ಈ ವೇಳೆ ಗುಜರಾತ್ ತಂಡ 3 ವಿಕೆಟ್ ನಷ್ಟಕ್ಕೆ 91 ರನ್ ಬಾರಿಸಿತು.
ಪಾಂಡ್ಯ ವಿಕೆಟ್ ಪತನಗೊಂಡ ಬಳಿಕ ಆಡಲು ಬಂದ ದಕ್ಷಿಣ ಆಫ್ರಿಕಾದ ಎಡಗೈ ಬ್ಯಾಟರ್ ಡೇವಿಡ್ ಮಿಲ್ಲರ್ ಭರ್ಜರಿಯಾಗಿ ಬ್ಯಾಟ್ ಬೀಸಿ 46 ರನ್ ಬಾರಿಸಿದರು. ಏತನ್ಮಧ್ಯೆ, ಶುಭ್ಮನ್ ಗಿಲ್ ಸಂದೀಪ್ ಶರ್ಮಾಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಆಡಲು ಬಂದ ಅಭಿನವ್ ಮನೋಹರ್ 13 ಎಸೆತಗಳಲ್ಲಿ 27 ರನ್ ಬಾರಿಸಿ ಮಿಂಚಿದರು. ಅವರ ಇನಿಂಗ್ಸ್ನಲ್ಲಿ 3 ಸಿಕ್ಸರ್ಗಳಿದ್ದವು.
ಕೊನೇ ಹಂತದಲ್ಲ ಅವರಿಬ್ಬರೂ ಔಟಾದರೂ ಗುಜರಾತ್ ತಂಡ 170 ರನ್ಗಳ ಗಡಿ ದಾಟಿ ಎದುರಾಳಿ ತಂಡಕ್ಕೆ ಸ್ಪರ್ಧಾತ್ಮ ಗುರಿಯನ್ನು ಒಡ್ಡಿತ್ತು. ರಾಜಸ್ಥಾನ್ ಪರ ಬೌಲಿಂಗ್ನಲ್ಲಿ ಸಂದೀಪ್ ಶರ್ಮಾ 2 ವಿಕೆಟ್ ಉರುಳಿಸಿದರೆ, ಟ್ರೆಂಟ್ ಬೌಲ್ಟ್, ಆ್ಯಡಂ ಜಂಪಾ, ಯಜ್ವೇಂದ್ರ ಚಹಲ್ ತಲಾ ಒಂದು ವಿಕೆಟ್ ಪಡೆದರು.