ಹೈದರಾಬಾದ್: ಐಪಿಎಲ್ 16ನೇ ಆವೃತ್ತಿಯ 62ನೇ ಪಂದ್ಯದಲ್ಲಿ ಟಾಸ್ ಗೆದ್ದಿರುವ ಸನ್ ರೈಸರ್ಸ್ ಹೈದರಾಬಾದ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಪ್ರವಾಸಿ ಗುಜರಾತ್ ಟೈಟನ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡಬೇಕಾಗಿದೆ. ಆತಿಥೇಯ ಹೈದರಾಬಾದ್ ತಂಡ ಹಾಲಿ ಆವೃತ್ತಿಯ ಐಪಿಎಲ್ನಲ್ಲಿ ಇದುವರೆಗಿನ 11 ಪಂದ್ಯಗಳಲ್ಲಿ ಏಳರಲ್ಲಿ ಸೋಲು ಕಂಡಿದೆ. ಗುಜರಾತ್ ತಂಡ 12 ಪಂದ್ಯಗಳಲ್ಲಿ 8 ಗೆಲುವು ಸಾಧಿಸಿದ್ದು, ಕೇವಲ ನಾಲ್ಕು ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ 16 ಅಂಕಗಳನ್ನು ಪಡೆದುಕೊಂಡು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.
ಇಲ್ಲಿನ ರಾಜೀವ್ಗಾಂಧಿ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಈ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡ ಲ್ಯಾವೆಂಡರ್ ಬಣ್ಣದ ಜೆರ್ಸಿಯನ್ನು ಧರಿಸಿಕೊಂಡು ಆಡಲಿದೆ. ಕ್ಯಾನ್ಸರ್ ಪೀಡಿತರಿಗೆ ನೆರವು ನೀಡುವ ಉದ್ದೇಶದಿಂದ ಈ ವಿಶೇಷ ಜೆರ್ಸಿಯನ್ನು ಹಾಕಿ ಆಡಲಿದೆ.
ಟಾಸ್ ಗೆದ್ದ ಬಳಿಕ ಮಾತನಾಡಿದ ಎಸ್ಆರ್ಎಚ್ ನಾಯಕ ಏಡೆನ್ ಮಾರ್ಕ್ರಮ್, ಪಿಚ್ನಲ್ಲಿ ತೇವದ ಅಂಶ ಕಾಣಿಸುತ್ತಿದೆ. ಹೀಗಾಗಿ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದೇವೆ. ನಮ್ಮ ಸಾಮರ್ಥ್ಯ ಹಾಗೂ ಸಂಭಾವ್ಯತೆಗೆ ಪೂರಕವಾಗಿ ಉತ್ತಮ ಕ್ರಿಕೆಟ್ ಆಡಲಿದ್ದೇವೆ. ಎಲ್ಲ ಆಟಗಾರರಿಗೆ ಮುಕ್ತ ಸ್ವಾತಂತ್ರ್ಯ ನೀಡಲಾಗಿದೆ. ಅವರು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಬಹುದು. ನಾವು ಉತ್ತಮ ಕ್ರಿಕೆಟ್ ಪಂದ್ಯಗಳನ್ನು ಆಡುತ್ತಿದ್ದೇವೆ. ಆದರೆ, ನಮಗೆ ಪೂರಕ ಫಲಿತಾಂಶ ದೊರಕುತ್ತಿಲ್ಲ. ಗ್ಲೆನ್ ಫಿಲಿಪ್ಸ್ ಬದಲಿಗೆ ಮಾರ್ಕೊ ಜೆನ್ಸನ್ ಅವರಿಗೆ ಅವಕಾಶ ಸಿಗಲಿದೆ ಎಂದು ಹೇಳಿದರು.
ಗುಜರಾತ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮಾತನಾಡಿ, ಕ್ಯಾನ್ಸರ್ ಪೀಡಿತರಿಗೆ ನೆರವು ನೀಡುವ ಉದ್ದೇಶದಿಂದ ನಾವು ಬದಲಾದ ಜೆರ್ಸಿಯೊಂದಿಗೆ ಆಡುತ್ತಿದ್ದೇವೆ. ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದೇವೆ ಎಂಬುದು ಇಲ್ಲಿ ವಿಷಯವೇ ಅಲ್ಲ. ಬದಲಾಗಿ ಉತ್ತಮ ಕ್ರಿಕೆಟ್ ಪಂದ್ಯಗಳನ್ನು ಆಡುವುದೇ ನನ್ನ ಗುರಿ. ಈ ಋತುವಿನ ಆರಂಭದಲ್ಲೇ ನಮ್ಮ ಗುರಿ ಸ್ಪಷ್ಟವಾಗಿತ್ತು. ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ನಾವು ಈ ಪಂದ್ಯದಲ್ಲಿ ಮೊದಲು ಫೀಲ್ಡಿಂಗ್ ಮಾಡುವ ಉದ್ದೇಶವನ್ನು ಹೊಂದಿದ್ದೇವು ಎಂದು ಹೇಳಿದ್ದಾರೆ.
ಇದನ್ನೂ ಓದಿ : IPL 2023 : ಮುಂಬಯಿ ಇಂಡಿಯನ್ಸ್ ವಿರುದ್ಧ ಆರ್ಸಿಬಿ ಸೋತ ಬಳಿಕ ಐಪಿಎಲ್ ಅಂಕಪಟ್ಟಿ ಹೇಗಿದೆ?
ಆಡುವ ಬಳಗ
ಗುಜರಾತ್ ಟೈಟನ್ಸ್: ಶುಬ್ಮನ್ ಗಿಲ್, ವೃದ್ಧಿಮಾನ್ ಸಾಹ, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ (ನಾಯಕ), ಡೇವಿಡ್ ಮಿಲ್ಲರ್, ದಸುನ್ ಶನಕಾ, ರಾಹುಲ್ ತೆವಾಟಿಯಾ, ಮೋಹಿತ್ ಶರ್ಮಾ, ರಶೀದ್ ಖಾನ್, ಮೊಹಮ್ಮದ್ ಶಮಿ, ನೂರ್ ಅಹ್ಮದ್.
ಸನ್ರೈಸರ್ಸ್ ಹೈದರಾಬಾದ್ ತಂಡ: ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಮ್ (ನಾಯಕ), ಹೆನ್ರಿಕ್ ಕ್ಲಾಸೆನ್ (), ಅಬ್ದುಲ್ ಸಮದ್, ಸನ್ವೀರ್ ಸಿಂಗ್, ಮಯಾಂಕ್ ಮಾರ್ಕಂಡೆ, ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಫಜಲ್ಹಾಕ್ ಫಾರೂಕಿ, ಟಿ ನಟರಾಜನ್.