Site icon Vistara News

Gukesh D: ಡಿ.ಗುಕೇಶ್‌ ಸಾಧನೆಗಾಗಿ ವೈದ್ಯ ವೃತ್ತಿಯನ್ನೇ ತೊರೆದಿದ್ದ ತಂದೆ

Gukesh D

ಬೆಂಗಳೂರು: ಭಾನುವಾರ ನಡೆದಿದ್ದ ಫಿಡೆ ಕ್ಯಾಂಡಿಡೇಟ್ಸ್‌ ಚೆಸ್‌ನಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಚಾಂಪಿಯನ್​ ಪಟ್ಟ ಅಲಂಕರಿಸಿದ ಭಾರತದ ಚೆಸ್‌ ಗ್ರ್ಯಾಂಡ್‌ಮಾಸ್ಟರ್ ಡಿ.ಗುಕೇಶ್‌(Gukesh D) ಅವರ ಸಾಧನೆಯ ಹಿಂದೆ ಅವರ ತಂದೆಯ ಅಪಾರ ಶ್ರಮವಿದೆ. ಮಗನ ಚೆಸ್​ ಸಾಧನೆಗೆ ಯಾವುದೇ ಅಡೆತಡೆ ಉಂಟಾಗಬಾರದೆಂದು ತಂದೆ ತಂದೆ ಡಾ.ರಜನೀಕಾಂತ್‌(Rajinikanth) ಅವರು ತಮ್ಮ ವೈದ್ಯ ವೃತ್ತಿಯನ್ನೇ ತಾತ್ಕಾಲಿಕವಾಗಿ ತೊರೆದಿದ್ದರು.

ಹೌದು, ಬಾಲ್ಯದಲ್ಲೇ ಚೆಸ್‌ ಮೇಲೆ ಒಲವು ಹೊಂದಿದ್ದ ಗುಕೇಶ್‌ಗೆ ಕೋಚಿಂಗ್‌, ಟೂರ್ನಿಯ ಸಿದ್ಧತೆ, ಪ್ರಯಾಣಕ್ಕಾಗಿ ಪೋಷಕರು ಆರ್ಥಿಕ ಸಮಸ್ಯೆ ಎದುರಿಸಿದ್ದರು. ಆದರೆ, ಮಗನ ಸಾಧನೆಗೆ ಹಣಕಾಸಿನ ಕೊರತೆ ಅಡ್ಡಿಯಾಗಬಾರದೆಂದು ತಂದೆ ಡಾ.ರಜನೀಕಾಂತ್‌, ತಾಯಿ ಪದ್ಮಾ ದೃಢನಿರ್ಧಾರ ಕೈಗೊಂಡಿದ್ದರು. ಹಣ ಹೊಂದಿಸಲು ಕ್ರೌಂಡ್‌ ಪಂಡಿಂಗ್ ಕೂಡಾ ನಡೆಸಿದ್ದರು. ಇದು ಮಾತ್ರವಲ್ಲದೆ ಗುಕೇಶ್‌ ಜತೆ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ವಿದೇಶಕ್ಕೆ ಹೋಗುವ ಕಾರಣಕ್ಕಾಗಿ ಅವರ ತಂದೆ 2017-18ರಲ್ಲಿ ತಮ್ಮ ವೈದ್ಯ ವೃತ್ತಿಯನ್ನೇ ತಾತ್ಕಾಲಿಕವಾಗಿ ತೊರೆದಿದ್ದರು.

ಇದನ್ನೂ ಓದಿ D Gukesh: 17ನೇ ವಯಸ್ಸಿಗೇ ‘ಚೆಸ್‌ ಕ್ಯಾಂಡಿಡೇಟ್ಸ್‌’ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತದ ಗುಕೇಶ್!

ಪೋಷಕರ ತ್ಯಾಗ ಮತ್ತು ಶ್ರಮಕ್ಕೆ ಇಂದು ಗುಕೇಶ್‌ ಚೆಸ್​ನಲ್ಲಿ ಮಿಂಚುವ ಮೂಲಕ ಅವರಿಗೂ ಕೀರ್ತಿ ತಂದಿದ್ದಾನೆ. 12ನೇ ವರ್ಷದಲ್ಲೇ ಗ್ರ್ಯಾಂಡ್‌ಮಾಸ್ಟರ್‌ ಆಗಿ ಹೊರಹೊಮ್ಮಿದ್ದ ಗುಕೇಶ್‌, ಕ್ಯಾಂಡಿಡೇಟ್ಸ್‌ ಟೂರ್ನಿ ಗೆದ್ದ ವಿಶ್ವದ ಅತಿ ಕಿರಿಯ ಚೆಸ್‌ ಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಪ್ರಶಸ್ತಿ ಗೆದ್ದ 2ನೇ ಭಾರತೀಯ ಎಂಬ ಕೀರ್ತಿಯೂ ಅವರದ್ದಾಗಿದೆ. ವಿಶ್ವನಾಥನ್‌ ಆನಂದ್‌ ಮೊದಲಿಗ. ಅವರು 2014ರಲ್ಲಿ ಕ್ಯಾಂಡಿಡೇಟ್ಸ್‌ ಪ್ರಶಸ್ತಿ ಗೆದ್ದಿದ್ದರು.

ಡಿ.ಗುಕೇಶ್‌ ವಿಶ್ವ ಚಾಂಪಿಯನ್‌ ಎನಿಸಿಕೊಳ್ಳಲು ಇನ್ನೊಂದೇ ಹೆಜ್ಜೆ ಬಾಕಿ ಇದೆ. ಈ ಸ್ಪರ್ಧೆಯಲ್ಲಿ ಚೀನಾದ ಡಿಂಗ್‌ ಲಿರೆನ್‌ ವಿರುದ್ಧ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ವರ್ಷಾಂತ್ಯದಲ್ಲಿ ಪಂದ್ಯ ನಡೆಯಲಿದ್ದು, ವೇಳಾಪಟ್ಟಿ ಇನ್ನಷ್ಟೇ ಪ್ರಕಟಗೊಳ್ಳಬೇಕಿದೆ. ಭಾರತದಿಂದ ಈ ವರೆಗೂ ವಿಶ್ವನಾಥನ್‌ ಆನಂದ್ ಮಾತ್ರ ವಿಶ್ವ ಚಾಂಪಿಯನ್‌ ಆಗಿದ್ದಾರೆ. ಅವರು 5 ಬಾರಿ ಪ್ರಶಸ್ತಿ ಗೆದ್ದಿದ್ದಾರೆ.

ಭಾನುವಾರ ತಡರಾತ್ರಿ ಕೆನಡಾದ ಟೊರೊಂಟೊದಲ್ಲಿ ನಡೆದ ಮುಕ್ತ ವಿಭಾಗದ 14 ಹಾಗೂ ಕೊನೆ ಸುತ್ತಿನ ಹಣಾಹಣಿಯಲ್ಲಿ ಗುಕೇಶ್‌ ಅವರು ಅಮೆರಿಕದ ಹಿಕರು ನಕಮುರಾ ವಿರುದ್ಧ ಡ್ರಾ ಸಾಧಿಸಿದರು. ಇದರೊಂದಿಗೆ ಗುಕೇಶ್‌ ಅಂಕ ಗಳಿಕೆಯನ್ನು 9ಕ್ಕೆ ಹೆಚ್ಚಿಸಿ ಅಗ್ರಸ್ಥಾನ ಕಾಯ್ದುಕೊಂಡರು. ರಷ್ಯಾದ ಇಯಾನ್‌ ನೆಪೊಮ್ನಿಯಾಚಿ ಹಾಗೂ ಫ್ಯಾಬಿಯಾನೊ ಕರುನಾ ನಡುವಿನ ಪಂದ್ಯ ಡ್ರಾಗೊಳ್ಳುವುದರೊಂದಿಗೆ ಗುಕೇಶ್‌ ಚಾಂಪಿಯನ್‌ ಎನಿಸಿಕೊಂಡರು.

ಇದೇ ವೇಳೆ ಗುಕೇಶ್‌ 40 ವರ್ಷಗಳ ದಾಖಲೆಯನ್ನು ಅಳಿಸಿ ಹಾಕಿ, ನೂತನ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು. ಗುಕೇಶ್‌ ಕ್ಯಾಂಡಿಡೇಟ್ಸ್‌ ಟೂರ್ನಿ ಗೆದ್ದ ವಿಶ್ವದ ಅತಿ ಕಿರಿಯ ಚೆಸ್‌ ಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು. ರಷ್ಯಾದ ದಿಗ್ಗಜ ಚೆಸ್‌ ಪಟು ಗ್ಯಾರಿ ಕಾಸ್ಪರೋವ್‌ 1984ರಲ್ಲಿ ತಮ್ಮ 22ನೇ ವರ್ಷದಲ್ಲಿ ಕ್ಯಾಂಡಿಡೇಟ್ಸ್‌ ಟೂರ್ನಿ ಗೆದ್ದಿದ್ದರು. ಇದು ಈವರೆಗಿನ ಟೂರ್ನಿಯ ಇತಿಹಾಸವಾಗಿತ್ತು. ಆದರೆ ಗುಕೇಶ್‌ 17ನೇ ವಯಸ್ಸಿಗೆ ಚಾಂಪಿಯನ್​ ಆಗುವ ಮೂಲಕ ಕಾಸ್ಪರೋವ್‌ ದಾಖಲೆ ಮುರಿದರು.

Exit mobile version