ಆ್ಯಂಟಿಗುವಾ: ಶನಿವಾರ ರಾತ್ರಿ ನಡೆದ ಬಾಂಗ್ಲಾದೇಶ(India vs Bangladesh) ವಿರುದ್ಧದ ಸೂಪರ್-8 ಪಂದ್ಯದಲ್ಲಿ ಭಾರತ 50 ರನ್ ಗಳ ಅಮೋಘ ಜಯ ಸಾಧಿಸಿ ಸೆಮಿಫೈನಲ್ ಸನಿಹಕ್ಕೆ ಬಂದು ನಿಂತಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ(Virat Kohli) ಅವರು ಗಲ್ಲಿ ಕ್ರಿಕೆಟ್ನಲ್ಲಿ(‘Gully cricket vibes) ಚೆಂಡನ್ನು ಹುಡುಕಿದಂತೆ ಸ್ಟೇಡಿಯಂನ ಸ್ಟ್ಯಾಂಡ್ವೊಂದರ ಒಳಗಡೆ ನುಗ್ಗಿ ಚೆಂಡು ಹುಡುಕುತ್ತಿರುವ ವಿಡಿಯೊವೊಂದು ವೈರಲ್(viral video) ಆಗಿದೆ.
ಬಾಂಗ್ಲಾದೇಶ ಬ್ಯಾಟಿಂಗ್ ಇನಿಂಗ್ಸ್ನಲ್ಲಿ ಈ ಘಟನೆ ಸಂಭವಿಸಿದೆ. ಸಿಕ್ಸರ್ಗೆ ಚಿಮ್ಮಿದ ಚೆಂಡು ಬೌಂಡರಿ ಲೈನ್ನ ಹೊರ ಭಾಗದಲ್ಲಿ ಇರಿಸಲಾಗಿದ್ದ ಸ್ಟ್ಯಾಂಡ್ ಒಂದರ ಕೆಳ ಭಾಗಕ್ಕೆ ಹೋಯಿತು. ಬೌಂಡರಿ ಲೈನ್ ಬಳಿ ಫೀಲ್ಡಿಂಗ್ ನಡೆಸುತ್ತಿದ್ದ ವಿರಾಟ್ ಕೊಹ್ಲಿ ಅವರು ಚೆಂಡನ್ನು ತೆಗೆಯಲು ಈ ಸ್ಟ್ಯಾಂಡ್ ಒಳಗಡೆ ನುಗ್ಗಿ ಕೊನೆಗೂ ಚೆಂಡನ್ನು ಹೊರ ತೆಗೆದಿದ್ದಾರೆ. ಕೊಹ್ಲಿಯ ಈ ಸರಳತೆಗೆ ಅವರ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಕೆಲ ನೆಟ್ಟಿಗರು ಗಲ್ಲಿ ಕ್ರಿಕೆಟ್ನ ನೆನೆಪು ಮತ್ತೆ ಮರುಕಳಿಸಿದ್ದಕ್ಕೆ ಧನ್ಯವಾದಗಳು ಕೊಹ್ಲಿ ಸರ್…ಎಂದು ಕಮೆಂಟ್ ಮಾಡಿದ್ದಾರೆ.
ದಾಖಲೆ ಬರೆದ ಕೊಹ್ಲಿ
ಕಳೆದ ಮೂರು ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿದ್ದ ಕೊಹ್ಲಿ ಬಾಂಗ್ಲಾ ವಿರುದ್ಧ ತುಸು ಚೇತರಿಕೆಯ ಬ್ಯಾಟಿಂಗ್ ಪ್ರದರ್ಶನ ತೋರಿದರು. ಜತೆಗೆ ದಾಖಲೆಯೊಂದನ್ನು ಕೂಡ ತಮ್ಮ ಹೆಸರಿಗೆ ಬರೆದರು. 37 ರನ್ ಮಾಡಿದ ಕೊಹ್ಲಿ ವಿಶ್ವಕಪ್ ಟೂರ್ನಿಯಲ್ಲಿ (ಟಿ20 ಮತ್ತು ಏಕದಿನ) 3 ಸಾವಿರ ರನ್ ಪೂರೈಸಿದ ಮೊದಲ ಕ್ರಿಕೆಟಿಗನೆನಿಸಿದರು. ಕಳೆದ ಹಲವು ವರ್ಷಗಳಿಂದ ವಿರಾಟ್ ಕೊಹ್ಲಿ ಐಸಿಸಿ ಪಂದ್ಯಾವಳಿಗಳಲ್ಲಿ ಭಾರತ ತಂಡಕ್ಕಾಗಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರು ಆಟದ ಎಲ್ಲಾ ಮೂರು ಸ್ವರೂಪಗಳಲ್ಲಿ ಭಾರತ ತಂಡದ ಬೆನ್ನೆಲುಬಾಗಿದ್ದಾರೆ.
ಇದನ್ನೂ ಓದಿ Virat Kohli : ಐಸಿಸಿ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿ ವಿಶೇಷ ಮೈಲುಗಲ್ಲು ಸ್ಥಾಪಿಸಿದ ವಿರಾಟ್ ಕೊಹ್ಲಿ
ಐಸಿಸಿ ಸೀಮಿತ ಓವರ್ಗಳ ಕ್ರಿಕೆಟ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಈಗ ಅಗ್ರಸ್ಥಾನದಲ್ಲಿದ್ದಾರೆ. ಅವರು ಒಟ್ಟು 3500 ರನ್ ಪೂರೈಸಿದ್ದಾರೆ. ರೋಹಿತ್ ಶರ್ಮಾ 3107 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಕ್ರಿಸ್ ಗೇಲ್ 2942 ರನ್ ಗಳಿಸಿ ಮೂರನೇ ಸ್ಥಾನ ಪಡೆದರೆ, ಶ್ರೀಲಂಕಾದ ಕುಮಾರ ಸಂಗಕ್ಕಾರ ಮತ್ತು ಮಹೇಲ ಜಯವರ್ಧನೆ ಕ್ರಮವಾಗಿ 2876 ಮತ್ತು 2858 ರನ್ ಗಳಿಸಿ ನಂತರದ ಸ್ಥಾನದಲ್ಲಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಭಾರತ, ಹಾರ್ದಿಕ್ ಪಾಂಡ್ಯ ಅವರ ಅಜೇಯ ಅರ್ಧ ಶತಕದ ನೆರವಿನಿಂದ 5 ವಿಕೆಟಿಗೆ 196 ರನ್ ಪೇರಿಸಿತು. ದೊಡ್ಡ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಲಷ್ಟೇ ಶಕ್ತವಾಯಿತು. ಸತತ 2 ಸೋಲು ಕಂಡ ಬಾಂಗ್ಲಾದೇಶದ ಸೆಮಿಫೈನಲ್ ಹಾದಿ ಬಹುತೇಕ ಅಂತ್ಯ ಕಂಡಿತು.
ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಜತೆಗೆ ಬೌಲಿಂಗ್ನಲ್ಲಿಯೂ ಶ್ರೇಷ್ಠ ಪ್ರದರ್ಶನ ತೋರಿದರು. ಡೆತ್ ಓವರ್‌ಗಳಲ್ಲಿ ಸಿಡಿದು ನಿಂತ ಪಾಂಡ್ಯ 27 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಅವರ ಈ ಬ್ಯಾಟಿಂಗ್ ಇನಿಂಗ್ಸ್ನಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಒಳಗೊಂಡಿತು.