Site icon Vistara News

Guru Purnima 2024: ಭಾರತದ ಮಹೋನ್ನತ ಕ್ರೀಡಾ ತಾರೆಗಳನ್ನು ಸೃಷ್ಟಿಸಿದ 6 ‘ಗುರು’ಗಳಿವರು

Guru Purnima 2024

Guru Purnima 2024: On Guru Purnima, here are 6 ‘Gurus’ who have made a difference in Indian sports

ಬೆಂಗಳೂರು: ಗುರು ಪೂರ್ಣಿಮೆ(Guru Purnima 2024) ಅಂಗವಾಗಿ ಇಂದು ಬಹುತೇಕರು ತಮ್ಮ ಜೀವನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಗುರುಗಳ ಸೇವೆಯನ್ನು ಸ್ಮರಿಸುವ ಮೂಲಕ ಅವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ಭಾರತದ ಮಹೋನ್ನತ ಕ್ರೀಡಾ ತಾರೆಗಳನ್ನು ಸೃಷ್ಟಿಸಿದ 6 ಪ್ರಮುಖ ಗುರುಗಳ ಕುರಿತ ಕಿರು ಪರಿಚಯವೊಂದು ಇಂತಿದೆ.

ರಮಾಕಾಂತ್‌ ಅಚ್ರೇಕರ್(ಸಚಿನ್ ತೆಂಡೂಲ್ಕರ್​ ಗುರು)


ಕ್ರಿಕೆಟ್‌ ದೇವರು ಎಂದು ಕರೆಯಲ್ಪಡುವ ಸಚಿನ್​ ತೆಂಡೂಲ್ಕರ್(Sachin Tendulkar)​ ವಿಶ್ವ ಕ್ರಿಕೆಟ್​ನಲ್ಲಿ ಹಲವು ಸಾಧನೆ ಮಾಡಲು ಕಾರಣ ಅವರ ಗುರು ರಮಾಕಾಂತ್‌ ಅಚ್ರೇಕರ್(Ramakant Achrekar). ಬಾಲ್ಯದಿಂದಲೇ ಅಚ್ರೇಕರ್ ಗರಡಿಯಲ್ಲಿ ಪಳಗಿದ ಸಚಿನ್​ ಇಂದು ವಿಶ್ವ ಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಳ್ಳುವಂತಾಗಿದೆ. 1932ರಲ್ಲಿ ಜನಿಸಿದ ಅಚ್ರೇಕರ್ ಮುಂಬೈ ಸ್ಥಳೀಯ ಕ್ರಿಕೆಟ್‍ನಲ್ಲಿ ಉತ್ತಮ ಆಟಗಾರರಾಗಿ ಹೆಸರು ಗಳಿಸಿದವರಾಗಿದ್ದರು. ಸಚಿನ್ ತೆಂಡೂಲ್ಕರ್ ಸೇರಿದಂತೆ ವಿನೋದ್ ಕಾಂಬ್ಳಿ, ಅಜಿತ್ ಆಗರ್ಕರ್, ಪ್ರವೀಣ್‌ ಆಮ್ರೆ, ಸಮೀರ್‌ ದಿಘೆ, ಬಲ್ವಿಂದರ್‌ ಸಿಂಗ್‌ ಸಂಧು ಸೇರಿದಂತೆ ಹಲವಾರು ಕ್ರಿಕೆಟಿಗರನ್ನು ದೇಶಕ್ಕೆ ಪರಿಚಯಿಸಿದ ಹೆಗ್ಗಳಿಕೆ ಅಚ್ರೇಕರ್ ಅವರದ್ದು.


1990ರಲ್ಲಿ ಭಾರತ ಸರ್ಕಾರ ಅಚ್ರೇಕರ್ ಅವರಿಗೆ ದ್ರೋಣಾಚಾರ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು.2010ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಇವರು ಭಾಜನರಾಗಿದ್ದರು. ಸಚಿನ್​ ಎಷ್ಟೇ ದೊಡ್ಡ ಖ್ಯಾತಿ ಗಳಿಸಿದರೂ ಕೂಡ ತಮ್ಮ ಗುರುವಿನ ತ್ಯಾಗವನ್ನು ಸದಾ ನೆನಪಿಸಿಕೊಳ್ಳುತ್ತಿರುತ್ತಾರೆ. ಅಚ್ರೇಕರ್ ಅಂತಿಮ ಸಂಸ್ಕಾರಕ್ಕೆ ಶವವನ್ನು ತೆಗೆದುಕೊಂಡು ಹೋಗುವ ವೇಳೆ ಪಾರ್ಥೀವ ಶರೀರಕ್ಕೆ ಸಚಿನ್‌ ತೆಂಡುಲ್ಕರ್‌ ಕೂಡ ಹೆಗಲು ಕೊಡುವ ಮೂಲಕ ಗುರುವಿನ ಮೇಲಿನ ಪ್ರೀತಿಯನ್ನು ಮೆರೆದಿದ್ದರು. ಅಚ್ರೇಕರ್ 2019ರಲ್ಲಿ ನಿಧನ ಹೊಂದಿದ್ದರು.

ಎಸ್. ಎಂ ಆರಿಫ್(ಗೋಪಿಚಂದ್‌ ಗುರು)


ಭಾರತ ಕಂಡ ಶ್ರೇಷ್ಠ ಬ್ಯಾಡ್ಮಿಂಟನ್‌ ಆಟಗಾರರಲ್ಲಿ ಪಿ.ಗೋಪಿಚಂದ್‌(Pullela Gopichand) ಕೂಡ ಒಬ್ಬರು. ಇವರನ್ನು ಈ ಮಟ್ಟಕ್ಕೆ ಬೆಳೆಸಿದ್ದ ಇವರ ಗುರುಗಳಾದ ಎಸ್. ಎಂ ಆರಿಫ್(coach SM Arif.). ಇವರ ಕೋಚಿಂಗ್ ಮಾರ್ಗದರ್ಶನದಲ್ಲೇ ಗೋಪಿಚಂದ್ 2001 ರಲ್ಲಿ ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಓಪನ್ ಚಾಂಪಿಯನ್‌ಶಿಪ್ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದು. 11 ವಯಸ್ಸಿನಲ್ಲಿಯೇ ಬ್ಯಾಡ್ಮಿಂಟನ್ ಗೀಳಿಗೆ ಬಿದಿದ್ದ ಗೋಪಿಚಂದ್‌ ಅವರನ್ನು ಶ್ರೇಷ್ಠ ಬ್ಯಾಡ್ಮಿಂಟನ್​ ಆಟಗಾರನಾಗಿ ಮಾಡಿದ್ದು ಅವರ ಕೋಚ್​ ಆರಿಫ್. ಇವರ ಮಾರ್ಗದಶದಲ್ಲಿ ಗೋಪಿಚಂದ್‌ ಕೇವಲ 18 ವರ್ಷ ವಯಸ್ಸಿರುವಾಗ ರಾಷ್ಟ್ರೀಯ ಜೂನಿಯರ್ ಚಾಂಪಿಯನ್ ಆಗಿ ಹೊಮ್ಮಿದ್ದರು. ಮೂರು ವರ್ಷದ ನಂತರ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ಗೆದ್ದು ಬೀಗಿದ್ದರು. ಸತತವಾಗಿ ಐದು ವರ್ಷ ಅವರು ಆ ಪಟ್ಟವನ್ನು ಬೇರೆ ಯಾರಿಗೂ ಬಿಟ್ಟುಕೊಟ್ಟಿರಲಿಲ್ಲ.


ಚಾಂಪಿಯನ್ನರ ಗುರು ಗೋಪಿಚಂದ್‌


ಭಾರತ ಕಂಡ ಶ್ರೇಷ್ಠ ಬ್ಯಾಡ್ಮಿಂಟನ್‌ ಆಟಗಾರರಲ್ಲಿ ಪಿ.ಗೋಪಿಚಂದ್‌ ಕೂಡ ಒಬ್ಬರು. ಅವರು ಆಟಗಾರರಾಗಿ ಮಿಂಚಿದ್ದಕ್ಕಿಂತ ತರಬೇತುದಾರರಾಗಿ ಮೆರೆದಿದ್ದೇ ಹೆಚ್ಚು. ಅವರ ಗರಡಿಯಲ್ಲಿ ಸೈನಾ ನೆಹ್ವಾಲ್‌(Saina Nehwal) ಪಿ.ವಿ.ಸಿಂಧು(PV Sindhu), ಕೆ.ಶ್ರೀಕಾಂತ್‌, ಎಚ್‌.ಎಸ್‌.ಪ್ರಣಯ್‌, ಸಾಯಿ ಪ್ರಣೀತ್‌ರಂತಹ ಖ್ಯಾತ ಆಟಗಾರರು ಬೆಳಕಿಗೆ ಬಂದಿದ್ದು. ಇದರಲ್ಲಿ ಸೈನಾ ಮತ್ತು ಪಿವಿ ಸಿಂಧು ಪ್ರತಿಷ್ಠಿತ ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ ಐತಿಹಾಸಿಕ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ವಿಶ್ವಮಟ್ಟದಲ್ಲಿ ಭಾರತದ ಹೆಸರು ಬೆಳಗಿದ್ದೇ ಈ ತಾರೆಯರಿಂದ. ಭಾರತೀಯರು ಬ್ಯಾಡ್ಮಿಂಟನ್‌ನಲ್ಲಿ ಏನೆಲ್ಲ ಸಾಧಿಸಬಹುದೋ, ಅಷ್ಟೆಲ್ಲ ಸಾಧಿಸಿದ್ದಾರೆ. ಅದರ ಹಿಂದಿರುವುದು ಹೈದರಾಬಾದ್‌ನಲ್ಲಿರುವ ಗೋಪಿಚಂದ್‌ ಅಕಾಡೆಮಿ. ತರಬೇತುದಾರರಾಗಿ ಅಸಾಮಾನ್ಯ ಸಾಧನೆಯನ್ನೇ ಮಾಡಿದ ಕೀರ್ತಿ ಇವರದ್ದು.


ಸತ್ಪಾಲ್‌ ಸಿಂಗ್‌

ಒಲಿಂಪಿಕ್ಸ್‌ನಲ್ಲಿ ಎರಡು ಚಿನ್ನ ಗೆದ್ದಿರುವ ಸುಶೀಲ್‌ ಕುಮಾರ್(Sushil Kumar) ಮತ್ತು ಯೋಗೇಶ್ವರ ದತ್‌(Yogeshwar Dutt,) ಅವರನ್ನು ಭಾರತೀಯ ಕುಸ್ತಿಗೆ ಪರಿಚಯಿಸಿದ ಕೀರ್ತಿ ಮಾಜಿ ಕುಸ್ತಿಪಟು ಮತ್ತು ತರಬೇತುದಾರ ಸತ್ಪಾಲ್‌ ಸಿಂಗ್‌(Satpal Singh) ಅವರಿಗೆ ಸಲ್ಲುತ್ತದೆ. ಕುಸ್ತಿಪಟುವಾಗಿದ್ದ ಸತ್ಪಾಲ್‌ ಸಿಂಗ್‌, 1982 ಏಷ್ಯನ್‌ ಕ್ರೀಡಾಕೂಟದಲ್ಲಿ ಭಾರತಕ್ಕೆ ಚಿನ್ನ ಗೆದ್ದಿದ್ದರು. ಇದಕ್ಕೂ ಮುನ್ನ 1974ರ ಕೂಟದಲ್ಲಿ ಕಂಚು ಜಯಿಸಿದ್ದರು. ಭಾರತೀಯ ಕುಸ್ತಿಗೆ ನೀಡಿದ ಮಹೋನ್ನತ ಕೊಡುಗೆಗಾಗಿ ಅವರಿಗೆ 1983ರಲ್ಲಿ ‘ಪದ್ಮ ಶ್ರೀ’ ಪುರಸ್ಕಾರ ನೀಡಿ ಗೌರವಿಸಲಾಗಿತ್ತು. 2009ರಲ್ಲಿ ‘ದ್ರೋಣಾಚಾರ್ಯ’ ಪ್ರಶಸ್ತಿಯೂ ಅವರಿಗೆ ಅರಸಿ ಬಂದಿತ್ತು.


ಜಗದೀಶ್ ಸಿಂಗ್(ವಿಜೇಂದರ್ ಸಿಂಗ್ ಕೋಚ್​)


2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಬಾಕ್ಸರ್ ವಿಜೇಂದರ್ ಸಿಂಗ್ ಕಂಚಿನ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಅವರ ಕೋಚ್​ ಜಗದೀಶ್ ಸಿಂಗ್. ಕ್ರೀಡಾಪಟುವಾಗಿದ್ದ ಜಗದೀಶ್ ಸಿಂಗ್ ದೇಶಕ್ಕೆ ಶ್ರೇಷ್ಠ ಬಾಕ್ಸರ್​ಗಳನ್ನು ನೀಡಬೇಕು ಎನ್ನುವ ಉದ್ದೇಶದಿಂದ ತಮ್ಮ ಮನೆ ಮತ್ತು ಜಮೀನನ್ನು ಅಡಮಾನವಿಟ್ಟು ಗ್ರಾಮೀಣ ಬ್ಯಾಂಕ್‌ನಿಂದ ನಾಲ್ಕು ಲಕ್ಷ ಸಾಲ ಪಡೆದು ಬಾಕ್ಸಿಂಗ್​ ಕ್ಲಬ್ ಆರಂಭಿಸಿದ್ದರು. ಇದೇ ಕ್ಲಬ್​ನಲ್ಲಿ ಪಳಗಿದ ವಿಜೇಂದರ್ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದು ಸಂಭ್ರಮಿಸಿದ್ದರು. 2007 ರಲ್ಲಿ, ಭಾರತ ಸರ್ಕಾರವು ಜಗದೀಶ್​ ಸಿಂಗ್ ಅವರಿಗೆ ಪ್ರತಿಷ್ಠಿತ ದ್ರೋಣಾಚಾರ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

ಇದನ್ನೂ ಓದಿ ರಾಜ ಮಾರ್ಗ ಅಂಕಣ : ಅಪವಾದ ಎಲ್ಲರ ಬದುಕಿನಲ್ಲಿಯೂ ಬರುತ್ತವೆ, ಅದನ್ನು ಮೀರಿ ನಿಲ್ಲುವುದು ಹೇಗೆ?


ರಾಹುಲ್ ದ್ರಾವಿಡ್​


ಆಟಗಾರನಾಗಿ ಮತ್ತು ಮಾರ್ಗದರ್ಶಕರಾಗಿ ಭಾರತದ ಕ್ರಿಕೆಟ್​ಗೆ ಅಪಾರ ಸೇವೆ ಸಲ್ಲಿಸಿದ್ದ ಕೀರ್ತಿ ರಾಹುಲ್​ ದ್ರಾವಿಡ್(Rahul Dravid)​ಗೆ ಸಲ್ಲುತ್ತದೆ. ಇವರು ಕರ್ನಾಟಕದವರು ಎಂಬುದು ಕನ್ನಡಿಗರ ಹೆಮ್ಮೆ. ಅಂಡರ್​-19 ಕೋಚ್​ ಆಗಿ, ಆ ಬಳಿಕ ಸೀನಿಯರ್​ ತಂಡದ ಕೋಚ್​ ಆಗಿ ಭಾರತಕ್ಕೆ ವಿಶ್ವಕಪ್​ ಗೆಲ್ಲಿಸಿಕೊಟ್ಟ ಹೆಗ್ಗಳಿಕೆ ದ್ರಾವಿಡ್​ ಅವರದ್ದಾಗಿದೆ. ಇಂದು ಭಾರತ ತಂಡದಲ್ಲಿ ಮಿಂಚುತ್ತಿರುವ ಹಲವು ಕ್ರಿಕೆಟ್​ ಆಟಗಾರರು ದ್ರಾವಿಡ್​ ಗರಡಿಯಲ್ಲೇ ಪಳಗಿದ ಆಟಗಾರರಾಗಿದ್ದಾರೆ. ಕಳೆದ ತಿಂಗಳು ಮುಕ್ತಾಯ ಕಂಡಿದ್ದ ಟಿ20 ವಿಶ್ವಕಪ್​ನಲ್ಲಿ ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ಸಾಧನೆಯ ಹಿಂದೆ ದ್ರಾವಿಡ್​ ಅವರ ಮಾರ್ಗದರ್ಶನ ಮುಖ್ಯವಾಗಿತ್ತು. ತಂಡ ಒಂದೇ ಒಂದು ಪಂದ್ಯ ಸೋಲದೆ ಕಪ್​ ಗೆದ್ದು ಇತಿಹಾಸ ನಿರ್ಮಿಸಿತ್ತು. ಒಬ್ಬ ಜಂಟಲ್ ಮ್ಯಾನ್ ಕ್ರಿಕೆಟರ್ ಆಗಿ, ಕ್ಯಾಪ್ಟನ್ ಆಗಿ, ಕೋಚ್ ಆಗಿ ಭಾರತೀಯ ಕ್ರಿಕೆಟನ್ನು ಶ್ರೀಮಂತಗೊಳಿಸಿದ ಅವರಿಗೆ ಭಾರತರತ್ನ ಪ್ರಶಸ್ತಿ(bharatha ratna award) ನೀಡಬೇಕು ಎನ್ನುವುದು ಹಲವು ಮಾಜಿ ಕ್ರಿಕೆಟಿಗರ ಆಗ್ರಹವಾಗಿದೆ.

Exit mobile version