ಬರ್ಮಿಂಗ್‌ಹ್ಯಾಮ್ : ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಎರಡನೇ ಪದಕ ಲಭಿಸಿದೆ. ಶನಿವಾರ ನಡೆದ ವೇಟ್‌ಲಿಫ್ಟಿಂಗ್ ಸ್ಪರ್ಧೆಯ ಪುರುಷರ ೬೧ ಕೆ.ಜಿ ವಿಭಾಗದಲ್ಲಿ ಕರ್ನಾಟಕದ ಗುರುರಾಜ ಪೂಜಾರಿ ಕಂಚಿನ ಪದಕ ಗೆದ್ದಿದ್ದಾರೆ. ಅವರು ಕಳೆದ ಬಾರಿಯ ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ೫೬ ಕೆ.ಜಿ ವಿಭಾಗದಲ್ಲಿ ಬೆಳ್ಳಿಯ ಪದಕ ಗೆದ್ದಿದ್ದರು. ಇದರೊಂದಿಗೆ ಸತತ ಎರಡು ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಪದಕಗಳನ್ನು ಗೆದ್ದು ಸಾಧನೆ ಮಾಡಿದರು.
ಒಟ್ಟಾರೆ ೨೬೯ ಕೆ.ಜಿ ಭಾರ ಎತ್ತಿದ ಅವರು ಕಂಚಿನ ಪದಕಕ್ಕೆ ಭಾಜನರಾದರು. ಸ್ನ್ಯಾಚ್ ವಿಭಾಗದಲ್ಲಿ ೧೧೮ ಕೆ.ಜಿ ಭಾರ ಎತ್ತಿದ ಗುರುರಾಜ ಅವರು ಕ್ಲೀನ್ ಆಂಡ್ ಜರ್ಕ್ ವಿಭಾಗದಲ್ಲಿ ೧೫೧ ಕೆ.ಜಿ ಭಾರ ಎತ್ತಿ ಕಂಚಿನ ಪದಕಕ್ಕೆ ಭಾಜನರಾದರು. ಭಾರತ ತಂಡದ ಇನ್ನೊಬ್ಬ ವೇಟ್‌ಲಿಫ್ಟರ್ ಸಂಕೇತ್ ಸಾಗರ್ ಅವರು ಬೆಳ್ಳಿ ಪದಕ ಗೆದ್ದಿರುವ ಸ್ವಲ್ಪ ಹೊತ್ತಿನಲ್ಲೇ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಇವರ ಪದಕದೊಂದಿಗೆ ಇದುವರೆಗಿನ ಕಾಮನ್ವೆಲ್ತ್ ಗೇಮ್ಸ್‌ಗಳಲ್ಲಿ ಭಾರತದ ವೇಟ್‌ಲಿಫ್ಟರ್‌ಗಳು ಗೆದ್ದಿರುವ ಪದಕಗಳ ಸಂಖ್ಯೆ ೧೨೭ಕ್ಕೆ ಏರಿತು.
ಗುರುರಾಜ ಅವರು ಕುಂದಾಪುರ ವಂಡ್ಸೆಯವರು. ಎಸ್‌ಡಿಎಮ್ ಉಜಿರೆ ಕಾಲೇಜಿ ಹಳೆ ವಿದ್ಯಾರ್ಥಿ. ಅಚ್ಚರಿಯೆಂದರೆ ಕಳೆದ ಬಾರಿ ಅವರು ಬೆಳ್ಳಿ ಪದಕ ಗೆದ್ದ ವೇಳೆ ಪ್ರಭಾವಿತಗೊಂಡು, ವೇಟ್‌ಲಿಫ್ಟಿಂಗ್‌ನಲ್ಲಿ ಇನ್ನಷ್ಟು ಸಾಧನೆ ಮಾಡಿದ ಸಂಕೇತ್ ಸಾಗರ್ ಈ ಬಾರಿ ಆ ವಿಭಾಗದಲ್ಲಿ ಬೆಳ್ಳಿಯ ಪದಕ ಗೆದ್ದಿದ್ದಾರೆ.
ಸ್ನ್ಯಾಚ್ ವಿಭಾಗದ ಮೊದಲ ಅವಕಾಶದಲ್ಲಿ ೧೧೫ ಕೆ.ಜಿ ಭಾರವನ್ನು ಸಲೀಸಾಗಿ ಎತ್ತಿದ ಗುರುರಾಜ ಪೂಜಾರಿ, ಎರಡನೇ ಪ್ರಯತ್ನದಲ್ಲಿ ೧೧೮ಕ ಕೆ.ಜಿ ಭಾರವನ್ನೂ ಎತ್ತಿದರು. ಆದರೆ, ಮೂರನೇ ಪ್ರಯತ್ನದಲ್ಲಿ ಅವರಿಗೆ ೧೨೦ ಕೆ. ಜಿ ಎತ್ತಲು ಸಾಧ್ಯವಾಗಲಿಲ್ಲ. ಅಂತೆಯೇ ಕ್ಲೀನ್ ಆಂಡ್ ಜರ್ಕ್ ವಿಭಾಗದಲ್ಲಿ ಮೊದಲ ಪ್ರಯತ್ನದಲ್ಲಿ ೧೪೫ ಕೆ.ಜಿ ಭಾರ ಎತ್ತಿದೆ ಅವರು ನಂತರದ ೧೪೯ ಕೆ.ಜಿಗೆ ಸುಧಾರಿಸಿಕೊಂಡರು. ಅಂತಿಮವಾಗಿ ೧೫೧ ಕೆ. ಜಿ ಎತ್ತುವ ಮೂಲಕ ಕಂಚಿನ ಪದಕ ತಮ್ಮದಾಗಿಸಿಕೊಂಡರು.
ಗುರುರಾಜ ಅವರಿಗೂ ಪ್ರಧಾನಿ ಮೋದಿ, ರಾಷ್ಟ್ರಪತಿ ಸೇರಿದಂತೆ ಹಲವು ಗಣ್ಯರು ಶುಭಾಶಯಗಳನ್ನು ತಿಳಿಸಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಟ್ವೀಟ್ ಮೂಲಕ ಶುಭಾಶಯ ಕೋರಿದ್ದಾರೆ.
ಪತ್ನಿಗೆ ಅರ್ಪಣೆ
ತಾವು ಗೆದ್ದ ಕಂಚಿನ ಪದಕವನ್ನು ವೇಟ್‌ಲಿಫ್ಟರ್ ಗುರುರಾಜ ಪೂಜಾರಿ ತಮ್ಮ ಪತ್ನಿಗೆ ಅರ್ಪಿಸಿದ್ದಾರೆ. “ನಾನೂ ಇನ್ನೂ ಉತ್ತಮ ಪ್ರದರ್ಶನ ನೀಡಬಹುದಾಗಿತ್ತು. ಆದರೆ, ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದೆ. ಅದರಿಂದ ಸುಧಾರಿಸಿಕೊಂಡು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದೇನೆ,” ಎಂದು ಹೇಳಿದ್ದಾರೆ.
ಇದನ್ನೂ ಓದಿ | CWG- 2022 | ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ, ಬೆಳ್ಳಿ ಗೆದ್ದ ಸಂಕೇತ್ ಸಾಗರ್