ನವ ದೆಹಲಿ : ಫಿಫಾ ವಿಶ್ವ ಕಪ್ (FIFA World Cup) ದಿನದಿಂದ ದಿನಕ್ಕೆ ಕಳೆಗಟ್ಟುತ್ತಿದ್ದು, ಫುಟ್ಬಾಲ್ ಪ್ರೇಮಿಗಳು ರೋಚಕ ಕ್ಷಣಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಕತಾರ್‌ನಲ್ಲಿ ನಡೆಯುತ್ತಿರುವ ಜಾಗತಿಕ ಫುಟ್ಬಾಲ್ ಜಾತ್ರೆಯು ಭಾರತದ ಅಭಿಮಾನಿಗಳನ್ನು ಸೆಳೆಯುತ್ತಿರುವ ನಡುವೆ ಭಾರತೀಯರು ಹೆಮ್ಮೆ ಪಡುವಂಥ ವರ್ತಮಾನವೊಂದು ವರದಿಯಾಗಿದೆ. ಅದೇನು ಗೊತ್ತೇ? ಹಾಲಿ ಫುಟ್ಬಾಲ್ ವಿಶ್ವ ಕಪ್‌ನ ಟ್ರೋಫಿ ಹಾಗೂ ಇನ್ನಿತರ ಉಡುಗೊರೆಗಳು ತಯಾರಾಗಿದ್ದು ಭಾರತದಲ್ಲಿ. ಅಂದರೆ, ಆಗ್ರಾದ ಕರಕುಶಲ ಕರ್ಮಿಗಳು ಕಲಾತ್ಮಕ ಉಡುಗೊರೆಗಳನ್ನು ತಯಾರಿಸಿದ್ದಾರೆ.
ಆಗ್ರಾ ಮೂಲದ ಸಂಸ್ಥೆಯು ವಿಶ್ವದ ಹಲವು ದೇಶಗಳ ಕಲಾಕಾರರನ್ನು ಹಿಂದಿಕ್ಕಿ, ವಿಶ್ವ ಕಪ್‌ನ ಟ್ರೋಫಿಗೆ ಕುಸುರಿ ಕೆಲಸ ನಡೆಸುವ ಹಾಗೂ ಇನ್ನಿತರ ಕಲಾತ್ಮಕ ಉಡುಗೊರೆಗಳನ್ನು ತಯಾರಿಸುವ ಗುತ್ತಿಗೆಯನ್ನು ಪಡೆದುಕೊಂಡಿತ್ತು. ಅಂತೆಯೇ ಆ ಕಂಪನಿ ತಯಾರಿಸಿ ಚಿನ್ನ, ಹವಳ ಹಾಗೂ ಇನ್ನಿತರ ಅಮೂಲ್ಯ ಪದಾರ್ಥಗಳಿಂದ ಟ್ರೋಫಿಗಳನ್ನು ತಯಾರಿಸಿ ನೀಡಿದೆ ಎಂಬುದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.
ಏಷ್ಯಾದ ನಾನಾ ದೇಶಗಳಲ್ಲಿ ಕಂಡು ಬರುವ ಇಸ್ಲಾಮಿಕ್ ವಾಸ್ತುಶಿಲ್ಪದ ಕೆತ್ತನೆಗಳನ್ನು ಆಧರಿಸಿ ಈ ಉಡುಗೊರೆಗಳು ಹಾಗೂ ಕೆತ್ತನೆಗಳನ್ನು ತಯಾರಿಸಲಾಗಿದೆ ಎಂದು ಆರ್ಡರ್ ಪಡೆದಿರುವ ಕಂಪನಿಯ ಅದ್ನಾನ್ ಶೇಖ್ ಎಂಬುವರು ಹೇಳಿದ್ದಾರೆ.
ಮುಖ್ಯ ಟ್ರೋಫಿಯನ್ನು ರಷ್ಯಾದ ಕಂಪನಿಯೊಂದು ತಯಾರಿಸಿದೆ. ಅದಕ್ಕೆ ಆಗ್ರಾದಲ್ಲಿ ಕುಸರಿ ಕೆಲಸಗಳನ್ನು ಮಾಡಲಾಗಿದೆ. ಅದಕ್ಕೆ ಬಂಗಾರ ಪ್ಲೇಟ್‌ಗಳನ್ನು ಅಂಟಿಸುವ ಹಾಗೂ ಕಸೂತಿ ಕೆಲಸವನ್ನು ಮಾಡಲಾಗಿದೆ. ಈ ಕೆಲಸವನ್ನು ಸಂಪೂರ್ಣವಾಗಿ ಕರಕುಶಲ ಕರ್ಮಿಗಳೇ ಮಾಡಿದ್ದಾರೆ.
ಆಗ್ರಾದ ಪ್ರವಾಸೋದ್ಯಮ ಕಲ್ಯಾಣ ಸಂಸ್ಥೆಯ ಮುಖ್ಯಸ್ಥರಾದ ವಿಶಾಲ್ ಶರ್ಮ ಅವರು ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ. ಅಲ್ಲದೆ, ಆಗ್ರಾ ತನ್ನ ಕೆತ್ತನೆ ಹಾಗೂ ಕುಸುರಿ ಕೆಲಸಗಳ ಮೂಲಕ ಜಗದ್ವಿಖ್ಯಾತಿ ಪಡೆಯುತ್ತಿರುವುದು ಇದೇ ಮೊದಲೇನಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ | Video| ಫಿಫಾ ವಿಶ್ವ ಕಪ್ ಪಂದ್ಯದ ವೇಳೆ ಭಾರತದ ತ್ರಿವರ್ಣ ಧ್ವಜ ಹೊದ್ದು ತನ್ನ ದೇಶವನ್ನು ಬೆಂಬಲಿಸಿದ ಅರ್ಜೆಂಟೀನಾ ಯುವತಿ; ಕಾರಣ ಇಲ್ಲಿದೆ