Site icon Vistara News

Ind vs WI T20: ʼನೀನು ಧೋನಿ ಅಲ್ಲ!ʼ ಸಿಕ್ಸ್‌ ಹೊಡೆದು ತಂಡ ಗೆಲ್ಲಿಸಿದರೂ ಹಾರ್ದಿಕ್‌ ಪಾಂಡ್ಯ ʼಸ್ವಾರ್ಥಿʼ ಅನಿಸಿಕೊಂಡದ್ದೇಕೆ?

hardik pandya and ms dhoni

ಹೊಸದಿಲ್ಲಿ: ವೆಸ್ಟ್‌ ಇಂಡೀಸ್‌ ತಂಡದ ವಿರುದ್ಧ ನಡೆದ T20I ಕ್ರಿಕೆಟ್‌ ಸರಣಿಯ (Ind vs WI T20) ಮೂರನೇ ಪಂದ್ಯದಲ್ಲಿ ನಾಯಕ ಹಾರ್ದಿಕ್‌ ಪಾಂಡ್ಯ (Hardik Pandya) ಸಿಕ್ಸ್‌ ಬಾರಿಸಿ ಪಂದ್ಯ ಗೆಲ್ಲಿಸಿಕೊಂಡರು. ಇವರ ಸಿಕ್ಸ್‌, ಸಹ ಆಟಗಾರನೊಬ್ಬನ ಹಾಫ್‌ ಸೆಂಚುರಿ ಅವಕಾಶವನ್ನು ಕಸಿದುಕೊಂಡಿದ್ದರಿಂದ, ಕ್ರೀಡಾಭಿಮಾನಿಗಳು ಕುಪಿತರಾಗಿ ಪಾಂಡ್ಯಗೆ ಸೋಶಿಯಲ್‌ ಮೀಡಿಯಾದಲ್ಲಿ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಎಂಎಸ್‌ ಧೋನಿಯ (MS Dhoni) ಉದಾರತೆಯನ್ನೂ ಈ ಸಂದರ್ಭದಲ್ಲಿ ಹಲವು ಮಂದಿ ನೆನೆದುಕೊಂಡಿದ್ದಾರೆ.

ಗಯಾನಾದಲ್ಲಿ ನಡೆದ ಟಿ20 ಪಂದ್ಯದಲ್ಲಿ ಈ ಸನ್ನಿವೇಶ ಸೃಷ್ಟಿಯಾಯಿತು. ಭಾರತ ಗೆಲ್ಲಲು 14 ಬಾಲ್‌ಗಳಲ್ಲಿ 2 ರನ್‌ಗಳು ಬೇಕಾಗಿದ್ದವು. ಪಾಂಡ್ಯ ಜತೆ ಸಹ ಬ್ಯಾಟರ್‌ ಆಗಿದ್ದ ತಿಲಕ್‌ ವರ್ಮಾ (Tilak Verma) ಅವರ ಸ್ಕೋರ್‌ 49 ಆಗಿತ್ತು. ಇನ್ನೊಂದು ರನ್‌ ಮಾಡಿದ್ದರೆ ಟಿ20ಯಲ್ಲಿ ಎರಡನೇ ಹಾಫ್‌ ಸೆಂಚುರಿ ಮಾಡಿದ ಹೆಗ್ಗಳಿಕೆ ಈ ಯುವ ಆಟಗಾರನದಾಗುತ್ತಿತ್ತು. ಇನ್ನೂ 7 ವಿಕೆಟ್‌ಗಳು ಕೈಯಲ್ಲಿದ್ದವು. ಹೀಗಾಗಿ ಸೋಲುವ ಭಯವೂ ಇರಲಿಲ್ಲ.

ಆದರೆ ಮುಂದಿನ ರೋವ್‌ಮನ್‌ ಪೊವೆಲ್‌ನ ಮುಂದಿನ ಎಸೆತವನ್ನು ಎದುರಿಸಿದ ಪಾಂಡ್ಯ, ಅದನ್ನು ನೇರವಾಗಿ ಸಿಕ್ಸ್‌ಗೆ ಅಟ್ಟಿದರು. ಭಾರತ ತಂಡ ಪಂದ್ಯದಲ್ಲಿ ಗೆದ್ದುದಷ್ಟೇ ಅಲ್ಲದೆ ಸರಣಿಯಲ್ಲೂ ಮುನ್ನಡೆ ಸಾಧಿಸಿತು. ಆದರೆ ಪಾಂಡ್ಯ ಅವರ ಈ ಹೊಡೆತ ಮಾತ್ರ ತಿಲಕ್‌ ವರ್ಮಾ ಅವರ ಹಾಫ್‌ ಸೆಂಚುರಿಯ ಸಾಧ್ಯತೆಯನ್ನು ಕಸಿದುಕೊಂಡಿತು.

ಹೀಗಾಗಿ, ಭಾರತ ಗೆದ್ದರೂ ಕ್ರೀಡಾಭಿಮಾನಿಗಳು ಮಾತ್ರ ಪಾಂಡ್ಯ ಅವರನ್ನು ಟೀಕಿಸುತ್ತಿದ್ದಾರೆ. ಕೆಲವರು ಧೋನಿ ಅವರ ಆಟವೊಂದನ್ನು ನೆನಪಿಸಿಕೊಂಡಿದ್ದಾರೆ. 2014ರಲ್ಲಿ ನಡೆದ ಟಿ20 ವಿಶ್ವಕಪ್‌ ಸೆಮಿಫೈನಲ್‌ ಪಂದ್ಯದಲ್ಲಿ ಧೋನಿ, ಇಂಥದೊಂದು ಅವಕಾಶವನ್ನು ವಿರಾಟ್‌ ಕೊಹ್ಲಿಗೆ ಬಿಟ್ಟುಕೊಟ್ಟಿದ್ದರು. ಈ ಪಂದ್ಯದಲ್ಲಿ ಏಳು ಬಾಲುಗಳಲ್ಲಿ ಒಂದು ರನ್‌ ಪಡೆದು ಭಾರತ ಗೆಲ್ಲಬೇಕಿತ್ತು. ಬ್ಯಾಟಿಂಗ್‌ ಮಾಡುತ್ತಿದ್ದ ಧೋನಿ ತನ್ನೆಡೆಗೆ ಬಂದ ಬಾಲನ್ನು ಸುಮ್ಮನೆ ಅತ್ತ ತಳ್ಳಿ ಮುಂದಿನ ಎಸೆತ ಎದುರಿಸುವ ಅವಕಾಶವನ್ನು ವಿರಾಟ್‌ ಕೊಹ್ಲಿಗೆ ಬಿಟ್ಟುಕೊಟ್ಟಿದ್ದರು.

ʼʼಧೋನಿಯಂತೆ ಉದಾತ್ತತೆ ತೋರಿಸುವ ಅವಕಾಶವನ್ನು ಪಾಂಡ್ಯ ಬಿಟ್ಟುಕೊಟ್ಟಿದ್ದಾರೆʼʼ ʼʼಇದು ಕ್ರಿಕೆಟ್‌ ಚರಿತ್ರೆಯ ಅತ್ಯಂತ ಕೆಟ್ಟ ಸಿಕ್ಸ್‌ʼʼ ʼʼಪಾಂಡ್ಯ, ನೀನು ಧೋನಿ ಆಗಲಾರೆʼʼ ಎಂದು ಮುಂತಾದ ಪೋಸ್ಟ್‌ಗಳು, ಕಮೆಂಟ್‌ಗಳು ಸೋಶಿಯಲ್‌ ಮೀಡಿಯಾದಲ್ಲಿ ಇದೀಗ ಹರಿದಾಡುತ್ತಿವೆ.

ಇದನ್ನೂ ಓದಿ: ind vs wi : ಗೆಲ್ಲಲೇಬೇಕಾದ ಪಂದ್ಯದಲ್ಲಿ ಗೆದ್ದು ಬೀಗಿದ ಭಾರತ ತಂಡ

Exit mobile version