ಮುಂಬಯಿ: ಭಾರತ ಕ್ರಿಕೆಟ್ ತಂಡದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ(Hardik Pandya) ಅವರ ಫಿಟ್‌ನೆಸ್ ಬಗ್ಗೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿತ್ತು. ಏಕದಿನ ವಿಶ್ವಕಪ್ನ ಲೀಗ್ ಹಂತದ ಬಾಂಗ್ಲಾದೇಶ ವಿರುದ್ಧದ ಪಂದ್ಯದ ವೇಳೆ ಪಾದದ ಗಾಯಕ್ಕೆ ಒಳಗಾದ ಪಾಂಡ್ಯ ವಿಶ್ವಕಪ್ ಟೂರ್ನಿಯಿಂದಲೇ ಹೊರಬಿದ್ದಿದ್ದರು. ಇದಾದ ಬಳಿಕ ಅವರು ಯಾವುದೇ ಕ್ರಿಕೆಟ್ ಸರಣಿ ಆಡಿಲ್ಲ.
ಗಾಯದಿಂದ ಚೇತರಿಕೆ ಕಾಣುತ್ತಿರುವ ಹಾರ್ದಿಕ್ ಪಾಂಡ್ಯ ಮುಂಬರುವ ಅಫಘಾನಿಸ್ತಾನ ಸೇರಿ ಐಪಿಎಲ್ ಟೂರ್ನಿಯಿಂದಲೂ ಹೊರ ಬೀಳಲಿದ್ದಾರೆ ಎಂದು ಕೆಲ ದಿನಗಳ ಹಿಂದೆ ವರದಿಯಾಗಿತ್ತು. ಆದರೆ, ಇದೀಗ ಪಾಂಡ್ಯ ತಮ್ಮ ಫಿಟ್ನೆಸ್ನ ವಿಡಿಯೊ ಹಂಚಿಕೊಳ್ಳುವ ಮೂಲಕ ಎಲ್ಲ ಅನುಮಾನಕ್ಕೂ ತೆರೆ ಎಳೆದಂತಿದೆ. ಶೀಘ್ರದಲ್ಲೇ ಕ್ರಿಕೆಟ್ ಆಡಲಿದ್ದೇನೆ ಎಂಬ ಸಂದೇಶ ನೀಡಿದ್ದಾರೆ.
ಪಾಂಡ್ಯ ತೀವ್ರವಾದ ಜಿಮ್ ಸೆಷನ್‌ನಲ್ಲಿ ಅನೇಕ ಕಠಿಣ ವ್ಯಾಯಾಮಗಳಲ್ಲಿ ತೊಡಗಿಕೊಂಡ ವಿಡಿಯೊವನ್ನು ಹಂಚಿಕೊಂಡು “ಪ್ರಗತಿ, ಪ್ರತಿದಿನ” ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. ಈ ಮೂಲಕ ತಾನು ಗಾಯದಿಂದ ಸಂಪೂರ್ಣವಾಗಿ ಗುಣಮುಖವಾಗಿದ್ದೇನೆ ಎನ್ನುವ ವಿಚಾರವನ್ನು ಹಂಚಿಕೊಂಡಿದ್ದಾರೆ. ಆದರೆ, ಅಫಘಾನಿಸ್ತಾನ ವಿರುದ್ಧದ ಸರಣಿಯಿಂದ ಹೊರಗುಳಿಯುವುದು ಖಚಿತ. ಐಪಿಎಲ್ ಟೂರ್ನಿಯ ವೇಳೆ ಪಾಂಡ್ಯ ಕಮ್ಬ್ಯಾಕ್ ಮಾಡಬಹುದು.
2022-23 ರಿಂದ ಗುಜರಾತ್ ಟೈಟಾನ್ಸ್ ಪರ 31 ಪಂದ್ಯಗಳನ್ನು ಆಡಿರುವ ಪಾಂಡ್ಯ, 37.86 ರ ಸರಾಸರಿಯಲ್ಲಿ 133 ಸ್ಟ್ರೈಕ್ ರೇಟ್‌ನಲ್ಲಿ 833 ರನ್ ಗಳಿಸಿದ್ದರು. ಇದರಲ್ಲಿ ಆರು ಅರ್ಧ ಶತಕಗಳು ಬಾರಿಸಿದ್ದರು. ಅಜೇಯ 87 ರನ್ ಗರಿಷ್ಠ ವೈಯಕ್ತಿಕ ಮೊತ್ತವಾಗಿದೆ. ಬೌಲಿಂಗ್ನಲ್ಲಿಯೂ ಕಮಾಲ್ ಮಾಡಿ 11 ವಿಕೆಟ್‌ಗಳನ್ನು ಉರುಳಿಸಿದ್ದಾರೆ. 17 ರನ್ಗೆ 3 ವಿಕೆಟ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ.
ಪಾಂಡ್ಯ ಅವರು 2015-2021ರಲ್ಲಿ ಮುಂಬೈ ಇಂಡಿಯನ್ಸ್ ಪರ ಒಟ್ಟು 92 ಪಂದ್ಯಗಳನ್ನು ಆಡಿದ್ದರು. 153 ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್‌ನಲ್ಲಿ 27.33 ರ ಸರಾಸರಿಯಲ್ಲಿ 1,476 ರನ್ ಗಳಿಸಿದ್ದಾರೆ, ನಾಲ್ಕು ಅರ್ಧ ಶತಕಗಳು ಹಾಗೂ 42 ವಿಕೆಟ್‌ಗಳನ್ನು ಪಡೆದಿದ್ದಾರೆ.
ಮುಂಬೈ ತಂಡಕ್ಕೆ ನಾಯಕ
ಹಾರ್ದಿಕ್ ಪಾಂಡ್ಯ (Hardik Pandya) ಅವರನ್ನು ಗುಜರಾತ್ ಟೈಟಾನ್ಸ್ ತಂಡದಿಂದ ಮುಂಬಯಿ ತಂಡಕ್ಕೆ 15 ಕೋಟಿ ರೂ.ಗೆ ಟ್ರೇಡ್ ಮಾಡಿ ಕರೆ ತಂದಾಗ ದೊಡ್ಡ ಬದಲಾವಣೆ ನಿರೀಕ್ಷೆ ಮಾಡಲಾಗಿತ್ತು. ಅಂತೆಯೇ ರೋಹಿತ್ ಶರ್ಮ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಪಾಂಡ್ಯ ಅವರಿಗೆ ನಾಯಕತ್ವದ ಪಟ್ಟ ಕಟ್ಟಲಾಯಿತು. ಇದು ರೋಹಿತ್ ಅಭಿಮಾನಿಗಳ ಆಕ್ರೋಶಕ್ಕೂ ಕಾರಣವಾಗಿತ್ತು.