ಬಾರ್ಬಡೋಸ್: ದಕ್ಷಿಣ ಆಫ್ರಿಕಾ ವಿರುದ್ಧ ಶನಿವಾರ ರಾತ್ರಿ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಹಾರ್ದಿಕ್ ಪಾಂಡ್ಯ(Hardik Pandya) ಗೆಲುವಿನ ಬಳಿಕ ಅತ್ಯಂತ ಭಾವುಕರಾಗಿ ಕಂಡುಬಂದುರು. ಗೆದ್ದ ಖುಷಿಯಲ್ಲಿ ಕಣ್ಣೀರು ಕೂಡ ಸುರಿಸಿದರು. ಆದರೆ, ಪಾಂಡ್ಯ ಮೊಬೈಲ್ನಲ್ಲಿ ಮಾತನಾಡುತ್ತಿರುವ ಫೋಟೊವೊಂದು ಈಗ ವೈರಲ್ ಆಗಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಫೋಟೊದಲ್ಲಿ, ಉಪನಾಯಕ ಹಾರ್ದಿಕ್ ಪಾಂಡ್ಯ ಪಿಚ್‌ನಲ್ಲಿ ವಿಜೇತ ಪದಕವನ್ನು ಕುತ್ತಿಗೆಗೆ ಹಾಕಿಕೊಂಡು ಫೋನ್ ಕರೆಯಲ್ಲಿ ಮಗ್ನರಾಗಿರುವುದು ಕಂಡುಬಂದಿದೆ. ಈ ಫೋಟೊವನ್ನು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದು, ಇದು ಪಾಂಡ್ಯ ತಮ್ಮ ಪತ್ನಿ ನತಾಶಾ ಸ್ಟಾನ್‌ಕೋವಿಕ್ ಅವರಿಗೆ ಕಾಲ್ ಮಾಡಿದ್ದು ಎಂದು ಹೇಳಲಾರಂಭಿಸಿದ್ದಾರೆ.
ಹೌದು, ನೆಟ್ಟಿಗರು ಹೀಗೆ ಹೇಳಲು ಕೂಡ ಒಂದು ಕಾರಣವಿದೆ. ಹಾರ್ದಿಕ್ ಪಾಂಡ್ಯ(Hardik Pandya) ಮತ್ತು ನತಾಶಾ ಸ್ಟಾನ್‌ಕೋವಿಕ್(Nataša Stanković) ಅವರ ವಿವಾಹ ಮುರಿದು ಬಿದ್ದಿದ್ದು, ಈ ಜೋಡಿ ವಿಚ್ಛೇದನ ಪಡೆಯಲಿದೆ ಎಂದು ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯಾಗಿತ್ತು. ಆದರೆ, ಈ ಜೋಡಿ ಮಾತ್ರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಪಾಂಡ್ಯ ವಿಶ್ವಕಪ್ ಗೆದ್ದ ಬಳಿಕ ಫೋನ್ನಲ್ಲಿ ಮಾತನಾಡಿದ ಫೋಟೊ ಕಂಡ ನೆಟ್ಟಿಗರು ಈ ಜೋಡಿ ಮಧ್ಯೆ ಯಾವುದೇ ಬಿರುಕು ಮೂಡಿಲ್ಲ ಎಂದು ಹೇಳಲಾರಂಭಿಸಿದ್ದಾರೆ. ಆದರೆ, ಪಾಂಡ್ಯ ಅವರು ಕಾಲ್ ಮಾಡಿ ಮಾತನಾಡಿರುವುದು ಯಾರಿಗೆ ಎಂದು ಖಚಿತವಾಗಿಲ್ಲ. ನತಾಶ ಕೂಡ ತಮ್ಮ ಯಾವುದೇ ಸಾಮಾಜಿಕ ಜಾಲತಾಣದಲ್ಲಿಯೂ ಭಾರತದ ಗೆಲುವಿನ ಕುರಿತ ಪೋಸ್ಟ್ ಕೂಡ ಮಾಡಿಲ್ಲ.
ಇದನ್ನೂ ಓದಿ T20 World Cup 2024: ʼವಿಶ್ವʼ ಗೆದ್ದ ನಾಯಕ ರೋಹಿತ್, ಕೋಚ್ ದ್ರಾವಿಡ್, ಕೊಹ್ಲಿಗೆ ಕರೆ ಮಾಡಿ ಅಭಿನಂದಿಸಿದ ಮೋದಿ
ಕೊನೆಯ ಓವರ್ನಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ 16 ರನ್ ಅಗತ್ಯವಿತ್ತು. ಹಾರ್ದಿಕ್ ಪಾಂಡ್ಯ ಎಸೆದ ಮೊದಲ ಎಸೆತವನ್ನು ಡೇವಿಡ್ ಮಿಲ್ಲರ್ ಸಿಕ್ಸರ್ ನತ್ತ ಬಾರಿಸಿದ್ದರು. ಬೌಂಡರಿ ಲೈನ್ ನಲ್ಲಿದ್ದ ಸೂರ್ಯ ಕುಮಾರ್ ಯಾದವ್ ಯಾರೂ ಊಹಿಸದಂತೆ ಸಾಹಸಮಯ ಅಮೋಘ ಕ್ಯಾಚ್ ಪಡೆದರು. 21 ರನ್ ಗಳಿಸಿದ್ದ ಡೇವಿಡ್ ಮಿಲ್ಲರ್ ವಿಕೆಟ್ ಕೈಚೆಲ್ಲಿದರು. ಎರಡನೇ ಎಸೆತವನ್ನು ರಬಾಡಾ ಬೌಂಡರಿ ಬಾರಿಸಿದರು. ಮೂರನೇ ಎಸೆತದಲ್ಲಿ ಒಂದು ರನ್ ಬಂತು. ಕೊನೆಯ ಎರಡು ಎಸೆತಗಳಲ್ಲಿ 10 ರನ್ ಅಗತ್ಯವಿತ್ತು. ಹಾರ್ದಿಕ್ ಒಂದು ವೈಡ್ ಎಸೆದರು. ರಬಾಡಾ ಕ್ಯಾಚಿತ್ತು ನಿರ್ಗಮಿಸಿದರು. ಕೊನೆಯ ಎಸೆತದಲ್ಲಿ ಒಂದು ರನ್ ಮಾತ್ರ ಬಂತು. ಭಾರತ 7 ರನ್ಗಳ ಗೆಲುವು ಸಾಧಿಸಿ 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದು ಬೀಗಿತು.
ಹಾರ್ದಿಕ್ ಪಾಂಡ್ಯ ಅಪಾಯಕಾರಿ ಹೆನ್ರಿಚ್ ಕ್ಲಾಸೆನ್ ಮತ್ತು ಮತ್ತು ಡೇವಿಡ್ ಮಿಲ್ಲರ್ ವಿಕೆಟ್ ಕೀಳದೇ ಇದ್ದಿದ್ದರೆ ಭಾರತ ತಂಡಕ್ಕೆ ಗೆಲುವು ಅಸಾಧ್ಯವಾಗುತ್ತಿತ್ತು. ಪಂದ್ಯ ಗತಿಯನ್ನೇ ಬದಲಿಸಿ ಭಾರತದ ಗೆಲುವಿನ ಹೀರೊ ಎನಿಸಿಕೊಂಡರು. ಐಪಿಎಲ್ನಲ್ಲಿ ಮುಂಬೈ ನಾಯಕನಾಗಿ ಮತ್ತು ಆಟಗಾರನಾಗಿ ವೈಫಲ್ಯ ಕಂಡಿದ್ದ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದರು. ಆದರೆ ಅವರು ವಿಶ್ವಕಪ್ನಲ್ಲಿ ತೋರಿದ ಪ್ರದರ್ಶನ ಅಂದು ಟ್ರೋಲ್ ಮಾಡಿದವರು ಕೂಡ ತಲೆತಗ್ಗಿಸುವಂತೆ ಮಾಡಿದೆ. ಗೆಲುವಿನ ಬಳಿಕ ಪಾಂಡ್ಯ ಅತ್ಯಂತ ಭಾವುಕರಾಗಿ ಕಣ್ಣೀರು ಸುರಿಸಿದ ವೇಳೆ ನಾಯಕ ರೋಹಿತ್ ಶರ್ಮ, ಕೋಚ್ ರಾಹುಲ್ ದ್ರಾವಿಡ್ ಸೇರಿ ತಂದ ಸಹ ಆಟಗಾರರು ಸಂತೈಸಿದ್ದಾರೆ.