ಮುಂಬಯಿ: ಬಾಂಗ್ಲಾದೇಶ ವಿರುದ್ಧದ ಪಂದ್ಯದ ವೇಳೆ ಪಾದದ ಗಾಯಕ್ಕೆ ತುತ್ತಾದ ಹಾರ್ದಿಕ್ ಪಾಂಡ್ಯ(Hardik Pandya) ಅವರು ಅಕ್ಟೋಬರ್ 22 ರಂದು ಧರ್ಮಶಾಲಾದಲ್ಲಿ ನಡೆಯಲಿರುವ ನ್ಯೂಜಿಲ್ಯಾಂಡ್ ಎದುರಿನ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೆ ಪಾಂಡ್ಯ ಹೆಚ್ಚಿನ ಚಿಕಿತ್ಸೆಗಾಗಿ ಈಗಾಗಲೇ ಬೆಂಗಳೂರಿಗೆ ತಪುಪಿದ್ದು ಎನ್ಸಿಎಗೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.
“ಹಾರ್ದಿಕ್ ಪಾಂಡ್ಯ(hardik pandya injury) ಅವರು ಬೆಂಗಳೂರಿಗೆ ತೆರಳಿದ್ದಾರೆ. ಎನ್‌ಸಿಎಯಲ್ಲಿ ಅವರಿಗೆ ಚಿಕಿತ್ಸೆ ನೀಡಿ ಫಿಟ್ನೆಸ್ ವರದಿಯನ್ನು ಪಡೆಯಲಾಗುತ್ತದೆ. ವೈದ್ಯಕೀಯ ತಂಡವು ಅವರ ಪಾದದ ಸ್ಕ್ಯಾನ್ ವರದಿಯನ್ನು ಮೌಲ್ಯಮಾಪನ ಮಾಡಿದೆ ಸದ್ಯ ಅವರು ಚುಚ್ಚುಮದ್ದನ್ನು ತೆಗೆದುಕೊಳ್ಳುವ ಮೂಲಕ ನೋವನ್ನು ನಿವಾರಿಸಿಕೊಳ್ಳುತ್ತಿದ್ದಾರೆ. ಬಿಸಿಸಿಐ ಇಂಗ್ಲೆಂಡ್‌ನಲ್ಲಿರುವ ತಜ್ಞ ವೈದ್ಯರನ್ನು ಸಂಪರ್ಕಿಸಿದ್ದು ಅವರು ಕೂಡ ಪಾಂಡ್ಯಗೆ ಕೆಲ ಚಿಕಿತ್ಸೆ ನೀಡುವಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಅವರು ಬೆಂಗಳೂರಿನ ಎನ್ಸಿಗೆ ತೆರಳಲಿದ್ದಾರೆ. ಮುಂದಿನ ಪಂದ್ಯದಿಂದ ಅವರು ಹೊರಗುಳಿಯುವುದು ಬಹುತೇಖ ಖಚಿತ” ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪಾಂಡ್ಯ ಅವರು ಬೆಂಗಳೂರಿನಲ್ಲಿರುವ ಮಣಿಪಾಲ ಆಸ್ಪತ್ರಗೆ ಬಂದಿರುವ ವಿಡಿಯೊ ಸಾಮಾಜಿಕ ಜಾಲತಾಣ ಟ್ವಿಟರ್ ಎಕ್ಸ್ನಲ್ಲಿ ವೈರಲ್ ಆಗಿದೆ.
Hardik pandya had come to Manipal hospital baner for treatment #HardikPandya pic.twitter.com/kK8O7yI55p
— ghansham kakde (@Ghanshamkakde1) October 19, 2023
ಬೌಲಿಂಗ್ ಪೂರ್ಣಗೊಳಿಸಿದ ಕೊಹ್ಲಿ
ಪಂದ್ಯದ 9ನೇ ಓವರ್ ಎಸೆಯಲು ಬಂದ ಹಾರ್ದಿಕ್ ಪಾಂಡ್ಯ ಅವರು ಲಿಟನ್ ದಾಸ್ ಬಾರಿಸಿದ ಬೌಂಡರಿ ತಡೆಯುವ ಯತ್ನದಲ್ಲಿ ಸ್ಲಿಪ್ ಆಗಿ ಕೆಳಗೆ ಬಿದ್ದರು. ಕೂಡಲೇ ಫಿಸಿಯೊ ಮೈದಾನಕ್ಕೆ ಧಾವಿಸಿದರು. ಬಳಿಕ ಹಾರ್ದಿಕ್ ಪಾಂಡ್ಯ ನೋವಿನಿಂದಾಗಿ ಮೈದಾನ ತೊರೆದರು. ಪಾಂಡ್ಯ ಅವರ ಉಳಿದ ಮೂರು ಎಸೆತಗಳನ್ನು ವಿರಾಟ್ ಕೊಹ್ಲಿ ಅವರು ಪೂರ್ಣಗೊಳಿಸಿದರು. ಗಾಯಗೊಂಡು ಮೈದಾನದಿಂದ ಹೊರ ನಡೆದ ಪಾಂಡ್ಯ ಸಂಪೂರ್ಣವಾಗಿ ಪಂದ್ಯದಿಂದ ಹೊರಗುಳಿದರು. ಅವರ ಸ್ಥಾನದಲ್ಲಿ ಸೂರ್ಯಕುಮಾರ್ ಅವರು ಬದಲಿ ಆಟಗಾರನಾಗಿ ಫೀಲ್ಡಿಂಗ್ ನಡೆಸಿದರು.
ಪಾಂಡ್ಯ ಹೊರಬಿದ್ದರೆ?
ಒಂದೊಮ್ಮೆ ಹಾರ್ದಿಕ್ ಪಾಂಡ್ಯ ಅವರ ಗಾಯದ ಸ್ವರೂಪ ಗಂಭೀರವಾಗಿದ್ದು ವೈದ್ಯರು ವಿಶ್ರಾಂತಿ ಅಥವಾ ಶಸ್ತ್ರಚಿಕಿತ್ಸೆ ಮಾಡಬೇಕೆಂದು ತಿಳಿಸಿದರೆ ಹಾರ್ದಿಕ್ ಪಾಂಡ್ಯ ಅವರ ವಿಶ್ವಕಪ್ ಜರ್ನಿ ಅರ್ಧಕ್ಕೆ ಮೊಟಕುಗೊಳ್ಳಲಿದೆ. ಅವರು ವಿಶ್ವಕಪ್ ಟೂರ್ನಿಯಿಂದ ಹೊರಬೀಳಲಿದ್ದಾರೆ. ಆಗ ಅವರ ಸ್ಥಾನಕ್ಕೆ ಸೂಕ್ತ ಆಲ್ರೌಂಡರ್ ಆಯ್ಕೆ ಮಾಡುವುದೇ ಬಿಸಿಸಿಐಗೆ ದೊಡ್ಡ ಚಿಂತೆಯೊಂದು ಕಾಡಲಿದೆ. ರೇಸ್ನಲ್ಲಿ ದೀಪಕ್ ಚಹರ್ ಮತ್ತು ಶಿವಂ ದುಬೆ ಹೆಸರು ಕೇಳಿಬಂದಿದೆ. ಆದರೆ ಸದ್ಯದ ಮಾಹಿತಿ ಪ್ರಕಾರ ಪಾಂಡ್ಯಗೆ ಗಂಭೀರ ಸ್ವರೂಪದ ಗಾಯವಾಗಿಲ್ಲ. ಒಂದೆರಡು ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಮಾತ್ರ ಇದೆ ಎಂದು ಹೇಳಲಾಗಿದೆ.
7 ವಿಕೆಟ್ ಗೆಲುವು
ಬೌಲರ್ಗಳ ಸಾಹಸ ಹಾಗೂ ವಿರಾಟ್ ಕೊಹ್ಲಿಯ (ಅಜೇಯ 103 ರನ್) ಅಮೋಘ ಶತಕದ ನೆರವಿನಿಂದ ಮಿಂಚಿದ ಭಾರತ ತಂಡ ಬಾಂಗ್ಲಾದೇಶ ವಿರುದ್ಧದ (ind vs ban) ವಿಶ್ವ ಕಪ್ ಪಂದ್ಯದಲ್ಲಿ 7 ವಿಕೆಟ್ಗಳ ಭರ್ಜರಿ ವಿಜಯ ಸಾಧಿಸಿದೆ. ಇದು ಭಾರತ ತಂಡಕ್ಕೆ ಹಾಲಿ ವಿಶ್ವ ಕಪ್ನಲ್ಲಿ ಸತತ ನಾಲ್ಕನೇ ಗೆಲುವಾಗಿದೆ. ಈ ಮೂಲಕ ಭಾರತ ತಂಡ ವಿಶ್ವ ಕಪ್ನಲ್ಲಿ (ICC World Cup 2023) ಅಜೇಯ ಓಟವನ್ನು ಮುಂದುವರಿಸಿದೆ. ರನ್ ರೇಟ್ ಆಧಾರದಲ್ಲಿ ಭಾರತ ಸದ್ಯ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲೇ ಉಳಿದಿದೆ. ಕಿವೀಸ್ ಅಗ್ರಸ್ಥಾನ ಕಾಯ್ದುಕೊಂಡಿದೆ. ಉಭಯ ತಂಡಗಳು ತಲಾ 8 ಅಂಕ ಹೊಂದಿದೆ.