Site icon Vistara News

Hardik Pandya: ವಿಶ್ವಕಪ್‌ನಿಂದಲೇ ಹಾರ್ದಿಕ್‌ ಪಾಂಡ್ಯ ಔಟ್;‌ ಕನ್ನಡಿಗನಿಗೆ ಒಲಿದ ಸ್ಥಾನ

Hardik Pandya

Hardik Pandya Ruled Out Of Cricket World Cup 2023 Due To Injury, Prasidh Krishna Named Replacement

ಬೆಂಗಳೂರು: ಬಾಂಗ್ಲಾದೇಶ ವಿರುದ್ಧ ನಡೆದ ವಿಶ್ವಕಪ್‌ ಪಂದ್ಯದ (ICC World Cup 2023) ವೇಳೆ ಎಡ ಪಾದಕ್ಕೆ ಗಾಯವಾದ ಕಾರಣ ಹಲವು ಪಂದ್ಯಗಳಿಗೆ ಅಲಭ್ಯರಾಗಿದ್ದ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ (Hardik Pandya) ಈಗ ವಿಶ್ವಕಪ್‌ನಿಂದಲೇ ಹೊರಗುಳಿದಿದ್ದಾರೆ. ಗ್ರೇಡ್ 1 ಅಸ್ಥಿರಜ್ಜು ಸಮಸ್ಯೆಯಿಂದ ಬಳಲುತ್ತಿರುವ ಹಾರ್ದಿಕ್‌ ಪಾಂಡ್ಯ ಅವರು ಸಂಪೂರ್ಣವಾಗಿ ಗುಣಮುಖರಾಗದ ಕಾರಣ ಅವರು ವಿಶ್ವಕಪ್‌ ಟೂರ್ನಿಯಿಂದ ಹೊರಗುಳಿದಿದ್ದಾರೆ. ಹಾರ್ದಿಕ್‌ ಪಾಂಡ್ಯ ಬದಲಿಗೆ ಕನ್ನಡಿಗ ಪ್ರಸಿದ್ಧ್‌ ಕೃಷ್ಣ (Prasidh Krishna) ಅವರಿಗೆ ಅವಕಾಶ ನೀಡಲಾಗಿದೆ.

ಭಾರತ ಕ್ರಿಕೆಟ್‌ ತಂಡದ ಉಪನಾಯಕನೂ ಆಗಿರುವ ಹಾರ್ದಿಕ್‌ ಪಾಂಡ್ಯ ಅವರು ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿಯೇ ಆಡಲಿದ್ದಾರೆ ಎಂಬ ವರದಿಗಳು ಕೇಳಿಬಂದಿದ್ದವು. ಲಂಕಾ ವಿರುದ್ಧವೂ ಕಣಕ್ಕಿಳಿಯದ ಅವರು ಸೆಮಿಫೈನಲ್‌ ವೇಳೆಗಾದರೂ ತಂಡ ಸೇರಲಿದ್ದಾರೆ ಎನ್ನಲಾಗಿತ್ತು. ಆದರೂ, ಅವರು ಸಂಪೂರ್ಣವಾಗಿ ಗುಣಮುಖರಾಗದ ಕಾರಣ ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ.

ಕನ್ನಡಿಗ, ವೇಗಿ ಪ್ರಸಿದ್ಧ್‌ ಕೃಷ್ಣ ಅವರು ತಂಡಕ್ಕೆ ಆಯ್ಕೆಯಾಗಿದ್ದು ಮತ್ತಷ್ಟು ಬಲ ಬಂದಂತಾಗಿದೆ. ಭಾರತದ ಪರ 17 ಏಕದಿನ ಹಾಗೂ 2 ಟಿ-20 ಪಂದ್ಯಗಳನ್ನು ಆಡಿರುವ ಪ್ರಸಿದ್ಧ್‌ ಕೃಷ್ಣ, ಒಟ್ಟು 33 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರೊಂದಿಗೆ ಕೆ.ಎಲ್‌.ರಾಹುಲ್‌ ಜತೆಗೆ ವಿಶ್ವಕಪ್‌ ತಂಡಕ್ಕೆ ಆಯ್ಕೆಯಾದ ಮತ್ತೊಬ್ಬ ಕನ್ನಡಿಗ ಎಂಬ ಖ್ಯಾತಿಗೆ ಪ್ರಸಿದ್ಧ್‌ ಕೃಷ್ಣ ಪಾತ್ರರಾಗಿದ್ದಾರೆ.

ಇದನ್ನೂ ಓದಿ: Viral Video: ಫಲಿಸಿದ ಪಾಂಡ್ಯ ಮಂತ್ರ ಪಠಣ; ವಿಕೆಟ್​ ಕೈಚೆಲ್ಲಿದ ಇಮಾಮ್​ ಉಲ್​ ಹಕ್​

ಬಾಂಗ್ಲಾ ಪಂದ್ಯದ ವೇಳೆ ಗಾಯ

ಭಾರತ ಮತ್ತು ಬಾಂಗ್ಲಾದೇಶ ನಡುವಿನ ವಿಶ್ವಕಪ್ ಮುಖಾಮುಖಿಯಲ್ಲಿ ಚೆಂಡನ್ನು ತಡೆಯಲು ಪ್ರಯತ್ನಿಸಿದಾಗ ಹಾರ್ದಿಕ್ ಅವರ ಪಾದಕ್ಕೆ ಗಾಯವಾಗಿದೆ. ಹಾರ್ದಿಕ್ ಮುಂದುವರಿಯಲು ಸಾಧ್ಯವಾಗಲಿಲ್ಲ ಮತ್ತು ಅಗತ್ಯ ಸ್ಕ್ಯಾನ್ ಗಳಿಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ನ್ಯೂಜಿಲೆಂಡ್ ಸೇರಿ ಮುಂದಿನ ಪಂದ್ಯಗಳಿಗೆ ಪಂದ್ಯಕ್ಕೆ ಅವರು ಆಯ್ಕೆಗೆ ಲಭ್ಯವಿರಲಿಲ್ಲ. ಶಾರ್ದೂಲ್ ಠಾಕೂರ್ ಬದಲಿಗೆ ಸೂರ್ಯಕುಮಾರ್ ಯಾದವ್​​ಗೆ ಅವಕಾಶ ನೀಡಲಾಗಿತ್ತು. ಬೌಲರ್ ಆಗಿ ಮೊಹಮ್ಮದ್ ಶಮಿಗೆ ಅವಕಾಶ ನೀಡಲಾಗಿತ್ತು. ಈ ಅವಕಾಶವನ್ನು ಮೊಹಮ್ಮದ್‌ ಶಮಿ ಅದ್ಭುತವಾಗಿ ಬಳಸಿಕೊಳ್ಳುತ್ತಿದ್ದಾರೆ.

ಭಾರತ ವಿಶ್ವಕಪ್‌ ಟೂರ್ನಿಯಲ್ಲಿ ಆಡಿರುವ ಎಲ್ಲ ಏಳೂ ಪಂದ್ಯಗಳನ್ನು ಗೆದ್ದು ಸೆಮಿಫೈನಲ್‌ ಪ್ರವೇಶಿಸಿದೆ. ಇದರಿಂದಾಗಿ ಹಾರ್ದಿಕ್‌ ಪಾಂಡ್ಯ ಅವರ ಅನುಪಸ್ಥಿತಿಯು ಅಪಾಯಕಾರಿಯಾಗದಿದ್ದರೂ, ಆಲ್‌ರೌಂಡರ್‌ ಕೊರತೆ ಕಾಡಲಿದೆ ಎಂದು ಹೇಳಲಾಗುತ್ತಿದೆ. ಭಾರತ ತಂಡವು ಭಾನುವಾರ (ನವೆಂಬರ್‌ 5) ದಕ್ಷಿಣ ಆಫ್ರಿಕಾ ವಿರುದ್ಧ ಎಂಟನೇ ಪಂದ್ಯ ಆಡಲಿದೆ. ದಕ್ಷಿಣ ಆಫ್ರಿಕಾ ಕೂಡ 7 ಪಂದ್ಯಗಳಲ್ಲಿ 6 ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version