ಮುಂಬಯಿ : ಮಹಿಳೆಯರ ಐಪಿಎಲ್ನ ಭಾನುವಾರದ (ಮಾರ್ಚ್ 5) ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಜಯಂಟ್ಸ್ ತಂಡ ತನ್ನ ಪಾಲಿನ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 169 ರನ್ ಪೇರಿಸಿದೆ. ಟೂರ್ನಿಯ ಮೊದಲ ಪಂದ್ಯ ಆಡುತ್ತಿರುವ ಯುಪಿ ವಾರಿಯರ್ಸ್ ತಂಡ ಗೆಲುವಿಗಾಗಿ 170 ರನ್ ಪೇರಿಸಬೇಕಾಗಿದೆ.
ಇಲ್ಲಿನ ಡಿವೈ ಪಾಟೀಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಗುಜರಾತ್ ತಂಡ ಸರಾಗವಾಗಿ ರನ್ ಕಲೆ ಹಾಕುತ್ತಾ ಸ್ಪರ್ಧಾತ್ಮಕ ಮೊತ್ತವನ್ನು ಗಳಿಸಿತು. ಆರಂಭಿಕರಾಗಿ ಆಡಲು ಇಳಿದ ಸಬ್ಬಿನೇನಿ ಮೇಘನಾ (24) ಹಾಗೂ ಸೋಫಿ ಡಂಕ್ಲಿ (13) ಸ್ವಲ್ಪ ಹೊತ್ತು ಕ್ರೀಸ್ಗೆ ಅಂಟಿ ನಿಂತರು. ಈ ಜೋಡಿ ಮೊದಲ ವಿಕೆಟ್ಗೆ 34 ರನ್ ಗಳಿಸಿತು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದ ಹರ್ಲಿನ್ ಡಿಯೋಲ್ ಏಳು ಫೋರ್ಗಳ ಸಮೇತ 46 ರನ್ ಬಾರಿಸಿ ತಂಡಕ್ಕೆ ಆಧಾರವಾದರು.
ಇದನ್ನೂ ಓದಿ : WPL 2023 : ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ತಂಡದಿಂದ ಬ್ಯಾಟಿಂಗ್ ಆಯ್ಕೆ
ಮಧ್ಯಮ ಕ್ರಮಾಂಕದಲ್ಲಿ ಆಡಲು ಬಂದ ಅನ್ನಾಬೆಲ್ ಸದರ್ಲೆಂಡ್ (8) ಹಾಗೂ ಶುಷ್ಮಾ ವರ್ಮಾ (9) ಬೇಗನೆ ವಿಕೆಟ್ ಒಪ್ಪಿಸಿದರು. ಆದರೆ, ಆ ಬಳಿಕ ಆಡಲು ಇಳಿದ ಆಶ್ಲೇ ಗಾರ್ಡ್ನರ್ (25) ಹಾಗೂ ಡಿ ಹೇಮಲತಾ (21) ಉತ್ತಮ ಸ್ಕೋರ್ ದಾಖಲಿಸಲು ನೆರವಾದರು.
ಯುಪಿ ವಾರಿಯರ್ಸ್ ತಂಡದ ಪರ ದೀಪ್ತಿ ಶರ್ಮಾ (27 ರನ್ಗಳಿಗೆ 2 ವಿಕೆಟ್) ಹಾಗೂ ಸೋಫಿ ಎಕ್ಲೆಸ್ಟೋನ್ (25 ರನ್ಗಳಿಗೆ 2 ವಿಕೆಟ್) ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು.