Site icon Vistara News

Viral Video: ಅಂಪೈರ್​ ಮೇಲಿನ ಸಿಟ್ಟಿಗೆ ಬ್ಯಾಟ್​ನಿಂದ ವಿಕೆಟ್​ಗೆ ಬಡಿದ ಟೀಮ್ ಇಂಡಿಯಾ ಕ್ರಿಕೆಟ್​ ಆಟಗಾರ್ತಿ

Harmanpreet Kaur

ಢಾಕಾ: ಅತ್ಯಂತ ರೋಚಕವಾಗಿ ನಡೆದ ಭಾರತ ಮತ್ತು ಬಾಂಗ್ಲಾದೇಶ ಮಹಿಳೆಯರ ನಡುವಿನ ಅಂತಿಮ ಪಂದ್ಯ ಟೈ ನಲ್ಲಿ ಅಂತ್ಯಗೊಂಡಿತು. ಸರಣಿಯ ನಿರ್ಣಾಯಕ ಪಂದ್ಯ ಟೈ ಆದ ಕಾರಣ 1-1 ಅಂತರದಲ್ಲಿ ಸಮಬಲದಲ್ಲಿ ಕೊನೆಗೊಂಡಿತು. ಹೀಗಾಗಿ ಟ್ರೋಫಿಯನ್ನು ಉಭಯ ತಂಡಗಳು ಜಂಟಿಯಾಗಿ ಹಂಚಿಕೊಂಡವು. ಆದರೆ ಈ ಪಂದ್ಯದಲ್ಲಿ ಭಾರತ ತಂಡದ ನಾಯಕಿ ಹರ್ಮನ್​ಪ್ರೀತ್ ಕೌರ್(Harmanpreet Kaur) ಅಂಪೈರ್​ ವಿರುದ್ಧ ಸಿಟ್ಟಿಗೆದ್ದು ಬ್ಯಾಟ್​ನಿಂದ ವಿಕೆಟ್​ಗೆ ಬಡಿದಿದ್ದಾರೆ.(Harmanpreet Kaur smashes stumps) ಜತೆಗೆ ಪೆವಿಲಿಯನ್​ಗೆ ತೆರಳುವು ವೇಳೆ ಅಂಪೈರ್‌ ಜತೆ ವಾಕ್ಸಮರ ಕೂಡ ನಡೆಸಿದ್ದಾರೆ. ಈ ಘಟನೆಯ ವಿಡಿಯೊ ವೈರಲ್​(Viral Video) ಆಗಿದೆ.

ಶನಿವಾರ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಆತಿಥೇಯ ಬಾಂಗ್ಲಾ ವನಿತೆಯರು ನಾಲ್ಕು ವಿಕೆಟ್ ನಷ್ಟಕ್ಕೆ 225 ರನ್ ಗಳಿಸಿದರು. ಗುರಿ ಬೆನ್ನಟ್ಟಿದ ಭಾರತ ಉತ್ತಮ ಆಟ ಪ್ರದರ್ಶಿಸಿದರೂ ಅಂತಿಮ ಹಂತದಲ್ಲಿ ನಾಟಕೀಯ ಕುಸಿತ ಕಂಡು 49.3 ಓವರ್​ಗಳಲ್ಲಿ 225 ರನ್ ಗೆ ಆಲೌಟಾಯಿತು. ಬಾಂಗ್ಲಾ ಪರ ಫರ್ಗಾನಾ ಹಖ್ ಶತಕ ಸಿಡಿಸಿ ಮಿಂಚಿದರೆ, ಭಾರತದ ಪರ ಹರ್ಲೀನ್ ಡಿಯೋಲ್ 77 ರನ್ ಮತ್ತು ಸ್ಮೃತಿ ಮಂಧನಾ 59 ರನ್ ಮಾಡಿದರು.

ಉತ್ತಮವಾಗಿ ಆಡುತ್ತಿದ್ದ ಹರ್ಮನ್​ಪ್ರೀತ್ ಕೌರ್​ ಅವರು 34 ನೇ ಓವರ್​ನಲ್ಲಿ ನಹಿದಾ ಅಖ್ತರ್ ಎಸೆತವನ್ನು ಸ್ವೀಪ್ ಮಾಡಿದರು. ಚೆಂಡು ಪ್ಯಾಡ್​ಗೆ ಬಡಿದು ಸ್ಲಿಪ್ ಫೀಲ್ಡರ್‌ ಕೈ ಸೇರಿತು. ಬಾಂಗ್ಲಾ ಆಟಗಾರರು ಔಟ್​ ಎಂದು ಮನವಿ ಮಾಡಿದರು. ಅಂಪೈರ್ ತಕ್ಷಣ ಔಟ್ ಎಂದು ಘೋಷಣೆ ಮಾಡಿದರು. ಚೆಂಡು ಬ್ಯಾಟ್​ಗೆ ಬಡಿಯದೆ ಪ್ಯಾಡ್​ಗೆ ತಾಗಿ ಕ್ಯಾಚ್​ ಹಿಡಿದಿದ್ದಕ್ಕೆ ಔಟ್​ ನೀಡಿದ ಕಾರಣ ಕೌರ್​​ ಕೋಪ ಪಿತ್ತ ನೇತ್ತಿಗೇರಿತು. ತಮ್ಮ ಅಸಮಾದಾನವನ್ನು ಅವರು ಬ್ಯಾಟ್​ನಿಂದ ವಿಕೆಟ್​ಗೆ ಬಡಿಯುವ ಮೂಲಕ ಹೊರಹಾಕಿದರು. ಇಲ್ಲಿಗೆ ಸುಮ್ಮನಾಗದ ಕೌರ್ ಬಳಿಕ ಅಂಪೈರ್​ ಜತೆ ವಾಗ್ವಾದ ನಡೆಸಿ ಪೆವಿಲಿಯನ್​ಗೆ ತೆರಳಿದರು. ಅಚ್ಚರಿ ಎಂದರೆ ಈ ಸರಣಿಯಲ್ಲಿ ಡಿಆರ್​ಎಸ್​ ರಿವ್ಯೂ ಇರಲಿಲ್ಲ. ಒಂದೊಮ್ಮೆ ಡಿಆರ್​ಎಸ್ ಇರುತ್ತಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ. ಕೌರ್​ ಅವರ ಈ ವರ್ತನೆಗೆ ಐಸಿಸಿ ಶಿಶ್ತುಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ WOMENS IPL | ದೇಶೀಯ ಆಟಗಾರ್ತಿಯರಿಗೆ ಮಹಿಳಾ ಐಪಿಎಲ್​ ಉತ್ತಮ ವೇದಿಕೆ; ಹರ್ಮನ್​ಪ್ರೀತ್ ಕೌರ್ ವಿಶ್ವಾಸ

ಪಂದ್ಯದ ಬಳಿಕ ಮಾತನಾಡಿದ ಕೌರ್​ ಅಂಪೈರ್​ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿದರು. ಇಲ್ಲಿನ ಅಂಪೈರ್​ಗಳು ತೀರ ಕಳಪೆ ಮಟ್ಟದ ಅಂಪೈರಿಂಗ್​ ಮಾಡಿದ್ದಾರೆ. ಇದು ನಮಗೆ ತುಂಬಾ ಆಶ್ಚರ್ಯ ಮತ್ತು ಬೇಸರ ಉಂಟುಮಾಡಿದೆ. ಮುಂದಿನ ಬಾರಿ ನಾವು ಬಾಂಗ್ಲಾದೇಶಕ್ಕೆ ಬಂದಾಗ ಈ ರೀತಿಯ ಅಂಪೈರ್​ಗಳು ನೋಡಲು ಇಷ್ಟಪಡುವುದಿಲ್ಲ. ಸಾಮಾನ್ಯ ವ್ಯಕ್ತಿಯೂ ಇದು ಔಟ್​ ಇಲ್ಲವೆಂದು ಸ್ಪಷ್ಟವಾಗಿ ಹೇಳುತ್ತಿದ್ದರು. ನಿಜಕ್ಕೂ ನಾವು ಅಂಪೈರ್​ಗಳ ಬಗ್ಗೆ ನಿರಾಶೆಗೊಂಡಿದ್ದೇವೆ ಎಂದರು.

Exit mobile version