ಕೊಚ್ಚಿ : ಶುಕ್ರವಾರ ಕೇರಳದ ಕೊಚ್ಚಿಯಲ್ಲಿ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಇಂಗ್ಲೆಂಡ್ ತಂಡದ ಸ್ಫೋಟಕ ಬ್ಯಾಟರ್ ಹ್ಯಾರಿ ಬ್ರೂಕ್ 13.5 ಕೋಟಿ ರೂಪಾಯಿ ಪಡೆದುಕೊಂಡಿದ್ದಾರೆ. ಕಾವ್ಯಾ ಮಾರನ್ ಮಾಲೀಕತ್ವದ ಸನ್ ರೈಸರ್ಸ್ ಹೈದರಾಬಾದ್ ತಂಡ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಏತನ್ಮಧ್ಯೆ, ತಮಗೆ ಇಷ್ಟೊಂದು ಸಿಗುತ್ತದೆ ಎಂದು ಬ್ರೂಕ್ ನಂಬಿಯೇ ಇರಲಿಲ್ಲವಂತೆ. ಅಲ್ಲದೆ, ಬ್ರೂಕ್ಗೆ ದೊರಕಿದ ಹಣದ ಕಂತೆಯನ್ನು ನೋಡಿ ಅವರ ಅಜ್ಜಿ ಸಂತಸದಿಂದ ಅತ್ತು ಬಿಟ್ಟಿದ್ದಾರಂತೆ.
ಎಸ್ಆರ್ಎಚ್ ತಂಡಕ್ಕೆ ಆಯ್ಕೆಯಾಗಿರುವ ಕುರಿತು ಹ್ಯಾರಿ ಬ್ರೂಕ್ ವಿಡಿಯೊ ಹೇಳಿಕೆ ಬಿಡುಗಡೆ ಮಾಡಿದೆ. ಅದು ಜಿಯೋ ಸಿನಿಮಾದಲ್ಲಿ ಪ್ರಕಟಣೆಗೊಂಡಿದೆ. ಅದರಲ್ಲಿ ಅವರು ಬಿಡ್ಡಿಂಗ್ನಲ್ಲಿ ತಮಗೆ ದೊಡ್ಡ ಮೊತ್ತ ಸಿಕ್ಕಾಗ ಆದ ಅನುಭವವನ್ನು ಹಂಚಿಕೊಂಡಿದ್ದಾರೆ.
“ಬಿಡ್ ಆರಂಭಗೊಂಡಾಗ ನಾನು ಬೆಳಗ್ಗಿನ ಉಪಾಹಾರ (ಬ್ರೇಕ್ಫಾಸ್ಟ್) ಮಾಡುತ್ತಿದ್ದೆ. ಟಿವಿ ನೋಡುತ್ತಿದ್ದ ನನ್ನ ಅಜ್ಜಿ ಏಕಾಏಕಿ ಅಳಲು ಆರಂಭಿಸಿದರು. ಏನೆಂದು ವಿಚಾರಿಸಿದಾಗ ನನಗೆ 13.5 ಕೋಟಿ ರೂಪಾಯಿ ದೊರಕಿದ್ದು ಗೊತ್ತಾಯಿತು. ನನ್ನ ಸಂತಸಕ್ಕೂ ಪಾರವೇ ಇರಲಿಲ್ಲಿ, ” ಎಂಬುದಾಗಿ ಬ್ರೂಕ್ ನುಡಿದಿದ್ದಾರೆ.
ಮಂದುವರಿದ ಬ್ರೂಕ್ ತಾವು ಎಸ್ಆರ್ಎಚ್ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ”ಹಲೋ ಆರೆಂಜ್ ಆರ್ಮಿ. ನಿಮ್ಮ ಬಳಗವನ್ನು ಸೇರಿಕೊಳ್ಳುವುದಕ್ಕೆ ನನಗೆ ಅತೀವ ಸಂತಸವಾಗುತ್ತಿದೆ. ಐಪಿಎಲ್ನಂಥ ದೊಡ್ಡ ಟೂರ್ನಿಯಲ್ಲಿ ಆಡುವುದಕ್ಕೆ ನಾನು ಕಾತರನಾಗಿದ್ದೇನೆ. ಶೀಘ್ರದಲ್ಲೇ ಬಂದು ಆಡುವೆ,” ಎಂದು ಹೇಳಿದ್ದಾರೆ.
ಇದನ್ನು ಓದಿ | IPL Auction | ಐಪಿಎಲ್ ಮಿನಿ ಹರಾಜು ಪ್ರಕ್ರಿಯೆ ನಡೆಯೋದು ಎಲ್ಲಿ? ಯಾವ ಟಿವಿಯಲ್ಲಿ ನೇರ ಪ್ರಸಾರ?