Site icon Vistara News

Ashes 2023 : ಐಪಿಎಲ್​ನಲ್ಲಿ ಫೇಲ್​, ಆ್ಯಶಸ್​​ನಲ್ಲೂ ವಿಚಿತ್ರ ರೀತಿಯಲ್ಲಿ ಔಟ್​; ಇಂಗ್ಲೆಂಡ್​ ಬ್ಯಾಟರ್​ನ ಬ್ಯಾಡ್​ಲಕ್​!

Harry Brook

#image_title

ಬರ್ಮಿಂಗ್ಹಮ್​: ಎಜ್​ಬಾಸ್ಟನ್​ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಇಂಗ್ಲೆಂಡ್ ಬ್ಯಾಟರ್​ ಹ್ಯಾರಿ ಬ್ರೂಕ್ ವಿಲಕ್ಷಣವಾಗಿ ಔಟ್ ಆಗಿ ಪೆವಿಲಿಯನ್​ಗೆ ಮರಳಿದ್ದಾರೆ. ಆತಿಥೇಯ ತಂಡ ಉತ್ತಮ ಆರಂಭ ಪಡೆದುಕೊಂಡ ಬಳಿಕ ಸತತವಾಗಿ ವಿಕೆಟ್​ ಕಳೆದುಕೊಂಡಿತು. ಇದರ ಹೊರತಾಗಿಯೂ, ಹ್ಯಾರಿ ಬ್ರೂಕ್ ಮತ್ತು ಟೆಸ್ಟ್ ಸ್ಪೆಷಲಿಸ್ಟ್ ಜೋ ರೂಟ್ ಅವರ ಜೊತೆಯಾಟದಿಂದಾಗಿ ಇಂಗ್ಲೆಂಡ್ ತಂಡವು ನಾಲ್ಕನೇ ವಿಕೆಟ್​ಗೆ ಅಮೂಲ್ಯ 51 ರನ್​ಗಳ ಜತೆಯಾಟ ನೀಡಿತು. ಉತ್ತಮ ಲಯ ತೋರಿದ್ದ ಬ್ರೂಕ್​ ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ ನಾಥನ್ ಲಿಯಾನ್ ಎಸೆತಕ್ಕೆ ವಿಚಿತ್ರ ರೀತಿಯಲ್ಲಿ ಔಟಾಗಿ ನಿರ್ಗಮಿಸಿದರು.

ಹ್ಯಾರಿ ಬ್ರೂಕ್​ 13.5 ಕೋಟಿ ರೂಪಾಯಿ ಪಡೆದುಕೊಂಡು ಐಪಿಎಲ್​ನಲ್ಲಿ ಸನ್ ರೈಸರ್ಸ್​ ಹೈದರಾಬಾದ್​ ತಂಡ ಸೇರಿಕೊಂಡಿದ್ದರು. ಆದರೆ, ಅವರು ಉತ್ತಮ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಒಂದು ಶತಕ ಬಾರಿಸಿದ ಹೊರತಾಗಿಯೂ ಅವರು ಮಿಕ್ಕ ಪಂದ್ಯಗಳಲ್ಲಿ ಸಂಪೂರ್ಣ ವೈಫಲ್ಯ ಕಂಡಿದ್ದರು. ಹೀಗಾಗಿ ಕೊನೇ ಹಂತದಲ್ಲಿ ಅವರನ್ನು ಆಡುವ ಬಳಗಕ್ಕೆ ಸೇರಿಸಿಕೊಂಡಿರಲಿಲ್ಲ. ಇದೀಗ ಶುರುವಾಗಿರುವ ಆ್ಯಶಸ್​ ಸರಣಿಯಲ್ಲಿ ಮತ್ತೆ ಅವರು ನಿರಾಸೆ ಎದುರಿಸಿದ್ದಾರೆ.

ಇದರೊಂದಿಗೆ ವಿಲಕ್ಷಣ ರೀತಿಯ ಔಟ್ ಆಗುವ ಮೂಲಕ ಬೇಸರಕ್ಕೆ ಒಳಗಾದ ಬ್ರೂಕ್, 37 ಎಸೆತಗಳಲ್ಲಿ 32 ರನ್ ಗಳಿಸಿದ್ದರು. ಅವರು 86.48 ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟಿಂಗ್ ಮಾಡಿದ್ದು ನಾಲ್ಕು ಬೌಂಡರಿಗಳನ್ನು ಹೊಡೆದಿದ್ದಾರೆ.

ಅನುಭವಿ ಸ್ಪಿನ್ನರ್ ಲಿಯಾನ್ ಎರಡು ವಿಕೆಟ್ ಪಡೆದರೆ, ಸ್ಕಾಟ್ ಬೋಲ್ಯಾಂಡ್ ಮತ್ತು ಜೋಶ್ ಹೇಜಲ್ವುಡ್ ತಲಾ ಒಂದು ವಿಕೆಟ್ ಪಡೆದರು. ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ತಂಡವು ಪಂದ್ಯದ ಮೇಲೆ ಹಿಡಿತ ಸಾಧಿಸಲು ಮತ್ತು ಮೊದಲ ದಿನದ ಕೊನೆಯಲ್ಲಿ ದೊಡ್ಡ ಮೊತ್ತವನ್ನು ದಾಖಲಿಸಲು ಎದುರು ನೋಡುತ್ತಿದೆ. ಆದಾಗ್ಯೂ, ಆಸೀಸ್ ಬಳಗ ಸಮತೋಲನದಲ್ಲಿ ಕಾಪಾಡಿಕೊಂಡಿದೆ.

Exit mobile version