ಬೆಂಗಳೂರು: ಐಪಿಎಲ್ 2024ರ (IPL 2024) ಮಿನಿ ಹರಾಜಿಗೆ ಮುಂಚಿತವಾಗಿ, ಎಲ್ಲಾ ಹತ್ತು ಫ್ರಾಂಚೈಸಿಗಳು ತಾವು ಯಾರನ್ನು ಉಳಿಸಿಕೊಳ್ಳುತ್ತಿದ್ದೇವೆ ಮತ್ತು ಯಾವ ಆಟಗಾರರನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದು ಘೋಷಿಸಿಕೊಂಡಿದೆ. ಈ ಮೂಲಕ ಮುಂದಿನ ಆವೃತ್ತಿಯಲ್ಲಿ ನಾವು ಯಾರೆಲ್ಲ ಮೇಲೆ ವಿಶ್ವಾಸ ಇಟ್ಟುಕೊಂಡಿದ್ದೇವೆ ಎಂಬುದನ್ನು ಬಹಿರಂಗಪಡಿಸಿವೆ. ತಂಡಗಳು ಉಳಿಸಿಕೊಂಡಿರುವರಲ್ಲಿ ಕೆಲವು ದೊಡ್ಡ ಹೆಸರುಗಳಿದ್ದವು. ಅವರೆಲ್ಲರೂ ಅಭಿಮಾನಿಗಳ ಗಮನ ಸೆಳೆದರು. ಇನ್ನೂ ಕೆಲವು ಬಿಡುಗಡೆಗಳು ಕ್ರಿಕೆಟ್ ಅಭಿಮಾನಿಗಳನ್ನು ಚಕಿತಗೊಳಿಸಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೂ ಕೆಲವೊಬ್ಬರನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಅಚ್ಚರಿಯೆ ಹೆಸರೆಂದರೆ ಹರ್ಷಲ್ ಪಟೇಲ್. ನವೆಂಬರ್ 19 ರಂದು ದುಬೈನಲ್ಲಿ ನಡೆಯಲಿರುವ ಮಿನಿ ಹರಾಜಿಗೆ ಮುಂಚಿತವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಫ್ರಾಂಚೈಸಿ ತಮಗೆ ಹರ್ಷಲ್ ಪಟೇಲ್ ಬೇಡ ಎಂಬುದಾಗಿ ಹೇಳಿಕೊಂಡಿದೆ. ಆರ್ಸಿಬಿ ಕಟ್ಟರ್ ಅಭಿಮಾನಿಗಳಿಗೆ ನಿಜವಾಗಿಯೂ ಇದು ಅಚ್ಚರಿಯ ವಿಚಾರವೇ ಹೌದು.
ಕಳೆದ ಮೂರು ಐಪಿಎಲ್ ಋತುಗಳಲ್ಲಿ ಹರ್ಷಲ್ ಆರ್ಸಿಬಿ ಪರ ನಿರ್ಣಾಯಕ ಪಾತ್ರ ವಹಿಸಿದ್ದರು. ಐಪಿಎಲ್ 2021 ರಲ್ಲಿ ಆವೃತ್ತಿಯಲ್ಲಿ ಗರಿಷ್ಠ ವಿಕೆಟ್ ಪಡೆದವರಿಗೆ ನೀಡುವ ಪರ್ಪಲ್ ಕ್ಯಾಪ್ ಕೂಡ ಗೆದ್ದುಕೊಂಡಿದ್ದರು.
ಅವರೊಂದಿಗೆ ಬೇರ್ಪಡುವ ನಿರ್ಧಾರವು ಹರ್ಷಲ್ ಪಟೇಲ್ ಅವರಲ್ಲಿ ನೂರಾರು ಭಾವನೆಗಳನ್ನು ಹುಟ್ಟುಹಾಕಿದೆ. ಅವರು ತಮ್ಮ ಭಾವನೆಗಳನ್ನು ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ. ಆರ್ಸಿಬಿ ಒಳಗಿನ ಕತೆಯನ್ನು ಹೇಳುವೆ. ಇದೊಂದು ಅವಿಸ್ಮರಣೀಯ ಕ್ಷಣ. ಎಲ್ಲ ರೀತಿಯಲ್ಲೂ ಅತ್ಯುತ್ತಮವಾಗಿತ್ತು ಎಂದು ಬರೆದುಕೊಂಡಿದ್ದಾರೆ. ಇದು ವ್ಯಾಪಕ ಗಮನ ಸೆಳೆದಿದೆ.
ಧನ್ಯವಾದ ಹೇಳಿದ ಮಧ್ಯಮ ವೇಗಿ
ತಂಡದೊಂದಿಗಿನ ಕೆಲವು ವಿಶೇಷ ನೆನಪುಗಳನ್ನು ಹಂಚಿಕೊಂಡಿರುವ 33 ವರ್ಷದ ಆಟಗಾರ ಅಭಿಮಾನಿಗಳಿಗೆ ಮತ್ತು ಆರ್ಸಿಬಿ ಫ್ರಾಂಚೈಸಿಗೆ ಧನ್ಯವಾದ ಅರ್ಪಿಸಿದ್ದಾರೆ. ಅವರು ಅದ್ಭುತ ಮೂರು ವರ್ಷಗಳ ಬಗ್ಗೆ ಸ್ಮರಿಸಿಕೊಂಡಿದ್ದಾರೆ. ಕಠಿಣ ಮತ್ತು ಸಂತೋಷದ ಸಮಯದಲ್ಲಿ ಸಹಾಯ ಮಾಡಿದ ಆರ್ಸಿಬಿಯ ಎಲ್ಲರಿಗೂ ಧನ್ಯವಾದ ಎಂದು ಹೇಳಿಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಕೆಲವು ಚಿತ್ರಗಳನ್ನು ಹಂಚಿಕೊಂಡ ಹರ್ಷಲ್ ಪಟೇಲ್, “ನಾನು @royalchallengersbanThe ಕೊನೆಯ ಚಿತ್ರದೊಂದಿಗೆ ಹೊಂದಿದ್ದ ಕೆಲವು ವಿಶೇಷ ನೆನಪುಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ. ಕಳೆದ ಮೂರು ವರ್ಷಗಳು ನನಗೆ ನಂಬಲಾಗದ ಪ್ರಯಾಣವಾಗಿದೆ. ಉತ್ತಮ ಹಾಗೂ ಕಠಿಣ ಸಮಯದಲ್ಲಿ ನನ್ನೊಂದಿಗೆ ನಿಂತ ತಂಡದ ಪ್ರತಿಯೊಬ್ಬರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಹೃದಯದಲ್ಲಿ ಕೃತಜ್ಞತೆಯನ್ನು ಹೊರತುಪಡಿಸಿ ಬೇರೇನೂ ಇಲ್ಲ ಎಂದ ಬರೆದುಕೊಂಡಿದ್ದಾರೆ.
ಆರ್ಸಿಬಿಯ ದುಡ್ಡು, ಮುಂಬೈ ತಂಡದ ಸಂಭ್ರಮ
ಗುಜರಾತ್ ಟೈಟಾನ್ಸ್ ತಂಡದ ಮಾಜಿ ನಾಯಕ ಹಾರ್ದಿಕ್ ಪಾಂಡ್ಯ ಐಪಿಎಲ್ 2024 ರಲ್ಲಿ ಆಡಲು ಮುಂಬೈ ಇಂಡಿಯನ್ಸ್ ಸೇರಲು ನಿರ್ಧರಿಸಿದಾಗಿನಿಂದ ಐಪಿಎಲ್ 2024ನೇ ಆವೃತ್ತಿಯು ಕಳೆಗಟ್ಟುತ್ತಿದೆ. ಹೊಸ ಫ್ರಾಂಚೈಸಿ ಗುಜರಾತ್ ಟೈಟನ್ಸ್ ್ಪರ ನಾಯಕನಾಗಿ ಮತ್ತು ಆಟಗಾರನಾಗಿ ಒಂದೆರಡು ಯಶಸ್ವಿ ವರ್ಷಗಳ ಕಳೆದ ನಂತರ ಅವರು ಮುಂಬೈಗೆ ವಾಪಸಾಗಿದ್ದಾರೆ. ಅವರೀಗ , ರೋಹಿತ್ ಶರ್ಮಾ ನೇತೃತ್ವದ ತಂಡದ ಜತೆ ಹೊಸ ಒಪ್ಪಂದ ಮಾಡಿಕೊಂಡಿದ್ದಾರೆ. ಇದರಿಂದ ಅವರು ಈ ಫ್ರಾಂಚೈಸಿಯ ಭವಿಷ್ಯದ ನಾಯಕ ಎಂದೇ ಹೇಳಲಾಗುತ್ತಿದೆ. ಆದರೆ, ಈ ಟ್ರೇಡಿಂಗ್ ಡೀಲ್ ಅತ್ಯಂತ ಕುತೂಹಲಕಾರಿಯಾಗಿತ್ತು. ಅವರಿಗೆ ನೀಡಬೇಕಾದ 15 ಕೋಟಿ ರೂಪಾಯಿ ಮೊತ್ತವನ್ನು ಸಜ್ಜುಗೊಳಿಸಲು ಮುಂಬಯಿ ಇಂಡಿಯನ್ಸ್ ತಂಡ ಹೊಸ ಐಡಿಯಾ ಮಾಡಿತ್ತು. ತನ್ನ ತಂಡದಲ್ಲಿರುವ 17.5 ಕೋಟಿ ರೂಪಾಯಿ ಮೌಲ್ಯದ ಆಸ್ಟ್ರೇಲಿಯನ್ ಆಲ್ರೌಂಡರ್ ಕ್ಯಾಮೆರೂನ್ ಗ್ರೀನ್ ಅವರನ್ನು ಬೆಂಗಳೂರು ತಂಡಕ್ಕೆ ಮಾರಿತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಸ್ಟಾರ್ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಅವರನ್ನು ಖರೀದಿಸಲು ಆಸಕ್ತಿ ತೋರಿಸಿದಾಗ ಮುಂಬೈ ತಕ್ಷಣವೇ ಒಪ್ಪಿಕೊಂಡಿತ್ತು. ಇತ್ತ ಆರ್ಸಿಬಿ ಗ್ರೀನ್ ಅವರನ್ನು ಪಡೆಯಲು ಕೆಲವು ಆಟಗಾರರನ್ನು ತ್ಯಾಗ ಮಾಡಿತು. ಐಪಿಎಲ್ ಇತಿಹಾಸದಲ್ಲಿ ಆಸ್ಟ್ರೇಲಿಯಾದ ಆಟಗಾರ ಅತಿ ಹೆಚ್ಚು ಸಂಭವಾನೆ ಪಡೆಯುವ ಐಪಿಎಲ್ ಆಟಗಾರ. ಆ ಹಣವನ್ನು ಹೊಂದಿಸಲು ಆರ್ಸಿಬಿಯೂ ಸಿಕ್ಕಾಪಟ್ಟೆ ಕಸರತ್ತು ಮಾಡಿತು. ಆದರೆ, ಈ ಪ್ರಕ್ರಿಯೆಯ ಒಟ್ಟು ಲಾಭ ಮಾತ್ರ ಮುಂಬೈ ತಂಡಕ್ಕೆ ಎಂದು ಮಾಜಿ ಕ್ರಿಕೆಟಿಗರು ಅಂದಾಜು ಮಾಡಿದ್ದಾರೆ.
ಇದನ್ನೂ ಓದಿ : IPL 2024 : ಪಾಂಡ್ಯ- ರೋಹಿತ್; ಮುಂಬೈ ತಂಡದ ನಾಯಕ ಯಾರಾಗಬಹುದು?
ಮುಂಬೈಗೆ ಉಪಕಾರ ಮಾಡಿದ ಆರ್ಸಿಬಿ
ಈ ವಹಿವಾಟು ಪರಿಸ್ಥಿತಿಯನ್ನು ವಿಶ್ಲೇಷಿಸಿದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ, ಆರ್ಸಿಬಿ ಈ ವಿಚಾರದಲ್ಲಿ ಮುಂಬೈಗೆ ದೊಡ್ಡ ಉಪಕಾರ ಮಾಡಿದೆ ಎಂದು ಹೇಳಿದ್ದಾರೆ. ಏಕೆಂದರೆ ಆರ್ಸಿಬಿಯ ಬೆಂಬಲವಿಲ್ಲದೆ ಐದು ಬಾರಿಯ ಚಾಂಪಿಯನ್ಸ್ ಪಾಂಡ್ಯ ಅವರನ್ನು ವ್ಯಾಪಾರದಲ್ಲಿ ಪಡೆಯುವುದು ಆ ತಂಡಕ್ಕೆ ಸುಲಭವಿರಲಿಲ್ಲ ಎಂದು ಹೇಳಿದೆ. ಒಂದು ಕಡೆ ಆಲ್ರೌಂಡರ್ ಸ್ಥಾನ ಭರ್ತಿ ಮಾಡುವ ಜತೆಗೆ ಮತ್ತೊಂದು ಕಡೆಗೆ ದುಡ್ಡು ಕೂಡ ಮುಂಬೈ ಉಳಿಸಿದೆ ಎಂದು ಹೇಳಿದ್ದಾರೆ ಅವರು. ಆರ್ಸಿಬಿ ಹರಾಜಿನ ಮೂಲಕವೇ ಗ್ರೀನ್ ಅವರನ್ನು ಪಡೆಯಬಹುದಾಗಿತ್ತು ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಚೋಪ್ರಾ ಮುಂಬೈ ತಂಡದ ವ್ಯವಹಾರ ಚಾತುರ್ಯವನ್ನು ಮೆಚ್ಚಿದ್ದಾರೆ.