ಬೆಂಗಳೂರು: ಏಪ್ರಿಲ್ 10ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಗೂ ಲಕ್ನೊ ಸೂಪರ್ ಜಯಂಟ್ಸ್ ತಂಡಗಳ ನಡುವೆ ಐಪಿಎಲ್ (IPL 2023) ಪಂದ್ಯ ನಡೆದಿತ್ತು. ಆ ಹಣಾಹಣಿಯಲ್ಲಿ ಆರ್ಸಿಬಿ ತಂಡ ಕೊನೇ ಎಸೆತದಲ್ಲಿ ವಿರೋಚಿತ ಸೋಲು ಎದುರಿಸಿತ್ತು. ಈ ವೇಳೆ ಆಟಗಾರರ ಅಬ್ಬರದ ನಡುವೆ ಲಕ್ನೊ ತಂಡದ ಕೋಚ್ ಗೌತಮ್ ಗಂಭೀರ್ ಪ್ರೇಕ್ಷಕರಿಗೆ ಬಾಯ್ಮುಚ್ಚಿ ಎಂದು ಸನ್ನೆ ಮಾಡಿದ್ದರು. ಅಂತೆಯೇ ಮೇ1ರಂದು ಲಕ್ನೊ ತಂಡದ ಆತಿಥ್ಯದಲ್ಲಿ ಲಖನೌನಲ್ಲಿ ಪಂದ್ಯ ನಡೆಯಿತು. ಆರ್ಸಿಬಿ 18 ರನ್ನಿಂದ ಗೆಲುವು ಸಾಧಿಸಿತು. ಕೊನೆಯಲ್ಲಿ ನಡೆದಿದ್ದು ಭರ್ಜರಿ ಗಲಾಟೆ. ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ವಾಗ್ಯುದ್ಧ ನಡೆಸಿದರೆ, ಕೊಹ್ಲಿ ಜತೆ ನವಿನ್ ಉಕ್ ಹಕ್ ಕೈ ಮಿಲಾಯಿಸಲು ಮುಂದಾದರು. ಹೀಗಾಗಿ ಈ ಪಂದ್ಯದ ಫಲಿತಾಂಶ ಗೌಣವಾಗಿ, ಜಗಳವೇ ಸಿಕ್ಕಾಪಟ್ಟೆ ಸದ್ದು ಮಾಡಿತು.
ಇದೇ ಪ್ರಸಂಗದ ಕುರಿತು ಮತ್ತೊಂದು ವರದಿ ಹರಿದಾಡಿದ್ದು ಬೆಂಗಳೂರು ಪಂದ್ಯದ ವೇಳೆ ಗೌತಮ್ ಗಂಭೀರ್ ಹಾಗೂ ವಿರಾಟ್ ಕೊಹ್ಲಿ ಚೆನ್ನಾಗಿಯೇ ಮಾತನಾಡಿದ್ದರು ಎಂದು ಹೇಳಲಾಗಿದೆ. ಅವರಿಬ್ಬರು ಸುಮಾರು 45 ನಿಮಿಷಗಳ ಕಾಲ ಬೆಂಗಳೂರಿನಲ್ಲಿ ಮಾತುಕತೆ ನಡೆಸಿದ್ದರು. ಆದರೆ, ಎರಡು ವಾರದೊಳಗೆ ಪರಿಸ್ಥಿತಿಯೇ ಬದಲಾಗಿ ಜಿದ್ದಾಜಿದ್ದಿಗೆ ಬಿದ್ದರು. ಈ ಬೆಳವಣಿಗೆ ಬಗ್ಗೆ ಲಕ್ನೊ ತಂಡದ ಟೀಮ್ ಮ್ಯಾನೇಜ್ಮೆಂಟ್ ಅಚ್ಚರಿ ವ್ಯಕ್ತಪಡಿಸಿದೆ ಎನ್ನಲಾಗಿದೆ.
ಏಪ್ರಿಲ್ 10 ರಂದು ಆರ್ಸಿಬಿ ವಿರುದ್ಧದ ಪಂದ್ಯಕ್ಕಾಗಿ ಲಕ್ನೋ ತಂಡದ ಸದಸ್ಯರು ಬೆಂಗಳೂರಿಗೆ ಆಗಮಿಸಿದಾಗ ಗಂಭೀರ್ ಮತ್ತು ಸಹಾಯಕ ಕೋಚ್ ವಿಜಯ್ ದಹಿಯಾ ಅವರು ಕೊಹ್ಲಿಯೊಂದಿಗೆ 45 ನಿಮಿಷಗಳ ಸಂಭಾಷಣೆ ನಡೆಸಿದ್ದನ್ನು ನೋಡಿ ಇಡೀ ಎಲ್ಎಸ್ಜಿ ತಂಡದ ಮ್ಯಾನೇಜ್ಮೆಂಟ್ ಆಘಾತಕ್ಕೊಳಗಾಗಿತ್ತು ಎಂದು ದೈನಿಕ್ ಜಾಗರಣ್ ವರದಿ ಮಾಡಿದೆ. ಇದು ಮೂವರ ನಡುವಿನ ಆರೋಗ್ಯಕರ ಸಂಭಾಷಣೆಯಾಗಿತ್ತು. ಆದರೆ, ಮೂರು ವಾರಗಳ ನಂತರ ಲಕ್ನೋದಲ್ಲಿ ಏನಾಯಿತು ಎಂಬುದೇ ಎಲ್ಎಸ್ಜಿ ತಂಡಕ್ಕೆ ಅಚ್ಚರಿಯ ಸಂಗತಿಯಾಗಿದೆ.
ಮೇ 1 ರ ಪಂದ್ಯದಲ್ಲಿ ಕೈಲ್ ಮೇಯರ್ಸ್ ಅವರನ್ನು ಔಟ್ ಮಾಡಿದ ನಂತರ ಅವರನ್ನು ನಿಂದಿಸಿದ್ದು ಕೊಹ್ಲಿಯ ಮೇಲೆ ಗಂಭೀರ್ ಕೋಪಗೊಳ್ಳುವುದಕ್ಕೆ ಕಾರಣವಾಯಿತು ಎಂದು ವರದಿ ಹೇಳಿದೆ. ನಂತರ ನವೀನ್ ಉಲ್ ಹಕ್ ಬ್ಯಾಟಿಂಗ್ ಮಾಡುತ್ತಿದ್ದಾಗ, ಕೊಹ್ಲಿ ತನ್ನ ಬೂಟುಗಳಲ್ಲಿನ ಹುಲ್ಲನ್ನು ತೋರಿಸುತ್ತಾ, “ನಾನು ಯಾರೆಂದು ನಿಮಗೆ ತಿಳಿದಿಲ್ಲ” ಎಂದು ಹೇಳಿದ್ದರು ನಂತರ ಮೊಹಮ್ಮದ್ ಸಿರಾಜ್ ಕಡೆಗೆ ತಿರುಗಿ , “ಅವರ ತಲೆಗೆ ಚೆಂಡನ್ನು ಹೊಡೆಯಿರಿ” ಎಂದು ಹೇಳಿದ್ದರು ಎನ್ನಲಾಗಿದೆ. ನಂತರ ಸಿರಾಜ್ ಉದ್ದೇಶಪೂರ್ವಕವಾಗಿ ಚೆಂಡನ್ನು ಸ್ಟಂಪ್ ಗಳ ಮೇಲೆ ಹೊಡೆದಿದ್ದರು ಆದಾಗ್ಯೂ, ಬಿಸಿಸಿಐ ಅಧಿಕಾರಿಯ ಮುಂದೆ ಕೊಹ್ಲಿ ಇದನ್ನು ನಿರಾಕರಿಸಿದ್ದಾರೆ. ನಾನು ಬೌನ್ಸರ್ ಹಾಕಲು ಸಿರಾಜ್ಗೆ ಹೇಳಿದ್ದೆ ಎಂದಿದ್ದಾರೆ.
ಇದನ್ನೂ ಓದಿ : IPL 2023 : ಗಂಭೀರ್ ಜತೆ ಗಲಾಟೆ ಬಗ್ಗೆ ಬಿಸಿಸಿಐಗೆ ವಿವರಣೆ ನೀಡಿದ ವಿರಾಟ್ ಕೊಹ್ಲಿ, ದಂಡಕ್ಕೆ ಅಸಮಾಧಾನ
ಕೊಹ್ಲಿಯ ವರ್ತನೆಯಿಂದ ಕೋಪಗೊಂಡ ಗಂಭೀರ್ ಕೂಡ ಬಿಸಿಸಿಐಗೆ ಮನವಿ ಸಲ್ಲಿಸಿದ್ದಾರೆ. ನಾನು ಅವರಿಗೆ ವಿದಾಯ ಹೇಳಲು ಬಯಸುತ್ತೇನೆ. ನಾನು ಅವರಿಂದ ದೂರ ಇರಲು ಬಯಸುತ್ತೇನೆ ಎಂದು ಬರೆದಿದ್ದಾರೆ ಎನ್ನಲಾಗಿದೆ.
ನವೀನ್ ಅವರ ಆಕ್ರಮಣಕಾರಿ ವರ್ತನೆಯ ಬಗ್ಗೆ ಕೊಹ್ಲಿ ಪಂದ್ಯದ ಬಳಿಕ ಎಲ್ಎಸ್ಜಿ ತಂಡದ ಮ್ಯಾನೇಜ್ಮೆಂಟ್ಗೆ ದೂರು ನೀಡಿದ್ದರು. ಆದರೆ ಗಂಭೀರ್ ಅವರು ನವೀನ್ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ “ಯಾರಾದರೂ ನನ್ನ ಆಟಗಾರರನ್ನು ನಿಂದಿಸಿದರೆ, ಆತ ಯಾವುದೇ ದೇಶದವರಾಗಿದ್ದರೂ, ನಾನು ಅವರನ್ನು ಬೆಂಬಲಿಸುತ್ತೇನೆ” ಎಂದು ಗಂಭೀರ್ ಹೇಳಿದ್ದಾರೆ ಎನ್ನಲಾಗಿದೆ.