Site icon Vistara News

WTC Final 2023 : ರೋಹಿತ್​ ಬಳಗದ ಹೀನಾಯ ಸೋಲಿಗೆ ಇಲ್ಲಿವೆ 5 ಪ್ರಮುಖ ಕಾರಣಗಳು

Virat Kohli

#image_title

ಲಂಡನ್​: ಡಬ್ಲ್ಯುಟಿಸಿ ಫೈನಲ್​ ಪಂದ್ಯದಲ್ಲಿ (WTC FInal 2023) ಆಸ್ಟ್ರೇಲಿಯಾ ವಿರುದ್ಧ ಭಾರತ 209 ರನ್​ಗಳ ಹೀನಾಯ ಸೋಲನುಭವಿಸಿತು. ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡ 5 ದಿನಗಳ ಕಾಲವೂ ಮೇಲುಗೈ ಸಾಧಿಸಿ ಗೆಲುವು ಸಾಧಿಸಿತು. ಇದು ವಿಶ್ವ ಟೆಸ್ಟ್​ ಚಾಂಪಿಯನ್​​ಷಿಪ್​ನಲ್ಲಿ ಭಾರತ ತಂಡಕ್ಕೆ ಎರಡನೇ ಸೋಲು. ಭಾರತದ ಕಳಪೆ ಪ್ರದರ್ಶನಕ್ಕೆ ಸಾಕಷ್ಟು ಕಾರಣಗಳಿದ್ದರೂ ಫೈನಲ್​​ನಲ್ಲಿ ಭಾರತದ ಸೋಲಿಗೆ 5 ಪ್ರಮುಖ ಕಾರಣಗಳನ್ನು ಪಟ್ಟಿ ಮಾಡಬಹುದು.

1) ಪಿಚ್ ಗುಣ ಅರಿಯಲು ವಿಫಲ

ಓವಲ್​ ಪಿಚ್​​ನ ಗುಣವನ್ನು ಅರಿಯಲು ವಿಫಲವಾಗಿರುವುದು ರೋಹಿತ್ ಶರ್ಮಾ ನೇತೃತ್ವದ ತಂಡದ ದೊಡ್ಡ ಪ್ರಮಾದ. ಹೀಗಾಗಿ ಟಾಸ್ ಗೆದ್ದ ನಂತರ ಭಾರತವು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡಿತು. ಆರಂಭದಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದರೂ ನಂತರದಲ್ಲಿ ತೀವ್ರತೆ ಕಾಪಾಡಿಕೊಳ್ಳಲಿಲ್ಲ. ಆಡುವ ಬಳಗದಲ್ಲಿ ವೇಗಿಗಳೆಷ್ಟು, ಸ್ಪಿನ್ನರ್​ಗಳೆಷ್ಟು ಎಂಬ ಗೊಂದಲಕ್ಕೆ ಆರಂಭದಲ್ಲೇ ಒಳಗಾಯಿತು.

ರವಿಚಂದ್ರನ್ ಅಶ್ವಿನ್ ತಮ್ಮ ಸ್ಥಾನವನ್ನು ಶಾರ್ದೂಲ್ ಠಾಕೂರ್​ಗೆ ಬಿಟ್ಟು ಕೊಡಬೇಕಾಯಿತು. ಅಶ್ವಿನ್ ಅವರನ್ನು ಕೈಬಿಟ್ಟದ್ದು ಪ್ರಮುಖ ತಪ್ಪು ಎಂದು ಕ್ರಿಕೆಟ್​ ಪಂಡಿತರು ಆರಂಭದಲ್ಲೇ ಬೊಟ್ಟು ಮಾಡಿದರು ಟಾಸ್ ಗೆದ್ದ ನಂತರ ಭಾರತವು ಮೊದಲು ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಿಕೊಳ್ಳಬೇಕಿತ್ತು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ನಂತರದ ದಿನಗಳಲ್ಲಿ ಪಿಚ್ ನಿಧಾನಗೊಂಡಿದ್ದರೂ, ಅಶ್ವಿನ್ ಮತ್ತು ಜಡೇಜಾ ಅವರ ಸ್ಪಿನ್ ಜೋಡಿಯು ಬೌಲಿಂಗ್ ಎದುರಿಸುವಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಆಗುತ್ತಿರಲಿಲ್ಲ ಎಂದು ಹೇಳಲಾಗುತ್ತದೆ.

2) ಅಗ್ರ ಆಟಗಾರರ ವೈಫಲ್ಯ

ಬೆರಳೆಣಿಕೆಯಷ್ಟು ಆಟಗಾರರನ್ನು ಹೊರತುಪಡಿಸಿ, ಉಳಿದ ಭಾರತೀಯ ಆಟಗಾರರು ಎರಡೂ ಇನ್ನಿಂಗ್ಸ್​​ಗಳಲ್ಲಿ ಕಳಪೆಯಾಗಿ ಆಡಿದರು. ಅಗ್ರ ಕ್ರಮಾಂಕದ ಆಟಗಾರರ ಮೇಲೆ ಸಾಕಷ್ಟು ನಿರೀಕ್ಷೆಗಳು ಇರುವುದು ಸ್ವಾಭಾವಿಕ. ಐಪಿಎಲ್​ ಮುಗಿಸಿಕೊಂಡು ಬಂದಿದ್ದ ಈ ಆಟಗಾರರು ದೀರ್ಘ ಅವಧಿಯ ಆಟದಲ್ಲಿ ಅಭ್ಯಾಸದ ಕೊರತೆಯಿಂದ ನಲುಗಿದರು. ರೋಹಿತ್ ಶರ್ಮಾ ಮತ್ತು ಶುಬ್ಮನ್ ಗಿಲ್ ಎರಡೂ ಇನ್ನಿಂಗ್ಸ್​​ಗಳಲ್ಲಿ ಭಾರತಕ್ಕೆ ಉತ್ತಮ ಆರಂಭವನ್ನು ನೀಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅವರು ವಿಫಲರಾದರು. ಎರಡನೇ ಇನ್ನಿಂಗ್ಸ್ ನಲ್ಲಿ 43ರನ್ ಗಳಿಸಿದ್ದ ರೋಹಿತ್ ಮೊದಲ ಇನ್ನಿಂಗ್ಸ್ ನಲ್ಲಿ ಕಳಪೆ ಪ್ರದರ್ಶನ ನೀಡಿದ್ದರು. ಐಪಿಎಲ್​ ಸ್ಟಾರ್​ ಗಿಲ್​ ಎರಡೂ ಇನಿಂಗ್ಸ್ ಸೇರಿ ಪೇರಿಸಿದ್ದು 20 ರನ್​.

ವಿರಾಟ್ ಕೊಹ್ಲಿ ಅವರ ಶಾಟ್ ಆಯ್ಕೆಗಳ ಬಗ್ಗೆ ಪಂಡಿತರು ಬೇಸರ ವ್ಯಕ್ತಪಡಿಸಿದ್ದಾರೆ. ಭಾರತದ ಮಾಜಿ ನಾಯಕ ಮೊದಲ ಇನ್ನಿಂಗ್ಸ್ ನಲ್ಲಿ 14 ರನ್ ಗಳಿಸಿದರೆ ಎರಡನೇ ಇನಿಂಗ್ಸ್​ನಲ್ಲಿ 49 ರನ್​ ಬಾರಿಸಿದರು. ಹೊರಕ್ಕೆ ಹೋಗುವ ಚೆಂಡನ್ನು ಆಡಲು ಹೋಗಿ ಔಟಾಗಿದ್ದು ಆಶ್ಚರ್ಯ ಮೂಡಿಸಿತು. ಐಪಿಎಲ್ ಆಡದ ಚೇತೇಶ್ವರ್ ಪೂಜಾರ ತಮ್ಮ ಬೇಸಿಗೆಯನ್ನು ಕೌಂಟಿ ಕ್ರಿಕೆಟ್​ನಲ್ಲಿ ಕಳೆದಿದ್ದರು. ಅಲ್ಲಿ ಶತಕಗಳ ಮೇಲೆ ಶತಕಗಳನ್ನು ಸಿಡಿಸಿದ್ದ ಅವರು ಫೈನಲ್​ನಲ್ಲಿ ಪೂರ್ಣ ಫೇಲ್ ಆದರು.

3) ರೋಹಿತ್​ ನಾಯಕತ್ವದ ತಪ್ಪುಗಳು

ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವವೂ ವಿಫಲವಾಯಿತು. ಮೂರನೇ ವೇಗಿಯಾಗಿ ಉಮೇಶ್ ಯಾದವ್ ಅವರನ್ನು ಆಯ್ಕೆ ಮಾಡಿಕೊಂಡಿದ್ದು ಮೊದಲ ತಪ್ಪಾದರೆ, ಮೊದಲು ಬೌಲಿಂಗ್ ಮಾಡಿದ್ದ ಎರಡನೇ ತಪ್ಪು. ಅಶ್ವಿನ್​ ಬೆಂಚು ಕಾಯಿಸಿದ್ದು ಮೂರನೇ ತಪ್ಪು. ಮೂರನೇ ವೇಗಿಯಾಗಿ ತಂಡಕ್ಕೆ ಸೇರ್ಪಡೆಗೊಂಡ ಉಮೇಶ್ ಯಾದವ್​ ಅವರಿಗೆ ಮೊದಲ ಇನಿಂಗ್ಸ್​​ನಲ್ಲಿ 23 ಓವರ್​ ಹಾಗೂ ಎರಡನೇ ಇನಿಂಗ್ಸ್​​ನಲ್ಲಿ 17 ಓವರ್​​ ಮಾತ್ರ ನೀಡಿದ್ದಾರೆ ರೋಹಿತ್. ಅವರನ್ನು ಪೂರ್ಣ ಪ್ರಮಾಣದಲ್ಲಿ ಬಳಸದೇ ಹೋದರೆ ಮೊದಲ ಆಯ್ಕೆಯಾಗಿ ತೆಗೆದುಕೊಂಡಿರುವುದೇ ತಪ್ಪು ಎನ್ನುತ್ತಾರೆ ಕ್ರಿಕೆಟ್ ಪಂಡಿತರು.

4) ಕಸುವು ಇಲ್ಲದ ಬೌಲಿಂಗ್​

ಉಮೇಶ್ ಯಾದವ್ ಮತ್ತು ಶಾರ್ದೂಲ್ ಠಾಕೂರ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿದ ನಿರ್ಣಯವೇ ತಪ್ಪಾಗಿರುವ ಕಾರಣ ಬೌಲಿಂಗ್​ನಲ್ಲಿ ಅವರು ಉತ್ತಮ ಪ್ರದರ್ಶನ ನೀಡದಿರುವುದು ಕೂಡ ವಿಶೇಷವಲ್ಲ. ಆದರೆ, ಬೌಲರ್​​ಗಳು ಆಸೀಸ್​ ಬ್ಯಾಟರ್​​ಗಳ ಮುಂದೆ ಶರಣಾಗಿದ್ದು ಸ್ಪಷ್ಟ. ಹೀಗಾಗಿಯೇ ಮೊದಲ ಇನಿಂಗ್ಸ್​​ನಲ್ಲಿ ಟ್ರಾವಿಸ್ ಹೆಡ್ ಮತ್ತು ಸ್ಟೀವ್ ಸ್ಮಿತ್ ದ್ವಿಶತಕದ ಜತೆಯಾಟವಾಡಿದ್ದು.

ಇದನ್ನೂ ಓದಿ : WTC Final 2023 : ಸೋಲಿನ ಕಾರಣಗಳನ್ನು ಬಿಡಿಸಿ ಹೇಳಿದ ನಾಯಕ ರೋಹಿತ್ ಶರ್ಮಾ

ಇಬ್ಬರು ವೇಗಿಗಳಾದ ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ತಮ್ಮ ಬೌಲಿಂಗ್ ತುದಿಯನ್ನು ಬದಲಾಯಿಸಲಿಲ್ಲ. ಹೀಗಾಗಿ ಅವರಿಗೆ ಹೆಚ್ಚಿನ ಯಶಸ್ಸು ಪಡೆಯಲು ಸಾಧ್ಯವಾಗಲಿಲ್ಲ. ಆದರೆ, ಪಂದ್ಯದ ಬಳಿಕ ನಾಯಕ ರೋಹಿತ್ ಶರ್ಮಾ ಬೌಲರ್​ಗಳನ್ನು ದೂರಿದ್ದಾರೆ.

5) ಜತೆಯಾಟದ ಕೊರತೆ

ಭಾರತ ತಂಡದ ಬ್ಯಾಟಿಂಗ್​ ವಿಭಾಗದಲ್ಲಿ ಉತ್ತಮ ಜತೆಯಾಟ ಮೂಡಿ ಬರಲಿಲ್ಲ. ಮೊದಲ ಇನಿಂಗ್ಸ್​ನಲ್ಲಿ ಯಾರೂ ತಳವೂರಿ ನಿಂತು ಆಡುವ ಪ್ರಯತ್ನ ಮಾಡಲಿಲ್ಲ. ಎರಡನೇ ಇನಿಂಗ್ಸ್​ನಲ್ಲಿ ರಹಾನೆ ಹಾಗೂ ಕೊಹ್ಲಿ ಒಂದು ಹಂತದಲ್ಲಿ ವಿಶ್ವಾಸ ಮೂಡಿಸಿದರೂ ನಂತರ ಕೆಟ್ಟ ಹೊಡೆತಗಳನ್ನು ಬಾರಿಸಲು ಮುಂದಾಗಿ ಪೆವಿಲಿಯನ್​ ಸೇರಿದರು. ಇದು ಕೂಡ ಭಾರತದ ಸೋಲಿಗೆ ಒಂದು ಕಾರಣ ಎನಿಸಿತು.

Exit mobile version