Site icon Vistara News

Mohammed Siraj : ಹೈದರಾಬಾದ್ ಹರಿಕೇನ್​ ಸಿರಾಜ್​ ಸೃಷ್ಟಿಸಿದ ದಾಖಲೆಗಳ ಪಟ್ಟಿ ಇಲ್ಲಿದೆ

Mohammes Siraj

ಕೊಲಂಬೊ: ಇಲ್ಲಿನ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಶ್ರೀಲಂಕಾ ವಿರುದ್ಧದ ಏಷ್ಯಾ ಕಪ್ 2023 ಫೈನಲ್ ಪಂದ್ಯದಲ್ಲಿ ಭಾರತದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಏಕದಿನ ಅಂತರರಾಷ್ಟ್ರೀಯ ಪಂದ್ಯದಲ್ಲಿ ಭಾರತದ ಎರಡನೇ ಅತ್ಯುತ್ತಮ ಬೌಲಿಂಗ್ ದಾಖಲೆಯನ್ನು ಮಾಡಿದ್ದಾರೆ. ಅವರು ಏಕದಿನ ಕ್ರಿಕೆಟ್​ನಲ್ಲಿ ಜಂಟಿಯಾಗಿ ಅತಿ ವೇಗದ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

ಸಿರಾಜ್ ಅವರ ಆಕ್ರಮಣಕಾರಿ ಸ್ಪೆಲ್ 50 ಓವರ್​ಗಳ ಸ್ವರೂಪದಲ್ಲಿ ಭಾರತೀಯ ಬೌಲರ್ ಒಬ್ಬರ ಅತ್ಯುತ್ತಮ ಪ್ರದರ್ಶನವಾಗಿದೆ. ಸ್ಟುವರ್ಟ್ ಬಿನ್ನಿ ಬಾಂಗ್ಲಾದೇಶ ವಿರುದ್ಧ 4 ರನ್​ಗೆ ಗೆ 6 ವಿಕೆಟ್ ಪಡೆದು ವೃತ್ತಿಜೀವನದ ಅತ್ಯುತ್ತಮ ಸಾಧನೆ ಮಾಡಿದ್ದರು. ಇದೇ ವೇಳೆ ಸಿರಾಜ್​ ಒಂದೇ ಓವರ್​ನಲ್ಲಿ 4 ವಿಕೆಟ್ ಕಬಳಿಸಿದ ಮೊದಲ ಭಾರತೀಯ ವೇಗಿ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಮೊಹಮ್ಮದ್​ ಸಿರಾಜ್​ ಅಜಂತಾ ಮೆಂಡಿಸ್ ನಂತರ 50 ಏಕದಿನ ವಿಕೆಟ್ (ಕನಿಷ್ಠ ಎಸೆತಗಳನ್ನು ಬೌಲ್ ಮಾಡಿದ) ಪಡೆದ ಎರಡನೇ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಭಾರತದ ಪರ 10 ಬೌಲರ್​ಗಳು ಆರು ವಿಕೆಟ್​ಗಳ ಸಾಧನೆ ಮಾಡಿದ್ದಾರೆ, ಆಶಿಶ್ ನೆಹ್ರಾ ಏಕದಿನ ಅಂತಾರರಾಷ್ಟ್ರೀಯ ಪಂದ್ಯಗಳಲ್ಲಿ ಎರಡು ಬಾರಿ ಈ ಸಾಧನೆ ಮಾಡಿದ ಏಕೈಕ ಬೌಲರ್ ಆಗಿದ್ದಾರೆ.

ಭಾರತದ ಪರ ಏಕದಿನದಲ್ಲಿ ಶ್ರೇಷ್ಠ ಬೌಲಿಂಗ್ ಸಾಧನೆಗಳು

ಒಂದೇ ಓವರ್‌ನಲ್ಲಿ 4 ವಿಕೆಟ್ ಸಾಧನೆ

ಏಕದಿನ ಕ್ರಿಕೆಟ್‌ನಲ್ಲಿ ಓವರ್‌ವೊಂದರಲ್ಲಿ ನಾಲ್ಕು ವಿಕೆಟ್ ಕಬಳಿಸಿದ ಭಾರತದ ಮೊದಲ ಬೌಲರ್ ಎಂಬ ಖ್ಯಾತಿಗೂ ಸಿರಾಜ್‌ ಪಾತ್ರರಾಗಿದ್ದಾರೆ. ಸಿರಾಜ್ ತಮ್ಮ 2ನೇ ಓವರ್‌ನಲ್ಲಿ ಮೇಡನ್‌ ಸಹಿತ 4 ವಿಕೆಟ್ ಕಬಳಿಸಿದರು. ಅಲ್ಲದೆ 16 ಎಸೆತಗಳಲ್ಲೇ ಐದು ವಿಕೆಟ್ ಸಾಧನೆ ಮಾಡಿದರು. ಏಕದಿನ ಕ್ರಿಕೆಟ್‌ನಲ್ಲಿ ಭಾರತ ಇದೇ ಮೊದಲ ಬಾರಿಗೆ ಮೊದಲ 10 ಓವರ್‌ನಲ್ಲಿ ಎದುರಾಳಿ ತಂಡದ 6 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದೆ. 10 ಓವರ್ ಅಂತ್ಯಕ್ಕೆ ಲಂಕಾ ಆರು ವಿಕೆಟ್ ನಷ್ಟಕ್ಕೆ 31 ರನ್ ಗಳಿಸಿತ್ತು.

ಇದನ್ನೂ ಓದಿ : Asia Cup 2023 : ಭಾರತ ಏಷ್ಯಾ ಕಪ್​ ಚಾಂಪಿಯನ್​, 8ನೇ ಬಾರಿ ಟ್ರೋಫಿ ಎತ್ತಿದ ಟೀಮ್​ ಇಂಡಿಯಾ

ಒಡಿಐ ಮಾದರಿಯ ಫೈನಲ್ ಒಂದರಲ್ಲಿ ಕನಿಷ್ಠ ಮೊತ್ತ

ಸಿರಾಜ್ ಉರಿಚೆಂಡಿಗೆ ನಲುಗಿದ ಶ್ರೀಲಂಕಾ 15.2 ಓವರ್‌ಗಳಲ್ಲಿ 50 ರನ್​ಗೆ ಸರ್ವಪತನ ಕಂಡಿತು. ಇದು ಏಕದಿನ ಟೂರ್ನಿಯೊಂದರ ಫೈನಲ್‌ನಲ್ಲಿ ದಾಖಲಾದ ಕನಿಷ್ಠ ರನ್​ಗಳಾಗಿದೆ. ಈ ಹಿಂದೆ 2000ನೇ ಇಸವಿಯಲ್ಲಿ ಶಾರ್ಜಾದಲ್ಲಿ ಶ್ರೀಲಂಕಾ ವಿರುದ್ಧವೇ ಭಾರತ 54 ರನ್ನಿಗೆ ಆಲೌಟ್ ಆಗಿತ್ತು.

ಭಾರತದ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ತಂಡವೊಂದು ದಾಖಲಿಸಿದ ಕನಿಷ್ಠ ಮೊತ್ತ ಕೂಡ ಇದಾಗಿದೆ. ಈ ಹಿಂದೆ 2014ರಲ್ಲಿ ಬಾಂಗ್ಲಾದೇಶ ತಂಡವನ್ನು ಭಾರತ 58 ರನ್ನಿಗೆ ಆಲೌಟ್ ಮಾಡಿತ್ತು. ಏಕದಿನ ಕ್ರಿಕೆಟ್‌ನಲ್ಲಿ ಶ್ರೀಲಂಕಾ ತಂಡದ ಬಾರಿಸಿದ 2ನೇ ಅತಿ ಕಡಿಮೆ ಮೊತ್ತ ಇದಾಗಿದೆ. 2012ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 43 ರನ್​ಗೆ ಆಲೌಟ್ ಆಗಿತ್ತು.

ಐಸಿಸಿ ಪೂರ್ಣ ಸದಸ್ಯ ತಂಡಗಳ ಪೈಕಿ ಜಿಂಬಾಬ್ಬೆ ಬಳಿಕ ಅತಿ ಕಡಿಮೆ ಓವರ್‌ಗಳಲ್ಲಿ ಆಲೌಟ್‌ ಆದ ತಂಡ ಎಂಬ ಅಪಖ್ಯಾತಿಗೂ ಲಂಕಾ ಒಳಗಾಗಿದೆ. ಶ್ರೀಲಂಕಾ ಕೇವಲ 15.2 ಓವರ್‌ಗಳಲ್ಲಿ ಆಲೌಟಾಯಿತು. ಈ ಹಿಂದೆ 2017ರಲ್ಲಿ ಅಫ್ಘಾನಿಸ್ತಾನ ವಿರುದ್ಧ ಜಿಂಬಾಬ್ಬೆ 13.5 ಓವರ್‌ಗಳಲ್ಲಿ ಸರ್ವಪತನ ಕಂಡಿತ್ತು.

Exit mobile version