ಮುಂಬಯಿ: ಐಸಿಸಿ ಕ್ರಿಕೆಟ್ ವಿಶ್ವಕಪ್ನ (ICC World Cup 2023) ಸೆಮಿಫೈನಲ್ನಲ್ಲಿ ಭಾರತ ಮತ್ತೊಮ್ಮೆ ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ. ನ್ಯೂಜಿಲೆಂಡ್ ವಿರುದ್ಧದ 2019 ರ ವಿಶ್ವಕಪ್ ಸೆಮಿಫೈನಲ್ ಸೋಲಿಗೆ ಭಾರತೀಯ ಅಭಿಮಾನಿಗಳು ಸೇಡು ತೀರಿಸಿಕೊಳ್ಳಲು ಬಯಸುತ್ತಿದ್ದಾರೆ. ಏತನ್ಮಧ್ಯೆ 1983ರಿಂದ ನಡೆದ 50 ಓವರ್ಗಳ ವಿಶ್ವಕಪ್ ನಾಕೌಟ್ ಹಂತಗಳಲ್ಲಿ ಭಾರತದ ಪ್ರದರ್ಶನ ಹೇಗಿತ್ತು ಎಂಬುದನ್ನು ಗಮನಿಸುವುದು ಉತ್ತಮ. ವಾಸ್ತವದಲ್ಲಿ ಈ ಇತಿಹಾಸ ಆಶಾದಾಯಕವಾಗಿಲ್ಲ. ಏಕೆಂದರೆ ಕಳೆದ ಏಳು ಮುಖಾಮುಖಿಗಳಲ್ಲಿ ಕೇವಲ ಮೂರನ್ನು ಮಾತ್ರ ಗೆಲ್ಲಲು ಭಾರತಕ್ಕೆ ಸಾಧ್ಯವಾಗಿದೆ. ಆದಾಗ್ಯೂ, ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಭಾರತ ತಂಡವು ಸತತ 9 ಗೆಲುವುಗಳನ್ನು ದಾಖಲಿಸಿರುವುದು ಇದೇ ಮೊದಲು. ಹೀಗಾಗಿ ಮತ್ತು ರೋಹಿತ್ ಶರ್ಮಾ ಪಡೆ ಈ ಬಾರಿ ಪ್ರಬಲ ಶಕ್ತಿ ಎಂಬುದರಲ್ಲಿ ಎರಡು ಮಾತಿಲ್ಲ.
2011 ರ ವಿಶ್ವಕಪ್ ವೈಭವದ ನಂತರ, ಭಾರತವು ಏಕದಿನ ಅಥವಾ ಟಿ 20 ಐ ಆಗಿರಲಿ ಒಂದೇ ಒಂದು ವಿಶ್ವಕಪ್ ಗೆಲ್ಲಲು ವಿಫಲವಾಗಿದೆ.
1975 ಮತ್ತು 1979 ರ ವಿಶ್ವಕಪ್
ಶ್ರೀನಿವಾಸ್ ವೆಂಕಟರಾಘವ ಅವರ ನಾಯಕತ್ವದಲ್ಲಿ ಭಾರತ ತಂಡ ವಿಶ್ವಕಪ್ನ ಮೊದಲ ಎರಡು ಆವೃತ್ತಿಗಳಲ್ಲಿ ಸೆಮಿಫೈನಲ್ಗೆ ಅರ್ಹತೆ ಪಡೆಯಲು ವಿಫಲವಾಗಿತ್ತು.
1983 ವಿಶ್ವಕಪ್
ವಿಶ್ವಕಪ್ ನ ಮೂರನೇ ಆವೃತ್ತಿಯಲ್ಲಿ ಭಾರತವು ಕ್ರಿಕೆಟ್ ಜಗತ್ತನ್ನು ಬೆಚ್ಚಿಬೀಳಿಸಿತ್ತು. ಕೊನೆಯ ನಾಲ್ಕಕ್ಕೆ ಅರ್ಹತೆ ಪಡೆದಿದ್ದಲ್ಲದೆ, ಪ್ರಬಲ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸುವ ಮೂಲಕ ಪ್ರಸ್ತಿ ಗೆದ್ದುಕೊಂಡಿತು. ಅಂತೆಯೇ 1983 ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಆರು ವಿಕೆಟ್ ವಿಜಯ ಗಳಿಸಿತ್ತು.
1987ರಲ್ಲಿ ಭಾರತ-ಇಂಗ್ಲೆಂಡ್ ಸೆಮಿಫೈನಲ್
ಈ ವಿಶ್ವ ಕಪ್ ಸೆಮಿಫೈನಲ್ನಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ಸೋತಿತ್ತು. ಭಾರತ ಆತಿಥ್ಯದಲ್ಲಿ ನಡೆದ ಟೂರ್ನಿಯಲ್ಲಿ ಸೋಲು ಕಂಡಿತ್ತು. ಮುಂಬಯಿಯ ವಾಂಖೆಡೆಯಲ್ಲಿ ನಡೆದ ಪಂದ್ಯದಲ್ಲಿ 35 ರನ್ಗಳಿಂದ ಸೋತಿತ್ತು.
1996 ವಿಶ್ವಕಪ್
1992 ರ ವಿಶ್ವಕಪ್ನಲ್ಲಿ ಭಾರತವು ನಾಕೌಟ್ ಸುತ್ತುಗಳಿಗೆ ಅರ್ಹತೆ ಪಡೆಯಲು ವಿಫಲವಾಯಿತು.ಆದರೆ ಸಚಿನ್ ಬ್ಯಾಟಿಂಗ್ ವೈಭವದೊಂದಿಗೆ 1996ರ ವಿಶ್ವ ಕಪ್ನಲ್ಲಿ ಸೆಮಿಫೈನಲ್ಗೇರಿತು. ಆದರೆ, ಅದು ಭಾರತದ ಪಾಲಿಗೆ ಅತ್ಯಂತ ಕೆಟ್ಟ ದಿನವಾಯಿತು. ಕೋಲ್ಕೊತಾದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ಲಂಕಾ ವಿರುದ್ಧ ಸೋಲು ಕಂಡಿತ್ತು. ಲಂಕಾ ಬಾರಿಸಿದ್ದ 251 ರನ್ಗಳನ್ನು ಬೆನ್ನಟ್ಟಲು ಹೊರಟ ಭಾರತ 120 ರನ್ಗಳಿಗೆ 8 ವಿಕೆಟ್ ಕಳೆದುಕೊಂಡಿತು. ಬೇಸರಗೊಂಡ ಅಭಿಮಾನಿಗಳು ದಾಂಧಲೆ ಮಾಡಿದ್ದರು. ಬಳಿಕ ಅಂಪೈರ್ಗಳು ಲಂಕಾ ತಂಡ ಗೆದ್ದಿತು ಎಂದು ಘೋಷಿಸಿದ್ದರು.
2003ರಲ್ಲಿ ಭಾರತ ವಿರುದ್ಧ ಕೀನ್ಯಾ ಸೆಮಿಫೈನಲ್
ಮಾರ್ಚ್ 20ರಂದು ಡರ್ಬಾನ್ ನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ಕೀನ್ಯಾ ವಿರುದ್ಧ ಸೆಣಸಿತ್ತು. ಆ ಪಂದ್ಯದಲ್ಲಿ ಭಾರತ 91 ರನ್ಗಳ ಗೆಲುವು ಸಾಧಿಸಿತ್ತು. ಆದಾಗ್ಯೂ, ರಿಕಿ ಪಾಂಟಿಂಗ್ ನೇತೃತ್ವದ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಫೈನಲ್ನಲ್ಲಿ ಭಾರತ ದಯನೀಯ ಸೋಲು ಕಂಡಿತ್ತು.
2011 ವಿಶ್ವಕಪ್
2007 ರ ವಿಶ್ವಕಪ್ನಲ್ಲಿ ಬಾಂಗ್ಲಾದೇಶ ಮತ್ತು ಶ್ರೀಲಂಕಾ ವಿರುದ್ಧ ಸೋತ ನಂತರ ಭಾರತವು ಲೀಗ್ ಹಂತದಲ್ಲಿ ಈವೆಂಟ್ನಿಂದ ಹೊರಬಿದ್ದಿತು. ಆದರೆ ಎಂ.ಎಸ್.ಧೋನಿ ಪಡೆ 2011ರಲ್ಲಿ ಕಪ್ ಗೆದ್ದಿತು. ಅದಕ್ಕಿಂತ ಮೊದಲು ಸೆಮೀಸ್ನಲ್ಲಿ ಪಾಕ್ ತಂಡವನ್ನು ಮಣಿಸಿತ್ತು. 2011ರ ವಿಶ್ವಕಪ್ ಟೂರ್ನಿಯ 30ನೇ ಪಂದ್ಯದಲ್ಲಿ ಏಷ್ಯಾದ ಎರಡು ದೈತ್ಯ ತಂಡಗಳು ಮುಖಾಮುಖಿಯಾಗಿದ್ದವು. ಸಚಿನ್ ತೆಂಡೂಲ್ಕರ್ ಅದ್ಭುತ ಪ್ರದರ್ಶನ ನೀಡಿ ಭಾರತವನ್ನು 85 ರನ್ ಗಳ ಗೆಲುವಿನತ್ತ ಮುನ್ನಡೆಸಿದ್ದರು.
ಈ ಸುದ್ದಿಯನ್ನೂ ಓದಿ: ICC World Cup 2023: 9 ಪಂದ್ಯಗಳಲ್ಲಿ ಟೀಮ್ ಇಂಡಿಯಾದ ಗೆಲುವಿನ ಓಟ ಹೀಗಿತ್ತು…
2015 ರ ವಿಶ್ವಕಪ್ನಲ್ಲಿ ಭಾರತ-ಆಸ್ಟ್ರೇಲಿಯಾ ಸೆಮಿಫೈನಲ್
ಮಾರ್ಚ್ 26 ರಂದು ಸಿಡ್ನಿಯಲ್ಲಿ ನಡೆದ ಎರಡನೇ ವಿಶ್ವಕಪ್ ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ಮುಖಾಮುಖಿಯಾಗಿದ್ದವು. ಆಸ್ಟ್ರೇಲಿಯಾ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 328 ರನ್ ಗಳಿಸಿತು. ಭಾರತ 95 ರನ್ಗಳಿಂದ ಸೋತಿತು.
ವಿಶ್ವಕಪ್ 2019ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಸೋಲು
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಮತ್ತು ವಿಕೆಟ್ ಹಿಂದೆ ಅನುಭವಿ ಎಂ.ಎಸ್.ಧೋನಿ ಇರುವುದರಿಂದ, ಪ್ರತಿಯೊಬ್ಬ ಭಾರತೀಯ ಅಭಿಮಾನಿಗಳು ವಿಶ್ವಕಪ್ ಟ್ರೋಫಿಯ ನಿರೀಕ್ಷೆಯಲ್ಲಿದ್ದರು. ಆದಾಗ್ಯೂ, ಮಳೆಯಿಂದಾಗಿ ಎರಡು ದಿನಗಳ ಕಾಲ ನಡೆದ ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ತಂಡ ಭಾರತದ ಅಭಿಮಾನಿಗಳ ಕನಸುಗಳನ್ನು ಭಗ್ನಗೊಳಿಸಿತು.