ನವದೆಹಲಿ: ಮುಂಬೈ ಇಂಡಿಯನ್ಸ್ (ಎಂಐ) ಸೋಮವಾರ ಅಧಿಕೃತವಾಗಿ ಹಾರ್ದಿಕ್ ಪಾಂಡ್ಯ ಅವರನ್ನು ಗುಜರಾತ್ ಟೈಟಾನ್ಸ್ನಿಂದ ಖರೀದಿಸುವುದಾಗಿ ಘೋಷಿಸಿದೆ. ಇದು ಮುಂಬರುವ 2024 ರ (IPL 2024) ಋತುವಿನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಅತ್ಯಂತ ಆಶ್ಚರ್ಯಕರ ವ್ಯಾಪಾರವೆಂದು ಹೇಳಲಾಗಿದೆ. ಅದೇ ಸಮಯದಲ್ಲಿ, ಐದು ಬಾರಿಯ ಚಾಂಪಿಯನ್ಸ್ ತಂಡವಾಗಿರುವ ಮುಂಬಯಿ ತಮ್ಮ ಅತ್ಯಂತ ದುಬಾರಿ ಖರೀದಿಯಾಗಿದ್ದ ಕ್ಯಾಮರೂನ್ ಗ್ರೀನ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಗೆ ಮಾರಿದೆ. ಈ ವ್ಯವಹಾರ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಟ್ರೇಡಿಂಗ್ ಎಂಬ ಖ್ಯಾತಿ ಪಡೆದುಕೊಂಡಿದೆ.
ಕಳೆದ ಋತುವಿನಲ್ಲಿ ನಡೆದ ಹರಾಜಿನಿಂದ ಎಂಐ ತಂಡ ಗ್ರೀನ್ ಅನ್ನು 17.5 ಕೋಟಿ ರೂ.ಗೆ ಖರೀದಿಸಿತ್ತು. ಆದಾಗ್ಯೂ, ಪಾಂಡ್ಯ ಅವರ 15 ಕೋಟಿ ರೂ.ಗಳ ವೇತನ ಮಿತಿಯಿಂದಾಗಿ ಎಂಐ ತಂಡ ಆಸ್ಟ್ರೇಲಿಯಾದ ಯುವ ಆಟಗಾರರನ್ನು ಅನಿವಾರ್ಯವಾಗಿ ಬಿಡುಗಡೆ ಮಾಡಿದೆ. 2022ರ ಐಪಿಎಲ್ಗೆ ಮುಂಚಿತವಾಗಿ ಮುಂಬಯಿ ತಂಡ ಪಾಂಡ್ಯ ಅವರನ್ನು ಬಿಡುಗಡೆ ಮಾಡಿತ್ತು. ಆಗ ಹೊಸ ತಂಡವಾಗಿದ್ದ ಗುಜರಾತ್ ಟೈಟನ್ಸ್ ಅವರನ್ನು ದೊಡ್ಡ ಮೊತ್ತಕ್ಕೆ ಹರಾಜಿಗಿಂತ ಮೊದಲೇ ಖರೀದಿಸಿ ನಾಯಕನ ಪಟ್ಟ ಕಟ್ಟಿತ್ತು.
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಖರೀದಿ ಎಂದು ಕಳೆದ ವರ್ಷದ ಹರಾಜಿನಲ್ಲಿ ಹೆಗ್ಗಳಿಕೆಗೆ ಪಡೆದುಕೊಂಡಿದ್ದ ಕ್ಯಾಮರೂನ್ ಗ್ರೀನ್ ಆರ್ಸಿಬಿಗೆ ಸ್ಥಳಾಂತರಗೊಂಡಿರುವುದು ಗಮನಾರ್ಹ ಬೆಳವಣಿಗೆಯಾಗಿದೆ. ರೀ ರೀತಿಯಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ನಡೆದ ಕೆಲವು ದೊಡ್ಡ ವಹಿವಾಟುಗಳ ವಿವರ ಇಲ್ಲಿದೆ.
ಕ್ಯಾಮರೂನ್ ಗ್ರೀನ್ ಅವರನ್ನು 17.5 ಕೋಟಿ ರೂ.ಗೆ ಖರೀದಿಸಿದ ಆರ್ಸಿಬಿ
ಹಾರ್ದಿಕ್ ಪಾಂಡ್ಯ ಅವರನ್ನು ಜಿಟಿಯಿಂದ ಮರಳಿ ಕರೆತರುವ ಕಾರ್ಯತಂತ್ರದ ಭಾಗವಾಗಿ, ಮುಂಬೈ ಇಂಡಿಯನ್ಸ್ ಕ್ಯಾಮರೂನ್ ಗ್ರೀನ್ ಅನ್ನು ಆರ್ಸಿಬಿಗೆ 17.5 ಕೋಟಿ ರೂ.ಗೆ ಮಾರಾಟ ಮಾಡಿದೆ. ಅವರು ಕಳೆದ ಆವೃತ್ತಿಯ ಮಿನಿ ಹರಾಜಿನ ವೇಳೆ ಮುಂಬಯಿ ತಂಡ ಸೇರಿಕೊಂಡಿದ್ದರು.
ಇದನ್ನೂ ಓದಿ : IPL 2024 : ರೆಡ್ ಆದ ಗ್ರೀನ್; ಇವರೇ ನೋಡಿ ಐಪಿಎಲ್ನ ಗರಿಷ್ಠ ಬೆಲೆಯ ಟ್ರೇಡಿಂಗ್
15 ಕೋಟಿ ರೂ.ಗೆ ಹಾರ್ದಿಕ್ ಪಾಂಡ್ಯ ಖರೀದಿಸಿದ ಮುಂಬೈ ಇಂಡಿಯನ್ಸ್
ಕ್ಯಾಮರೂನ್ ಗ್ರೀನ್ ಅವರನ್ನು 17.5 ಕೋಟಿ ರೂ.ಗೆ ಖರೀದಿಸಲು ಆರ್ಸಿಬಿ ಒಪ್ಪಂದ ಮಾಡಿಕೊಂಡ ನಂತರ, ಮುಂಬೈ ಇಂಡಿಯನ್ಸ್ ಗುಜರಾತ್ ಟೈಟಾನ್ಸ್ ನಾಐಕ ಹಾರ್ದಿಕ್ ಪಾಂಡ್ಯ ಅವರನ್ನು 15 ಕೋಟಿ ರೂ.ಗೆ ಖರೀದಿಸುವಲ್ಲಿ ಯಶಸ್ವಿಯಾಗಿದೆ. ಪಾಂಡ್ಯ ಅವರು ಮುಂಬಯಿ ತಂಡದ ಭವಿಷ್ಯದ ನಾಯಕರಾಗಲಿದ್ದಾರೆ.
10.75 ಕೋಟಿ ರೂ.ಗೆ ಶಾರ್ದೂಲ್ ಠಾಕೂರ್ ಖರೀದಿಸಿದ್ದ ಕೆಕೆಆರ್
ಐಪಿಎಲ್ 2023ರ ಹರಾಜಿಗಿಂತ ಮೊದಲು ಡೆಲ್ಲಿ ಕ್ಯಾಪಿಟಲ್ಸ್ ಭಾರತದ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಅವರನ್ನು ಕೋಲ್ಕತಾ ನೈಟ್ ರೈಡರ್ಸ್ ತಂಡ 10.75 ಕೋಟಿ ರೂ.ಗೆ ಖರೀದಿಸಿತ್ತು. ಆದರೆ, ಕಳೆದ ಆವೃತ್ತಿಯಲ್ಲಿ ಅವರು ಸಂಪೂರ್ಣ ವಿಫಲವಾದ ಕಾರಣ ಅವರನ್ನು ಈ ಆವೃತ್ತಿಯಲ್ಲಿ ಬಿಡುಗಡೆ ಮಾಡಲಾಗಿದೆ.
ಮೂರು ಆಟಗಾರರ ಬದಲಿಗೆ ಶಿಖರ್ ಧವನ್
ಐಪಿಎಲ್ 2019 ರ ಋತುವಿನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಶಿಖರ್ ಧವನ್ ಅವರನ್ನು ಕರೆ ತರಲಾಗಿತ್ತು. ಅದಕ್ಕಾಗಿ ಡೆಲ್ಲಿ ತಂಡ ಆ ತಂಡಕ್ಕೆ ವಿಜಯ್ ಶಂಕರ್, ಶಹಬಾಜ್ ನದೀಮ್ ಮತ್ತು ಅಭಿಷೇಕ್ ಶರ್ಮಾ ಅವರನ್ನು ಬಿಟ್ಟುಕೊಟ್ಟಿತ್ತು.
ಕ್ವಿಂಟನ್ ಡಿ ಕಾಕ್ ಅವರನ್ನು 2.8 ಕೋಟಿ ರೂ.ಗೆ ಖರೀದಿಸಿದ ಮುಂಬೈ
2019ರಲ್ಲಿ ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಕ್ವಿಂಟನ್ ಡಿ ಕಾಕ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಮುಂಬೈ ಇಂಡಿಯನ್ಸ್ 2.8 ಕೋಟಿ ರೂ.ಗೆ ಮಾರಾಟ ಮಾಡಿತ್ತು. ಇದು ಕೂಡ ದುಬಾರಿ ಟ್ರೇಡಿಂಗ್. ಆದರೆ, 2022ಕ್ಕೆ ಮುಂಚಿತವಾಗಿ ಮುಂಬೈ ತಂಡ ಅವರನ್ನು ಬಿಡುಗಡೆ ಮಾಡಿತು. ಈ ವೇಳೆ ಅವರು ಹೊಸ ಫ್ರಾಂಚೈಸಿ ಲಕ್ನೊ ಸೂಪರ್ ಜೈಂಟ್ಸ್ ಸೇರಿಕೊಂಡರು.