Site icon Vistara News

ಪದಕವನ್ನು ದೇಶದ ಜನತೆಗೆ ಅರ್ಪಿಸಿದ ನೀರಜ್ ಚೋಪ್ರಾ; ಪ್ರಧಾನಿ ಮೋದಿ ಸೇರಿ ಪೋಷಕರಿಂದ ಶ್ಲಾಘನೆ

neeraj chopra win gold medal moment

ನವದೆಹಲಿ: ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ(world athletics championships 2023) ಭಾರತದ ನೀರಜ್‌ ಚೋಪ್ರಾ (Neeraj Chopra) ಅವರು ಚಿನ್ನ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಈ ಟೂರ್ನಿಯಲ್ಲಿ ದೇಶಕ್ಕೆ ಮೊದಲ ಚಿನ್ನದ ಪದಕ ತಂದು ಕೊಟ್ಟ ಚೋಪ್ರಾ ತಮ್ಮ ಈ ಐತಿಹಾಸಿಕ ಪದಕವನ್ನು ದೇಶದ ಜತೆಗೆ ಅರ್ಪಿಸಿದ್ದಾರೆ. ಅವರ ಅಭೂತಪೂರ್ವ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಟ್ವೀಟ್​ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭಾನುವಾರ ತಡರಾತ್ರಿ ಬುಡಾಪೆಸ್ಟ್‌ (ಹಂಗೇರಿ)ನಲ್ಲಿ ನಡೆದ ಜಾವೆಲಿನ್​ ಫೈನಲ್​ನಲ್ಲಿ ನೀರಜ್​ ಚೋಪ್ರಾ ಅವರು 88.17 ಮೀಟರ್‌ ದೂರ ಭರ್ಜಿ ಎಸೆದು ಚಿನ್ನಕ್ಕೆ ಗುರಿ ಇಟ್ಟರು. ಕಳೆದ ವರ್ಷ ನೀರಜ್​ ಬೆಳ್ಳಿ ಗೆದ್ದ ಸಾಧನೆ ಮಾಡಿದ್ದರು. ಆದರೆ ಈ ಬಾರಿ ಚಿನ್ನದ ಪದಕದಿಂದ ಮಿನುಗಿದರು. ಫೈನಲ್​ನಲ್ಲಿ ಒಟ್ಟು ಮೂವರು ಭಾರತೀಯರು ಸ್ಪರ್ಧೆಗಿಳಿದಿದ್ದರು. ಇದರಲ್ಲಿ ಡಿ. ಮನು ಅವರು ಕರ್ನಾಟಕದ ಹಾಸನ ಜಿಲ್ಲೆ ಬೇಲೂರಿನವರು. ಅವರು 84.14 ಮೀ. ದೂರ ಜಾವೆಲಿನ್​ ಎಸೆದು 6ನೇ ಸ್ಥಾನ ಪಡೆದರು. ಮತೋರ್ವ ಭಾರತೀಯ ಕಿಶೋರ್ ಜೆನಾ (84.77 ಮೀ.) 5ನೇ ಸ್ಥಾನಿಯಾದರು.

ದೇಶದ ಜನತೆಗೆ ಅರ್ಪಣೆ

ಪದಕ ಗೆದ್ದ ಬಳಿಕ ಮಾತನಾಡಿದ ನೀರಜ್​ ಚೋಪ್ರಾ, ಈ ಐತಿಹಾಸಿಕ ಪದಕವನ್ನು ದೇಶದ ಜನೆತೆ ಅರ್ಪಿಸುತ್ತೇನೆ. ಜತೆಗೆ ಪ್ರತಿಯೊಬ್ಬ ಭಾರತೀಯನಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ನನ್ನನ್ನು ಬೆಂಬಲಿಸುವ ಸಲುವಾಗಿ, ರಾತ್ರಿಯಿಡೀ ನಿದ್ದೆ ಬಿಟ್ಟು ಕಾತರದಿಂದ ಪಂದ್ಯವನ್ನು ವೀಕ್ಷಿಸಿದ್ದೀರ. ಹೀಗಾಗಿ ಇದು ನನ್ನ ಒಬ್ಬನ ಗೆಲುವಲ್ಲ. ಇಡೀ ದೇಶದ ಗೆಲುವು. ಈ ಪದಕ ಆ ಪ್ರತಿಯೊಬ್ಬ ಭಾರತೀಯನಿಗೆ ಅರ್ಪಿತ” ಎಂದು ಹೇಳಿ ಭಾವುಕರಾದರು.

ಪ್ರಧಾನಿ ಮೋದಿಯಿಂದ ಮೆಚ್ಚುಗೆ

“ಕ್ರೀಡೆಯಲ್ಲಿ ನೀರಜ್ ಚೋಪ್ರಾ ಅವರ ಸಾಧನೆಯಿಂದ ದೇಶವೇ ಹೆಮ್ಮೆಪಡುವಂತಾಗಿದೆ. ಅವರ ಆಟದ ನಿಖರತೆ ಮತ್ತು ಶ್ರೇಷ್ಠತೆ ನಿಜಕ್ಕೂ ಮೆಚ್ಚಲೇ ಬೇಕು. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದಿರುವ ನಿಮಗೆ ಅಭಿನಂದನೆಗಳು” ಎಂದು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

ಸಂತಸ ವ್ಯಕ್ತಪಡಿಸಿದ ಪೋಷಕರು

ನೀರಜ್ ಚೋಪ್ರಾ ಅವರ ತಂದೆ ಸತೀಶ್ ಕುಮಾರ್(neeraj chopra father Satish Kumar) ಮತ್ತು ತಾಯಿ ಸರೋಜ ದೇವಿ(neeraj chopra mother Saroj Devi) ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಇದು ಇಡೀ ದೇಶಕ್ಕಾಗಿ ಮಾಡಿದ ದೊಡ್ಡ ಸಾಧನೆಯಾಗಿದೆ. ನೀರಜ್ ಈಗ​ ಕೇವಲ ನನಗೆ ಮಾತ್ರ ಗಮನಲ್ಲ ಆತ ದೇಶದ ಮಗನಾಗಿದ್ದಾನೆ. ಆತ ದೇಶಕ್ಕಾಗಿ ಮತ್ತಷ್ಟು ಸಾಧನೆ ಮಾಡಲಿದ್ದಾನೆ’ ಎಂದು ತಂದೆ ಸತೀಶ್ ಕುಮಾರ್ ಭರವಸೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ Neeraj Chopra: ಚಿನ್ನ ಗೆದ್ದ ಬಳಿಕ ತಿರಂಗಾ ಬಳಿ ನಿಲ್ಲುವಂತೆ ಪಾಕ್‌ ಅಥ್ಲೀಟ್‌ಗೆ ಸೂಚಿಸಿದ ನೀರಜ್‌ ಚೋಪ್ರಾ; ಅರ್ಷದ್‌ ಮಾಡಿದ್ದೇನು?

ದೇಶಕ್ಕೆ ಕೀರ್ತಿ ತಂದಿದ್ದಾನೆ; ತಾಯಿಯಿಂದ ಶ್ಲಾಘನೆ

ಮಗನ ಸಾಧನೆಯಿಂದ ನೀರಜ್​ ಅವರ ತಾಯಿ ಸಂತಸದಿಂದ ಆನಂದಭಾಷ್ಪ ಸುರಿಸಿ ಮಗನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.”ನೀರಜ್ ಚಿನ್ನದ ಪದಕ ಗೆಲ್ಲುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾನೆ. ದೇಶದ ಎಲ್ಲ ಜನರ ಆಶೀರ್ವಾದವೇ ಆತನಿಗೆ ಬಲ” ಎಂದು ಚೋಪ್ರಾ ಅವರ ತಾಯಿ ಸರೋಜ ದೇವಿ ಮೆಚ್ಚುಗೆ ವ್ಯಕ್ತಪಡಿಸಿದರು.

ಒಲಿಂಪಿಕ್ಸ್​ ಮಾದರಿಯಲ್ಲೇ ಸಂಭ್ರಮಿಸಿದ ನೀರಜ್​

ಪಾಣಿಪತ್‌ನ ಖಂಡ್ರಾ ಗ್ರಾಮದ 25 ವರ್ಷದ ನೀರಜ್‌, 2021ರ ಟೋಕಿಯೊ ಒಲಿಂಪಿಕ್ ಚಾಂಪಿಯನ್ ಆಗಿ ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಮೊದಲ ಅಥ್ಲೆಟಿಕ್ ಪದಕ ಪಡೆದರು. ಇದೀಗ ವಿಶ್ವ ಚಾಂಪಿಯನ್ ಆಗಿದ್ದಾರೆ. ಅವರ ಮೊದಲ ಎಸೆತ ಫೌಲ್‌ ಆಗಿತ್ತು. ಎರಡನೆಯ ಎಸೆತದಲ್ಲಿ ಜಾವೆಲಿನ್ ಪೂರ್ಣ ದೂರವನ್ನು ಕ್ರಮಿಸುವ ಮೊದಲೇ ಅವರ ಗರ್ಜನೆ ಹೊರಬಿದ್ದಿತ್ತು. ಎರಡು ವರ್ಷಗಳ ಹಿಂದೆ ಟೋಕಿಯೊದಲ್ಲಿ ಮಾಡಿದ್ದಂತೆಯೇ, ಈ ಸಲವೂ ಜಾವೆಲಿನ್‌ ಬಹುದೂರ ಕ್ರಮಿಸಿತು ಎಂಬುದನ್ನು ಅವರು ಎಸೆತದ ಕ್ಷಣದಲ್ಲೇ ತಿಳಿದರು. 88.17 ಮೀ ದೂರ ಎಸೆದು ಸಂಭ್ರಮಿಸಿದರು.

Exit mobile version