Site icon Vistara News

ವಾರದ ವ್ಯಕ್ತಿ ಚಿತ್ರ: ಹಿಸ್ಟರಿ ರಿಪೀಟ್ಸ್​; ಭಾರತೀಯ ಕ್ರಿಕೆಟ್​ ಕ್ಷೇತ್ರದಲ್ಲಿ ಮತ್ತೆ ವಿಲನ್ ಎನಿಸಿಕೊಂಡ ಚೇತನ್​ ಶರ್ಮಾ

chetan sharma

#image_title

1986ರಲ್ಲಿ ನಡೆದ ಆಸ್ಟ್ರಾಲ್​- ಏಷ್ಯಾ ಕಪ್​ನ ಫೈನಲ್​ ಪಂದ್ಯವದು. ಸಾಂಪ್ರದಾಯಿಕ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡ ಟ್ರೋಫಿಗಾಗಿ ಜಿದ್ದಾಜಿದ್ದಿನ ಹೋರಾಟ ನಡೆಸುತ್ತಿತ್ತು. ಪಾಕಿಸ್ತಾನ ತಂಡದ ಗೆಲುವಿಗೆ ಇನಿಂಗ್ಸ್​ನ ಕೊನೇ ಎಸೆತದಲ್ಲಿ ನಾಲ್ಕು ರನ್​ ಬೇಕಾಗಿತ್ತು. ವೇಗಿ ಚೇತನ್​ ಶರ್ಮಾ (Chetan sharma) ಎಸೆದ ಆ ಎಸೆತವನ್ನು ಪಾಕಿಸ್ತಾನ ತಂಡದ ನಾಯಕ ಜಾವೆದ್​ ಮಿಯಾಂದಾದ್ ಸಿಕ್ಸರ್​ಗಟ್ಟಿದ್ದರು. ಅಂದು ಭಾರತ ಕ್ರಿಕೆಟ್​ ಅಭಿಮಾನಿಗಳ ಹೃದಯವೇ ಒಡೆದು ಹೋಗಿತ್ತು. ಚೇತನ್​ ಶರ್ಮಾ ಎಂಬ ವೇಗದ ಬೌಲರ್ ಆ ಕ್ಷಣದಿಂದ ವಿಲನ್ ಪಟ್ಟ​. ಆ ಒಂದು ಎಸೆತ ಅವರು ಅಷ್ಟು ದಿನ ಮಾಡಿದ್ದ ಸಾಧನೆಗಳನ್ನು ಮಂಕಾಗಿಸಿದವು. ಹೋದ ಕಡೆಯಲ್ಲೆಲ್ಲ ಕ್ರಿಕೆಟ್​ ಅಭಿಮಾನಿಗಳು ಛೀಮಾರಿ ಹಾಕಿದರು. ಚೇತನ್ ಚೈತನ್ಯ ಕಳೆದುಕೊಂಡಿದ್ದರು.

ಹಿಸ್ಟರಿ ರಿಪೀಟ್ಸ್​….ಅಂಥದ್ದೇ ಸ್ಥಿತಿಯನ್ನು ಚೇತನ್​ ಶರ್ಮಾ ಮತ್ತೆ ಎದುರಿಸುತ್ತಿದ್ದಾರೆ. ಕೋಲ್ಕೊತಾದ ಈಡನ್​ಗಾರ್ಡನ್ಸ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್​ ಪಂದ್ಯವನ್ನು ತಣ್ಣನೆ ಕುಳಿತು ನೋಡಲು ಅವರಿಗೆ ಸಾಧ್ಯವಾಗುತ್ತಿಲ್ಲ. ದಶ ದಿಕ್ಕುಗಳಿಂದ ಎದುರಾದ ಒತ್ತಡಕ್ಕೆ ಮಣಿದಿರುವ ಅವರು ಬಿಸಿಸಿಐನಲ್ಲಿ ತಮಗೆ ಸಿಕ್ಕಿರುವ ದೊಡ್ಡ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದಾರೆ. ಎರಡೆರಡು ಬಾರಿ ದೊರಕಿದ ಭಾರತ ಹಿರಿಯರ ಕ್ರಿಕೆಟ್​ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥ ಸ್ಥಾನ ಕೈಯಾರೆ ನಷ್ಟ ಮಾಡಿಕೊಂಡಿದ್ದಾರೆ. ಅವರ ಮಾತು ಮನೆ ಕೆಡಿಸಿದೆ. ಸುದ್ದಿ ಮಾಧ್ಯಮಗಳಲ್ಲೂ ಅವರದ್ದೇ ಸದ್ದು. ಪತ್ರಕರ್ತರಿಂದ ತಲೆ ಮರೆಸಿಕೊಂಡು ಹೋಗುತ್ತಿದ್ದಾರೆ.

ಇವೆಲ್ಲ ಸ್ವಯಂಕೃತ ಅಪರಾಧ ಎನ್ನುತ್ತಿದ್ದಾರೆ ಭಾರತೀಯ ಕ್ರಿಕೆಟ್​ ಪ್ರೇಮಿಗಳು. ಖಾಸಗಿ ಸುದ್ದಿ ಮಾಧ್ಯಮವೊಂದು ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ತಾವು ಅಧ್ಯಕ್ಷರಾಗಿದ್ದ ಬಿಸಿಸಿಐ ಆಯ್ಕೆ ಸಮಿತಿಯ ಒಳ ರಹಸ್ಯಗಳನ್ನು ಬಾಯ್ಬಿಟ್ಟಿದ್ದಾರೆ. ಯಾವುದನ್ನು ಯಾರ ಮುಂದೆ ಮಾತನಾಡಬಾರದಿತ್ತೋ ಅವರೆಲ್ಲನ್ನೂ ಬಡಬಡಾಯಿಸಿದ್ದಾರೆ. ಅವರು ಹೇಳಿದ್ದಲ್ಲವೂ ಸತ್ಯವೊ, ಸುಳ್ಳು ಎಂಬುದು ಗೊತ್ತಿಲ್ಲ. ಆದರೆ, ತಮ್ಮ ಹಾಗೂ ಬಿಸಿಸಿಐ ಮಾನವನ್ನು ಏಕ ಕಾಲಕ್ಕೆ ಹರಾಜು ಹಾಕಿದ್ದಾರೆ. ಜಾಗತಿಕ ಕ್ರಿಕೆಟ್​ನ ಅತ್ಯಂತ ಶ್ರೀಮಂತ ಸಂಸ್ಥೆಯಾಗಿರುವ ಬಿಸಿಸಿಐಗೆ ದೊಡ್ಡ ಡ್ಯಾಮೇಜ್​ ಮಾಡಿಟ್ಟಿದ್ದಾರೆ. ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್​ ಗಂಗೂಲಿ, ಮಾಜಿ ನಾಯಕ ವಿರಾಟ್​ ಕೊಹ್ಲಿ, ಸೀಮಿತ ಓವರ್​ಗಳ ತಂಡದ ಹಂಗಾಮಿ ನಾಯಕ ಹಾರ್ದಿಕ್​ ಪಾಂಡ್ಯ ಮತ್ತಿತರರಿಗೂ ಕಿರಿಕಿರಿ ಉಂಟು ಮಾಡಿದ್ದಾರೆ.

ಬಿಸಿಸಿಐ ಬಲಿಷ್ಠ ಸಂಸ್ಥೆ. ಸಣ್ಣ ಪುಟ್ಟ ತಪ್ಪುಗಳನ್ನೂ ಸಹಿಸಿಕೊಳ್ಳುವುದಿಲ್ಲ. ಭಾರತ ತಂಡದಲ್ಲಿ ಗುಂಪುಗಾರಿಕೆ, ಫಿಟ್ನೆಸ್​ಗಾಗಿ ಇಂಜೆಕ್ಷನ್, ಬಿಸಿಸಿಐ ಮುಖ್ಯಸ್ಥರಿಗೆ ಅಹಂ ಎಂದೆಲ್ಲ ಮಾತನಾಡಿದ ಚೇತನ್​ ಶರ್ಮಾ ಬಿಟ್ಟಿತೇ? ನಿರೀಕ್ಷೆಯಂತೆ ಅವರ ರಾಜೀನಾಮೆ ಕೇಳಿದೆ. ಕೋಲ್ಕೊತಾದಲ್ಲಿ ಆಯ್ಕೆ ಸಮಿತಿಯ ಸಹ ಸದಸ್ಯರ ಜತೆ ಕುಳಿತು ರಣಜಿ ಮ್ಯಾಚ್ ನೋಡುತ್ತಿದ್ದ ಅವರು ಅಲ್ಲಿಂದಲೇ ರಾಜೀನಾಮೆ ಪತ್ರ ಕಳುಹಿಸಿದ್ದಾರೆ.

#image_title

ಚೇತನ್​ ಶರ್ಮಾ ಉಂಟು ಮಾಡಿದ ವಿವಾದವೇನು?

ಕೆಲವು ದಿನಗಳ ಹಿಂದೆ ದೇಶದ ಪ್ರತಿಷ್ಠಿತ ಟಿವಿ ಮಾಧ್ಯಮವೊಂದು ವಿಶೇಷ ವರದಿ ಮಾಡಿತು. ಭಾರತ ಕ್ರಿಕೆಟ್​ ತಂಡದಲ್ಲಿ ಎಲ್ಲವೂ ಸರಿಯಿಲ್ಲ. ವಿರಾಟ್​ ಕೊಹ್ಲಿ ಮತ್ತು ರೋಹಿತ್​ ಶರ್ಮ ಎಂಬ ಎರಡು ಬಣಗಳಿವೆ. ಮಾಜಿ ನಾಯಕ ಸೌರವ್​ ಗಂಗೂಲಿ ಹಾಗೂ ವಿರಾಟ್​ ಕೊಹ್ಲಿಯ ನಡುವೆ ಅಹಂ ಸಮಸ್ಯೆ ಇತ್ತು. ದೈಹಿಕವಾಗಿ ಫಿಟ್​ ಆಗಿರದ ಜಸ್​ಪ್ರಿತ್​ ಬುಮ್ರಾ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲು ಬಿಸಿಸಿಐ ಯತ್ನಿಸುತ್ತಿದೆ. ಈ ವಿಚಾರದಲ್ಲಿ ಆಯ್ಕೆ ಸಮಿತಿಯ ಜತೆ ಚರ್ಚೆಯೇ ನಡೆಸುವುದಿಲ್ಲ. ಫಿಟ್ನೆಸ್​ಗಾಗಿ ಆಟಗಾರರು ಇಂಜೆಕ್ಷನ್​ ತೆಗೆದುಕೊಳ್ಳುತ್ತಾರೆ. ಟಿ20 ತಂಡಕ್ಕೆ ಇನ್ನು ಮುಂದೆ ಪಾಂಡ್ಯ ನಾಯಕ. ಅವರು ಆಗಾಗ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್​ ಶರ್ಮಾ ಮನೆಗೆ ಹೋಗಿ ಪ್ರಭಾವ ಬೀರುತ್ತಾರೆ. ವಿರಾಟ್​ ಕೊಹ್ಲಿ ಹಾಗೂ ರೋಹಿತ್ ಶರ್ಮ ಜೋಡಿಗೆ ಟಿ20 ತಂಡದಲ್ಲಿ ಚಾನ್ಸ್​ ಸಿಗುವುದಿಲ್ಲ ಎಂದು ಎಳೆಎಳೆಯಾಗಿ ವಿವರಣೆ ಕೊಟ್ಟಿತ್ತು.

ಇದನ್ನೂ ಓದಿ : ವಾರದ ವ್ಯಕ್ತಿಚಿತ್ರ: ಅದಾನಿ ಷೇರು ಕುಸಿತಕ್ಕೆ ಕಾರಣವಾದ ಹಿಂಡೆನ್‌ಬರ್ಗ್‌ ಸ್ಥಾಪಕ ನಾಥನ್ ಆ್ಯಂಡರ್ಸನ್‌ ಯಾರು?

ಸುದ್ದಿಗೆ ಮೂಲ ಎಲ್ಲಿ ಎಂದು ಹುಡುಕಿದಾಗಲೇ ಗೊತ್ತಾಗಿದ್ದು. ಇಷ್ಟೆಲ್ಲವನ್ನೂ ಹೇಳಿದ್ದು ಆಯ್ಕೆ ಸಮಿತಿಯ ಮುಖ್ಯಸ್ಥ ಚೇತನ್​ ಶರ್ಮಾ. ಸುದ್ದಿ ಮಾಧ್ಯಮ ರಹಸ್ಯ ಕ್ಯಾಮೆರಾದೊಂದಿಗೆ ಚೇತನ್ ಜತೆ ಮಾತನಾಡಿದಾಗ ಅಷ್ಟೊಂದು ಗುಟ್ಟುಗಳನ್ನು ಅರಿವಿಲ್ಲದೇ ಬಿಟ್ಟುಕೊಟ್ಟಿದ್ದರು. ಸ್ವತಃ ಚೇತನ್​ ಶರ್ಮಾ ಇದನ್ನು ನಿರೀಕ್ಷಿಸಿರಲಿಲ್ಲ. ಬಿಸಿಸಿಐ ಅಧಿಕಾರಿಗಳು ಉತ್ತರಿಸದಾದರೂ. ಅಂತೂ ಚೇತನ್​ ಶರ್ಮಾ ಅವರು ತಾವು ವಹಿಸಿರುವ ಹುದ್ದೆಯ ಬಗ್ಗೆ ಅನಗತ್ಯ ಮಾತುಗಳನ್ನಾಡಿ ಇಕ್ಕಟ್ಟಿಗೆ ಸಿಲುಕಿದರು. ರಾಜೀನಾಮೆ ಅನಿವಾರ್ಯವಾಯಿತು.

ಪಾಲಿಗೆ ಬಂದದ್ದನ್ನು ಕೈಯಾರೆ ಕಳೆದುಕೊಂಡ ಚೇತನ್​

ಚೇತನ್​ ಶರ್ಮಾ ಬಿಸಿಸಿಐ ಹಾಗೂ ಕ್ರಿಕೆಟ್​ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದು ಇದೇ ಮೊದಲೇನಲ್ಲ. ಕಳೆದ ವರ್ಷ ನಡೆದ ಏಷ್ಯಾ ಕಪ್​ ಕ್ರಿಕೆಟ್​ ಟೂರ್ನಿ ಹಾಗೂ ಟಿ20 ವಿಶ್ವ ಕಪ್​ನಲ್ಲಿ ಭಾರತ ತಂಡ ಕಳಪೆ ಪ್ರದರ್ಶನ ನೀಡಿದಾಗಲೂ ಅವರು ಟೀಕೆಗಳನ್ನು ಎದುರಿಸಿದ್ದರು. ಬಲಿಷ್ಠ ತಂಡವನ್ನು ಆಯ್ಕೆ ಮಾಡಲು ಚೇತನ್​ ಎಡವಿದ್ದಾರೆ ಎಂಬ ಆರೋಪಗಳು ಕೇಳಿ ಬಂದವು. ಅವರ ನೇತೃತ್ವದ ಆಯ್ಕೆ ಸಮಿತಿಯನ್ನು ಬಿಸಿಸಿಐ ಬರ್ಖಾಸ್ತು ಮಾಡಿತು. ಕೆಲವು ದಿನಗಳ ಬಳಿಕ ಅವರಿಂದ ಭರವಸೆ ಪಡೆದು ಮತ್ತದೇ ಸ್ಥಾನ ಕಲ್ಪಿಸಿಕೊಡಲಾಗಿತ್ತು. ಹಾಗೆ ಮತ್ತೆ ಸಿಕ್ಕಿದ ಅವಕಾಶ ಬಳಸಿಕೊಳ್ಳುವಲ್ಲಿ ಚೇತನ್​ ಶರ್ಮಾ ವಿಫಲಗೊಂಡಿದ್ದಾರೆ. ಮತ್ತೊಂದು ವಿವಾದ ಸೃಷ್ಟಿಸಿ ಹೊರನಡೆದಿದ್ದಾರೆ.

ವಿರಾಟ್​ ಕೊಹ್ಲಿಯಿಂದ ಏಕ ದಿನ ತಂಡದ ನಾಯಕತ್ವವನ್ನು ಬಿಸಿಸಿಐ ಕಸಿದುಕೊಂಡಾಗಲೂ ಚೇತನ್​ ಶರ್ಮಾ ಹೆಸರು ಮುನ್ನೆಲೆಗೆ ಬಂದಿತ್ತು. 2021ರಲ್ಲಿ ನಡೆದ ಟಿ20 ವಿಶ್ವ ಕಪ್​ನಲ್ಲಿ ಭಾರತ ತಂಡ ಕಪ್​ ಗೆಲ್ಲದೇ ಹೋದಾಗ ನಾಯಕರಾಗಿದ್ದ ವಿರಾಟ್​ ಕೊಹ್ಲಿ ತಮ್ಮ ಜವಾಬ್ದಾರಿಗೆ ಗುಡ್​ಬೈ ಹೇಳಿದ್ದರು. ಆದರೆ, ಅವರು ಏಕ ದಿನ ಹಾಗೂ ಟೆಸ್ಟ್​ ತಂಡದ ನಾಯಕರಾಗಿ ಮುಂದುವರಿಯುವ ಇರಾದೆ ವ್ಯಕ್ತಪಡಿಸಿದ್ದರು. ಏತನ್ಮಧ್ಯೆ, ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದಾಗ, ಚೇತನ್​ ಶರ್ಮಾ ನೇತೃತ್ವದ ಆಯ್ಕೆ ಸಮಿತಿ ಕೊಹ್ಲಿಗೆ ವಿಡಿಯೊ ಕಾನ್ಫರೆನ್ಸ್ ನಡೆಸಿ ಏಕ ದಿನ ತಂಡದಿಂದ ನಾಯಕತ್ವದಿಂದ ಕೆಳಕ್ಕೆ ಇಳಿಸುವುದಾಗಿ ಸೂಚಿಸಿತ್ತು. ಕೋಪಗೊಂಡ ವಿರಾಟ್​, ಪತ್ರಿಕಾಗೋಷ್ಠಿ ಕರೆದು ಅಸಮಾಧಾನ ವ್ಯಕ್ತಪಡಿಸಿದ್ದರು. ಕೊಹ್ಲಿಗೆ ಹಾನಿ ಉಂಟು ಮಾಡಲು ಗಂಗೂಲಿ ಯತ್ನಿಸಿದರು ಎಂಬ ಮಾತುಗಳೂ ಕೇಳಿಬಂದವು. ಬಳಿಕ ವಿರಾಟ್​ ಟೆಸ್ಟ್​ ತಂಡಕ್ಕೂ ರಾಜೀನಾಮೆ ಕೊಟ್ಟರು. ಅದಾದ ಬಳಿಕ ಚೇತನ್​ ಶರ್ಮಾ ಹಾಗೂ ಗಂಗೂಲಿ ಸೇರಿಕೊಂಡು ವಿರಾಟ್​ ಕೆರಿಯರ್​ ಹಾಳು ಮಾಡಿದರು ಎಂದು ಕೊಹ್ಲಿಯ ಅಭಿಮಾನಿಗಳು ದೂರಿದರು.

ಇದನ್ನೂ ಓದಿ: ವಾರದ ವ್ಯಕ್ತಿ ಚಿತ್ರ | Nitin Gadkari | ರಸ್ತೆ ಕ್ರಾಂತಿಯ ರೂವಾರಿ ನಿತಿನ್‌ ಗಡ್ಕರಿ, ಅವರು ನಡೆದದ್ದೇ ಹೆದ್ದಾರಿ!

ಕೊಹ್ಲಿಯಿಂದ ನಾಯಕತ್ವ ವಾಪಸ್​ ಪಡೆಯಲು ನಾನೇ ಕಾರಣ ಎಂಬ ಮಾತು ಕುಟುಕು ಕಾರ್ಯಾಚರಣೆಯಲ್ಲಿ ದಾಖಲಾಗಿದೆ. ಕೊಹ್ಲಿಯನ್ನು ಯಾವುದೇ ಮಾದರಿಯ ತಂಡದ ನಾಯಕತ್ವದಿಂದ ಕೆಳಕ್ಕಿಳಿಸುವ ಯೋಚನೆ ಗಂಗೂಲಿಗೆ ಇರಲಿಲ್ಲ ಎಂದೂ ಚೇತನ್​ ಶರ್ಮಾ ಹೇಳಿದ್ದಾರೆ.

ಯಾರಿವರು ಚೇತನ್​ ಶರ್ಮಾ?

#image_title

ಪಂಜಾಬ್​ ಮೂಲದ ಚೇತನ್​ ಶರ್ಮಾ 1966 ಜನವರಿ 3ರಂದು ಜನಿಸಿದ್ದಾರೆ. ಲೂಧಿಯಾನ ಮೂಲದ ಈ ಕ್ರಿಕೆಟಿಗ, ಕಪಿಲ್​ ದೇವ್​ ಅವರ ಬಳಿಕ ಭಾರತ ತಂಡದಲ್ಲಿ ಆಡಿದ ಅತ್ಯುತ್ತಮ ಆಲ್​ರೌಂಡರ್​ ಎನಿಕೊಂಡಿದ್ದರು. ಪಂಜಾಬ್​ ತಂಡದ ಮೂಲಕ ದೇಶೀಯ ಕ್ರಿಕೆಟ್​ಗೆ ಎಂಟ್ರಿ ಪಡೆದಿದ್ದರು. 1984ರಿಂದ 1994ರ ತನಕ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡವರು. ಈ ಅವಧಿಯಲ್ಲಿ 23 ಟೆಸ್ಟ್​ ಹಾಗೂ 65 ಏಕ ದಿನ ಪಂದ್ಯಗಳಲ್ಲಿ ಪಾಲ್ಗೊಂಡು ಅನುಕ್ರಮವಾಗಿ 61 ಹಾಗೂ 67 ವಿಕೆಟ್​ಗಳು ಮತ್ತು 396 ಮತ್ತು 456 ರನ್​ ಬಾರಿಸಿದ್ದರು.

ವೆಸ್ಟ್​ ಇಂಡೀಸ್​ ವಿರುದ್ದ 1983 ಡಿಸೆಂಬರ್​ 7ರಂದು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಆಗ ಅವರಿಗೆ 17 ವರ್ಷ. 1984ರಲ್ಲಿ ಪಾಕಿಸ್ತಾನ ತಂಡ ವಿರುದ್ದ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದ್ದ ಅವರು ಮೊದಲ ಓವರ್​ನಲ್ಲಿಯೇ ವಿಕೆಟ್​ ಕಬಳಿಸಿ, ಈ ಸಾಧನೆ ಮಾಡಿರುವ ಭಾರತದ ಮೂರನೇ ಬೌಲರ್​ ಎನಿಸಿಕೊಂಡಿದ್ದರು. ಅದಕ್ಕಿಂತ ಹೆಚ್ಚಾಗಿ 1987ರಲ್ಲಿ ನ್ಯೂಜಿಲ್ಯಾಂಡ್​ನಲ್ಲಿ ನಡೆದ ರಿಲಯನ್ಸ್​ ವಿಶ್ವ ಕಪ್​ನ ನ್ಯೂಜಿಲ್ಯಾಂಡ್​ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್​ ವಿಕೆಟ್​ ಸಾಧನೆ ಮಾಡಿದ್ದರು. ಈ ಮೂಲಕ ಅವರು ವಿಶ್ವ ಕಪ್​ನಲ್ಲಿ ಹ್ಯಾಟ್ರಿಕ್​ ಸಾಧನೆ ಮಾಡಿದ ಮೊದಲ ಬೌಲರ್​ ಎಂಬ ಖ್ಯಾತಿ ಗಿಟ್ಟಿಸಿಕೊಂಡಿದ್ದರು. ಇಂಗ್ಲೆಂಡ್​ನ ಬರ್ಮಿಂಗ್ಹಮ್​ನಲ್ಲಿ 1986ರಲ್ಲಿ ನಡೆದ ಟೆಸ್ಟ್​ ಸರಣಿಯ ಪಂದ್ಯವೊಂದರಲ್ಲಿ 10 ವಿಕೆಟ್​ ಕಬಳಿಸಿದ್ದರು. ಇಂಗ್ಲೆಂಡ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಭಾರತೀಯ ಚೇತನ್​ ಶರ್ಮಾ. ಲಂಡನ್​ನ ಲಾರ್ಡ್ಸ್​ ಕ್ರಿಕೆಟ್​ ಸ್ಟೇಡಿಯಮ್​ನ ಹಾಲ್​ ಆಫ್ ಫೇಮ್​ನಲ್ಲಿ ಚೇತನ್​ ಅವರ ಹೆಸರಿದೆ. ಆ ವೇಳೆ ಅವರಿಗೆ ಕೇವಲ 20 ವರ್ಷ. ಆರಂಭದಲ್ಲಿ ಉತ್ತಮ ಬೌಲಿಂಗ್ ಸಾಧನೆ ತೋರಿದ್ದರೂ ಬಳಿಕ ಗಾಯದ ಸಮಸ್ಯೆಯ ಸುಳಿಗೆ ಬಿದ್ದು ಪ್ರದರ್ಶನ ವೈಫಲ್ಯ ಎದುರಿಸಿ ಅವಕಾಶಗಳನ್ನು ಕಳೆದುಕೊಂಡರು.

ಇದನ್ನೂ ಓದಿ : ವಾರದ ವ್ಯಕ್ತಿಚಿತ್ರ: ಮದ್ರಾಸ್ ಹೈಕೋರ್ಟ್‌ ಜಡ್ಜ್ ಗೌರಿ; ಹೋರಾಟವೇ ಇವರ ಹಾದಿ

ರಾಜಕೀಯ ಆಟ

ನಿವೃತ್ತಿಯ ಬಳಿಕ ಚೇತನ್​ ಶರ್ಮಾ ಅವರು ಕ್ರಿಕೆಟ್​ ಕಾಮೆಂಟೇಟರ್ ಆಗಿ ಕಾರ್ಯನಿರ್ವಹಿಸಿದ್ದರು. ಜತೆಗೆ 2004ರಲ್ಲಿ ಪಂಚಕುಲಾದಲ್ಲಿ ವೇಗದ ಬೌಲಿಂಗ್ ಅಕಾಡೆಮಿ ಆರಂಭಿಸಿದ್ದು, ಅದು 2009ಕ್ಕೆ ಮುಚ್ಚಿ ಹೋಯಿತು. ಏತನ್ಮಧ್ಯೆ 2009ರಲ್ಲಿ ಅವರು ಬಿಎಸ್​ಪಿ ಮೂಲಕ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಮೂರನೇ ಸ್ಥಾನ ಪಡೆದುಕೊಂಡರು. ಆ ಸೋಲಿನ ಬಳಿಕ ಬಿಜೆಪಿ ಸೇರಿಕೊಂಡರು.

Exit mobile version