ನವದೆಹಲಿ: ಭಾರತ ಪುರುಷರ ಹಾಕಿ ತಂಡಕ್ಕೆ ನೂತನ ಮುಖ್ಯ ಕೋಚ್ ಆಗಿ ಕ್ರೇಗ್ ಫುಲ್ಟನ್(Craig Fulton) ಅವರನ್ನು ನೇಮಕ ಮಾಡಲಾಗಿದೆ ಎಂದು ಹಾಕಿ ಇಂಡಿಯಾ(Hockey India) ಶುಕ್ರವಾರ(ಮಾರ್ಚ್ 3) ಪ್ರಕಟಿಸಿದೆ. ಮಾ.10ರಿಂದ ಆರಂಭವಾಗಲಿರುವ ಎಫ್‌ಐಎಚ್ ಹಾಕಿ ಪ್ರೊ ಲೀಗ್ ಮೂಲಕ ಫುಲ್ಟನ್ ಕೋಚಿಂಗ್ ಕಾರ್ಯ ಆರಂಭಿಸುವ ಸಾಧ್ಯತೆ ಇದೆ.
ಹಾಕಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಆತಿಥೇಯ ಭಾರತ ತಂಡ ತೀರಾ ಕಳಪೆ ಪ್ರದರ್ಶನ ನೀಡಿದ ಬೆನ್ನಲ್ಲೇ ಕೋಚ್ ಗ್ರಹಾಂ ರೀಡ್(Graham Reid) ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಇದಾದ ಬಳಿಕ ಹಾಕಿ ಇಂಡಿಯಾ ಕೋಚ್ ಹುಡುಕಾಟದಲ್ಲಿತ್ತು. ಇದೀಗ 48 ವರ್ಷದ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಕ್ರೇಗ್ ಫುಲ್ಟನ್ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ.
ಸುಮಾರು 25 ವರ್ಷಗಳ ಕೋಚಿಂಗ್ ಅನುಭವ ಹೊಂದಿರುವ ಫುಲ್ಟನ್ 2014 ರಿಂದ 2018 ರವರೆಗೆ ಐರ್ಲೆಂಡ್ ಪುರುಷರ ತಂಡದ ಕೋಚ್ ಆಗಿ ಕರ್ತವ್ಯ ನಿರ್ವಹಿದ್ದರು. ಇವರ ನೇತೃತ್ವದಲ್ಲಿ ಐರ್ಲೆಂಡ್ ತಂಡ 2016 ರಿಯೋ ಒಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿತ್ತು. ಫುಲ್ಟನ್ 2015ರಲ್ಲಿ ವರ್ಷದ ಎಫ್‌ಐಎಚ್ ತರಬೇತುದಾರ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಹಾಲಿ ಒಲಿಂಪಿಕ್ ಚಾಂಪಿಯನ್ ಬೆಲ್ಜಿಯಂ ತಂಡದ ಸಹಾಯಕ ತರಬೇತುದಾರರಾಗಿ ಕೆಲಸ ಮಾಡಿದ್ದಾರೆ. ಭುವನೇಶ್ವರದಲ್ಲಿ 2018ರಲ್ಲಿ ಬೆಲ್ಜಿಯಂ ವಿಶ್ವಕಪ್ ಜಯಿಸಿದ ವೇಳೆ ಫುಲ್ಟನ್ ಕೋಚಿಂಗ್ ತಂಡದಲ್ಲಿದ್ದರು. ಇದೀಗ ಭಾರತ ಹಾಕಿ ತಂಡಕ್ಕೆ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತದ ಪುರುಷರ ಹಾಕಿ ತಂಡ ಇವರ ಮಾರ್ಗದರ್ಶನದಲ್ಲಿ ಆಡಲಿದೆ.
ಗ್ರಹಾಂ ರೀಡ್ ಅವರ ಮಾರ್ಗದರ್ಶನದಲ್ಲಿ ಪುರುಷರ ಹಾಕಿ ತಂಡ ಟೋಕಿಯೊ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಜಯಿಸಿತ್ತು. ಇದೀಗ ಫುಲ್ಟನ್ ಅವರ ನೇತೃತ್ವದಲ್ಲಿ 2024ರಲ್ಲಿ ನಡೆಯುವ ಪ್ಯಾರಿಸ್ ಒಲಿಂಪಿಕ್ನಲ್ಲಿ ಭಾರತ ಹೇಗೆ ಪ್ರದರ್ಶನ ತೋರಲಿದೆ ಎಂದು ಕಾದು ನೋಡಬೇಕಿದೆ.