Site icon Vistara News

Asia Cup | ಎರಡನೇ ಪಂದ್ಯದಲ್ಲಿ ಭಾರತಕ್ಕೆ ಹಾಂಕಾಂಗ್‌ ಸವಾಲು, ಪ್ರಯೋಗವೇ ಟೀಮ್ ಇಂಡಿಯಾ ಗುರಿ

Asi Cup

ದುಬೈ : ಏಷ್ಯಾ ಕಪ್‌ನಲ್ಲಿ ಬುಧವಾರ ಎ ಗುಂಪಿನ ತಂಡಗಳಾದ ಭಾರತ ಹಾಗೂ ಹಾಂಕಾಂಗ್‌ ತಂಡಗಳು ಸೆಣಸಾಡಲಿವೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿ ವಿಶ್ವಾಸದಲ್ಲಿರುವ ಭಾರತ ತಂಡಕ್ಕೆ ಇದು ಸಣ್ಣ ಸವಾಲಾಗಿರುವ ಕಾರಣ, ನಾನಾ ರೀತಿಯ ಪ್ರಯೋಗಗಳಿಗೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್‌ ಮುಂದಾಗಲಿದೆ. ಹಾಂಕಾಂಗ್‌ ತಂಡ ಅರ್ಹತಾ ಸುತ್ತಿನ ಮೂಲಕ ಪ್ರವೇಶ ಪಡೆದುಕೊಂಡಿದ್ದು, ಮೊದಲ ಪಂದ್ಯದಲ್ಲೇ ಬಲಿಷ್ಠ ಭಾರತವನ್ನು ಎದುರಿಸುವ ಮೂಲಕ ಹೊಸ ಟ್ರೋಫಿಯ ಅಭಿಯಾನ ಆರಂಭಿಸಲಿದೆ.

ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಬಳಗವನ್ನು ಸೋಲಿಸಿರುವ ಭಾರತ ಎ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ. ಹೀಗಾಗಿ ಹಾಂಕಾಂಗ್‌ ವಿರುದ್ಧ ಗೆದ್ದರೆ ಸೂಪರ್‌ ೪ ಹಂತಕ್ಕೆ ಪ್ರವೇಶ ಪಡೆಯಲಿದೆ. ಭಾರತ ಹಾಗೂ ಪಾಕಿಸ್ತಾನ ಮೂಲದ ಆಟಗಾರರೇ ಹೆಚ್ಚಿರುವ ಹಾಂಕಾಂಗ್‌ ತಂಡ ಇದೇ ಮೊದಲ ಬಾರಿಗೆ ಟಿ೨೦ ಮಾದರಿಯಲ್ಲಿ ಭಾರತಕ್ಕೆ ಎದುರಾಗುತ್ತಿದೆ. ಹೀಗಾಗಿ ಬಲಿಷ್ಠ ಭಾರತಕ್ಕೆ ಸುಲಭ ತುತ್ತಾಗುವ ಎಲ್ಲ ಸಾಧ್ಯತೆಗಳಿವೆ.

ಭಾರತ ಹಾಗೂ ಹಾಂಕಾಂಗ್‌ ತಂಡ ಈ ಹಿಂದೆ ಎರಡು ಬಾರಿ ಏಕ ದಿನ ಪಂದ್ಯಗಳಲ್ಲಿ ಮುಖಾಮುಖಿಯಾತ್ತು. ಎರಡೂ ಏಷ್ಯಾ ಕಪ್‌ನ ಪಂದ್ಯಗಳು. ಎರಡೂ ಪಂದ್ಯಗಳಲ್ಲಿ ಭಾರತ ಸುಲಭ ಜಯ ದಾಖಲಿಸಿತ್ತು. ಹೀಗಾಗಿ ಈ ಬಾರಿಯೂ ಭಾರತಕ್ಕೆ ಸುಲಭ ಜಯ ದೊರಕುವ ಸಾಧ್ಯತೆಗಳಿವೆ.

ಪ್ರಯೋಗ ಸಾಧ್ಯತೆ

ಭಾರತ ತಂಡದಲ್ಲಿ ನಿರಂತರ ಪ್ರಯೋಗಗಳು ನಡೆಯಲಿವೆ ಎಂದು ಟೀಮ್ ಇಂಡಿಯಾ ನಾಯಕ ರೋಹಿತ್‌ ಶರ್ಮ ಹಿಂದಯೇ ಹೇಳಿದ್ದರು. ಅಂತೆಯೇ ಮುಂದಿನ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ೨೦ ವಿಶ್ವ ಕಪ್‌ಗೆ ಸಜ್ಜಾಗುತ್ತಿರುವ ಟೀಮ್ ಇಂಡಿಯಾ ಈಗಾಗಲೇ ನಾನಾ ಆಟಗಾರರ ಸಾಮರ್ಥ್ಯ ಪರೀಕ್ಷೆ ಮಾಡುತ್ತಿದೆ. ಅಂತೆಯೇ ಹಾಂಕಾಂಗ್‌ ವಿರುದ್ಧದ ಪಂದ್ಯದಲ್ಲಿಯೂ ಅದು ಮುಂದುವರಿಯಬಹುದು.

ಹಾಂಕಾಂಗ್‌ ತಂಡದ ಬೌಲಿಂಗ್ ಗುಣಮಟ್ಟ ಉತ್ತಮವಾಗಿಲ್ಲದ ಹೊರತಾಗಿಯೂ ಅನಿರೀಕ್ಷಿತ ಆಘಾತವನ್ನು ಅಲ್ಲಗೆಳೆಯುವಂತಿಲ್ಲ. ಯಾಕೆಂದರೆ ಮೊದಲ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್‌ ವಿಭಾಗ ಪಾಕಿಸ್ತಾನದ ವೇಗಿಗಳಿಗೆ ನಲುಗಿತ್ತಾದರೂ, ಅಂತಿಮ ಹಂತದಲ್ಲಿ ಸೋಲಿನಿಂದ ಪಾರಾಗಿತ್ತು. ಹೀಗಾಗಿ ಹಿಂದಿನ ಪಂದ್ಯದಲ್ಲಿ ವೈಫಲ್ಯ ಕಂಡ ಆಟಗಾರರು ಹಾಂಕಾಂಗ್ ವಿರುದ್ಧ ಗುಡುಗಬೇಕಾಗಿದೆ.

ಸಂಭಾವ್ಯ ತಂಡಗಳು

ಭಾರತ: ರೋಹಿತ್‌ ಶರ್ಮಾ (ನಾಯಕ), ಕೆ.ಎಲ್‌ ರಾಹುಲ್‌ , ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌, ರವೀಂದ್ರ ಜಡೇಜಾ, ಹಾರ್ದಿಕ್‌ ಪಾಂಡ್ಯ, ದಿನೇಶ್‌ ಕಾರ್ತಿಕ್‌ , ಭುವನೇಶ್ವರ್‌ ಕುಮಾರ್‌, ಅವೇಶ್‌ ಖಾನ್‌ , ಯಜ್ವೇಂದ್ರ ಚಹಲ್‌, ಅರ್ಷದೀಪ್‌ ಸಿಂಗ್‌ (ಎಡಗೈ ವೇಗಿ)

ಹಾಂಕಾಂಗ್‌ : ಯಾಸಿಮ್‌ ಮುರ್ತಾಝ, ನಿಝಾಕತ್‌ ಖಾನ್‌ (ನಾಯಕ), ಬಾಬರ್‌ ಹಯಾತ್‌, ಕಿಂಚಿತ್‌ ಶಾ, ಏಜಾಝ್‌ ಖಾನ್‌, ಸ್ಕಾಟ್‌ ಮೆಕೇಶಿ, ಝೀಶಾನ್ ಅಲಿ, ಹರೂನ್‌ ಅರ್ಷದ್‌, ಎಹ್ಸಾನ್‌ ಖಾನ್‌, ಮೊಹಮ್ಮದ್‌ ಗಹ್ಜಾನ್ಫರ್‌, ಆಯುಶ್‌ ಶುಕ್ಲಾ.

ಪಂದ್ಯದ ವಿವರ

ಸ್ಥಳ: ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣ

ನೇರ ಪ್ರಸಾರ: ರಾತ್ರಿ 7:30ಕ್ಕೆ (ಭಾರತೀಯ ಕಾಲಮಾನ)

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ನೆಟ್ವರ್ಕ್‌

ಲೈವ್‌ ಸ್ಟ್ರೀಮಿಂಗ್‌: ಡಿಸ್ನಿ ಪ್ಲಸ್‌ ಹಾಟ್‌ ಸ್ಟಾರ್‌

Exit mobile version