ಮುಂಬಯಿ : ಆರಂಭಿಕ ಬ್ಯಾಟರ್ಗಳು ವೈಫಲ್ಯ ಎದುರಿಸಿದ ಹೊರತಾಗಿಯೂ ಕೊನೆಯಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸಿದ ಭಾರತ ತಂಡ ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸಿದೆ. ಟಾಸ್ ಸೋತು ಬ್ಯಾಟಿಂಗ್ಗೆ ಆಹ್ವಾನ ಪಡೆದ ಭಾರತ ತಂಡ ನಿಗದಿತ 20 ಓವರ್ಗಳಲ್ಲಿ ಐದು ವಿಕೆಟ್ಗೆ 162 ರನ್ ಕಲೆ ಹಾಕಿದೆ.
ಮುಂಬಯಿಯ ವಾಂಖೆಡೆ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಮಂಗಳವಾರ ರಾತ್ರಿ ನಡೆದ ಹಣಾಹಣಿಯಲ್ಲಿ ಲಂಕಾ ತಂಡದ ನಾಯಕ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ತಮ್ಮ ಯೋಜನೆಗೆ ತಕ್ಕಂತೆ ಭಾರತದ ಬ್ಯಾಟರ್ಗಳಿಗೆ ಕಡಿವಾಣ ಹಾಕಿದರು. ಆದರೆ, ಕೊನೇ ಹಂತದಲ್ಲಿ ಅಕ್ಷರ್ ಪಟೇಲ್ (31) ಹಾಗೂ ದೀಪಕ್ ಹೂಡಾ ((41)) ಸಿಡಿದೆದ್ದರು.
ಆರಂಭಿಕರಾಗಿ ಬ್ಯಾಟ್ ಮಾಡಲು ಇಳಿದ ಇಶಾನ್ ಕಿಶನ್ 37 ರನ್ ಬಾರಿಸಿ ಉತ್ತಮ ಆರಂಭ ಒದಗಿಸಲು ಯತ್ನಿಸಿದರು. ಅದರೆ, ಪದಾರ್ಪಣೆ ಪಂದ್ಯದಲ್ಲಿ ಶುಬ್ಮನ್ ಗಿಲ್ (7) ವೈಫಲ್ಯ ಕಂಡರು. ಸೂರ್ಯಕುಮಾರ್ ಯಾದವ್ (7) ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಆಡುವ 11ರ ಬಳಗದಲ್ಲಿ ಅವಕಾಶ ಪಡೆದ ಸಂಜು ಸ್ಯಾಮ್ಸನ್ ಒಂದು ಜೀವದಾನ ಪಡೆದ ಹೊರತಾಗಿಯೂ 5 ರನ್ಗಳಿಗೆ ಸೀಮಿತಗೊಂಡರು.
ನಾಯಕ ಹಾರ್ದಿಕ್ ಪಾಂಡ್ಯ 29 ರನ್ ಬಾರಿಸಿ ಭರವಸೆ ಮೂಡಿಸಿದರೂ ದೊಡ್ಡ ಸ್ಕೋರ್ ಬಾರಿಸಲು ಅವರಿಗೆ ಸಾಧ್ಯವಾಗಲಿಲ್ಲ. ಕೊನೆಯಲ್ಲಿ ದೀಪಕ್ ಹೂಡ ಹಾಗೂ ಅಕ್ಷರ್ ಪಟೇಲ್ ಅರ್ಧ ಶತಕದ ಜತೆಯಾಟ ನೀಡಿ ಮಿಂಚಿದರು.
ಇದನ್ನೂ ಓದಿ | INDvsSL | ಮೊದಲ ಟಿ20 ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡಕ್ಕೆ ಬ್ಯಾಟಿಂಗ್ಗೆ ಆಹ್ವಾನ