Site icon Vistara News

Asia Cup | ಪಾಕಿಸ್ತಾನ ತಂಡವನ್ನು ಮಣಿಸಿದ ಆತಿಥೇಯ ಶ್ರೀಲಂಕಾ ತಂಡಕ್ಕೆ ಏಷ್ಯಾ ಕಪ್‌ ಚಾಂಪಿಯನ್‌ ಪಟ್ಟ

asia cu[

ದುಬೈ : ಆತಿಥೇಯ ಶ್ರೀಲಂಕಾ ತಂಡ ಏಷ್ಯಾ ಕಪ್ ೨೦೨೨ನೇ ಆವೃತ್ತಿಯ ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ ಭಾನುಕಾ ರಾಜಪಕ್ಸ (೭೧*) ಅವರ ಸ್ಫೋಟಕ ಅರ್ಧ ಶತಕ ಹಾಗೂ ಬೌಲರ್‌ಗಳಾದ ಪ್ರಮೋದ್ ಮದುಶನ್‌ (೩೪ ರನ್‌ಗಳಿಗೆ ೪ ವಿಕೆಟ್‌), ವಾನಿಂದು ಹಸರಂಗ (೨೭ ರನ್‌ಗಳಿಗೆ ೩ ವಿಕೆಟ್‌) ಮಾರಕ ದಾಳಿಯ ನೆರವಿನೊಂದಿಗೆ ಮಿಂಚಿದ ಲಂಕಾ ಪಡೆ, ಎದುರಾಳಿ ಪಾಕಿಸ್ತಾನ ತಂಡವನ್ನು ೨3 ರನ್‌ಗಳಿಂದ ಮಣಿಸಿ ಟ್ರೋಫಿ ಗೆದ್ದುಕೊಂಡಿತು. ಶ್ರೀಲಂಕಾ ಪಾಲಿಗೆ ೧೫ ಆವೃತ್ತಿಗಳಲ್ಲಿ ಇದು ಆರನೇ ಟ್ರೋಫಿಯಾಗಿದ್ದು, ಎರಡನೇ ಯಶಸ್ವಿ ತಂಡ ಎನಿಸಿಕೊಂಡಿದೆ. ಭಾರತ ತಂಡ ಏಳು ಬಾರಿ ಪ್ರಶಸ್ತಿ ಗೆದ್ದುಕೊಂಡಿದ್ದು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಪಾಕಿಸ್ತಾನ ತಂಡದ ನಾಯಕ ಬಾಬರ್‌ ಅಜಮ್‌ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟ್‌ ಮಾಡಿದ ಶ್ರೀಲಂಕಾ ತಂಡ ಆರಂಭಿಕ ಕುಸಿತದ ಹೊರತಾಗಿಯೂ ನಿಗದಿತ ೨೦ ಓವರ್‌ಗಳಲ್ಲಿ ೬ ವಿಕೆಟ್‌ ನಷ್ಟಕ್ಕೆ ೧೭೦ ರನ್ ಬಾರಿಸಿತು. ದೊಡ್ಡ ಮೊತ್ತದ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡ ೨0 ಓವರ್‌ಗಳಲ್ಲಿ ೧೪೭ ರನ್‌ಗಳಿಗೆ ಸರ್ವಪತನಗೊಂಡು ಸೋಲೊಪ್ಪಿಕೊಂಡಿತು.

ಪಾಕಿಸ್ತಾನ ಪರ ಮೊಹಮ್ಮದ್‌ ರಿಜ್ವಾನ್‌ (೫೫) ಅರ್ಧ ಶತಕ ಬಾರಿಸಿದರೆ, ಇಫ್ತಿಕಾರ್‌ ಅಹಮದ್‌ (೩೨) ತಂಡವನ್ನು ಕಾಪಾಡುವ ಯತ್ನ ನಡೆಸಿದರು. ಆದರೆ, ಉಳಿದವರಿಂದ ಸೂಕ್ತ ಬೆಂಬಲ ಅವರಿಗೆ ದೊರಕಲಿಲ್ಲ. ಲಂಕಾ ಬೌಲರ್‌ಗಳಾದ ರಮೋದ್ ಮದುಶನ್‌ ೩೪ ರನ್‌ಗಳಿಗೆ ೪ ವಿಕೆಟ್‌ ಕಬಳಿಸಿದರೆ, ವಾನಿಂದು ಹಸರಂಗ ೨೭ ರನ್‌ಗಳಿಗೆ ೩ ವಿಕೆಟ್‌ ಉರುಳಿಸಿದರು.

ಆಪತ್ಬಾಂಧವ ಭಾನುಕಾ

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಲಂಕಾ ತಂಡ ಆರಂಭಿಕ ಹಿನ್ನಡೆ ಅನುಭವಿಸಿತು. ೫೮ ರನ್‌ಗಳಿಗೆ ೫ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಈ ವೇಳೆ ಕ್ರೀಸ್‌ ಗೆ ಬಂದ ಭಾನುಕಾ ರಾಜಪಕ್ಸ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿ ೪೫ ಎಸೆತಗಳಲ್ಲಿ ೭೧ ರನ್ ಬಾರಿಸಿದರು. ಇವರಿಗೆ ಬೆಂಬಲ ಕೊಟ್ಟ ವಾನಿಂದು ಹಸರಂಗ ೨೧ ಎಸೆತಗಳಲ್ಲಿ ೩೬ ರನ್‌ ಬಾರಿಸಿದರು. ಕೊನೆಯಲ್ಲಿ ಚಾಮಿಕಾ ಕರುಣಾತ್ನೆ ೧೪ ರನ್‌ಗಳ ಕೊಡುಗೆ ಕೊಟ್ಟರು.

ಸ್ಕೋರ್‌ ವಿವರ

ಶ್ರೀಲಂಕಾ : ೨೦ ಓವರ್‌ಗಳಲ್ಲಿ ೬ ವಿಕೆಟ್‌ಗೆ ೧೭೦ (ಭಾನುಕಾ ರಾಜಪಕ್ಸ ೭೧*, ವಾನಿಂದು ಹಸರಂಗ ೩೬; ಹ್ಯಾರಿಸ್ ರವೂಫ್‌ ೨೯ಕ್ಕೆ೩).

ಪಾಕಿಸ್ತಾನ : ೨೦ ಓವರ್‌ಗಳಲ್ಲಿ ೧೪೭ (ಮೊಹಮ್ಮದ್‌ ರಿಜ್ವಾನ್‌ ೫೫, ಇಫ್ತಿಕಾರ್‌ ೩೨, ಪ್ರಮೋದ್ ಮದುಶನ್‌೩೪ಕ್ಕೆ೪, ವಾನಿಂದು ಹಸರಂಗ ೨೭ಕ್ಕೆ೩).

Exit mobile version