ನವ ದೆಹಲಿ : ಯುವ ಕ್ರಿಕೆಟಿಗ ರಿಷಭ್ ಪಂತ್ (Rishabh Pant) ಭೀಕರ ರಸ್ತೆ ಅಪಘಾತಕ್ಕೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಬಿಎಂಡಬ್ಲ್ಯು ಕಾರು ಸುಟ್ಟು ಕರಕಲಾಗಿದ್ದು, ಅವಘಡದ ಸ್ಥಳವನ್ನು ನೋಡಿದರೆ ಪ್ರಾಣ ಉಳಿದಿರುವುದೇ ಪವಾಡ ಎಂಬಂತಿದೆ. ರಿಷಭ್ ಪಂತ್ ಅವರು ಕಾಲು ಹಾಗೂ ತಲೆಗೆ ಪೆಟ್ಟು ಬಿದ್ದಿರುವ ಹೊರತಾಗಿಯೂ ಕಾರಿನಿಂದ ಹೊರ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಈ ಘಟನೆ ಕುರಿತು ಪೊಲೀಸರು ಹಾಗೂ ಪ್ರತ್ಯಕ್ಷದರ್ಶಿಗಳು ನೀಡುವ ಮಾಹಿತಿ ಇಂತಿದೆ.
ಎಲ್ಲಿ ನಡೆಯಿತು ಅಪಘಾತ?
ರಿಷಭ್ ಪಂತ್ ಅವರು ನವದೆಹಲಿಯಿಂದ ಉತ್ತರಾಖಂಡದ ಕಡೆಗೆ ಏಕಾಂಗಿಯಾಗಿ ಹೊರಟಿದ್ದರು. ಡೆಲ್ಲಿ- ಡೆಹ್ರಾಡೂನ್ ಎಕ್ಸ್ಪ್ರೆಸ್ವೇನ ರೂರ್ಕಿ ನರ್ಸನ್ ಗಡಿಯ ಬಳಿ ಬೆಳಗ್ಗೆ 5.30ಕ್ಕೆ ಅಪಘಾತ ಸಂಭವಿಸಿದೆ. ರಿಷಭ್ ಅವರೇ ಕಾರು ಚಾಲನೆ ಮಾಡುತ್ತಿದ್ದು, ನಿದ್ದೆಯ ಮಂಪರೇ ಅವಘಡಕ್ಕೆ ಕಾರಣ. ಡಿವೈಡರ್ಗೆ ಅಪ್ಪಳಿಸಿದ ಕಾರು ಕಬ್ಬಿಣದ ತಡೆಗೋಡೆಗಳಿಗೆ ಉಜ್ಜಿಕೊಂಡು 100 ಮೀಟರ್ನಷ್ಟು ಮುಂದಕ್ಕೆ ಹೋಗಿದೆ. ಕಬ್ಬಿಣ ತಡೆಗೋಡೆ ಹಾಗೂ ಕಾರಿನ ಲೋಹಗಳ ನಡುವೆ ಘರ್ಷಣೆ ಉಂಟಾದ ಕಾರಣ ಬೆಂಕಿ ಕಿಡಿ ಉಂಟಾಗಿದೆ. ಕಾರು ಅಪ್ಪಚ್ಚಿಯಾಗಿ ತೈಲಗಳು ಸೋರಿಕೆಯಾಗಿದ್ದು ಏಕಾಏಕಿ ಬೆಂಕಿ ಹತ್ತಿಕೊಂಡಿದೆ.
ರಿಷಭ್ ಪಾರಾಗಿದ್ದು ಹೇಗೆ?
ಕಾರು ತಡೆಗೋಡೆಗೆ ಉಜ್ಜಿಕೊಂಡು ಹೋದರೂ ಬೋರಲು ಬಿದ್ದಿಲ್ಲ. ಬದಲಾಗಿ ತಿರುಗಿ ನಿಂತಿದೆ. ಡ್ರೈವಿಂಗ್ ಸೀಟ್ನಲ್ಲಿದ್ದ ರಿಷಭ್ ಅವರ ಕಾಲು ಹಾಗೂ ತಲೆಗೆ ಏಟು ಬಿದ್ದಿದ್ದು ಅವರು ಕಣ್ಣು ಬಿಡುವಷ್ಟರಲ್ಲಿ ಕಾರಿಗೆ ಬೆಂಕಿ ಹಿಡಿದಿದೆ. ಸಮಯ ಪ್ರಜ್ಞೆ ಮೆರೆದ ರಿಷಭ್ ಕಿಟಕಿಯ ಗಾಜನ್ನು ಒಡೆದು ಹೊರಕ್ಕೆ ಜಿಗಿದಿದ್ದಾರೆ. ಹೀಗಾಗಿ ಅವರು ಬಚಾವಾಗಿದ್ದಾರೆ. ಸ್ವಲ್ಪ ತಡವಾಗಿದ್ದರೂ ಸುಟ್ಟು ಹೋಗುತ್ತಿದ್ದರು. ಅವರು ಕ್ರೀಡಾಪಟುವಾಗಿರುವುದೇ ಅವರ ಪ್ರಾಣ ಕಾಪಾಡಿದೆ. ತುರ್ತು ಪರಿಸ್ಥಿತಿಯನ್ನು ನಿಭಾಯಿಸುವ ತಂತ್ರವನ್ನು ಕ್ರೀಡಾಪಟುಗಳಿಗೆ ತರಬೇತಿ ಅವಧಿಯಲ್ಲಿ ಹೇಳಿಕೊಡಲಾಗುತ್ತದೆ. ಇದನ್ನು ಸಮರ್ಥವಾಗಿ ಬಳಸಿಕೊಂಡ ರಿಷಭ್ ಪಂತ್ ನೋವಿನ ನಡುವೆಯೂ ಗಾಜು ಒಡೆದು ಹೊರಗೆ ಬಂದಿದ್ದಾರೆ.
ಪಂತ್ ಪ್ರಯಾಣಿಸುತ್ತಿದ್ದ ಕಾರು ಯಾವುದು?
ಮೊದಲಿಗೆ ಬಿಎಂಡಬ್ಲ್ಯು ಅಥವಾ ಮರ್ಸಿಡೀಸ್ ಬೆಂಜ್ ನಡುವೆ ಯಾವುದು ಎಂಬ ಗೊಂದಲ ಸೃಷ್ಟಿಯಾಗಿತ್ತು. ಬಳಿಕ ಪೊಲೀಸರು ಬಿಎಂಡಬ್ಲ್ಯು ಎಂದು ಖಾತರಿ ಪಡಿಸಿದರು. ಪಂತ್ ಪ್ರಯಾಣ ಮಾಡುತ್ತಿದ್ದ ಕಾರು ಐಷಾರಾಮಿ ದುಬಾರಿ ಬಿಎಂಡಬ್ಲ್ಯು ಸೆಡಾನ್. ಆದಾಗ್ಯೂ ಅದಕ್ಕೆ ಬೆಂಕಿ ಹೊತ್ತಿಕೊಂಡಿದ್ದು ಹೇಗೆ ಎಂಬ ಪ್ರಶ್ನೆ ಉಂಟಾಗಿದೆ. ಅಲ್ಲದೆ, ಆಗಿರುವ ಹಾನಿ ನೋಡಿದರೆ ಕಾರು ಸುರಕ್ಷಿತವಲ್ಲೇ ಎಂಬ ಅನುಮಾನ ಮೂಡಿದೆ. ಮಿತಿ ಮೀರಿದ ವೇಗವೇ ಘಟನೆಗೆ ಕಾರಣವಿರಬಹುದು ಎನ್ನಲಾಗುತ್ತಿದೆ.
ಪಂತ್ ಯಾವ ಆಸ್ಪತ್ರೆಯಲ್ಲಿದ್ದಾರೆ?
ಪಂತ್ ಅವರನ್ನು ಮೊದಲಿಗೆ ರೂರ್ಕಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅಲ್ಲಿಂದ ಅವರು ಡೆಹ್ರಾಡೂನ್ನ ಸಕ್ಷಮ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಂದ ಡೆಲ್ಲಿಗೆ ಏರ್ಲಿಫ್ಟ್ ಮಾಡಲಿದ್ದಾರೆ. ಪಂತ್ ನೀಡಲಾದ ಎಲ್ಲ ಚಿಕಿತ್ಸೆಗಳ ವೆಚ್ಚವನ್ನು ಉತ್ತರಾಖಂಡ ಸರಕಾರವೇ ಭರಿಸಲಿದೆ. ಉತ್ತರಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಚಿಕಿತ್ಸೆ ವೆಚ್ಚವನ್ನು ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ.
ಪಂತ್ ಗುಣವಾಗಲು ಎಷ್ಟು ದಿನ ಬೇಕು?
ಹಲವು ಪರೀಕ್ಷೆಗಳ ಬಳಿಕ ತಿಳಿದು ಬಂದ ಮಾಹಿತಿ ಪ್ರಕಾಣ ಪಂತ್ಗೆ ಗಂಭೀರ ಸ್ವರೂಪದ ಗಾಯಗಳು ಆಗಿಲ್ಲ. ಮೂಳೆ ಮುರಿತವೂ ಆಗಿಲ್ಲ. ಅವರ ಎಡ ಕಣ್ಣಿನ ಮೇಲ್ಬಾಗದಲ್ಲಿ ಗಾಯವಾಗಿದ್ದು, ಮಂಡಿಗಳಲ್ಲೂ ಬಿರುಕು ಬಿಟ್ಟಿದೆ. ಬೆನ್ನಿಗೂ ಸ್ವಲ್ಪ ಗಾಯಗಳಾಗಿರುವ ಸಾಧ್ಯತೆಗಳಿವೆ. ಅಂತೆಯೇ ಅವರಿಗೆ ಪ್ಲಾಸ್ಟಿಕ್ ಸರ್ಜರಿಯೂ ಬೇಕಾಗಬಹುದು ಎನ್ನಲಾಗಿದೆ. ಅವರಿಗೆ ಸುಧಾರಿಸಿಕೊಳ್ಳಲು ಇನ್ನೊಂದು ವರ್ಷ ಬೇಕಾಗಬಹುದು. ಹೀಗಾಗಿ ಐಪಿಎಲ್ ಹಾಗೂ ಏಕ ದಿನ ವಿಶ್ವ ಕಪ್ಗೆ ಲಭ್ಯರಿರುವುದಿಲ್ಲ.
ಇದನ್ನೂ ಓದಿ | Rishabh Pant | ಡಿವೈಡರ್ಗೆ ಡಿಕ್ಕಿ ಹೊಡೆದು ಸುಟ್ಟು ಭಸ್ಮವಾದ ಕಾರು; ಖ್ಯಾತ ಕ್ರಿಕೆಟರ್ ರಿಷಭ್ ಪಂತ್ಗೆ ಗಂಭೀರ ಗಾಯ