ಬೆಂಗಳೂರು: ಒಟ್ಟು 12 ಆವೃತ್ತಿಯ ವಿಶ್ವಕಪ್ ಟೂರ್ನಿಯಲ್ಲಿ 7 ಬಾರಿ ಫೈನಲ್ ಪ್ರವೇಶಿಸಿದ್ಧ ಆಸ್ಟ್ರೇಲಿಯಾ ತಂಡಕ್ಕೆ ಇದು 8ನೇ ವಿಶ್ವಕಪ್ ಫೈನಲ್. ಭಾರತ ವಿರುದ್ಧ ಎರಡನೇ ಫೈನಲ್ ಮುಖಾಮುಖಿ. ಈ ಬಾರಿಯ ವಿಶ್ವಕಪ್(australia world cup 2023) ಟೂರ್ನಿಯಲ್ಲಿ ಆಸ್ಟ್ರೇಲಿಯಾದ ಏಳು-ಬೀಳುಗಳ ಮಾಹಿತಿ ಇಲ್ಲಿದೆ.
ಭಾರತ ವಿರುದ್ಧ ಸೋಲು
ಆಸ್ಟ್ರೇಲಿಯಾ ತಂಡ ವಿಶ್ವಕಪ್ ಅಭಿಯಾನ ಆರಂಭಿಸಿದ್ದು ಭಾರತ ವಿರುದ್ಧ ಆಡುವ ಮೂಲಕವೇ. ಅಕ್ಟೋಬರ್ 8ರಂದು ಚೆನ್ನೈಯ ಚಿದಂಬರಂ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ಡೇವಿಡ್ ವಾರ್ನರ್ ಮತ್ತು ಸ್ಟೀವನ್ ಸ್ಮಿತ್ ಅವರ ಬ್ಯಾಟಿಂಗ್ ನೆರವಿನಿಂದ 49.3 ಓವರ್ಗಳಲ್ಲಿ 199 ರನ್ಗೆ ಕುಸಿಯಿತು. ಗುರಿ ಬೆನ್ನಟ್ಟಿದ ಭಾರತ ಕೂಡ ಆರಂಭಿಕ ಆಘಾತ ಎದುರಿಸಿತು. 2 ರನ್ಗೆ ಮೂರು ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು. ಈ ವೇಳೆ ಜತೆಯಾದ ವಿರಾಟ್ ಕೊಹ್ಲಿ(85) ಮತ್ತು ಕೆ.ಎಲ್ ರಾಹುಲ್(ಅಜೇಯ 97) ಅಸಾಮಾನ್ಯ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ತಂಡಕ್ಕ ಸ್ಮರಣೀಯ ಗೆಲುವು ತಂದು ಕೊಟ್ಟರು. ಭಾರತ 41.2 ಓವರ್ಗಳಲ್ಲಿ 4 ವಿಕೆಟ್ಗೆ 201 ರನ್ ಬಾರಿಸಿ ಆಸೀಸ್ಗೆ ಸೋಲುಣಿಸಿತ್ತು.
ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯ ಸೋಲು
ಭಾರತ ವಿರುದ್ಧ ಸೋಲು ಕಂಡಿದ್ದ ಆಸ್ಟ್ರೇಲಿಯಾ ದ್ವಿತೀಯ ಪಂದ್ಯದಲ್ಲಿಯೂ ಹೀನಾಯ ಸೋಲು ಕಂಡಿತ್ತು. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯ 134 ರನ್ಗಳ ಸೋಲಿನ ಆಘಾತ ಎದುರಿಸಿತು. ಇದು ಆಸೀಸ್ಗೆ ಎದುರಾದ ವಿಶ್ವಕಪ್ನ ದೊಡ್ಡ ಅಂತರದ ಸೋಲಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ ಕ್ವಿಂಟನ್ ಡಿ ಕಾಕ್ ಅವರ ಶತಕದ ನೆರವಿನಿಂದ 50 ಓವರ್ಗಳಲ್ಲಿ 311 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 40.5 ಓವರ್ಗಳಲ್ಲಿ 177 ರನ್ಗೆ ಸರ್ವಪತನ ಕಂಡಿತು.
ಇದನ್ನೂ ಓದಿ IND vs AUS: ಗಂಗೂಲಿ ಮಾಡಿದ ಎಡವಟ್ಟನ್ನು ರೋಹಿತ್ ಶರ್ಮಾ ಮಾಡದಿರಲಿ…
ಆಸ್ಟ್ರೇಲಿಯಾದ ಬಲಿಷ್ಠ ಆಟಗಾರರು ಈ ಪಂದ್ಯದಲ್ಲಿ ಬ್ಯಾಟಿಂಗ್ ಮರೆತವರಂತೆ ಆಡಿದ್ದರು. ಘಾಟಾನುಘಟಿಗಳಾದ ಡೇವಿಡ್ ವಾರ್ನರ್(13) ಮಿಚೆಲ್ ಮಾರ್ಷ್(7), ಸ್ಟೀವನ್ ಸ್ಮಿತ್(19), ಜೋಶ್ ಇಂಗ್ಲೀಷ್(5), ಗ್ಲೆನ್ ಮ್ಯಾಕ್ಸ್ವೆಲ್(3), ಮಾರ್ಕಸ್ ಸ್ಟೋಯಿನಿಸ್(5) ಅಗ್ಗಕ್ಕೆ ಔಟಾಗಿ ಪೆವಿಲಿಯನ್ ಪರೇಡ್ ನಡೆಸಿದರು. ಕಗಿಸೊ ರಬಾಡ ಬೌಲಿಂಗ್ ದಾಳಿಗೆ ಬೆಚ್ಚಿ ಬಿದ್ದ ಆಸೀಸ್ ಆಟಗಾರರು ಪ್ರತಿ ರನ್ಗೂ ಪರದಾಡಿದರು. ಅಷ್ಟರ ಮಟ್ಟಿಗೆ ಫಾತಕವಾಗಿತ್ತು ಅವರ ಬೌಲಿಂಗ್. ಇವರಿಗೆ ಮಾರ್ಕೊ ಜಾನ್ಸನ್ ಕೂಡ ಉತ್ತಮ ಸಾಥ್ ನೀಡಿದ್ದರು. ಅವರು ಕೂಡ 2 ವಿಕೆಟ್ ಬೇಟೆಯಾಡುವಲ್ಲಿ ಯುಶಸ್ಸು ಕಂಡರು.
ಇದನ್ನೂ ಓದಿ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾದ್ದೇ ಪಾರುಪತ್ಯ; ಇಲ್ಲಿದೆ 5 ಬಾರಿ ಚಾಂಪಿಯನ್ನರ ಸಾಹಸ…
ಲಂಕಾ ವಿರುದ್ಧ ಗೆದ್ದು ಖಾತೆ ತೆರೆದ ಆಸೀಸ್
ಆಸ್ಟ್ರೇಲಿಯಾ ತಂಡ ಈ ಬಾರಿಯ ವಿಶ್ವಕಪ್ನಲ್ಲಿ ಗೆಲುವಿನ ಖಾತೆ ತೆರೆದದ್ದು ಮೂರನೇ ಪಂದ್ಯದಲ್ಲಿ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಕಮಿನ್ಸ್ ಪಡೆದ 5 ವಿಕೆಟ್ಗಳ ಗೆಲುವು ಸಾಧಿಸಿತ್ತು. ಇಲ್ಲಿಂದ ಆರಂಭವಾದ ಗೆಲುವಿನ ಓಟ ಮತ್ತೆ ನಿಲ್ಲಲಿಲ್ಲ. ಭಾರತ ರತ್ನ ಶ್ರೀ ಅಟಲ್ಬಿಹಾರಿ ವಾಜಪೇಯಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಲಂಕಾ ತಂಡ 43.3 ಓವರ್ಗಳಲ್ಲಿ 209 ರನ್ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 35.2 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 215 ರನ್ ಬಾರಿಸಿ ಗೆಲುವು ಕಂಡಿತು.
ಸಾಧಾರಣ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ್ದ ಆಸ್ಟ್ರೇಲಿಯಾ ತಂಡ ಉತ್ತಮ ಆರಂಭ ಕಾಣಲಿಲ್ಲ. ಡೇವಿಡ್ ವಾರ್ನರ್ (11ರನ್) ಹಾಗೂ ಸ್ಟೀವ್ ಸ್ಮಿತ್ (0) ಬೇಗ ಔಟಾಗುವ ಮೂಲಕ 24 ರನ್ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಈ ವೇಳೆ ಜತೆಯಾದ ಮರ್ನಸ್ ಲಾಬುಶೇನ್ (40) ಹಾಗೂ ಆರಂಭಿಕ ಬ್ಯಾಟರ್ ಮಿಚೆಲ್ ಮಾರ್ಷ್ (52) ಚೇತರಿಕೆ ತಂದರು. ಮಾರ್ಷ್ ಅರ್ಧ ಶತಕ ಬಾರಿಸುವ ಮೂಲಕ ಮಿಂಚಿದರು. ಬಳಿಕ ಆಡಲು ಇಳಿದ ವಿಕೆಟ್ಕೀಪರ್ ಬ್ಯಾಟರ್ ಜೋಶ್ ಇಂಗ್ಲಿಸ್ (58) ಕೂಡ ಅರ್ಧ ಶತಕ ಬಾರಿಸಿ ಗೆಲುವಿನ ಹಾದಿಗೆ ತಂಡವನ್ನು ಕೊಂಡೊಯ್ದರು. ಕೊನೆಯಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ 21 ಎಸೆತಗಳಲ್ಲಿ 31 ರನ್ ಬಾರಿಸಿದರೆ, ಮಾರ್ಕಸ್ ಸ್ಟೊಯ್ನಿಸ್ 10 ಎಸೆತಗಳಲ್ಲಿ 20 ರನ್ ಬಾರಿಸಿ ಜಯ ತಂದುಕೊಟ್ಟಿದ್ದರು.
ಪಾಕ್ ವಿರುದ್ಧ 62 ರನ್ ಗೆಲುವು
ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ತೇಲಿಯಾ ತಂಡ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 367 ರನ್ ಬಾರಿಸಿತ್ತು. ಪ್ರತಿಯಾಗಿ ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ 45.3 ಓವರ್ಗಳಲ್ಲಿ 305 ರನ್ಗಳಿಗೆ ಆಲ್ಔಟ್ ಆಗಿ ಸೋಲೊಪ್ಪಿಕೊಂಡಿತು. ದೊಡ್ಡ ಮೊತ್ತವನ್ನು ಬೆನ್ನಟ್ಟಲು ಹೊರಟ ಪಾಕಿಸ್ತಾನ ತಂಡ ಮೊದಲ ವಿಕೆಟ್ಗೆ 134 ರನ್ ಬಾರಿಸಿ ಪ್ರತಿರೋಧ ಒಡ್ಡಿತು. ಆದರೆ, ನಾಯಕ ಬಾಬರ್ ಅಜಂ (18) ಸೇರಿದಂತೆ ಮಧ್ಯಮ ಕ್ರಮಾಂಕದ ಬ್ಯಾಟರ್ಗಳ ವೈಫಲ್ಯದಿಂದಾಗಿ ಸೋಲಿಗೆ ಒಳಗಾಯಿತು.
ರೋಚಕ ಪಂದ್ಯದಲ್ಲಿ ಗೆದ್ದ ಆಸೀಸ್
ಅತ್ಯಂತ ರೋಚಕವಾಗಿ ಸಾಗಿದ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ನಡುವಣ ಬೃಹತ್ ಮೊತ್ತದ ಮೇಲಾಟದಲ್ಲಿ ಆಸ್ಟ್ರೇಲಿಯಾ ತಂಡ 5 ರನ್ಗಳಿಂದ ರೋಚಕ ಗೆಲುವು ಸಾಧಿಸಿ ಸೆಮಿ ಫೈನಲ್ ಆಸೆಯನ್ನು ಜೀವಂತವಿರಿಸಿಕೊಂಡಿತು. ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಜಿದ್ದಾಜಿದ್ದಿನ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಆಸ್ಟ್ರೇಲಿಯಾ 49.2 ಓವರ್ಗಳಲ್ಲಿ 388ರನ್ಗೆ ಆಲೌಟ್ ಆಯಿತು. ಬೃಹತ್ ಮೊತ್ತವನ್ನು ದಿಟ್ಟ ರೀತಿಯಲ್ಲಿ ಬೆನ್ನಟ್ಟಿಕೊಂಡು ಹೋದ ನ್ಯೂಜಿಲ್ಯಾಂಡ್ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ಗೆ 383 ರನ್ ಗಳಿಸಿ 5 ರನ್ ಅಂತರದಲ್ಲಿ ಸೋಲು ಕಂಡಿತು.
309 ರನ್ಗಳ ಗೆಲುವು
ಆಸ್ಟ್ರೇಲಿಯಾ ತಂಡ ಈ ಬಾರಿಯ ವಿಶ್ವಕಪ್ನಲ್ಲಿ ನೆದರ್ಲೆಂಡ್ಸ್ ವಿರುದ್ಧ 309 ರನ್ಗಳ ಗೆಲುವು ಸಾಧಿಸಿ ವಿಶ್ವಕಪ್ನಲ್ಲಿ ದಾಖಲೆಯೊಂದನ್ನು ಬರೆದಿತ್ತು. ವಿಶ್ವಕಪ್ ಇತಿಹಾಸದಲ್ಲೇ ಅತ್ಯಧಿಕ ರನ್ಗಳಿಂದ ಗೆದ್ದ ತಂಡವಾಗಿ ಹೊರಹೊಮ್ಮಿತ್ತು. ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ, ಆರಂಭಕಾರ ಡೇವಿಡ್ ವಾರ್ನರ್(104) ಮತ್ತು ಮಧ್ಯಮ ಕ್ರಮಾಂಕದ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್(106) ಅವರ ದಾಖಲೆಯ ಶತಕದ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ಗೆ 399 ರನ್ ಬಾರಿಸಿತು. ಬೃಹತ್ ಮೊತ್ತವನ್ನು ಕಂಡು ಕಂಗಾಲಾದ ನೆದರ್ಲೆಂಡ್ಸ್ 21 ಓವರ್ಗಳಲ್ಲಿ 90 ರನ್ಗೆ ಸರ್ವಪತನ ಕಂಡಿತು. ಆಸ್ಟ್ರೇಲಿಯಾ 309 ರನ್ಗಳ ಗೆಲುವು ಸಾಧಿಸಿತು.
ಹಾಲಿ ಚಾಂಪಿಯನ್ ವಿರುದ್ಧ ಗೆಲುವು
ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಆಸ್ಟ್ರೇಲಿಯಾ ಸಂಘಟಿತ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ 49.3 ಓವರ್ಗಳಲ್ಲಿ 286 ರನ್ ಗಳಿಸಿ ಆಲೌಟ್ ಆಯಿತು. ಸುಲಭ ಮೊತ್ತವನ್ನು ಬೆನ್ನಟ್ಟಿ ಇಂಗ್ಲೆಂಡ್ ಗೆಲುವು ಕಾಣಬಹುದು ಎಂದು ಎಲ್ಲರು ನಿರೀಕ್ಷೆ ಮಾಡಿದ್ದರು. ಆದರೆ ಘಾತಕ ಬೌಲಿಂಗ್ ದಾಳಿ ನಡೆಸಿದ ಆಸೀಸ್ ಪಡೆ ಆಂಗ್ಲರನ್ನು 253 ರನ್ಗೆ ಸರ್ವನಾಶ ಮಾಡಿ 33 ರನ್ ಅಂತರದ ಗೆಲುವು ಸಾಧಿಸಿತು.
ಮ್ಯಾಕ್ಸ್ವೆಲ್ ಪ್ರಚಂಡ ಬ್ಯಾಟಿಂಗ್ಗೆ ಒಲಿದ ಗೆಲುವು
ವಾಂಖೆಡೆ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಅಫಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ರೋಚಕ ಗೆಲುವು ಸಾಧಿಸಿ ಸೆಮಿಫೈನಲ್ಗೆ ಅದಿಕೃತವಾಗಿ ಪ್ರವಶ ಪಡೆಯಿತು. ಪಂದ್ಯದಲ್ಲಿ ಟಾಸ್ ಗೆದ್ದ ಅಫಘಾನಿಸ್ತಾನ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಉತ್ತಮವಾಗಿ ಬ್ಯಾಟ್ ಮಾಡಿ ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 291 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ ಇನ್ನೂ 19 ಎಸೆತಗಳು ಬಾಕಿ ಇರುವಂತೆಯೇ 7 ವಿಕೆಟ್ ನಷ್ಟಕ್ಕೆ 293 ರನ್ ಬಾರಿಸಿ ಗೆಲುವು ಸಾಧಿಸಿತು.
ಗಾಯದ ಮಧ್ಯೆಯೂ ಮ್ಯಾಕ್ಸ್ವೆಲ್ ಈ ಪಂದ್ಯದಲ್ಲಿ ವಿಸ್ಫೋಟಕ ಬ್ಯಾಟಿಂಗ್ ನಡೆಸಿ ಅಜೇಯ ದ್ವಿಶತಕ ಬಾರಿಸಿ ತಂಡಕ್ಕೆ ಸ್ಮರಿಣೀಯ ಗೆಲುವು ತಂದುಕೊಟ್ಟಿದ್ದರು. ಶತಕ ಬಾರಿಸಿದ ತಕ್ಷಣ ಬೆನ್ನು ನೋವಿಗೆ ಒಳಗಾದ ಮ್ಯಾಕ್ಸ್ವೆಲ್ ಪದೇ ಪದೇ ನೋವಿಗೆ ಒಳಗಾಗಿ ಮೈದಾನದಲ್ಲಿ ರನ್ಗಾಗಿ ಓಡಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿಗೆ ಒಳಗಾದರು. ಆದರೂ ಕೆಚ್ಚೆದೆಯಿಂದ ಹೋರಾಡಿ ಗೆದ್ದರು. ಬರೇ ಫೋರ್, ಸಿಕ್ಸರ್ಗಳ ಮೂಲಕ ತಂಡಕ್ಕೆ ಏಕಾಂಗಿಯಾಗಿ ಗೆಲುವು ತಂದುಕೊಟ್ಟರು. 91 ರನ್ಗಳಿಗೆ 7 ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾ ತಂಡ ಮ್ಯಾಕ್ಸ್ವೆಲ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಮುರಿಯದ ಏಳನೇ ವಿಕೆಟ್ಗೆ 202 ರನ್ ಪೇರಿಸುವ ಮೂಲಕ ಗೆಲುವು ದಾಖಲಿಸಿತು.
ದಾಖಲೆಯ ಮೊತ್ತ ಚೇಸಿಂಗ್ ನಡೆಸಿ ಗೆದ್ದ ಆಸೀಸ್
ಬಾಂಗ್ಲಾದೇಶ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಆಸೀಸ್ ದಾಖಲೆಯ ಮೊತ್ತವನ್ನು ಬೆನ್ನಟ್ಟಿ ಗೆಲುವು ಸಾಧಿಸಿತು. ಪುಣೆಯಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಬಾಂಗ್ಲಾದೇಶ ತಂಡ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ಗೆ 306 ರನ್ ಬಾರಿಸಿತ್ತು. ಪ್ರತಿಯಾಗಿ ಬ್ಯಾಟ್ ಮಾಡಿದ ಕಾಂಗರೂ ಪಡೆದ 44.4 ಓವರ್ಗಳಲ್ಲಿ 2 ವಿಕೆಟ್ಗೆ 307 ರನ್ ಬಾರಿಸಿ 8 ವಿಕೆಟ್ಗಳ ಗೆಲುವು ಸಾಧಿಸಿತು. ಮಿಚೆಲ್ ಮಾರ್ಷ್ ಅವರ ಆಕರ್ಷಕ ಶತಕದ ನೆರವಿನಿಂದ ಅಜೇಯ 177 ರನ್ ಬಾರಿಸಿ ಗೆಲುವು ಸುಲಭಗೊಳಿಸಿದರು.ಇದು ವಿಶ್ವ ಕಪ್ನಲ್ಲಿ ಆಸ್ಟ್ರೇಲಿಯಾ ತಂಡ ಬೆನ್ನಟ್ಟಿ ಗೆದ್ದ ಗರಿಷ್ಠ ಮೊತ್ತದ ಗೆಲುವಾಗಿತ್ತು.
ಸೆಮಿಯಲ್ಲಿ ಸೇಡು ತೀರಿಸಿಕೊಂಡ ಆಸೀಸ್
ಲೀಗ್ ಹಂತದಲ್ಲಿ ಅತ್ಯಂತ ಹೀನಾಯವಾಗಿ ಸೋಲುಣಿಸಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಆಸ್ಟ್ರೇಲಿಯಾ ಈ ಸೋಲಿನ ಸೇಡನ್ನು ಸೆಮಿಫೈನಲ್ ಪಂದ್ಯದಲ್ಲಿ ತೀರಿಸಿಕೊಂಡಿತು. ಮೂರು ವಿಕೆಟ್ ಅಂತರದಿಂದ ಗೆದ್ದು ಹರಿಣಗಳನ್ನು ಟೂರ್ನಿಯಿಂದ ಹೊರದಬ್ಬಿತು. ಕೋಲ್ಕೊತಾದ ಐತಿಹಾಸಿಕ ಈಡನ್ ಗಾರ್ಡನ್ಸ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬ ಬವುಮಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 49.4 ಓವರ್ಗಳಲ್ಲಿ 212 ರನ್ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ ಇನ್ನೂ 16 ಎಸೆತಗಳು ಬಾಕಿ ಇರುವಂತೆಯೇ 7 ವಿಕೆಟ್ಗೆ 215 ರನ್ ಗಳಿಸಿ ಗೆಲುವು ಸಾಧಿಸಿತು.