ಕ್ಯಾಂಡಿ: ಏಷ್ಯಾಕಪ್ 2023ರ 5ನೇ ಪಂದ್ಯದಲ್ಲಿ ಭಾರತ ಮತ್ತು ನೇಪಾಳ ತಂಡಗಳು ಮುಖಾಮುಖಿಯಾಗಲಿವೆ. ಪಾಕಿಸ್ತಾನ ವಿರುದ್ಧ ಸೋತ ನಂತರ ನೇಪಾಳವು ಏಷ್ಯಾದ ಇನ್ನೊಂದು ಬಲಿಷ್ಠ ತಂಡದ ವಿರುದ್ಧ ಹೋರಾಟಕ್ಕೆ ಇಳಿಯಲಿದೆ. ಹಾಲಿ ಋತುವಿನ ಆರಂಭಿಕ ಪಂದ್ಯದಲ್ಲಿ ತಂಡವು ಸೋಲನ್ನು ಅನುಭವಿಸಿದ್ದ ಕಾರಣ ಭಾರತದ ವಿರುದ್ಧ ಉತ್ತಮ ಫಲಿತಾಂಶವನ್ನು ನಿರೀಕ್ಷಿಸುತ್ತದೆ.
ಟೂರ್ನಿಯಲ್ಲಿ ಟೀಮ್ ಇಂಡಿಯಾದ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಇತ್ತಂಡಗಳು ಒಂದು ಅಂಕಗಳನ್ನು ಹಂಚಿಕೊಂಡವು. ಹೀಗಾಗಿ ಎ ಗುಂಪಿನಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಒಂದು ವೇಳೆಗೆ ಎರಡನೇ ಪಂದ್ಯ ಟೈ ಆದರೂ ಭಾರತ ಪ್ಲೇ ಆಫ್ ಹಂತಕ್ಕೆ ಏರುವುದು ಖಚಿತ.
ಪಿಚ್ ಹೇಗಿದೆ?
ಪಲ್ಲೆಕೆಲೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿನ ಮೇಲ್ಮೈಯನ್ನು ಆರಂಭದಲ್ಲಿ ವೇಗಿಗಳಿಗೆ ಸ್ವಲ್ಪ ಸಹಾಯವಾಗುತ್ತದೆ. ಬಳಿಕ ಪಿಚ್ ನಿಧಾನಗೊಳ್ಳುತ್ತದೆ. ಆ ಬಳಿಕ ಬೌಲರ್ಗಳಿಗೆ ಯಾವುದೇ ಅನುಕೂಲಗಳು ಸಿಗುವುದಿಲ್ಲ. ಹೀಗಾಗಿ ಬ್ಯಾಟರ್ಗಳನ್ನು ಔಟ್ ಮಾಡುವುದು ಸಾಧ್ಯವಿಲ್ಲ. ಹೀಗಾಗಿ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುತ್ತದೆ. ದೊಡ್ಡ ಮೊತ್ತವನ್ನು ಪೇರಿಸಿ ಎದುರಾಳಿ ತಂಡದ ಮೇಲೆ ಒತ್ತಡ ಹೇರುವುದೇ ಟಾಸ್ ಗೆದ್ದ ತಂಡದ ಯೋಜನೆಯಾಗಿರುತ್ತದೆ.
ತಂಡ ಬದಲಾವಣೆಯಾಗದು
ಭಾರತವು ಅದೇ ಪ್ಲೇಯಿಂಗ್ ಇಲೆವೆನ್ ಅನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ ಮತ್ತು ಪಂದ್ಯಾವಳಿಯ ಆರಂಭದಲ್ಲಿ ತಕ್ಷಣದ ಬದಲಾವಣೆ ಬಯಸದು. ಇನ್ನಿಂಗ್ಸ್ ನ ಆರಂಭದಲ್ಲಿ ಎದುರಾಳಿ ತಂಡದ ಮೇಲೆ ಒತ್ತಡ ಹೇರಲು ಅವರು ತಮ್ಮ ಅಗ್ರ ನಾಲ್ಕು ಬ್ಯಾಟ್ಸ್ ಮನ್ ಗಳಿಂದ ಉತ್ತಮ ಪ್ರದರ್ಶನವನ್ನು ನಿರೀಕ್ಷೆ ಮಾಡುತ್ತಿದೆ. ಹಾರ್ದಿಕ್ ಪಾಂಡ್ಯ, ಶಾರ್ದೂಲ್ ಠಾಕೂರ್ ಮತ್ತು ರವೀಂದ್ರ ಜಡೇಜಾ ಆಲ್ರೌಂಡರ್ಗಳ ಸ್ಥಾನ ತುಂಬಲಿದ್ದಾರೆ. ಜಸ್ಪ್ರೀತ್ ಬುಮ್ರಾ ವೇಗದ ಬೌಲಿಂಗ್ ವಿಭಾಗವನ್ನು ನೆಚ್ಚಿಕೊಳ್ಳಲಿದ್ದಾರೆ.
ತಂಡಗಳು
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ನೇಪಾಳ : ಕುಶಾಲ್ ಭುರ್ಟೆಲ್, ಆಸಿಫ್ ಶೇಖ್ (ವಿಕೆಟ್ಕೀಪರ್), ರೋಹಿತ್ ಪೌದೆಲ್ (ನಾಯ), ಆರಿಫ್ ಶೇಖ್, ಕುಶಾಲ್ ಮಲ್ಲಾ, ದೀಪೇಂದ್ರ ಸಿಂಗ್ ಐರಿ, ಗುಲ್ಸನ್ ಝಾ, ಸೋಮಪಾಲ್ ಕಾಮಿ, ಕರಣ್ ಕೆಸಿ, ಸಂದೀಪ್ ಲಾಮಿಚಾನೆ, ಲಲಿತ್ ರಾಜ್ಬನ್ಶಿ
ಗೆಲುವಿನ ಸಾಧ್ಯತೆ ಏನು?
ಉತ್ತಮ ಗುಣಮಟ್ಟದ ತಂಡಗಳ ವಿರುದ್ಧ ಆಡುವಲ್ಲಿ ನೇಪಾಳದ ಅನುಭವದ ಕೊರತೆಯಿಂದಾಗಿ ಭಾರತವು ಪಂದ್ಯವನ್ನು ಆರಾಮವಾಗಿ ಗೆಲ್ಲುವ ಸಾಧ್ಯತೆಯಿದೆ.
ಭಾರತದ ಬ್ಯಾಟಿಂಗ್ ಸುಧಾರಣೆ ಅಗತ್ಯ
ಪಾಕ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ಪ್ರದರ್ಶನ ಉತ್ತಮವಾಗಿರಲಿಲ್ಲ. ಮೊದಲ 14.1 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 66 ರನ್ ಗಳಿಸಿ ಶೋಚನೀಯ ಸ್ಥಿತಿ ಎದುರಿಸಿತ್ತು. ಸ್ಟಾರ್ ಬ್ಯಾಟರ್ಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶುಭ್ಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಅವರು ಪಾಕಿಸ್ತಾನ ತಂಡದ ವೇಗಿಗಳಿಗೆ ಬೆದರಿಗೆ ಬೇಗೆ ಔಟಾಗಿದ್ದರು. ಆದಾಗ್ಯೂ, ಇಶಾನ್ ಕಿಶನ್ (81 ಎಸೆತಗಳಲ್ಲಿ 82 ರನ್) ಮತ್ತು ಹಾರ್ದಿಕ್ ಪಾಂಡ್ಯ (90 ಎಸೆತಗಳಲ್ಲಿ 87 ರನ್) ಅವರ ಆಕರ್ಷಕ ಅರ್ಧ ಶತಕಗಳಿಂದ ಭಾರತ ಸ್ಪರ್ಧಾತ್ಮಕ ಮೊತ್ತವನ್ನು ಪೇರಿಸಿತು. ಈ ವೇಳೆ ಮಳೆ ಸುರಿದ ಕಾರಣ ಪಾಕಿಸ್ತಾನದ ಇನಿಂಗ್ಸ್ ಒಂದೇ ಒಂದು ಎಸೆತ ಕಾಣದೇ ಕೊನೆಗೊಂಡಿತು. ಹೀಗಾಗಿ ಪಾಕಿಸ್ತಾನ ತಂಡ ಈಗ ಸೂಪರ್-4 ಹಂತಕ್ಕೇರಿದೆ. ಇದೀಗ ಭಾರತ ನೇಪಾಳ ವಿರುದ್ಧ ಗೆದ್ದು ಮುಂದಿನ ಹಂತಕ್ಕೆ ಏರಬೇಕಾಗಿದೆ. ಇದೇ ವೇಳೆ ಬ್ಯಾಟಿಂಗ್ನಲ್ಲಿ ಸುಧಾರಣೆ ಕಾಣಬೇಕಾಗಿದೆ.
ಇದನ್ನೂ ಓದಿ : Asia Cup 2023 : ನೇಪಾಳ ವಿರುದ್ಧ ಗೆದ್ದು ಪ್ಲೇಆಫ್ ಹಂತಕ್ಕೇರುವುದೇ ಭಾರತ?
ಪಾಕಿಸ್ತಾನ ವಿರುದ್ಧದ ತನ್ನ ಆರಂಭಿಕ ಪಂದ್ಯದಲ್ಲಿ ನೇಪಾಳ ಸಂಪೂರ್ಣವಾಗಿ ನೆಲಕ್ಕಚ್ಚಿತ್ತು. ಮೊದಲು ಬ್ಯಾಟ್ ಮಾಡಿದ್ದ ಬಾಬರ್ ಅಜಂ ಬಳಗದ ವಿರುದ್ಧ ನೇಪಾಳ ಕೇವಲ 104 ರನ್ಗಳಿಗೆ ಆಲೌಟ್ ಆಗಿತ್ತು. 238 ರನ್ಗಳ ಬೃಹತ್ ಸೋಲನುಭವಿಸಿತು. ಹೀಗಾಗಿ ಭಾರತಕ್ಕೆ ನೇಪಾಳ ದೊಡ್ಡ ಸವಾಲು ಅಲ್ಲ. ಆದರೆ ಬಲಿಷ್ಠ ತಂಡವನ್ನು ಎದುರಿಸುವ ಮೊದಲು ಎಚ್ಚರಿಕೆಯಿಂದ ಆಡುವ ಸಾಧ್ಯತೆಗಳಿವೆ. ತಂಡಕ್ಕೆ ಅನುಕೂಲಕರವಾಗುವ ರೀತಿಯಲ್ಲಿ ಆಡುವ ಸಾಧ್ಯತೆಗಳಿವೆ.