ಅಹಮದಾಬಾದ್: ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡ ತನ್ನ ಮೊದಲ ಪಂದ್ಯದಲ್ಲಿ ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 5 ವಿಕೆಟ್ಗಳಿಂದ ಸೋಲಿಸಿದೆ. ಈ ಗೆಲುವಿನಲ್ಲಿರುವ ಆ ತಂಡಕ್ಕೆ ಆಘಾತವೊಂದು ಕಾದಿದೆ. ತಂಡದ ಪ್ರಮುಖ ಬ್ಯಾಟಿಂಗ್ ಬಲ ಎನಿಸಿಕೊಂಡಿದ್ದ ನ್ಯೂಜಿಲ್ಯಾಂಡ್ನ ಕೇನ್ ವಿಲಿಯಮ್ಸನ್ ಅವರು ಗಾಯಗೊಂಡಿದ್ದು ಅವರು ಟೂರ್ನಿಯಿಂದ ಹೊರಕ್ಕೆ ನಡೆದಿದ್ದಾರೆ. ಈ ಮೂಲಕ ತಂಡದ ಬ್ಯಾಟಿಂಗ್ ಬಲಕ್ಕೆ ಧಕ್ಕೆಯಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಅವರು ಆಡುವ 11ರ ಬಳಗದಲ್ಲಿ ಅವಕಾಶ ಪಡೆದಿದ್ದರು. ಆದರೆ ಫೀಲ್ಡಿಂಗ್ ಮಾಡುವ ವೇಳೆ ಗಾಯಕ್ಕೆ ಒಳಗಾಗಿದ್ದರು.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಋತುರಾಜ್ ಗಾಯಕ್ವಾಡ್ ಬೌಂಡರಿ ಲೈನ್ಗಿಂತ ಹೊರಕ್ಕೆ ಚೆಂಡನ್ನು ಬಾರಿಸಿದ್ದರು. ಗೆರೆಯ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಕೇನ್ ವಿಲಿಯಮ್ಸನ್ ಅವರು ಚೆಂಡನ್ನು ತಡೆಯಲು ಮೇಲಕ್ಕೆ ಜಿಗಿದಿದ್ದರು. ಚೆಂಡನ್ನು ತಡೆದು ಎದುರಾಳಿ ತಂಡ ಆರು ರನ್ಗಳು ಸಂಗ್ರಹಿಸದಂತೆ ನೋಡಿಕೊಂಡ ಹೊರತಾಗಿಯೂ ಅವರು ಕಳಕ್ಕೆ ಬೀಳುವಾಗ ಮಂಡಿಯೂರಿದ್ದರು. ಮಂಡಿ ಜೋರಾಗಿ ನೆಲಕ್ಕೆ ಅಪ್ಪಳಿಸಿದ ಕಾರಣ ಗಾಯದ ಸಮಸ್ಯೆ ಎದುರಾಗಿದೆ.
ನೋವಿನಿಂದ ನರಳಿದ ಅವರಿಗೆ ಆಟ ಮುಂದುವರಿಸಲು ಸಾಧ್ಯವಾಗಲಿಲ್ಲ. ಬಳಿಕ ಇಬ್ಬರು ಆಟಗಾರರ ನೆರವಿನಿಂದ ಮೈದಾನ ತೊರೆದಿದ್ದರು. ಇದೀಗಅ ವರ ಗಾಯದ ಕುರಿತ ವೈದ್ಯಕೀಯ ವರದಿ ಪ್ರಕಟಗೊಂಡಿದೆ. ವೈದ್ಯರು ಅವರಿಗೆ ವಿಶ್ರಾಂತಿ ಪಡೆಯುವಂತೆ ಸೂಚನೆ ಕೊಟ್ಟಿದ್ದಾರೆ. ಹೀಗಾಗಿ ಒಂದೇ ಪಂದ್ಯದಲ್ಲಿ ಅವರು ಹಾಲಿ ಆವೃತ್ತಿಯ ಐಪಿಎಲ್ ಮುಗಿಸುವಂತಾಗಿದೆ.
ಇಂಪ್ಯಾಕ್ಟ್ ಪ್ಲೇಯರ್ ಬಳಕೆ
ಟಾಸ್ ಗೆದ್ದ ಗುಜರಾತ್ ತಂಡ ಮೊದಲು ಫೀಲ್ಡಿಂಗ್ ಮಾಡಿತ್ತು. ಈ ವೇಳೆ ಅವರು ಆಡುವ 11ರ ಬಳಗದಲ್ಲಿ ಅವಕಾಶ ಪಡೆದುಕೊಂಡಿದ್ದರು. ಆದರೆ, ರನ್ ಚೇಸಿಂಗ್ ಮಾಡುವ ವೇಳೆ ಕೇನ್ಗೆ ಮೈದಾನಕ್ಕೆ ಇಳಿಯಲು ಸಾಧ್ಯವಾಗಲಿಲ್ಲ. ಹೀಗಾಗಿ ಗುಜರಾತ್ ತಂಡದ ಈ ಬಾರಿಯ ಐಪಿಎಲ್ನಲ್ಲಿ ಜಾರಿಗೆ ತಂದಿರುವ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಅನುಕೂಲವನ್ನು ಬಳಸಿಕೊಂಡಿತು. ಕೇನ್ ವಿಲಿಯಮ್ಸನ್ ಅವರ ಬದಲಿಗೆ ಸಾಯಿ ಸುದರ್ಶನ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿತು. ಅವಕಾಶ ಬಳಿಸಿಕೊಂಡ ತಮಿಳುನಾಡು ಆಟಗಾರ 22 ರನ್ಗಳ ಕೊಡುಗೆ ಕೊಟ್ಟರು. ಈ ರನ್ ಕೂಡ ಗುಜರಾತ್ ಗೆಲುವಿಗೆ ನೆರವು ನೀಡಿತು.
ಇದನ್ನೂ ಓದಿ : IPL 2023 : ಬೌಲಿಂಗ್ನಲ್ಲಿ ಶತಕ ಬಾರಿಸಿದ ಮೊಹಮ್ಮದ್ ಶಮಿ, ಏನಿದು ಸಾಧನೆ?
ಅಂದ ಹಾಗೆ ಐಪಿಎಲ್ನ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಬಳಸಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಚೆನ್ನೆ ತಂಡ ಋತುರಾಜ್ ಗಾಯಕ್ವಾಡ್ ಅವರ 92 ರನ್ಗಳ ನೆರವಿನಿಂದ 178 ರನ್ ಬಾರಿಸಿತು. ಆದರೆ, ನರೇಂದ್ರ ಮೋದಿ ಸ್ಟೇಡಿಯಮ್ನ ಪಿಚ್ನಲ್ಲಿ ಚೇಸಿಂಗ್ ಸುಲಭ ಎನಿಸಿದ ಕಾರಣ ಚೆನ್ನೈ ತಂಡದ ಕ್ಯಾಪ್ಟನ್ ಧೋನಿ ಹೆಚ್ಚುವರಿ ಬೌಲರ್ನ ಸೇವೆ ಬಳಸಲು ಮುಂದಾದರು. ಅಂತೆಯೇ ಬ್ಯಾಟಿಂಗ್ ಮಾಡಿ 12 ರನ್ ಬಾರಿಸಿದ್ದ ಅಂಬಾಟಿ ರಾಯುಡು ಅವರನ್ನು ಫಿಲ್ಡಿಂಗ್ಗೆ ಬಳಸಿಕೊಳ್ಳಲಿಲ್ಲ. ಬದಲಾಗಿ ತುಷಾರ್ ದೇಶಪಾಂಡೆ ಅವರನ್ನು ಆಡುವ ಬಳಗಕ್ಕೆ ಸೇರಿಸಿಕೊಂಡಿತು. ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವುದಕ್ಕೆ ತುಷಾರ್ ದೇಶಪಾಂಡೆ ವಿಫಲಗೊಂಡರು ತಮ್ಮ 3.2 ಓವರ್ಗಳ ಸ್ಪೆಲ್ನಲ್ಲಿ 51 ರನ್ ನೀಡಿದ ಅವರು ಎದುರಾಳಿಯ ಗೆಲುವಿನಗೆ ತಮ್ಮ ಕೊಡುಗೆ ಕೊಟ್ಟರು.
ಅದಕ್ಕಿಂತ ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡದ ಘಟಾನುಘಟಿ ಬ್ಯಾಟರ್ಗಳು ವೈಫಲ್ಯ ಕಂಡರು. ಋತುರಾಜ್ ಗಾಯಕ್ವಾಡ್ ಹೊರತುಪಡಿಸಿ ಉಳಿದ ಆಟಗಾರರು ಪ್ರಭಾವ ಬೀರಲಿಲ್ಲ. ಗುಜರಾತ್ ತಂಡದ ಬೌಲರ್ಗಳಾದ ಮೊಹಮ್ಮದ್ ಶಮಿ ಹಾಗೂ ಅಲ್ಜಾರಿ ಜೋಸೆಫ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.