ಲಾರ್ಡ್ಸ್ : ಈ ಸರಣಿಯಲ್ಲಿ ನಾವು ಏನೇ ಸಾಧನೆ ಮಾಡಿದರೂ ಅದರು ಜೂಲನ್ ಅವರಿಗೆ ಸಲ್ಲುತ್ತದೆ ಎಂದು ಸರಣಿ ಆರಂಭದಲ್ಲಿ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನಾ ಹೇಳಿದ್ದರು. ಆಡಿದ್ದನ್ನು ಮಾಡಿ ತೋರಿಸಿದ್ದಾರೆ ಭಾರತ ತಂಡದ ವನಿತೆಯರು. ಇಂಗ್ಲೆಂಡ್ ಪ್ರವಾಸದ ಮೂರು ಪಂದ್ಯಗಳ ಏಕ ದಿನ ಸರಣಿಯಲ್ಲಿ ಭಾರತ ೩-೦ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. ಇದರೊಂದಿಗೆ ತಂಡದ ಹಿರಿಯ ಸದಸ್ಯೆಗೆ ಜಯದ ಬೀಳ್ಕೊಡುಗೆ ಕೊಟ್ಟಿದ್ದಾರೆ.
ಇಂಗ್ಲೆಂಡ್‌ನ ಲಾರ್ಡ್ಸ್ ಮೈದಾನದಲ್ಲಿ ನಡೆದ ಪಂದ್ಯ ೩೯ ವರ್ಷದ ಭಾರತದ ವೇಗದ ಬೌಲರ್ ಜೂಲನ್ ಗೋಸ್ವಾಮಿ ಅವರಿಗೆ ಕೊನೇ ಅಂತಾರಾಷ್ಟ್ರಿಯ ಪಂದ್ಯವಾಗಿತ್ತು. ಹೀಗಾಗಿ ಈ ಹಣಾಹಣಿಗೆ ವಿಶೇಷ ಕಳೆ ಬಂದಿತ್ತು. ಅಂತೆಯೇ ರೋಚಕವಾಗಿ ನಡೆದ ಪಂದ್ಯದಲ್ಲಿ ಭಾರತದ ಮಹಿಳೆಯರು ೧೬ ರನ್‌ಗಳಿಂದ ಜಯ ಸಾಧಿಸಿದರು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ 45.4 ಓವರ್‌ಗಳಲ್ಲಿ ೧೬೯ ರನ್‌ಗಳಿಗೆ ಆಲ್‌ಔಟ್ ಆದರೆ, ಆತಿಥೇಯ ಇಂಗ್ಲೆಂಡ್ ಬಳಗ ೧೫೯ ರನ್ ಬಾರಿಸಿ ಸೋಲೊಪ್ಪಿಕೊಂಡಿತು.
ಬ್ಯಾಟಿಂಗ್ ವೈಫಲ್ಯ
ಟಾಸ್ ಸೋತ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡಕ್ಕೆ ಮೊದಲು ಬ್ಯಾಟ್ ಮಾಡುವಂತೆ ಆಹ್ವಾನ ಕೊಟ್ಟಿತು ಆತಿಥೇಯ ತಂಡ. ಅಂತೆಯೇ ಬ್ಯಾಟಿಂಗ್ ವೈಫಲ್ಯ ಎದುರಿಸಿದ ಭಾರತ ತಂಡ ಆರಂಭದಲ್ಲಿ ಸತತವಾಗಿ ವಿಕೆಟ್ ಕಳೆದುಕೊಂಡಿತು. ಆದರೆ, ಮಧ್ಯಮ ಕ್ರಮಾಂಕದಲ್ಲಿ ದೀಪ್ತಿ ಶರ್ಮ (೬೮), ಸ್ಮೃತಿ ಮಂಧಾನಾ ಅವರ ಅರ್ಧ ಶತಕಗಳ ನೆರವಿನಿಂದ ೪೫. ೪ ಓವರ್‌ಗಳಲ್ಲಿ ೧೬೯ ರನ್ ಬಾರಿಸಿತು.
ಸಣ್ಣ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡವೂ ರೇಣುಕಾ ಸಿಂಗ್ (೨೯ ರನ್‌ಗಳಿಗೆ ೪ ವಿಕೆಟ್), ಜೂಲಾನ್ ಗೋಸ್ವಾಮಿ (೩೦ಕ್ಕೆ೨) ಅವರ ಮಾರಕ ದಾಳಿಗೆ ಬೆದರಿ ಸತತವಾಗಿ ವಿಕೆಟ್ ಕಳೆದುಕೊಂಡಿತು. ಮಧ್ಯಮ ಕ್ರಮಾಂಕದಲ್ಲಿ ಚಾರ್ಲಿ ಡೀನ್ ೪೭ ರನ್ ಬಾರಿಸಿ ಭಾರತ ತಂಡಕ್ಕೆ ಆತಂಕ ತಂದೊಡ್ಡಿದರೂ, ತಂಡಕ್ಕೆ ಜಯ ತಂದುಕೊಡಲು ಅವರಿಗೆ ಸಾಧ್ಯವಾಗಲಿಲ್ಲ.
ದೀಪ್ತಿ ಚಾಕಚಕ್ಯತೆ, ರನ್‌ಔಟ್ (ಮಂಕಡ್)
ಭಾರತ ತಂಡ ಬ್ಯಾಟಿಂಗ್‌ನಲ್ಲಿ ಕುಸಿತ ಕಂಡ ಸಂದರ್ಭದಲ್ಲಿ ಅಜೇಯ ೬೮ ರನ್ ಬಾರಿಸಿ ತಂಡಕ್ಕೆ ಆಧಾರವಾಗಿದ್ದ ದೀಪ್ತಿ ಬೌಲಿಂಗ್‌ನಲ್ಲೂ ೨೪ ರನ್‌ಗಳಿಗೆ ೧ ವಿಕೆಟ್ ಪಡೆದರು. ಅದಕ್ಕಿಂತ ಹೆಚ್ಚಾಗಿ ಇಂಗ್ಲೆಂಡ್ ತಂಡಕ್ಕೆ ಆಧಾರವಾಗಿದ್ದ ಚಾರ್ಲಿ ಡೀನ್ ಅವರನ್ನು ರನ್‌ಔಟ್ (ಮಂಕಡಿಂಗ್) ಮಾಡುವ ಮೂಲಕ ತಂಡಕ್ಕೆ ಜಯ ತಂದುಕೊಟ್ಟರು. (ಹೊಸ ಕ್ರಿಕೆಟ್ ನಿಯಮದ ಪ್ರಕಾರ ಮಂಕಡಿಂಗ್ ಅನ್ನೂ ರನ್‌ಔಟ್ ಎಂದು ಪರಿಗಣಿಸಲಾಗುತ್ತದೆ) ಈ ಮೂಲಕ ಭಾರತ ತಂಡದ ಗೆಲುವಿನಲ್ಲಿ ದೀಪ್ತಿ ಪ್ರಧಾನ ಪಾತ್ರ ವಹಿಸಿದರು.
ಸ್ಕೋರ್ ವಿವರ
ಭಾರತ ಮಹಿಳೆಯರು : ೪೫.೪ ಓವರ್‌ಗಳಲ್ಲಿ ೧೬೯ ( ದೀಪ್ತಿ ಶರ್ಮ ೬೮*, ಸ್ಮೃತಿ ಮಂಧಾನಾ ೫೦, ಪೂಜಾ ವಸ್ತ್ರಕಾರ್ ೨೨, ಕೇಟ್ ಕ್ರಾಸ್ ೨೬ಕ್ಕೆ೪).
ಇಂಗ್ಲೆಂಡ್ ಮಹಿಳೆಯರು : ೪೩.೩ ಓವರ್‌ಗಳಲ್ಲಿ ೧೫೩ (ಚಾರ್ಲಿ ಡೀನ್ ೪೭, ಆಮಿ ಜೋನ್ಸ್ ೨೮, ರೇಣುಕಾ ಸಿಂಗ್ ೨೯ಕ್ಕೆ೪, ಜೂಲನ್ ಗೋಸ್ವಾಮಿ ೩೦ಕ್ಕೆ೨).
ಇದನ್ನೂ ಓದಿ |Jhulan Goswami | ಕೋಲ್ಕೊತಾದ ಈಡನ್ ಗಾರ್ಡನ್ಸ್ ಸ್ಟೇಡಿಯಮ್‌ಗೆ ಜೂಲನ್ ಹೆಸರು ನಾಮಕರಣ