Site icon Vistara News

ವಿನೇಶ್‌,ಬಜರಂಗ್‌, ಸಾಕ್ಷಿ ಹೋರಾಟ ನಕಲಿ; ಜಂತರ್​ ಮಂತರ್​ನಲ್ಲಿ ಯುವ ಕುಸ್ತಿ ಪಟುಗಳಿಂದ ಪ್ರತಿಭಟನೆ

Young wrestlers protests

ನವದೆಹಲಿ: ಭಾರತ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್‌ ಶರಣ್‌ ಸಿಂಗ್‌ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿ ತೀವ್ರ ಪ್ರತಿಭಟನೆ ನಡೆಸಿ, ಬಳಿಕ ನೂತನ ಕುಸ್ತಿ ಪೆಡರೇಶನ್ ಆಯ್ಕೆ ವಿಚಾರದಲ್ಲಿಯೂ ಕ್ಯಾತೆ ತೆಗೆದು ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯನ್ನು ವಾಪಸ್​ ಮಾಡಿರುವ ಕುಸ್ತಿಪಟುಗಳಾದ ವಿನೇಶ್‌ ಫೋಗಟ್‌(Vinesh Phogat), ಸಾಕ್ಷಿ ಮಲಿಕ್(Sakshi Malik) ಮತ್ತು​ ಬಜರಂಗ್‌ ಪೂನಿಯ(Bajrang Punia) ವಿರುದ್ಧ ಕೆಲವು ರಾಜ್ಯಗಳ ಕುಸ್ತಿಪಟುಗಳು ತಿರುಗಿಬಿದ್ದಿದ್ದಾರೆ. ಜತೆಗೆ ಈ ಮೂವರು ನಕಲಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಗಂಭೀರ ಆರೋಪ ಹೊರಿಸಿದ್ದಾರೆ. ಇದಲ್ಲದೆ 100ಕ್ಕೂ ಅಧಿಕ ಯುವ ಕುಸ್ತಿ ಪಟುಗಳು(Young wrestlers protests) ಈ ಮೂವರು ಕುಸ್ತಿಪಟುಗಳ ವಿರುದ್ಧ ಜಂತರ್​ ಮಂತರ್​ನಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ.

ಏಷ್ಯಾಡ್‌ ಮತ್ತು ಕಾಮನ್​ವೆಲ್ತ್ ಗೇಮ್ಸ್‌ ಪದಕ ವಿಜೇತ ಮಹಿಳಾ ಕುಸ್ತಿಪಟುವೊಬ್ಬರು ಈ ಆರೋಪ ಮಾಡಿದ್ದು, ಮೂವರು ಕುಸ್ತಿಪಟುಗಳು ನಕಲಿ ಪ್ರತಿಭಟನೆ ನಡೆಸುವ ಮೂಲಕ ದೇಶದ ಕುಸ್ತಿ ವ್ಯವಸ್ಥೆಯನ್ನು ಹಾಳು ಮಾಡಲು ಯತ್ನಿ ಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಮೂವರು ಕುಸ್ತಿಪಟುಗಳು ಮಾಡುತ್ತಿರುವ ನಾಟಕೀಯ ಪ್ರತಿಭಟನೆಯಿಂದಾಗಿ ಅದೆಷ್ಟೋ ಕುಸ್ತಿಪಟುಗಳಿಗೆ ಹಿನ್ನೆಡೆಯಾಗಿದೆ. ದೇಶದಲ್ಲಿ ಯಾವುದೇ ಕುಸ್ತಿ ಚಟುವಟಿಕೆ ನಡೆಯುತ್ತಿಲ್ಲ. ಹೀಗಾಗಿ ವಿಶ್ವ ಕುಸ್ತಿ ಒಕ್ಕೂಟ ದೇಶದ ಕುಸ್ತಿಯನ್ನು ಕಾಪಾಡಲು ಮುಂದಾಗಬೇಕೆಂದು ಎಂದು ಹೆಸರು ಹೇಳಬಯಸದ ಮಹಿಳಾ ಕುಸ್ತಿಪಟುವೊಬ್ಬರು ಆಗ್ರಹಿಸಿದ್ದಾರೆ.

ಯುವ ಕುಸ್ತಿಪಟುಗಳಿಂದ ಪ್ರತಿಭಟನೆ

ವಿನೇಶ್‌ ಫೋಗಟ್‌(Vinesh Phogat), ಸಾಕ್ಷಿ ಮಲಿಕ್(Sakshi Malik) ಮತ್ತು​ ಬಜರಂಗ್‌ ಪೂನಿಯ(Bajrang Punia) ವಿರುದ್ಧ ಯುವ ಕುಸ್ತಿಪಟುಗಳು ನವದೆಹಲಿಯ ಜಂತರ್​ ಮಂತರ್​ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಮೂವರಿಂದಾಗಿ ಹಲವು ಕುಸ್ತಿಪಟುಗಳ ಭವಿಷ್ಯಕ್ಕೆ ಕುತ್ತು ಬಂದಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಬ್ರಿಜ್​ ಭೂಷಣ್​ ಅವರ ಆಪ್ತರಾಗಿರುವ ಸಂಜಯ್​ ಸಿಂಗ್​ ಭಾರತೀಯ ಕುಸ್ತಿ ಒಕ್ಕೂಟಕ್ಕೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೆಲವೇ ಗಂಟೆಗಳಲ್ಲಿ ಸಾಕ್ಷಿ ಮಲಿಕ್​ ಅವರು ಸುದ್ದಿಗೋಷ್ಠಿ ನಡೆಸಿ ಕಣ್ಣೀರು ಸುರಿಸುತ್ತಲೇ ಕುಸ್ತಿಗೆ ವಿದಾಯ ಹೇಳಿದ್ದರು. ಬಜರಂಗ್​ ಪೂನಿಯಾ ಅವರು ತಮ್ಮ ಪದ್ಮಶ್ರೀ ಪ್ರಶಸ್ತಿಯನ್ನು ನವದೆಹಲಿಯ ಕರ್ತವ್ಯ ಪಥದ(Kartavya Path) ಪಾದಚಾರಿ ಮಾರ್ಗದಲ್ಲಿಟ್ಟು ತೊರೆದಿದ್ದರು.

ವಿನೇಶ್​ ಫೋಗಟ್​ ಕೂಡ ಬಜರಂಗ್​ ಪೂನಿಯ ಅವರಂತೆ ದೇಶದ ಪರಮೋಚ್ಚ ಕ್ರೀಡಾ ಪ್ರಶಸ್ತಿಯಾದ ಮೇಜರ್‌ ಧ್ಯಾನ್‌ಚಂದ್‌ ಖೇಲ್‌ ರತ್ನ ಮತ್ತು ಅರ್ಜುನ ಪ್ರಶಸ್ತಿಗಳನ್ನು ವಾಪಸ್​ ಮಾಡುವುದಾಗಿ ಘೋಷಿಸಿ ಮೋದಿಗೆ ಪತ್ರ ಬರೆದು ಬಳಿಕ ಈ ಪ್ರಶಸ್ತಿಗಳನ್ನು ಕರ್ತವ್ಯ ಪಥದ ಪಾದಚಾರಿ ಮಾರ್ಗದಲ್ಲಿಟ್ಟು ತೊರೆದಿದ್ದರು. ವಿನೇಶ್ ಅವರಿಗೆ 2020ರಲ್ಲಿ ಖೇಲ್‌ ರತ್ನ , 2016 ರಲ್ಲಿ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಬ್ರಿಜ್​ಭೂಷಣ್​ ವಿರುದ್ಧ ಹೋರಾಟ

ಆರು ಬಾರಿ ಬಿಜೆಪಿ ಸಂಸದರಾಗಿದ್ದ ಬ್ರಿಜ್ ಭೂಷಣ್ ಅವರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸಾಕ್ಷಿ ಮಲಿಕ್ ಸೇರಿದಂತೆ ದೇಶದ ಉನ್ನತ ಕುಸ್ತಿಪಟುಗಳು ಆರೋಪಿಸಿದ ನಂತರ ಅವರು ರಾಜೀನಾಮೆ ನೀಡಬೇಕಾಯಿತು. ಒಲಿಂಪಿಕ್ ಕಂಚಿನ ಪದಕ ವಿಜೇತ ಬಜರಂಗ್ ಪೂನಿಯಾ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತೆ ವಿನೇಶ್ ಫೋಗಟ್ ಸೇರಿದಂತೆ ಅಗ್ರ ಕುಸ್ತಿಪಟುಗಳು ಜನವರಿಯಲ್ಲಿ ಬಿಜೆಪಿ ಸಂಸದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಬೀದಿಗಿಳಿದಿದ್ದರು.

Exit mobile version