ಚೆನ್ನೈ: ಐಪಿಎಲ್ 16ನೇ ಆವೃತ್ತಿಯಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸನ್ರೈಸರ್ಸ್ ಹೈದರಬಾದ್ ತಂಡದ ವಿರುದ್ಧ ಏಳು ವಿಕೆಟ್ಗಳ ಜಯ ದಾಖಲಿಸಿದೆ. ಇದು ಹಾಲಿ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಲಭಿಸಿದ ನಾಲ್ಕನೇ ಗೆಲುವು. ಒಟ್ಟು ಎಂಟು ಅಂಕಗಳೊಂದಿಗೆ ಸಿಎಸ್ಕಗೆ ತಂಡ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇಷ್ಟೆಲ್ಲ ಖುಷಿಯ ನಡುವೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಗಳಿಗೆ ಮಹೇಂದ್ರ ಸಿಂಗ್ ಧೋನಿ ಬೇಸರದ ಸುದ್ದಿಯನ್ನು ನೀಡುವ ಲಕ್ಷಣ ತೋರುತ್ತಿದೆ. ಎಸ್ಆರ್ಎಚ್ ತಂಡದ ವಿರುದ್ಧದ ಗೆಲುವಿನ ಬಳಿಕ ಮಾತನಾಡಿದ ಧೋನಿ, ಇದು ನನ್ನ ವೃತ್ತಿ ಕ್ರಿಕೆಟ್ನ ಕೊನೇ ಹಂತ ಎಂಬುದಾಗಿ ಹೇಳಿಕೊಂಡಿದ್ದಾರೆ. ಈ ಮೂಲಕ ಅವರು ಮುಂದಿನ ಆವೃತ್ತಿಯ ಐಪಿಎಲ್ನಲ್ಲಿ ತಾವು ಇರುವುದಿಲ್ಲ ಎಂಬುದನ್ನು ಬಹುತೇಕ ಸ್ಪಷ್ಟಪಡಿಸಿದ್ದಾರೆ.
41 ವರ್ಷದ ಮಹೇಂದ್ರ ಸಿಂಗ್ ಧೋನಿಗೆ ಇದು ಕೊನೇ ಐಪಿಎಲ್. ಆ ಮೇಲೆ ಅವರು ವೃತ್ತಿಪರ ಕ್ರಿಕೆಟ್ನಲ್ಲಿ ಆಡುವುದಿಲ್ಲ ಎಂದು ಸಾಕಷ್ಟು ಹಿರಿಯ ಕ್ರಿಕೆಟಿಗರು ಅಭಿಪ್ರಾಯಪಡುತ್ತಿದ್ದಾರೆ. ಆದರೆ, ಧೋನಿ ಹೊಂದಿರುವ ಫಿಟ್ನೆಸ್ ನೋಡಿದರೆ ಇನ್ನೆರಡು ವರ್ಷ ಆಡುವ ಸಾಮರ್ಥ್ಯ ಅವರ ಬಳಿ ಇದೆ. ಅವರನ್ನು ಮೈದಾನದಲ್ಲಿ ನೋಡಲು ಇಷ್ಟಪಡುವ ಅಭಿಮಾನಿಗಳ ಸಂಖ್ಯೆಯೂ ಕಡಿಮೆಯಿಲ್ಲ. ಆದರೆ, ಧೋನಿಯ ಹೇಳಿಕೆಯಿಂದಾಗಿ ಅವರ ನಿವೃತ್ತಿ ಪಡೆಯಲಿದ್ದಾರೆ ಎಂಬುದು ಖಾತ್ರಿಯಾಗಿದೆ.
ಎಸ್ಆರ್ಎಚ್ ವಿರುದ್ಧದ ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಅವರು, ಎಲ್ಲರೂ ನನಗೆ ಬೆಂಬಲ ಕೊಟ್ಟಿದ್ದಾರೆ. ನಾವು ವಿಜಯ ಸಾಧಿಸಿದ್ದೇವೆ. ಆದಾಗ್ಯೂ ಇದು ವೃತ್ತಿ ಕ್ರಿಕೆಟ್ನ ಕೊನೇ ಹಂತ. ಕಳೆದ ಎರಡು ವರ್ಷಗಳ ಬಳಿಕ ಅಭಿಮಾನಿಗಳಿಗೆ ಮೈದಾನಕ್ಕೆ ಬಂದು ಪಂದ್ಯ ನೋಡಲು ಅವಕಾಶ ಲಭಿಸಿದೆ. ಅದೊಂದು ಖುಷಿಯ ವಿಚಾರ. ಅಭಿಮಾನಿಗಳು ನನಗೆ ಸಾಕಷ್ಟು ಪ್ರೀತಿ ಅಭಿಮಾನ ತೋರಿಸಿದ್ದಾರೆ ಎಂದು ಹೇಳಿದರು.
ಚೆನ್ನೈ ತಂಡಕ್ಕೆ ಸುಲಭ ಜಯ
ಶುಕ್ರವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 7 ವಿಕೆಟ್ಗಳ ಸುಲಭ ಜಯ ದಾಖಲಿಸಿದೆ. ಚೆನ್ನೈ ತಂಡದ ಪರ ರವೀಂದ್ರ ಜಡೇಜಾ (22 ರನ್ಗಳಿಗೆ 3 ವಿಕೆಟ್) ಬೌಲಿಂಗ್ನಲ್ಲಿ ಪ್ರಭಾವಿ ಪ್ರದರ್ಶನ ನೀಡಿದರೆ, ಬ್ಯಾಟಿಂಗ್ನಲ್ಲಿ 77 ರನ್ ಬಾರಿಸಿದ ಡೆವೋನ್ ಕಾನ್ವೆ ಸುಲಭ ವಿಜಯದ ನೇತೃತ್ವ ವಹಿಸಿದರು. ಇದು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸತತ ಎರಡನೇ ಗೆಲುವಾಗಿದ್ದು ಹಾಳಿ ಆವೃತ್ತಿಯಲ್ಲಿ ಆಡಿದ ಏಳು ಪಂದ್ಯಗಳಲ್ಲಿ ನಾಲ್ಕನೇ ವಿಜಯವಾಗಿದೆ. ಅತ್ತ ಎಸ್ಆರ್ಎಚ್ ತಂಡ ಆಡಿರುವ ಆರು ಪಂದ್ಯಗಳಲ್ಲಿ ಸತತ ಎರಡನೇ ಹಾಗೂ ಒಟ್ಟು ನಾಲ್ಕನೇ ಪರಾಜಯಕ್ಕೆ ಒಳಗಾಯಿತು.
ಚೆಪಾಕ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರುವ ಹಣಾಹಣಿಯಲ್ಲಿ ಟಾಸ್ ಗೆದ್ದ ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದರು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ಬಳಗ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 134 ರನ್ ಬಾರಿಸಿತು. ಸಾಧಾರಣ ಗುರಿ ಬೆನ್ನಟ್ಟಿದ ಚೆನ್ನೈ ತಂಡ 18.4 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 138 ರನ್ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು..