ಮುಂಬಯಿ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಅಜಯ್ಅಜಯ್ ಜಡೇಜಾ(Ajay Jadeja) ಅವರು ಪಾಕಿಸ್ತಾನ ಕ್ರಿಕೆಟ್ ತಂಡದ(pakistan cricket team) ಕೋಚ್ ಆಗಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ. ಅವರ ಈ ಹೇಳಿಕೆಗೆ ಅನೇಕ ಭಾರತೀಯರು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತದ ಅನ್ನ ತಿಂದು, ಪಾಪಿ ಪಾಕಿಸ್ತಾನಕ್ಕೆ ಬೆಂಬಲಿಸುವ ನಿಮಗೆ ಈ ರೀತಿ ಹೇಳಲು ನಾಚಿಕೆಯಾಗಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಚೀಮಾರಿ ಹಾಕಿದ್ದಾರೆ.
ಅಜಯ್ ಜಡೇಜಾ ಅವರು ಈ ಬಾರಿಯ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಫಘಾನಿಸ್ತಾನ ತಂಡದ ಮೆಂಟರ್ ಹಾಗೂ ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಅವರ ಮಾರ್ಗದರ್ಶನದಲ್ಲಿ ಅಫಘಾನಿಸ್ತಾನ ತಂಡ ಇಂಗ್ಲೆಂಡ್, ಪಾಕಿಸ್ತಾನದಂತಹ ಬಲಿಷ್ಠ ತಂಡಕ್ಕೆ ಸೋಲುಣಿಸಿತ್ತು. ಇದೀಗ ಪಾಕಿಸ್ತಾನ ತಂಡದ ಕೋಚ್ ಆಗಲು ತಾವು ಸಿದ್ಧರಿರುವುದಾಗಿ ಹೇಳಿದ್ದಾರೆ.
ಸ್ಪೋರ್ಟ್ಸ್ ಟುಡೆ ಜತೆಗಿನ ಸಂದರ್ಶನದಲ್ಲಿ ಅಜಯ್ ಜಡೇಜಾ ಈ ಮಾತನ್ನು ಹೇಳಿದ್ದಾರೆ. ಸಂದರ್ಶಕ ಪಾಕ್ ತಂಡದ ಕೋಚ್ ಆಗುತ್ತೀರಾ ಎಂದು ಕೇಳಿದ ಪ್ರಶ್ನೆಗ ಉತ್ತರಿಸಿದ ಅವರು, ಅವಕಾಶ ಸಿಕ್ಕರೆ ಖಂಡಿತವಾಗಿ ನಾನು ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್ ಹುದ್ದೆ ಅಲಂಕರಿಸಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ. ಅಜಯ್ ಜಡೇಜಾ ಅವರ ಈ ಮಾತನ್ನು ಕೇಳಿದ ನೆಟ್ಟಿಗರು ಅವರು ವಿರುದ್ಧ ಕಿಡಿ ಕಾರಿದ್ದಾರೆ. ಪಾಕಿಸ್ತಾನ ಬಿಟ್ಟು ಬೇರೆ ಯಾವುದೇ ತಂಡದ ಕೋಚ್ ಆಗಲು ನೀವು ಸಿದ್ಧ ಎನ್ನುತ್ತಿದ್ದರೆ ನಿಮ್ಮ ಬೆಂಬಲಕ್ಕೆ ನಾವು ಕೂಡ ಇರುತ್ತಿದ್ದೆವು. ಆದರೆ, ನಮ್ಮ ದೇಶಕ್ಕೆ ಸದಾ ಕೇಡು ಬಯಸುವ, ಉಗ್ರರನ್ನು ಬಿಟ್ಟು ಉಪಟಳ ಮಾಡುವ ಪಾಕಿಸ್ತಾನ ತಂಡಕ್ಕೆ ನೀವು ಕೋಚ್ ಆಗಲು ಬಯಸಿದ್ದು ನಿಜಕ್ಕೂ ಬೇಸರದ ಸಂಗತಿ ಎಂದು ಕಮೆಂಟ್ ಮಾಡಿದ್ದಾರೆ.
1988ರಲ್ಲಿ ಹರಿಯಾಣ ಪರ ಪ್ರಥಮ ದರ್ಜೆ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಜಡೇಜಾ, 111 ಪ್ರಥಮ ದರ್ಜೆ ಮತ್ತು 291 ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದಾರೆ, ಆಟದ ಎರಡೂ ಸ್ವರೂಪಗಳಿಂದ 31 ಶತಕಗಳು ಮತ್ತು 88 ಅರ್ಧಶತಕಗಳೊಂದಿಗೆ 8000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.
ಇದನ್ನೂ ಓದಿ Ajay Jadeja: ಇಶಾನ್ ಕಿಶನ್ ವಿಚಾರದಲ್ಲಿ ಆಯ್ಕೆ ಸಮಿತಿ ವಿರುದ್ಧ ಕಿಡಿಕಾರಿದ ಜಡೇಜಾ
ಪಾಕ್ಗೆ ಸೋಲುಣಿಸಿದ್ದ ಜಡೇಜಾ
ಬೆಂಗಳೂರಿನಲ್ಲಿ ನಡೆದ 1996ರ ಕ್ರಿಕೆಟ್ ವಿಶ್ವಕಪ್ ಕ್ವಾರ್ಟರ್ ಫೈನಲ್ನಲ್ಲಿ ಪಾಕಿಸ್ತಾನ ವಿರುದ್ಧ 25 ಎಸೆತಗಳಲ್ಲಿ 45 ರನ್ ಗಳಿಸಿದ್ದು ಅವರ ಸ್ಮರಣೀಯ ಏಕದಿನ ಇನಿಂಗ್ಸ್ಗಳಲ್ಲಿ ಒಂದಾಗಿದೆ. ಇದರಲ್ಲಿ ವೇಗದ ಬೌಲಿಂಗ್ ದಿಗ್ಗಜ ವಕಾರ್ ಯೂನಿಸ್ ವಿರುದ್ಧ ಕೊನೆಯ ಎರಡು ಓವರ್ಗಳಲ್ಲಿ 40 ರನ್ ಗಳಿಸಿದ್ದರು.
ಮ್ಯಾಚ್ ಫಿಕ್ಸಿಂಗ್ ನಿಷೇಧ
ಮ್ಯಾಚ್ ಫಿಕ್ಸಿಂಗ್ ಕಾರಣದಿಂದಾಗಿ ಐದು ವರ್ಷಗಳ ನಿಷೇಧದಿಂದ ಅವರ ಅಂತರರಾಷ್ಟ್ರೀಯ ವೃತ್ತಿಜೀವನವು ಕೊನೆಗೊಂಡಿತು. ನಂತರ, ಜಡೇಜಾ ನಟನಾಗಿ ಕೆಲವು ಚಲನಚಿತ್ರಗಳಲ್ಲಿ ಕೆಲಸ ಮಾಡಿದರು. ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದ್ದರೂ, ಜಡೇಜಾ ದೆಹಲಿ ಪರ ದೇಶೀಯ ಕ್ರಿಕೆಟ್ ಆಡಲು ಮರಳಿದರು. ನಂತರ ರಾಜಸ್ಥಾನ್ ತಂಡದ ನಾಯಕ ಮತ್ತು ತರಬೇತುದಾರರಾದರು. ಆಟದ ದಿನಗಳು ಮುಗಿದ ನಂತರ, ಜಡೇಜಾ ಕ್ರಿಕೆಟ್ ವೀಕ್ಷಕ ವಿವರಣೆಗೆ ಕಾಲಿಟ್ಟರು. 2015-16 ರ ಋತುವಿನಲ್ಲಿ ದೆಹಲಿ ತಂಡದ ಮುಖ್ಯ ತರಬೇತುದಾರರಾಗಿಯೂ ಸೇವೆ ಸಲ್ಲಿಸಿದ್ದರು.