Site icon Vistara News

ಕಾಲಿನ ಮೂಲಕವೇ 750 ಕೆಜಿ ಭಾರ ಎತ್ತುವ ಮೊಹಮ್ಮದ್​ ಶಮಿ; ವಿಡಿಯೊ ವೈರಲ್​

mohammed shami gym leg press

ಬೆಂಗಳೂರು: ಟೀಮ್ ಇಂಡಿಯಾದ ಸ್ಟಾರ್​ ವೇಗಿ ಮೊಹಮ್ಮದ್​ ಶಮಿ(Mohammed Shami) ಅವರು ತಮ್ಮ ಫಿಟ್​ನೆಸ್​ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ಇದೇ ವೇಳೆ ಅವರು ಜಿಮ್‌ನಲ್ಲಿ ನನಗಿಂತ ಹೆಚ್ಚಿನ ತೂಕವನ್ನು ಬೇರೆ ಯಾವ ಕ್ರಿಕೆಟಿಗನೂ ಎತ್ತುವುದಿಲ್ಲ ಎಂದು ಹೇಳಿದ್ದಾರೆ.

ಆಜ್​ ತಕ್​ ಸಂದರ್ಶನದಲ್ಲಿ ಬೌಲಿಂಗ್​ ಯಶಸ್ಸಿನ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಶಮಿ,​” ನಾನು 750 ಕೆಜಿ ಲೆಗ್ ಪ್ರೆಸ್ ಮಾಡಬಲ್ಲೆ. ಜಿಮ್‌ನಲ್ಲಿ ನನಗಿಂತ ಹೆಚ್ಚಿನ ತೂಕವನ್ನು ಬೇರೆ ಯಾವುದೇ ಕ್ರಿಕೆಟಿಗರು ಎತ್ತುದಿಲ್ಲ. ಈ ವಿಚಾರವನ್ನು ನಾನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲು ಇಷ್ಟಪಡುವುದಿಲ್ಲ. ಆದ್ದರಿಂದ ಜನರಿಗೆ ಇದು ತಿಳಿಯುವುದಿಲ್ಲ” ಎಂದು ಹೇಳಿದ್ದಾರೆ.

ವಿರಾಟ್​ ಕೊಹ್ಲಿಯಂತೆ ತಾನು ಕೂಟ ಫಿಟ್​ ಆಗಿದ್ದೇನೆ. ಅವರಿಗೂ ಕೂಡ ಲೆಗ್ ಪ್ರೆಸ್​ನಲ್ಲಿ ನನಗಿಂತ ಹೆಚ್ಚು ಭಾರ ಎತ್ತಲಾಗುದಿಲ್ಲ. ಸದ್ಯಕ್ಕೆ ಭಾರತ ತಂಡದಲ್ಲಿ ಕಾಲಿನ ಮೂಲಕ ಅತಿ ಹೆಚ್ಚು ಭಾರತದ ಲೆಗ್ ಪ್ರೆಸ್ ಮಾಡುವ ಆಟಗಾರ ನಾನಾಗಿದ್ದೇನೆ. ಹೀಗಾಗಿ ನನಗೆ ವೇಗವಾಗಿ ಓಡಿ ಬಂದು ಉತ್ತಮ ಲಯದಲ್ಲಿ ಬೌಲಿಂಗ್​ ನಡೆಸಲು ಸಾಧ್ಯವಾಗುತ್ತದೆ ಎಂದು ಶಮಿ ತಮ್ಮ ಬೌಲಿಂಗ್​ ಸಾಮರ್ಥ್ಯದ ಹಿಂದಿನ ಗುಟ್ಟನ್ನು ರಟ್ಟು ಮಾಡಿದ್ದಾರೆ.

ಇದನ್ನೂ ಓದಿ IND vs SA: ಪಂದ್ಯ ಗೆದ್ದು ದಕ್ಷಿಣ ಆಫ್ರಿಕಾ ವಿರುದ್ಧ ದಾಖಲೆ ಬರೆದ ಟೀಮ್​ ಇಂಡಿಯಾ

ವಿಶ್ವಕಪ್​ ಟೂರ್ನಿಯಲ್ಲಿ ಶಮಿ ಅವರು ಕೇವಲ 7 ಪಂದ್ಯಗಳನ್ನು ಆಡಿ 24 ವಿಕೆಟ್‌ಗಳನ್ನು ಕಬಳಿಸಿ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್​ ಕಿತ್ತ ಬೌಲರ್​ ಎನಿಸಿಕೊಂಡಿದ್ದರು. ಎರಡು ಬಾರಿ ಐದು ವಿಕೆಟ್‌ಗಳು ಮತ್ತು ಒಂದು ಬಾರಿ ಏಳು ವಿಕೆಟ್‌ ಕಿತ್ತ ಸಾಧನೆ ಮಾಡಿದ್ದರು. ಶಮಿಯ ಘಾತಕ ಬೌಲಿಂಗ್​ ಮುಂದೆ ಎದುರಾಳಿ ತಂಡದ ಬ್ಯಾಟರ್​ಗಳು ರನ್​ ಗಳಿಸಲು ಪರದಾಟ ನಡೆಸಿದ್ದರು.​ ನ್ಯೂಜಿಲ್ಯಾಂಡ್​ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಬರೋಬ್ಬರಿ 7 ವಿಕೆಟ್​ ಉರುಳಿಸಿದ್ದರು.


ಫಾರ್ಮ್ ಹೌಸ್​ನಲ್ಲಿ ಪಿಚ್ ನಿರ್ಮಾಣ

ಈಗಾಗಲೇ ಮೊನಚಾದ ಬೌಲಿಂಗ್​ ಮೂಲಕ ತಮ್ಮ ಸಾಮರ್ಥ್ಯವನ್ನು ತೋರ್ಪಡಿಸಿದ್ದಾರೆ. ಇದೀಗ ಬ್ಯಾಟಿಂಗ್​ನಲ್ಲಿಯೂ ತಮ್ಮ ಪರಾಕ್ರಮ ತೋರುವ ನಿಟ್ಟಿನಲ್ಲಿ ಅವರು ತಮ್ಮ ಫಾರ್ಮ್ ಹೌಸ್​ನಲ್ಲಿ ಪಿಚ್​ ಒಂದನ್ನು ನಿರ್ಮಿಸಿ ಬ್ಯಾಟಿಂಗ್​ ಅಭ್ಯಾಸ ನಡೆಸುತ್ತಿದ್ದಾರೆ. ಈ ವೀಡಿಯೊವನ್ನು ಶಮಿಯೇ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಕವರ್​ ಡ್ರೈವ್​, ಹುಕ್​ ಶಾಟ್​, ಹೀಗೆ ನಾನಾ ಪ್ರಕಾರದ ಕ್ರಿಕೆಟ್​ ಶಾಟ್​ಗಳನ್ನು ಶಮಿ ಅಭ್ಯಾಸ ನಡೆಸಿದ್ದಾರೆ. ಈ ಮೂಲಕ ಮುಂದಿನ ದಿನಗಳಲ್ಲಿ ಆಲ್​ರೌಂಡರ್​ ಪ್ರದರ್ಶನ ತೋರುವ ಮೂಲಕ ತಂಡಕ್ಕೆ ನೆರವಾಗಲು ಸಿದ್ಧತೆ ಮಾಡುತ್ತಿದ್ದಾರೆ. ಟೆಸ್ಟ್​ ಕ್ರಿಕೆಟ್​ನಲ್ಲಿ 2 ಅರ್ಧಶತಕ ಬಾರಿಸಿದ ಸಾಧನೆಯನ್ನು ಹೊಂದಿದ್ದಾರೆ. ಟೆಸ್ಟ್ ಮತ್ತು ಏಕದಿನ ಕ್ರಿಕೆಟ್​ ಸೇರಿ 970 ರನ್​ ಬಾರಿಸಿದ್ದಾರೆ.

ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಂಡದ ಭಾಗವಾಗಿರುವ ಅವರು ಉತ್ತಮ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ. ಏಕದಿನ ವಿಶ್ವಕಪ್ ಬಳಿಕ ಶಮಿ ಸದ್ಯ ಕ್ರಿಕೆಟ್​ನಿಂದ ವಿಶ್ರಾಂತಿ ಪಡೆದಿದ್ದಾರೆ. ಡಿಸೆಂಬರ್ 26 ರಿಂದ ಮೊದಲ ಟೆಸ್ಟ್ ಆರಂಭವಾಗಲಿದೆ. ಹೀಗಾಗಿ ಮುಂದಿನ ವಾರ ಟೆಸ್ಟ್ ಆಡಲಿರುವ ಆಟಗಾರರು ಆಫ್ರಿಕಾ ಕಡೆಗೆ ಪ್ರಯಾಣ ಬೆಳೆಸುವ ಸಾಧ್ಯತೆಯಿದೆ.

Exit mobile version