ಹೈದರಾಬಾದ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಗುರುವಾರ ರಾತ್ರಿ ನಡೆದ ಐಪಿಎಲ್ನ 65ನೇ ಪಂದ್ಯದಲ್ಲಿ ಸನ್ರೈಸರರ್ಸ್ ಹೈದರಾಬಾದ್ ಅಸಾಧಾರಣ ಪ್ರದರ್ಶನ ನೀಡಿದ್ದಾರೆ. 62 ಎಸೆತಗಳಲ್ಲಿ ತಮ್ಮ ಲೀಗ್ನ ಆರನೇ ಶತಕವನ್ನು ಗಳಿಸಿದ್ದಾರೆ. ಅವರ ಶತಕದ ನೆರವಿನಿಂದ ಆರ್ಸಿಬಿ ತಂಡ 8 ವಿಕೆಟ್ಗಳಿಂದ ಗೆಲುವು ಸಾಧಿಸಿತು. ಈ ಮೂಲಕ ಹಾಲಿ ಆವೃತ್ತಿಯ ಟೂರ್ನಿಯಲ್ಲಿ ತಂಡದ ಪ್ಲೇಆಫ್ ಅವಕಾಶ ಸ್ವಲ್ಪ ಮಟ್ಟಿಗೆ ಭದ್ರವಾಯಿತು. ನಾಯಕ ಫಾಫ್ ಡು ಪ್ಲೆಸಿಸ್ (71) ಅವರ ಅರ್ಧ ಶತಕವೂ 187 ರನ್ಗಳ ಗುರಿ ಬೆನ್ನೆಟ್ಟಲು ಆರ್ಸಿಬಿಗೆ ನೆರವಾಯಿತು. ಅಂತಿಮವಾಗಿ ನಾಲ್ಕು ಎಸೆತಗಳು ಬಾಕಿ ಇರುವಾಗಲೇ ಗುರಿಯನ್ನು ಮುಟ್ಟಿತು.
ತನ್ನ ಅದ್ಭುತ ಬ್ಯಾಟಿಂಗ್ಗಾಗಿ ವಿರಾಟ್ ಕೊಹ್ಲಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ದೊರೆಯಿತು. ಆದಾಗ್ಯೂ ಈ ಶ್ರೇಷ್ಠ ಬ್ಯಾಟರ್ ಕಳೆದ ಕೆಲವು ಪಂದ್ಯಗಳಲ್ಲಿ ಸ್ಟ್ರೈಕ್ರೇಟ್ ಕಾರಣಕ್ಕೆ ಟೀಕೆಗೆ ಗುರಿಯಾಗುತ್ತಿದ್ದರು. ಹಾಲಿ ಋತುವಿನಲ್ಲಿ ನಿಧಾನಗತಿಯ ಆರಂಭ ಮಾಡುತ್ತಿರುವುದಾಗಿ ಹಿರಿಯ ಆಟಗಾರರು ಹಾಗೂ ಕ್ರಿಕೆಟ್ ಅಭಿಮಾನಿಗಳು ಟೀಕೆಗಳನ್ನು ವ್ಯಕ್ತಪಡಿಸಿದ್ದರು.
ಎಸ್ಆರ್ಎಚ್ ವಿರುದ್ಧದ ಪಂದ್ಯದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿಗೆ ಕಡಿಮೆ ಸ್ಟ್ರೈಕ್ರೇಟ್ನ ಪ್ರಶ್ನೆ ಎದುರಾಯಿತು. ಟೀಕೆಗಳನು ನಿಮ್ಮ ಮನಸ್ಸಿಗೆ ಘಾಸಿ ಮಾಡಿವೆಯಾ ಎಂದು ಪ್ರಶ್ನಿಸಲಾಯಿತು. ಆದರೆ, ಕೊಹ್ಲಿ ತಮ್ಮ ಬ್ಯಾಟಿಂಗ್ ಲಯವನ್ನು ಸಮರ್ಥಿಸಿಕೊಂಡರು. ಎಂದಿಗೂ ಫ್ಯಾನ್ಸಿ ಶಾಟ್ಗಳು ನನ್ನ ಆಯ್ಕೆಯಲ್ಲ ಎಂದು ಹೇಳಿದ್ದಾರೆ.
ನಾನು ಎಲ್ಲರಿಗೂ ಹೇಳುತ್ತಿದ್ದೇನೆ. ನಾನು ಟೀಕೆಗಳನ್ನು ಪರಿಗಣಿಸುವುದಿಲ್ಲ. ಐಪಿಎಲ್ ಆಟಗಾರನಾಗಿ ನನ್ನನ್ನು ನಾನು ನೋಡಿಕೊಳ್ಳುವ ರೀತಿಯೇ ಇದಾಗಿದೆ. ಕೆಲವೊಂದ ಪರಿಣಾಮಕಾರಿ ಇನಿಂಗ್ಸ್ಗಳಲ್ಲಿ ಆಡಿದ್ದೇನೆ. ಕೆಲವೊಂದು ಕಡಿಮೆ ಸ್ಟ್ರೈಕ್ರೇಟ್ ಹೊಂದಿವೆ. ಎಲ್ಲದರ ನಡುವೆ ಇದು ಐಪಿಎಲ್ನಲ್ಲಿ ನನ್ನ 6ನೇ ಶತಕವಾಗಿದೆ. ಈ ದಾಖಲೆಯನ್ನು ಸರಿದೂಗಿಸಲು ಹಿಂದಿನ ದಾಖಲೆಗಳನ್ನು ಎಂದಿಗೂ ನೋಡುವುದಿಲ್ಲ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ನಾನು ಈಗಾಗಲೇ ತುಂಬಾ ಒತ್ತಡದಲ್ಲಿದ್ದೇನೆ. ಹೊರಗೆ ಯಾರಾದರೂ ಏನು ಹೇಳುತ್ತಾರೆ ಎಂಬುದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ, ಏಕೆಂದರೆ ಅದು ಅವರ ಅಭಿಪ್ರಾಯ. ನೀವೊಬ್ಬ ಆಟಗಾರನಾಗಿದ್ದಾಗ ಪಂದ್ಯಗಳನ್ನು ಹೇಗೆ ಗೆಲ್ಲಬೇಕೆಂದು ನಿಮಗೆ ತಿಳಿದಿರುತ್ತದೆ. ಆ ಕೆಲವನ್ನು ನಾನು ಅದನ್ನು ದೀರ್ಘಕಾಲದವರೆಗೆ ಮಾಡಿದ್ದೇನೆ. ನಾನು ನನ್ನ ತಂಡಕ್ಕಾಗಿ ಪಂದ್ಯಗಳನ್ನು ಗೆಲ್ಲುತ್ತಿದ್ದೇನೆ.. ಇದು ನಾನು ಹೆಮ್ಮೆಪಡುವಂತಹ ಪರಿಸ್ಥಿತಿಯನ್ನು ಆಡಿದ್ದೇನೆ ಎಂದು ಕೊಹ್ಲಿ ಹೇಳಿದ್ದಾರೆ.
ಇದನ್ನೂ ಓದಿ : IPL 2023 : ನಾಲ್ಕು ವರ್ಷಗಳ ಬಳಿಕ ಶತಕ ಬಾರಿಸಿದ ವಿರಾಟ್ ಕೊಹ್ಲಿ
ನಾನು ಎಂದಿಗೂ ಇಷ್ಟೊಂದು ಫ್ಯಾನ್ಸಿ ಶಾಟ್ಗಳನ್ನು ಆಡುವ ಮೂಲಕ ವಿಕೆಟ್ ಬಿಟ್ಟುಕೊಡುವ ಪ್ರಯತ್ನಗಳನ್ನು ಮಾಡುವುದಿಲ್ಲ. ಐಪಿಎಲ್ ಮುಕ್ತಾಯದ ಬಳಿಕ ಟೆಸ್ಟ್ ಕ್ರಿಕೆಟ್ (ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್) ಆರಂಭವಾಗಲಿದೆ. ಆದ್ದರಿಂದ ನಾನು ನನ್ನ ತಂತ್ರಕ್ಕೆ ಬದ್ಧವಾಗಿರಬೇಕು. ನಾನು ಪ್ರಮುಖ ಪಂದ್ಯದಲ್ಲಿ ಪ್ರಭಾವ ಬೀರಲು ಸಾಧ್ಯವಾದಾಗ, ಅದು ನನಗೆ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ತಂಡಕ್ಕೆ ವಿಶ್ವಾಸವನ್ನು ನೀಡುತ್ತದೆ ಎಂದು ಕೊಹ್ಲಿ ಹೇಳಿದರು.
ಆರ್ಸಿಬಿ ತಂಡ ತನ್ನ ಕೊನೆಯ ಲೀಗ್ ಹಂತದ ಪಂದ್ಯವನ್ನು ಭಾನುವಾರ ರಾತ್ರಿ ಗುಜರಾತ್ ಟೈಟನ್ಸ್ ವಿರುದ್ಧ ಆಡಲಿದೆ.